ಎಸ್‌.ಪಿ.ಬಾಲಸುಬ್ರಮಣ್ಯಂ ಹಾಡಿದ್ದು ಬರೋಬ್ಬರಿ 120ಕ್ಕೂ ಹೆಚ್ಚು ಹೀರೋಗಳಿಗೆ!

ಎಪ್ಪತ್ಮೂರು ವರ್ಷ ಪೂರೈಸಿ, ಎಪ್ಪತ್ನಾಲ್ಕಕ್ಕೆ ಕಾಲಿಡುತ್ತಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ಬಗ್ಗೆ ಮಾತನಾಡಲು ಖುಷಿಯಾಗುತ್ತದೆ. ನಾನು ಕಂಡಂತೆ ಅವರೊಬ್ಬ ಒಳ್ಳೆಯ ಹ್ಯೂಮನ್ ಬೀಯಿಂಗ್. ಅತ್ಯಂತ ಮಾನವೀಯತೆ ಇರುವಂತಹ ವ್ಯಕ್ತಿ. ಅವರ ದನಿಯನ್ನಷ್ಟೇ ಕೇಳುತ್ತಾ ಬಂದಿರುವ ಜನರಿಗೆ ಎಸ್‌ಪಿಬಿ ಅವರ ಮನಸು ಕರಗುವಂತಹ ಗುಣ ಗೊತ್ತಿರಲಿಕ್ಕಿಲ್ಲ. ಸಾಮಾನ್ಯವಾಗಿ ಹೊಸ ಹಾಡೊಂದನ್ನು ಅವರಿಂದ ಹಾಡಿಸುವ ಮುನ್ನ ಸಂಗೀತ ಗಾಯಕರು ಮೊದಲು ಟ್ರ್ಯಾಕ್ ಸಿಂಗರ್‌ಗಳಿಂದ ಹಾಡಿಸುತ್ತಾರೆ. ಅದನ್ನು ಆಲಿಸಿದ ನಂತರವಷ್ಟೇ ಎಸ್‌ಪಿಬಿ ಹಾಡೋದು. ಒಂದೊಮ್ಮೆ ಟ್ರ್ಯಾಕ್ ಸಿಂಗರ್ ಸೊಗಸಾಗಿ ಹಾಡಿದ್ದರೆ, ಅದೇ ದನಿಯನ್ನು ಉಳಿಸಿಕೊಳ್ಳುವಂತೆ ಅವರು ಸಂಗೀತ ನಿರ್ದೇಶಕರಿಗೆ ಸೂಚಿಸುತ್ತಾರೆ. ಹೀಗೆ, ಅವರ ಪ್ರೋತ್ಸಾಹ, ಹಾರೈಕೆಯಿಂದ ಹಲವು ಯುವ ಗಾಯಕರು ಬೆಳೆದಿದ್ದಾರೆ.

Bonsai Bumblings: Listen to SPB Songs - Donate to Advesa Trust

ಕನ್ನಡದಲ್ಲಿ ಅವರು ಮೊದಲು ಹಾಡಿದ್ದು “ನಕ್ಕರೆ ಅದೇ ಸ್ವರ್ಗ’ (1967) ಚಿತ್ರಕ್ಕೆ. ಇದು ಅವರ ವೃತ್ತಿ ಬದುಕಿನ ಎರಡನೇ ಹಾಡು ಎನ್ನುವುದು ವಿಶೇಷ. ಆನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಕನ್ನಡದ ಎಲ್ಲಾ ಪ್ರಮುಖ ನಾಯಕನಟರಿಗೆ ಅವರು ದನಿಯಾಗಿದ್ದಾರೆ. ಹಿಂದಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ 120ಕ್ಕೂ ಹೆಚ್ಚು ಮುಂಚೂಣಿ ನಾಯಕನಟರಿಗೆ ಅವರು ಹಾಡಿದ್ದಾರೆ ಎನ್ನುವುದೊಂದು ಅಪರೂಪದ ದಾಖಲೆಯೇ ಸರಿ. ನನ್ನ ರಚನೆ ಮತ್ತು ಸಂಗೀತ ಸಂಯೋಜನೆಯ ಶೇ.80ರಷ್ಟು ಹಾಡುಗಳನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದಲೇ ಹಾಡಿಸಿದ್ದೇನೆ. “ಮುದ್ದಿನ ಮಾವ’ ಸಿನಿಮಾಗೆ ಅವರೇ ಸಂಗೀತ ಸಂಯೋಜಿಸಿದ್ದರು. ಈ ಸಿನಿಮಾದಲ್ಲಿ ಅವರು ಅಭಿನಯಿಸಿದ “ದೀಪಾವಳಿ ದೀಪಾವಳಿ…’ ಗೀತೆಯನ್ನು ಡಾ.ರಾಜಕುಮಾರ್ ಹಾಡಿದ್ದರು. ಇದೊಂದು ಅಪರೂಪದ ಸನ್ನಿವೇಶವಾಗಿ ದಾಖಲಾಗಿದೆ.

SPB's passport, other articles stolen in US

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಲ್ಲೊಂದು ವಿಶೇಷ ಶಕ್ತಿಯಿದೆ. ಅವರು ಯಾವುದೇ ಒಂದು ಸನ್ನಿವೇಶವನ್ನು ಒಂದೇ ನೋಟದಲ್ಲಿ ಗ್ರಹಿಸಬಲ್ಲರು. ಇನ್ನು ಅವರ ಸ್ಮರಣಶಕ್ತಿಯೂ ಅದ್ಭುತ. ಯಾವುದೇ ಒಂದು ಘಟನೆ, ವ್ಯಕ್ತಿ ಒಂದು ಬಾರಿ ತಮ್ಮ ಮನಸ್ಸಿನ ಸ್ಮೃತಿಪಟಲಕ್ಕೆ ಸೇರ್ಪಡೆಯಾದರೆ ಅವರು ಯಾವತ್ತಿಗೂ ಮರೆಯೋದಿಲ್ಲ. ನೊಂದವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಅವಕಾಶವನ್ನು ಅವರೆಂದೂ ಕಳೆದುಕೊಳ್ಳುವುದಿಲ್ಲ. ಸೋಷಿಯಲ್ ಕಾಸ್‍ಗೋಸ್ಕರ ಆಯೋಜಿಸುವ ಸಂಗೀತ ಕಾರ್ಯಕ್ರಮಗಳಿಗೆ ಅವರು ಸಂಭಾವನೆ ಪಡೆಯದೆ ಹಾಡುತ್ತಾರೆ. ಮತ್ತೊಬ್ಬರಿಗೆ ಗೊತ್ತಾಗದಂತೆ, ಪ್ರಚಾರ ಬಯಸದೆ ಹಲವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಇನ್ನು ಅವರ ಸರಳತೆ, ವಿನಮ್ರತೆ ಅನುಕರಣೀಯ. ದೊಡ್ಡ ಸಂಗೀತ ನಿರ್ದೇಶಕನಿಗೆ ತೋರುವ ವಿನಮ್ರತೆಯನ್ನೇ ಹದಿನೈದಿಪ್ಪತ್ತು ವರ್ಷದ ಸಂಗೀತ ನಿರ್ದೇಶಕನಿಗೂ ತೋರುತ್ತಾರೆ.

https://www.youtube.com/watch?v=UGwJPUVzvvs

ಅವರು ಮಹಾನ್ ದೈವಭಕ್ತ. ಶಿವನ ಆರಾಧಕರು. ಚಿಕ್ಕವಯಸ್ಸಿನಲ್ಲೇ ಜೇನುತುಪ್ಪದಲ್ಲಿ ಶಿವನಿಗೆ ಅಭಿಷೇಕ ಮಾಡುತ್ತಿದ್ದರಂತೆ. ಇವರ ತಂದೆ ಹರಿಕಥಾ ವಿದ್ವಾನ್. ಹಾಗಾಗಿ ಚಿಕ್ಕಂದಿನಿಂದಲೇ ಅವರಿಗೆ ಹಾಡುಗಾರಿಕೆ ಒಲಿಯಿತು. ಇನ್ನು ಸಂಸ್ಕೃತ ಭಾಷೆಯ ಮೇಲೆ ಅವರಿಗೆ ತುಂಬಾ ಹೋಲ್ಡ್ ಇದೆ. ಮಾತೃಭಾಷೆ ತೆಲುಗು ಆದರೂ ಯಾವುದೇ ಭಾಷೆಯಲ್ಲಿ ಹಾಡಿದರೂ ಆಯಾ ಭಾಷಿಕರನ್ನು ಬೆರಗುಗೊಳಿಸುವಂತೆ ಹಾಡುತ್ತಾರೆ. ಯಾವುದೇ ಪ್ರಾದೇಶಿಕ ಭಾಷೆಗೆ ಹಾಡುವಾಗ ಆಯಾ ಪ್ರಾದೇಶಿಕತೆಯ ಸೊಗಡನ್ನು ಮನಸಲ್ಲಿಟ್ಟುಕೊಂಡು ಹಾಡುತ್ತಾರೆ ಎನ್ನುವುದು ವಿಶೇಷ.

SPB honoured Centenary Award @ IFFI 2016 | New Movie Posters

ಎಸ್‌ಪಿಬಿ ತುಂಬಾ ಒಳ್ಳೇ ಸ್ವರಜ್ಞಾನಿ. ದೊಡ್ಡ ಸಾಧಕರಾದರೂ ಈಗಲೂ ತಾವು ಸಂಗೀತ ಕಲಿತಿಲ್ಲ ಎಂದೇ ಹೇಳಿಕೊಳ್ಳುತ್ತಾರೆ. ಅವರ ದನಿಯಲ್ಲಿನ ಮಾರ್ಪಾಡು ಇದೆಯಲ್ಲ, ಅದನ್ನು ಅವರ ಹಾಗೆ ಕೊಡಬಲ್ಲಂತಹ ಮತ್ತೊಬ್ಬ “ಕಮರ್ಷಿಯಲ್ ಗಂಧರ್ವ” ಬಹುಶಃ ಭಾರತದಲ್ಲಿ ಮತ್ತೊಬ್ಬರು ಸಿಗಲಾರರು. ಅರಂಭದಲ್ಲಿ ಅವರಿಗದ್ದಂತಹ ಪಿಚ್ ಫೋರ್ಸ್ (ಕಂಠದಿಂದ ಬರುವ ಸೌಂಡ್ ಫ್ರೀಕ್ವೆನ್ಸಿ) ಈಗಲೂ ಹಾಗೇ ಇದೆ! ಅದೇ ಧ್ವನಿ, ಡೆಪ್ತ್, ಮಾಧುರ್ಯ. ಇದನ್ನು ಕಾಪಾಡಿಕೊಂಡು ಬಂದಿರೋದು ಅವರ ದೊಡ್ಡ ತಪಸ್ಸು. ಇದಕ್ಕೆ ಸಾಧನೆಯ ಜೊತೆ ದೇವರ ಅನುಗ್ರಹವೂ ಇರಬೇಕಾಗುತ್ತದೆ. ಈ ವಿಷಯದಲ್ಲಿ ಎಸ್‌ಪಿಬಿ ಅವರಿಗೆ ಎಸ್‌ಪಿಬಿ ಅವರೇ ಸಾಟಿಯಾಗುತ್ತಾರೆ. ಅವರ ಹುಟ್ಟುಹಬ್ಬವನ್ನು ಗಂಧರ್ವ ದಿನ ಎಂದು ಕರೆದರೆ ಅತಿಶಯೋಕ್ತಿಯಾಗದು.

 – ಕೆ. ಕಲ್ಯಾಣ್

(ನಿರೂಪಣೆ: ಶಶಿಧರ ಚಿತ್ರದುರ್ಗ)

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights