ಕೊಡಗು ಪ್ರವಾಹ: ವರ್ಷವೇ ಕಳೆದರೂ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಸರ್ಕಾರ!

ಕಳೆದ ವರ್ಷ ಕೊಡಗಿನಲ್ಲಿ ಉಂಟಾದ ಭೀರಕ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಹಾನಿಯಾದ ಸಾರ್ವಜನಿಕ ರಸ್ತೆ, ಸೇತುವೆ, ತಡೆಗೋಡೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗಾಗಿ ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿದ್ದ ಗುತ್ತಿಗೆದಾರರು, ಕಾಮಗಾರಿಗಳನ್ನು ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿವೆ. ಆದರೆ, ರಾಜ್ಯ ಸರ್ಕಾರ ಅನುಮೋದನೆ ನೀಡಿ ಒಂದು ವರ್ಷವೇ ಕಳೆದರೂ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಠೇವಣಿ ಅನುದಾನ ಬಿಡುಗಡೆ ಮಾಡದೇ ನಿರ್ಲಕ್ಷ್ಯತನ ಪ್ರದರ್ಶಿಸುತ್ತಿರುವ ಸರ್ಕಾರ ಇದೂವರೆಗೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿಲ್ಲ. ಹೀಗಾಗಿ ಕೆಲವು ಗುತ್ತಿಗೆದಾರರು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕಂದಾಯ ಸಚಿವ ಆರ್ ಅಶೋಕ್ ಅವರು ಈವರೆವಿಗೂ ಬಾಕಿ ಬಿಲ್ ಪಾವತಿಸುವ ಕುರಿತಂತೆ ಯಾವ ಕ್ರಮವನೂ ಕೈಗೊಂಡಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

2019 ರ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ತತ್ತರಿಸಿದ್ದ ಕೊಡಗು ಜಿಲ್ಲೆಯಾದ್ಯಂತ ರಸ್ತೆ, ಸೇತುವೆಗಳನ್ನು ಪುನರ್‌ನಿರ್ಮಾಣಕ್ಕಾಗಿ   ರಾಜ್ಯ ಸರ್ಕಾರ 100 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ಅನುಮೋದನೆ ನೀಡಿತ್ತು. ಆದರೆ, ಕಾಮಗಾರಿಗೆ ಅನುಮೋದನೆ ನೀಡಿ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗಾಗಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವಂತೆ ಕೋರಿ ಕೊಡಗು ಜಿಲ್ಲಾಧಿಕಾರಿ 2020ರ ಜೂನ್ 15 ರಂದು ಆರ್ಥಿಕ ಇಲಾಖೆಗೆ ಬರೆದಿರುವ ಪತ್ರ ಬರೆದಿದ್ದಾರೆ.

ಲೋಕೋಪಯೋಗಿ, ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರಾಥಮಿಕ ಪ್ರೌಢಶಿಕ್ಷಣ, ಪಶುಸಂಗೋಪನೆ ಮೀನುಗಾರಿಕೆ, ಸಣ್ಣ ನೀರಾವರಿ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಇನ್ನಿತರೆ ಇಲಾಖೆಗಳು ಒಟ್ಟು 1,072 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದವು. ಪುನರ್‌ನಿರ್ಮಾಣ ಕಾಮಗಾರಿಗೆ ಒಟ್ಟು 9060.05 ಲಕ್ಷ ರೂಗಳ ಅನುದಾನ ನೀಡಲಾಗಿದ್ದು, ಕಾಮಗಾರಿಗಳಿಗೆ ಠೇವಣಿ ಅನುದಾನ ಬಿಡುಗಡೆ ಮಾಡಬೇಕಿದ್ದ ಸರ್ಕಾರ ವರ್ಷವಾದರೂ ಬಿಡುಗಡೆ ಮಾಡಿಲ್ಲ.

ಗುತ್ತಿಗೆದಾರರು ಪೂರ್ಣಗೊಳಿಸಿರುವ ಕಾಮಗಾರಿಯ 1738.65 ಲಕ್ಷ ಮೊತ್ತದ ಬಿಲ್ ಕೂಡ ಪಾವತಿಯಾಗಿಲ್ಲ. ಪ್ರಗತಿಯಲ್ಲಿರುವ 7,322.30 ಲಕ್ಷ ಮೊತ್ತದ ಕಾಮಗಾರಿಗಳನ್ನು ಗುತ್ತಿಗೆದಾರರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರಲ್ಲದೆ, ಉಳಿದಿರುವ 939.05 ಲಕ್ಷ ಮೊತ್ತದ ಕಾಮಗಾರಿಗಳನ್ನೂ ಆರಂಭಿಸಲಾಗಿಲ್ಲ ಎಂದು ಜಿಲ್ಲಾಧಿಕಾರಿ ಪತ್ರದಿಂದ ತಿಳಿದು ಬಂದಿದೆ .

‘ ಜಿಲ್ಲೆಯಲ್ಲಿ ಈಗಾಗಲೇ ಮಳೆ ಶುರುವಾಗಿದ್ದು ಪೂರ್ಣ ಪ್ರಮಾಣದ ಮಳೆ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಆದ್ದರಿಂದ 100 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.


ಇದನ್ನೂ ಓದಿ:  ಸ್ವಾತಂತ್ರ್ಯ ಹೋರಾಟಗಾರನನ್ನು ಅಪರಾಧಿಯಂತೆ ಚಿತ್ರಿಸಿದ ಜೀ5 ವೆಬ್‌ಸೀರಿಸ್‌; ಸಾರ್ವಜನಿಕ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights