ಕಲಬುರ್ಗಿಯಲ್ಲಿ ಸರಣಿ ಕಳ್ಳತನ – ಒಂದೇ ಮನೆಯಲ್ಲಿ 1.40 ಕೋಟಿ ನಗದು ದೋಚಿದ ಖದೀಮರು

ಕಲಬುರ್ಗಿಯ ಗುಬ್ಬಿ ಕಾಲೋನಿಯಲ್ಲಿ ಸರಣಿ ಕಳ್ಳತನ ನಡೆದಿದೆ. ಒಂದೇ ಮನೆಯಲ್ಲಿ 1.40 ಕೋಟಿ ರೂಪಾಯಿ ನಗದು, ಚಿನ್ನಾಭರಣ ದೋಚಲಾಗಿದೆ. ಯಾರೂ ಇಲ್ಲದ ವೇಳೆ ಮನೆಯ ಹಿಂಬದಿಯ ಕಿಟಕಿ ತೆಗೆದು ಒಳನುಗ್ಗಿ ಕಳ್ಳತನ ಮಾಡಲಾಗಿದೆ. ಪ್ರಿಡ್ಜ್ ನಲ್ಲಿದ್ದ ಡ್ರೈಫ್ರೂಟ್ಸ್ ಸಹ ತಿಂದು ತೇಗಿ ಕಳ್ಳರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಸರಣಿ ಕಳ್ಳತನ ನಡೆಸಿ, ಕೋಟ್ಯಾಂತರ ರೂಪಾಯಿ ನಗ-ನಗದು ದೋಚಿದ ಘಟನೆ ಕಲಬುರ್ಗಿ ನಗರದ ಗುಬ್ಬಿ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ. ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಮಾರುತಿ ಗೋಖಲೆ ಎಂಬುವರ ಮನೆಯಲ್ಲಿ ಬರೋಬ್ಬರಿ 1.40 ಕೋಟಿ ರೂಪಾಯಿ ನಗದು ದೋಚಲಾಗಿದೆ. ಅವರ ಎದುರಿನ ಮನೆಯಲ್ಲಿ 10 ಲಕ್ಷ ರೂಪಾಯಿ ನಗದು, ಚಿನ್ನ-ಬೆಳ್ಳಿ ಆಭರಣ ಕಳ್ಳತನ ಮಾಡಲಾಗಿದೆ. ಮತ್ತೊಂದು ಮನೆಯ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ.

ದರೋಡೆಕೋರರ ತಂಡ ಸರಣಿ ಕಳ್ಳತನ ನಡೆಸಿ, ಕೋಟ್ಯಾಂತರ ರೂಪಾಯಿ ನಗ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕಲಬುರ್ಗಿಯ ಗುಬ್ಬಿ ಕಾಲೋನಿಯಲ್ಲಿ ಎರಡು ಮನೆಗಳ ಕಳ್ಳತನ ಮಾಡಲಾಗಿದ್ದು, ಮತ್ತೊಂದು ಮನೆಯ ಕಳ್ಳತನಕ್ಕೆ ವಿಫಲ ಯತ್ನ ಮಾಡಲಾಗಿದೆ. ಪಿ.ಡಬ್ಯೂ.ಡಿ. ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಮಾರುತಿ ಗೋಖಲೆ ಎಂಬುವರ ಮನೆಯಲ್ಲಿ 1.40 ಕೋಟಿ ರೂಪಾಯಿ ನಗದು ಮತ್ತು ಚಿನ್ನಾಭರಣ ದೋಚಲಾಗಿದೆ. ಅವರ ಎದುರಿನಲ್ಲಿ ಬರುವ ನಿವೃತ್ತ ಬಿಇಒ ರೇವಣಸಿದ್ಧಪ್ಪ ಎಂಬುವರ ಮನೆಯಲ್ಲಿ ನಗದು, ಚಿನ್ನ, ಬೆಳ್ಳಿ ಆಭರಣ ಸೇರಿ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಲಾಗಿದೆ. ಎರಡೂ ಮನೆಗಳಲ್ಲಿ ಯಾರು ಇಲ್ಲದ ವೇಳೆ ಕನ್ನ ಹಾಕಲಾಗಿದೆ.

ಮನೆಯ ಹಿಂಬದಿಯಿಂದ ಕಟಕಿಗಳನ್ನು ತೆಗೆದು ಒಳನುಗ್ಗಿ ಕಳ್ಳತನ ಮಾಡಲಾಗಿದೆ. ಕಿಟಕಿಯ ಸ್ಕ್ರೂಗಳನ್ನು ತೆಗೆದ ಕಳ್ಳರು, ಕಿಟಕಿಯನ್ನು ತೆಗೆದಿಟ್ಟು, ಅನಾಯಾಸವಾಗಿ ಮನೆಯೊಳಗೆ ನುಗ್ಗಿದ್ದಾರೆ. ನಂತರ ಇಡೀ ಮನೆಯಲ್ಲಿ ಜಾಲಾಡಿದ್ದಾರೆ. ಮನೆಯಲ್ಲಿ ಸಿಕ್ಕ ನಗದು, ಚಿನ್ನ, ಬೆಳ್ಳಿ ಆಭರಣಗಳನ್ನು ಗಂಟು ಕಟ್ಟಿಕೊಂಡು ಎಸ್ಕೇಪ್ ಆಗಿದ್ದಾರೆ. ತನ್ನ ಪತ್ನಿಯೊಂದಿಗೆ ಮಕ್ಕಳನ್ನು ನೋಡಲು ಬೆಂಗಳೂರಿಗೆ ಹೋಗಿದ್ದೆವು. ಊರಿಗೆ ವಾಪಸ್ ಮರಳೋಣ ಎನ್ನುವಷ್ಟರಲ್ಲಿಯೇ ತನ್ನ ಮನೆಯಲ್ಲಿ ಕಳ್ಳತನವಾಗಿರೋ ಸುದ್ದಿ ಬಂದಿತು. ತಕ್ಷಣ ಹೊರಟು ಬಂದು ನೋಡಿದಾಗ, ನಗದು, ಆಭರಣ, ಬೆಳ್ಳಿಯ ದೇವರ ಮೂರ್ತಿ ಎಲ್ಲವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ನಿವೃತ್ತ ಬಿಇಒ ರವಣಸಿದ್ದಪ್ಪ ಹರಸೂರ ಮಾಹಿತಿ ನೀಡಿದ್ದಾರೆ.

ಮಾರುತಿ ಗೋಖಲೆ ಅವರ ಮನೆಯಲ್ಲಿ ಕಾವಲುಗಾರರನ್ನು ಇಡಲಾಗಿತ್ತು. ಆದರೆ ಆತ ಹೊರ ಹೋದ ಸಂದರ್ಭವನ್ನು ನೋಡಿ ಹಿಂಬದಿಯಿಂದ ಒಳ ನುಗ್ಗಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಇರುವ ಮಾಹಿತಿ ಗೊತ್ತಿದ್ದವರೇ ಕಳ್ಳತನ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹಿಂಬದಿಯಿಂದ ಒಳ ನುಗ್ಗಿರುವ ಕಳ್ಳರು, ಮನೆ ಮುಂದಿನ ಸಿಸಿ ಕ್ಯಾಮರಾಕ್ಕೆ ಸಾಕ್ಸ್ ಹಾಕಿದ್ದಾರೆ ಎನ್ನಲಾಗಿದೆ. ಮನೆ ಹಿಂಬದಿಯ ಸಿಸಿ ಕ್ಯಾಮರಾವನ್ನು ತಿರುಗಿಸಿ ಇಟ್ಟು, ನಂತರ ಕಳ್ಳತನ ಮಾಡಿದ್ದಾರೆ. ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಲಬುರ್ಗಿ ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್, ಕಳ್ಳತನ ಪ್ರಕರಣ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ಕೃತ್ಯ ನಡೆದಿದೆ.ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಸಿ ಕ್ಯಾಮರಾದಲ್ಲಿರುವ ದೃಶ್ಯಗಳನ್ನು ಗಮನಿಸಿ, ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಕಳ್ಳರ ಮುಖ ಸೆರೆ…
ಮಾರುತಿ ಗೋಖಲೆ ಮನೆಗೆ ಬರುವ ಮುನ್ನ ಕಳ್ಳರು ಅವರ ಹಿಂಬದಿಯಲ್ಲಿರುವ ಹೋಮಿಯೋಪಥಿಕ್ ವೈದ್ಯೆ ಡಾ.ವೀಣಾ ಪಾಟಲರ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಒಬ್ಬ ಕಳ್ಳ ಮುಸುಕು ಹಾಕಿಕೊಂಡಿದ್ದರೆ, ಮತ್ತೊಬ್ಬ ಕಳ್ಳ ಹಾಗೆಯೇ ಬಂದಿದ್ದು, ಮನೆಯ ಒಳ ನುಗ್ಗಲು ಯಾವುದಾದರೂ ಹಾದಿ ಸಿಗುವುದಾ ಎಂದು ಹುಡುಕಾಟ ನಡೆಸುತ್ತಾರೆ. ಕಿಟಕಿ ಬಂದೋಬಸ್ತ್ ಇರೋದು ಖಾತ್ರಿಯಾಗಿ, ಮನೆಯ ಮೇಲಿನವರೆಗೂ ನೋಡಿಕೊಂಡು ಬರುತ್ತಾರೆ. ಆದರೆ ಮನೆಯೊಳಗೆ ಹೋಗಲು ಅವಕಾಶ ಸಿಗದೇ ಇದ್ದಾಗ, ಗೋಡೆ ಹಾರಿ, ಗೋಖಲೆ ಮನೆಯೊಳಗೆ ನುಗ್ಗಿದ್ದಾರೆ. ಈ ದೃಶ್ಯಗಳು ವೀಣಾ ಪಾಟೀಲ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇಬ್ಬರು ವ್ಯಕ್ತಿಗಳ ಕೃತ್ಯ ಎಂಬುದು ಖಾತ್ರಿಯಾಗಿದೆ.

ಡ್ರೈ ಫ್ರೂಟ್ಸ್ ತಿಂದು ತೇಗಿದ ಕಳ್ಳರು…
ಕಳ್ಳತನ ಮುಗಿದ ಮೇಲೆ ನಿವೃತ್ತ ಬಿಇಒ ರೇವಣಸಿದ್ಧಪ್ಪ ಹರಸೂರ ಮನೆಯಲ್ಲಿ ಪ್ರಿಡ್ಜ್ ನಲ್ಲಿದ್ದ ಡ್ರೈ ಫ್ರೂಟ್ಸ್ ಮತ್ತು ಸಿಹಿ ತಿಂಡಿಗಳನ್ನು ತಿಂದು ತೇಗಿದ್ದಾರೆ. ಕಳ್ಳತನ ಮುಗಿಸಿದ ಕಳ್ಳರು ತಿನ್ನಲು ಏನಾದರೂ ಸಿಗುತ್ತದೆಯೆಂದು ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಹಲವು ದಿನಗಳಿಂದ ಮನೆಯಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಊಟ ಸಿಕ್ಕಿಲ್ಲ. ಕೊನೆಗೆ ಪ್ರಿಡ್ಜ್ ಬಾಗಿಲು ತೆಗೆದು ನೋಡಿದಾಗ ಸಿಹಿ ತಿಂಡಿಗಳು, ಡ್ರೈ ಫ್ರೂಟ್ಸ್ ಗಳು ಕಾಣಿಸಿವೆ. ಅವುಗಳೆಲ್ಲವನ್ನು ತಿಂದು ತೇಗಿದ ಕಳ್ಳರು, ಖಾಲಿ ಡಬ್ಬಿಗಳನ್ನು ಹೊರಗೆ ಎಸೆದು ಹೋಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights