ತುಂಬಿ ಹರಿಯುತ್ತಿದೆ ಮಲಪ್ರಭಾ ನದಿ: ಪ್ರವಾಹ ಭೀತಿಯಿಂದ ಗ್ರಾಮಗಳನ್ನು ತೊರೆದ ಜನ!

ನವಿಲು ತೀರ್ಥ ಡ್ಯಾಂನಿಂದ ಹೊರ ಹರಿವು ಹೆಚ್ಚಾಗಿದ್ದು, ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹೀಗಾಗಿ ಮಲಪ್ರಭಾ ನದಿ ಪಾತ್ರದಲ್ಲಿರುವ ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪೂರ, ವಾಸನ, ಬೂದಿಹಾಳ ಹಾಗೂ ರೋಣ ತಾಲೂಕಿನ ಹೊಳೆ ಆಲೂರು, ಗಾಡಗೋಳಿ, ಸೇರಿದಂತೆ 16 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಜನರು ಊರು ತೊರೆಯಲು ಆರಂಭಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲ್ಲೂಕಿನಲ್ಲಿ ಮಲಪ್ರಭ ನದಿಗೆ ಅಡ್ಡಲಾಗಿ ಕಟ್ಟಿರುವ ನವಿಲು ತೀರ್ಥ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ.  ಇದರಿಂದಾಗಿ,  ನದಿ ಪಾತ್ರದ ಲಖಮಾಪುರ ಗ್ರಾಮವು ನಡುಗಡ್ಡೆಯಾಗುವ ಸಾಧ್ಯತೆಯಿದ್ದು, ಆದಷ್ಟು ಬೇಗ ಗ್ರಾಮವನ್ನು ತೊರೆಯಿರಿ ಎಂದು ತಹಶೀಲ್ದಾರ್ ಗ್ರಾಮಸ್ಥರಲ್ಲಿ ಮನವಿ ಮಾಡುತ್ತಿದ್ದಾರೆ.

ಪ್ರವಾಹಕ್ಕೆ ತುತ್ತಾಗುವ ಆತಂಕದಿಂದ ಗ್ರಾಮಸ್ಥರು ಮಕ್ಕಳು, ಕುಟುಂಬ ಸಹಿತ ದಿನನಿತ್ಯದ ಬಳಕೆ ವಸ್ತುಗಳು‌ ಹಾಗೂ ಜಾನುವಾರುಗಳೊಂದಿಗೆ ಪರಿಹಾರ ಕೇಂದ್ರಗಳತ್ತ ಮುಖಮಾಡಿದ್ದಾರೆ. ಕಳೆದ ವರ್ಷವೂ ಮಲಪ್ರಭಾ ನದಿಯ ಪ್ರವಾಹಕ್ಕೆ ಸುಲುಕಿದ್ದ ಲಖಮಾಪುರ ಗ್ರಾಮಸ್ಥರು ಜಿಲ್ಲಾಡಳಿತ ಸೂಕ್ತ ಪರಿಹಾರ ಕ್ರಮಗಳನ್ನೂ ಹಾಗೂ ಆಶ್ರಯವನ್ನೂ ಕಲ್ಪಸಿಕೊಡದ ಹಿನ್ನೆಲೆಯಲ್ಲಿ ರಸ್ತೆ ಬದಿ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದರು. ಈಗ ಮತ್ತದೇ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಮಲಪ್ರಭಾ ಭರ್ತಿ: ದಾಖಲೆಯ ನೀರು | Prajavani

ಕಳೆದ ವರ್ಷದ ಪ್ರವಾಹದಲ್ಲಿ ಇಡೀ ಗ್ರಾಮ ಮುಳುಗಡೆಯಾದಾಗ ಜಿಲ್ಲಾಡಳಿತ ಸರಿಯಾಗಿ ಸ್ಪಂದಿಸದ ಕಾರಣ, ಗ್ರಾಮಸ್ಥರು ರಸ್ತೆ ಪಕ್ಕ ಗುಡಿಸಲು ಹಾಕಿ ಮಳೆ, ಚಳಿಯಲ್ಲಿ ಜೀವನ ಸಾಗಿಸಿದ್ದಾರೆ. ಈಗ ಮತ್ತೆ ಪ್ರವಾಹ ಎದುರಾದಾಗ ಮಾತ್ರ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಆಗಿದೆಯಾ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಇಂದು ಹರಿಹಾಯ್ದಿದ್ದಾರೆ.

ಪ್ರವಾಹ ಮುಗಿದು ವರ್ಷ ಕಳೆದರು ಸೇತುವೆ ನಿರ್ಮಾಣ‌ ಆಗಿಲ್ಲ. ಕಳೆದ ವರ್ಷ ಪ್ರವಾಹಕ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೆರೆಗೆ ಕೊಚ್ಚಿ ಹೋಗಿದ್ದರೂ ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ ಸೇತುವೆಗೆ ತೆಪೆ ಹಾಕಿ ಸುಮ್ಮನಾಗಿತ್ತು. ಸೇತುವೆ ಎತ್ತರಿಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಮನವಿ ಮಾಡಿದರು ತಲೆಕೆಡಿಸಿಕೊಳ್ಳಲಿಲ್ಲ.

ಹಾಗಾಗಿ, ಈಗ ಪ್ರವಾಹ ಭೀತಿಯ ಕಾರಣ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವ ಬಿ.ಸಿ.ಪಾಟೀಲ್‌ ಅವರು, ಗ್ರಾಮಸ್ತರನ್ನು ಬೆಳ್ಳೇರಿ ಗ್ರಾಮದ ಪರಿಹಾರ ಕೇಂದ್ರಕ್ಕೆ ಹೋಗುವಂತೆ ಮನವಿ ಮಾಡಿದ್ದಾರೆ. ಸಚಿವರ ಮಾತಿಗೆ ಕಿಮ್ಮತ್ತು ಕೊಡದ ಗ್ರಾಮಸ್ಥರು ನಾವು ಹಳ್ಳಿಯ ಪಕ್ಕದಲ್ಲೇ ಶೆಡ್‌ಗಳನ್ನು ಹಾಕಿಕೊಂಡು ಇರುವುದಾಗಿ ಹೇಳಿದ್ದಾರೆ.

ಕೊನೆಗೂ ಗ್ರಾಮಸ್ಥರ ಮನವೊಲಿಸಿರುವ ಅಧಿಕಾರಿಗಳು, ಜನರನ್ನು ಅವರ ಅಗತ್ಯ ವಸ್ತುಗಳನ್ನು ಹಾಗೂ ಮನೆಯಲ್ಲಿದ ಸಾಮಗ್ರಿಗಳನ್ನು ಸಮೇತ ಜಾನುವಾರುಗಳನ್ನು ಕಾಳಜಿ ಕೇಂದ್ರಕ್ಕೆ ರವಾನಿಸಿದ್ದಾರೆ.


ಇದನ್ನೂ ಓದಿಸಿರಾ ಉಪಚುನಾವಣೆಗೆ ನಿಖಿಲ್ ಸ್ಪರ್ಧೆ? ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights