ಕಾರ್ನಾಡ್‌ ನೆನಪು: ತಲೆದಂಡ ಮತ್ತು ಮಾಸ್ತಿ ನಾಟಕಗಳ ಬಗ್ಗೆ ಪಿ.ಲಂಕೇಶ್‌ ಬರಹ

ಜ್ಞಾನಪೀಠ ಪುರಸ್ಕೃತರೆಂಬುದಷ್ಟೇ ಅವರ ಹಿರಿಮೆಯಲ್ಲ. ಅವರ ನಾಟಕ ಪ್ರತಿಭೆಯ ಕುರಿತು ಅರಿಯಬೇಕೆಂದರೆ, ಅವರ ತಲೆದಂಡ ನಾಟಕದ ಕುರಿತು ಪಿ.ಲಂಕೇಶ್‍ರವರು 1990ರಲ್ಲಿ ಬರದ ಪುಟ್ಟ ಬರಹ ಓದಬೇಕು. 

 

ಮೇಲಿನದನ್ನು ಬರೆದು ಬೇಸರವಾಗಿರುವಾಗ ಮೊನ್ನೆ ಆದ ಒಂದು ಸಣ್ಣ ಸಂಗತಿ, ತಮಾಷೆಯ ಸಂಗತಿ ಹೇಳುತ್ತೇನೆ. ನಾನು ಒಬ್ಬನೇ ಕೂತು ಅದೇನೋ ಲೆಕ್ಕಾ ಹಾಕುತ್ತಿದೆ. ಗಿರೀಶ್ ಕಾರ್ನಾಡರ ‘ತಲೆದಂಡ’ ನಾಟಕವನ್ನು ಆಗತಾನೇ ಓದಿ ಮುಗಿಸಿದ್ದೆ. ಗಿರೀಶ್ ಕಾರ್ನಡ್ ಎಂಥ ವಿಚಿತ್ರ ಮನುಷ್ಯರೆಂಬುದು ಅನೇಕರಿಗೆ ಗೊತ್ತಿಲ್ಲ. ಈತ ಮನಸ್ಸು ಮಾಡಿದರೆ ವಿಕ್ರಮ್ ಶೇಟ್, ಸಲ್ಮಾನ್ ರಶ್ದಿ, ನಾಯ್‍ಪಾಲ್ ತರಹದ ಇಂಗ್ಲಿಷ್ ಲೇಖಕರಾಗಿ ಮೆರೆಯಬಹುದಿತ್ತು. ನಮ್ಮಲ್ಲಿ ಇಂಗ್ಲಿಷ್ ಭಾಷೆಯನ್ನು ಅದರೆಲ್ಲ ಚೆಂದದೊಂದಿಗೆ ಬಳಸಬಲ್ಲ ವ್ಯಕ್ತಿ ಗಿರೀಶ್. ಇಂಗ್ಲಿಷ್ ಲೇಖಕರ ಆದಾಯ, ಖ್ಯಾತಿ, ವೈಭವ ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಕನ್ನಡದಲ್ಲಿ ನೂರು ನಾಟಕ ಬರೆದರೂ ದೊರೆಯದಷ್ಟು ಹಣ ಇಂಗ್ಲಿಷ್ ಕಿರುನಾಟಕದಿಂದ ದೊರೆಯಬಲ್ಲದು. ಆದರೆ ಗಿರೀಶ್ ಅದಕ್ಕೆಲ್ಲ ಆಸೆ ಪಡಲಿಲ್ಲ. ಮತ್ತೆ ಮತ್ತೆ ಕನ್ನಡದಲ್ಲೇ ಬರೆಯುತ್ತಾರೆ. ಬರೆಯುತ್ತಾ ಅವರ ಕನ್ನಡ ಶೈಲಿ ಜನಸಾಮಾನ್ಯರ ಮಾತುಗಳನ್ನು, ಸಾಮಾನ್ಯರ ಮಾತಿನ ಗತ್ತು, ಕಮರನ್ನು ಪಡೆಯುತ್ತದೆ. ಅವರ ‘ತಲೆದಂಡ’ ನಾಟಕದಲ್ಲಿನ ಬಸವಣ್ಣ, ಬಿಜ್ಜಳ ರಾಜ, ಮಂತ್ರಿಯ ಗತ್ತನ್ನೆಲ್ಲ ಬಿಟ್ಟು ಎಲ್ಲ ಮನುಷ್ಯರಂತೆ, ಅಗಾಧ ಸಮಸ್ಯೆಗಳ ಎದುರಿಸುವ ದಿಟ್ಟರಂತೆ ಕಂಡುಬರುತ್ತಾರೆ.

ತಲೆದಂಡ by Girish Karnad

ಇಲ್ಲಿಯ ‘ತಲೆದಂಡ’ ವಸ್ತುವಿಗಿಂತಲೂ ಪವಾಡ ಅರ್ಥಪೂರ್ಣವಾಗಿದೆ. ಹನ್ನೆರಡನೆ ಶತಮಾನದ ಕ್ಷೌರಿಕ ಜಾತಿಗೆ ಸೇರಿದ ವ್ಯಕ್ತಿಯೊಬ್ಬ (ಈತ ಜೈನ ಎಂದು ನಾನು ಓದಿದ್ದೆ) ಬಸವಣ್ಣನವರ ಮಾಂತ್ರಿಕ ಸ್ಪರ್ಶದಿಂದ ದೊರೆಯಾಗುವುದೇ ಅಲ್ಲದೆ, ಪವಾಡವೊಂದನ್ನು ಕಾಣುತ್ತಾನೆ-ಜೋಳ ಮುತ್ತಾಗುವ, ಬಸವಣ್ಣನವರು ತಮ್ಮ ಧಾರಾಳವನ್ನು ಚಾಣಾಕ್ಷತೆಯಿಂದ ಮುಚ್ಚಿಹಾಕುವ ಪವಾಡವಲ್ಲ; ಶತಮಾನಗಳಿಂದ ಕೆಳಜಾತಿಯವರು, ಕೀಳುಜನ ಎನ್ನಿಸಿಕೊಂಡಿದ್ದ, ಎಂದುಕೊಂಡಿದ್ದ ಜನ ಮನುಷ್ಯರಾಗುವ, ವಿಚಾರವಂತರಾಗುವ, ಕಲಿಗಳಾಗುವ, ದೊರೆಗಳಾಗುವ ಪವಾಡ.

…ಈ ನಾಟಕ ಓದುತ್ತಿದ್ದಾಗ ನನ್ನನ್ನು ನೋಡಿಕೊಳ್ಳುವ ಹುಡುಗ ನನ್ನ ಕೋಣೆಗೆ ಬಂದು ಹೇಳಿದ: “ಸಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ರು ಬಂದಿದ್ದಾರೆ!”
“ಆ?  ಏನಂದೆ?” ಅಂದೆ.
“ಮಾಸ್ತಿ ವೆಂಕಟೇಶ ಅಯ್ಯಂಗಾರ್ರು ನಿಮ್ಮನ್ನು ನೋಡಲು ಬಂದಿದ್ದಾರೆ.”
“ಛೆ, ಮತ್ತೆ ಕೇಳಿಕೊಂಡು ಬಾ-ಅವರಿರಲಾರರು” ಅಂದೆ. ಆತ ಹೋದ. ಮರುಕ್ಷಣ ಬಂದು ಹೇಳಿದ, “ಹೌದು ಸಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ರಂತೆ” ಅಂದ.
ನಾನು ನಕ್ಕೆ, ‘ತಲೆದಂಡ’ದ ಗುಂಗಿನಲ್ಲಿದ್ದ ನಾನು ಎದ್ದು, “ಸ್ವಲ್ಪ ಇರಲು ಹೇಳು” ಎಂದು ಯೋಚಿಸಿದೆ. ಅವರು ಬರಲು ಸಾಧ್ಯವೇ ಇಲ್ಲ. ಆದರೆ ಆ ಹೆಸರನ್ನು ಪೂರ್ತಿ ಬೇರೆಯವರು ಇಟ್ಟುಕೊಳ್ಳುವುದೂ ಸಾಧ್ಯವಿಲ್ಲ. “ಆಕಸ್ಮಾತ್ ಅವರೇ ಬಂದಿದ್ದರೆ?” ಎಂದು ಕೇಳಿಕೊಂಡು ನಕ್ಕೆ. ‘ತಲೆದಂಡ’ದ ಗುಂಗು ತೀವ್ರವಾಯಿತು. ಅನೇಕಾನೇಕ ದೆವ್ವದ, ಅತೀಂದ್ರಿಯ ಕತೆಗಳನ್ನು ಬರೆದ ಮಾಸ್ತಿ ಬಂದೇಬಿಟ್ಟಿದ್ದರೆ? ನಕ್ಕೆ, ಒಂದು ಕ್ಷಣ ಯೋಚಿಸಿದೆ. ಬಾಗಿಲು ತೆರೆದುಕೊಂಡು ಬಂದೇಬಿಟ್ಟರೆ ಗತಿಯೇನೆಂದು ನಾನೇ ಬಾಗಿಲು ತೆರೆದು ನೋಡಿದೆ..,. ಅಲ್ಲಿ..,. ಮಾಸ್ತಿಯವರ ಮೂರನೇ ಅಳಿಯ ಶೇಷಾದ್ರಿ ನಿಂತಿದ್ದರು!
“ಛೆ, ಇದೇನ್ರಿ.,. ಮಾಸ್ತಿ ಅಂತ ನೀವು ಹೇಳಿಕೊಳ್ಳೋದೆ?” ಅಂದೆ.
“ಹಾಗೆ ಹೇಳದಿದ್ದರೆ ನೀವು ನೋಡದಕ್ಕೆ ನಿರಾಕರಿಸ್ತೀರಿ ಅಂತ ಹಾಗಂದೆ” ಅಂದರು.
ಕ್ಷಣದ ತಳಮಳ ತಿಳಿಸಿದೆ. ಅವರು ದೊಡ್ಡದಾಗಿ ನಕ್ಕು. “ನೀವು ಅಂಥದ್ದನ್ನೆಲ್ಲ ನಂಬುವುದಿಲ್ಲವಲ್ಲ?” ಅಂದರು.
“ಒಂದು ಕ್ಷಣ ನಂಬಿಕೆ ಸುಳ್ಳಾದರೆ ಗತಿಯೇನು ಹೇಳಿ?” ಅಂದೆ. ಶೇಷಾದ್ರಿ ದೊಡ್ಡದಾಗಿ ನಕ್ಕು ತಮ್ಮ ಕಷ್ಟ ಹೇಳಿಕೊಳ್ಳತೊಡಗಿದರು.
ನಿಮಗೀಗ ಎಷ್ಟು ವಯಸ್ಸು? ಅಂದೆ. ಎಪ್ಪತ್ತಿರಬಹುದೆ? ಎಪ್ಪತ್ತೈದು?
“ನೀವು ಸತ್ಯಕ್ಕೆ ಹತ್ತಿರ ಇದ್ದೀರಿ” ಎಂದರು. ನಿಗೂಢವಾಗಿ-
‘ತಲೆದಂಡ’ದ ಗುಂಗಿನಲ್ಲಿದ್ದ ನಾನು, ಹನ್ನೆರಡನೆ ಶತಮಾನದ ಬಸವಣ್ಣ, ಅಲ್ಲಮರ ಉಯ್ಯಾಲೆಯಲ್ಲಿದ್ದ ನಾನು ಮಾಸ್ತಿಯವರವರೆಗೆ ಹೀಜಿಕೊಂಡಿದ್ದೆ. ಎದುರು ಕೂತು ಮಾತಾಡುತ್ತಿದ್ದ ಮಾಸ್ತಿಯವರ ಅಳಿಯ ಶೇಷಾದ್ರಿಯವರ ಒಂದು ಮಾತೂ ನನ್ನನ್ನು ತಲುಪಲಿಲ್ಲ.
– ಪಿ. ಲಂಕೇಶ್‌
ಡಿಸೆಂಬರ್ 2, 1990
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights