PM Cares ನಿಧಿಯಿಂದ NDRFಗೆ ಹಣ ವರ್ಗಾವಣೆ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಪಿಎಂ ಕೇರ್ಸ್ ನಿಧಿಗೆ ಸಂಗ್ರಹವಾದ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ(NDRF)ಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಪಿಎಂ ಕೇರ್ಸ್ ಫಂಡ್‌ಗೆ ಸಂಗ್ರಹವಾದ ಹಣ ಸಂಪೂರ್ಣವಾಗಿ ಚಾರಿಟೇಬಲ್ ಟ್ರಸ್ಟ್‌ನದ್ದು, ಇದಕ್ಕೂ NDRFಗೂ ಸಂಬಂಧವಿಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುದರ್ಶನ್ ರೆಡ್ಡಿ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ತೀರ್ಪು ನೀಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ಯಾರು ಯಾವಾಗ ಬೇಕಾದರೂ ಸ್ವ ಇಚ್ಛೆಯಿಂದ ಧನ ಸಹಾಯ ಮಾಡಬಹುದು. ಆದರೆ ಪಿಎಂ ಕೇರ್ಸ್ ಫಂಡ್ ಕೇವಲ ಕೊರೊನಾ ಸಮಸ್ಯೆಗೆ ಸೇರಿದ್ದು ಎಂದು ಹೇಳಿದೆ.

ಪಿಎಂ ಕೇರ್ಸ್ ನಿಧಿಯ ಸ್ಥಾಪನೆಯು ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಾಗಿದೆ. ಹಾಗಾಗಿ, ಪಿಎಂ ಕೇರ್ಸ್‌ಗೆ ಸಂಗ್ರಹವಾದ  ಹಣವನ್ನು NDRFಗೆ ವರ್ಗಾಯಿಸಬೇಕೆಂದು ಎನ್‌ಜಿಓ ಒಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಇಂದು ಆದೇಶ ಹೊರಡಿಸಿದೆ.

ಪಿಎಂ ಕೇರ್ಸ್‌ ನಿಧಿಯು ಕಾನೂನಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ವಿರೋಧಿಸಿದ್ದವು. NDRF ಇರುವಾಗ ಮತ್ತೊಂದು ನಿಧಿಯ ಅಗತ್ಯವೇನು ಎಂದು ಪ್ರಶ್ನಿಸಿದ್ದವು. ಅಲ್ಲದೆ, ಇದರ ಬಗೆಗಿನ ಮಾಹಿತಿಗಳನ್ನು ಬಹಿರಂಗ ಪಡಿಸಲು ಆಗ್ರಹಿಸಿದ್ದವು. ಆದರೆ, ಪಿಎಂ ಕೇರ್ಸ್‌ ಅನ್ನು ಅಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ನಾನಾ ಕಾರಣಗಳನ್ನು ನೀಡಿ ಮಾಹಿತಿ ಬಹಿರಂಗ ಪಡಿಸಲು ನಿರಾಕರಿಸಿತ್ತು.

ಕೊರೊನಾ ಸಂಕಷ್ಟದಲ್ಲಿ ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಗಿದ್ದು, ಪ್ರಧಾನ ಮಂತ್ರಿಗಳು ಅದಕ್ಕೆ ಅಧ್ಯಕ್ಷರಾಗಿದ್ದಾರೆ. ರಕ್ಷಣೆ, ಗೃಹ ಮತ್ತು ಹಣಕಾಸು ಇಲಾಖೆ ಸಚಿವರು ಟ್ರಸ್ಟಿಗಳಾಗಿದ್ದಾರೆ. ಆದರೆ, ಇದೂವರೆಗೂ ಪಿಎಂ ಕೇರ್ಸ್‌ಗೆ ಎಷ್ಟು ಮೊತ್ತದ ಫಂಡ್‌ ಬಂದಿದೆ. ಅದರ ಬಳಕೆ ಎಷ್ಟಾಗಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ. ಈ ನಡುವೆ ಸುಪ್ರೀಂ ಕೋರ್ಟ್‌ ಪಿಎಂ ಕೇರ್ಸ್‌ ಹಣವನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವಂತಿಲ್ಲ ಎಂದು ಆದೇಶ ನೀಡಿದೆ.


ಇದನ್ನೂ ಓದಿ:  BSNL ಹೊಣೆ ಕೇಂದ್ರ ಸರ್ಕಾರದ್ದು! ದೇಶದ್ರೊಹಿಗಳಾಗಬೇಕಾದವರು ಯಾರು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights