ಗೌಡರ ಮನೆಯಲ್ಲಿಂದು ಮದುವೆ ಸಂಭ್ರಮ : ಹಸಮಣೆ ಏರಲಿರುವ ನಿಖಿಲ್-ರೇವತಿ

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ವಿವಾಹವನ್ನು ಅಂದುಕೊಂಡಂತೆ ನೆರವೇರಿಸಲು ಆಗುತ್ತಿಲ್ಲ. ಇದಕ್ಕಾಗಿ ಕುಮಾರಸ್ವಾಮಿಯವರು ಈಗಾಗಲೇ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸದೆ ಅಭಿಮಾನಿಗಳು, ಬೆಂಬಲಿಗರು ಮನೆಯಿಂದಲೇ ತಮ್ಮ ಮಗನಿಗೆ ಹರಸಬೇಕೆಂದು ವಿಡಿಯೊ ಸಂದೇಶದ ಮೂಲಕ ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ.

ಈಗಾಗಲೇ ಫಾರ್ಮ್‍ಹೌಸ್‍ನಲ್ಲಿ ವರ ನಿಖಿಲ್ ಮತ್ತು ವಧು ರೇವತಿಗೆ ಅರಿಶಿಣ ಶಾಸ್ತ್ರ ಮಾಡಿ ಮುಗಿಸಿದ್ದಾರೆ. ಮುಂದಿನ ಶಾಸ್ತ್ರಗಳಿಗೆ ಸಿದ್ಧತೆ ನಡೆಯುತ್ತಿದೆ. ಈ ಹಿಂದೆ ರಾಮನಗರದ ಜನಪದ ಲೋಕದ ಬಳಿ ವಿವಾಹ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಪರಿಣಾಮದಿಂದ ಬೆಂಗಳೂರಿನಲ್ಲಿ ಕುಮಾರಸ್ವಾಮಿ ನಿವಾಸಕ್ಕೆ ಮದುವೆ ಶಿಫ್ಟ್ ಆಗಿತ್ತು. ಈಗ ಬೆಂಗಳೂರು ರೆಡ್ ಜೋನ್‍ನಲ್ಲಿದೆ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೆ ಗ್ರೀನ್ ಜೋನ್ ರಾಮನಗರಕ್ಕೆ ಮದುವೆ ಶಿಫ್ಟ್ ಮಾಡಿದ್ದರು.

ಮಾಜಿ ಸಚಿವ ಎಂ ಕೃಷ್ಣಪ್ಪ ಅವರ ಮೊಮ್ಮಗಳು ರೇವತಿಯನ್ನು ನಿಖಿಲ್ ಕುಮಾರಸ್ವಾಮಿ ಇಂದು ರಾಮನಗರದ ಅವರ ತೋಟದ ಮನೆಯಲ್ಲಿ ಎರಡೂ ಕುಟುಂಬಗಳ ಸುಮಾರು 50 ಜನರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ. ಕಳೆದ ರಾತ್ರಿ ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ಮನೆಯಲ್ಲಿ ಚಪ್ಪರದ ಪೂಜೆ ಅರಿಶಿನ ಶಾಸ್ತ್ರ ನೆರವೇರಿದ್ದು ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಮಗನಿಗೆ ಅರಿಶಿನದ ನೀರು ಹಾಕಿ ಶುಭ ಹಾರೈಸಿದ್ದಾರೆ.

ಅದ್ದೂರಿಯಾಗಿ ನೆರವೇರಿಸಲು ಆಯೋಜಿಸಿದ್ದ ನನ್ನ ಮಗನ ವಿವಾಹವನ್ನು ಸರಳವಾಗಿ 50-60 ಜನ ಆಪ್ತ ಬಂಧುಗಳ ಸಮ್ಮುಖದಲ್ಲಿ ಮಾಡುತ್ತಿದ್ದೇವೆ. ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಪಾಲಿಸುವುದು ನಮಗೆ ಸದ್ಯಕ್ಕೆ ಅನಿವಾರ್ಯವಾಗಿದೆ. ಅಭಿಮಾನಿಗಳು, ಬೆಂಬಲಿಗರು ಯಾರೂ ಬೇಸರ ಮಾಡಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

ಅವರಿಗೆ ಒಂದು ಖುಷಿಯ ವಿಚಾರವೆಂದರೆ ರಾಮನಗರ ಜಿಲ್ಲೆ ಕೊರೋನಾ ವೈರಸ್ ಗೆ ಹಸಿರು ವಲಯದಲ್ಲಿ ಬಂದಿರುವುದು. ಬೆಂಗಳೂರಿನ ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿರುವುದರಿಂದ ರಾಮನಗರ ತೋಟದ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಕೊರೋನಾ ವೈರಸ್ ಸಮಸ್ಯೆಯೆಲ್ಲ ಮುಗಿದ ಮೇಲೆ ಎಲ್ಲರನ್ನೂ ಆಹ್ವಾನಿಸಿ ದೊಡ್ಡ ಔತಣಕೂಟ ಏರ್ಪಡಿಸುತ್ತೇವೆ. ನಾವು ಬೇರೆಯವರಿಗೆ ಮಾದರಿಯಾಗಬೇಕು. ಈ ಹಿನ್ನೆಲೆಯಲ್ಲಿ ನಿಯಮವನ್ನು ಸರಿಯಾಗಿ ಪಾಲಿಸುತ್ತೇವೆ ಎಂದಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆಗೆ ಕೇವಲ ಕುಟುಂಬದವರು ಹಾಗೂ ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಪೊಲೀಸರು ಕೂಡ ಪ್ರತಿ ವಾಹನಗಳನ್ನು ತಡೆದು ಪರಿಶೀಲಿಸಿ ಕಳುಹಿಸುತ್ತಿದ್ದಾರೆ. ಪ್ರವೇಶಕ್ಕೆ ಅನುಮತಿ ಪಡೆದಿರುವವರಿಗಷ್ಟೇ ಕಾರ್ ನಂಬರ್ ನೋಡಿ ಪೊಲೀಸರು ಒಳಗೆ ಹೋಗಲು ಅವಕಾಶ ಮಾಡಿಕೊಡುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights