ಬಸ್‌ಗಳಿಗೆ ಬಿಜೆಪಿ ಧ್ವಜ ನೇತಾಕಿಕೊಳ್ಳಿ; ಬಸ್‌ಗಳಿಗೆ ಅನುಮತಿ ಕೊಡಿ: ಪ್ರಿಯಾಂಕ ಗಾಂಧಿ

ಕಳೆದ 24 ಗಂಟೆಗಳಿಂದ ಬಸ್‌ಗಳು ಉತ್ತರ ಪ್ರದೇಶದ ಗಡಿಯಲ್ಲಿ ಕಾಯುತ್ತಿವೆ. ಆ ಬಸ್‌ಗಳಲ್ಲಿ ಬೇಕಾದರೆ ಬಿಜೆಪಿ ಪಕ್ಷದ ಧ್ವಜ ಮತ್ತು ಪೋಸ್ಟರ್ ಅಂಟಿಸಿ. ನೀವೆ ಬಸ್‌ ವ್ಯವಸ್ಥೆ ಮಾಡಿರುವುದು ಎಂದು ಪ್ರಚಾರ ಮಾಡಿ. ದಯವಿಟ್ಟು ಬಸ್‌ಗಳು ಉತ್ತರ ಪ್ರದೇಶ ಪ್ರವೇಶಿಸಲು ಅನುಮತಿ ನೀಡಿ ಎಂದು ಕಾಂಗ್ರೆಸ್‌ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜಸ್ಥಾನದ 1000 ಬಸ್‌ಗಳು ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಹೊತ್ತುತಂದಿದ್ದು ಉ.ಪ್ರ ಗಡಿಯಲ್ಲಿ ಸಾಲಾಗಿ ನಿಂತಿವೆ. ಈ ವಿಚಾರಕ್ಕೆ ಪ್ರಿಯಾಂಕ ಗಾಂಧಿ ಮತ್ತು ಯೋಗಿ ಆದಿತ್ಯನಾಥ್‌ ಸರ್ಕಾರದ ನಡುವೆ ತಿಕ್ಕಾಟ ಆರಂಭವಾಗಿದೆ.

ಮೊದಲಿಗೆ ಪ್ರಿಯಾಂಕ ಗಾಂಧಿಯವರು ಗೌರವಾನ್ವಿತ ಮುಖ್ಯಮಂತ್ರಿಗಳೆ, ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ, ಇದು ರಾಜಕೀಯದ ಸಮಯವಲ್ಲ. ನಮ್ಮ ಬಸ್ಸುಗಳು ಗಡಿಯಲ್ಲಿ ನಿಂತಿವೆ. ಸಾವಿರಾರು ಕಾರ್ಮಿಕರು ಮತ್ತು ವಲಸಿಗರು ಆಹಾರ ಅಥವಾ ನೀರಿಲ್ಲದೆ ತಮ್ಮ ಮನೆಗಳ ಕಡೆಗೆ ನಡೆಯುತ್ತಿದ್ದಾರೆ. ನಾವು ಅವರಿಗೆ ಸಹಾಯ ಮಾಡೋಣ ನಮ್ಮ ಬಸ್ಸುಗಳಿಗೆ ಅನುಮತಿ ನೀಡಿ” ಎಂದು ಅವರು ಹೇಳಿದ್ದರು.

ಮತ್ತೊಂದು ಟ್ವೀಟ್‌ನಲ್ಲಿ, “ನಮ್ಮ ಬಸ್‌ಗಳು ಗಡಿಯಲ್ಲಿ ನಿಂತಿವೆ. ಸಾವಿರಾರು ರಾಷ್ಟ್ರ ನಿರ್ಮಾಣಕಾರ ಕಾರ್ಮಿಕರು ಮತ್ತು ವಲಸಿಗರು ಬಿಸಿಲಿನಲ್ಲಿ ನಡೆಯುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಜಿ ಅವರಿಗೆ ಅನುಮತಿ ನೀಡಿ. ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಣ” ಎಂದು ಅವರು ಹೇಳಿದ್ದಾರೆ.

ಆನಂತರ ಉತ್ತರ ಪ್ರದೇಶ ಸರ್ಕಾರವು ಸಾವಿರ ಬಸ್‌ಗಳು ಉತ್ತರ ಪ್ರದೇಶ ಪ್ರವೇಶಿಸಲು ಅನುಮತಿ ನೀಡಿತ್ತು. ಆದರೆ ನಿನ್ನೆ ಸಂಜೆಯಿಂದ ಉತ್ತರ ಪ್ರದೇಶದ ಗಡಿ ಪ್ರವೇಶಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದ್ದು ಬಸ್‌ಗಳಿಗೆ ಅವಕಾಶ ಕೊಟ್ಟಿಲ್ಲ. ಈ ನಡುವೆ ಕಾಂಗ್ರೆಸ್‌ ಪಕ್ಷ ನೀಡಿದ್ದ ಬಸ್‌ಗಳ ಸಂಪೂರ್ಣ ವಿವರದಲ್ಲಿ 879 ಬಸ್‌ಗಳು ಮಾತ್ರ ಇದ್ದು ಉಳಿದವರು ಬೈಕ್‌, ಆಟೋಗಳಾಗಿವೆ. ಸುಳ್ಳು ಮಾಹಿತಿ ನೀಡಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ ಎಂದು ಯೋಗಿ ಸರ್ಕಾರ ಆರೋಪಿಸಿದೆ.

ಇದರಿಂದ ಕುಪಿತಗೊಂಡಿರುವ ಪ್ರಿಯಾಂಕ ಗಾಂಧಿಯವರು “ಯುಪಿ ಸರ್ಕಾರ ಎಲ್ಲ ಮಿತಿಗಳನ್ನು ಮೀರಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಮತ್ತು ಅಸಹಾಯಕ ವಲಸೆ ಕಾರ್ಮಿಕರಿಗೆ ಸೇವೆ ಸಲ್ಲಿಸಲು ಅವಕಾಶವಿದ್ದಾಗ ಅದು ಎಲ್ಲ ಅಡೆತಡೆಗಳನ್ನು ಉಂಟುಮಾಡಿದೆ. ಯೋಗಿ ಆದಿತ್ಯನಾಥ್ ಜಿ ನೀವು ಈ ಬಸ್‌ಗಳಲ್ಲಿ ಬಿಜೆಪಿ ಧ್ವಜಗಳು ಮತ್ತು ನಿಮ್ಮ ಪೋಸ್ಟರ್ ‌ಗಳನ್ನು ಬಳಸಬಹುದು, ಆದರೆ ನಮ್ಮ ಸೇವೆಯ ಭಾವನೆಗಳನ್ನು ತಿರಸ್ಕರಿಸಬೇಡಿ ”ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನಾವು ನಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ವಲಸೆ ಕಾರ್ಮಿಕರು ತಮ್ಮ ಸ್ಥಳೀಯ ರಾಜ್ಯಗಳಿಗೆ ಮರಳಲು ಕಾಯುತ್ತಿದ್ದಾರೆ. ಅವರು ಕೇವಲ ಭಾರತೀಯರಲ್ಲ, ನಮ್ಮ ಭಾತರದ ಬೆನ್ನೆಲುಬು. ದೇಶವು ಅವರ ರಕ್ತ ಮತ್ತು ಬೆವರಿನ ಮೇಲೆ ನಡೆಯುತ್ತದೆ. ಇದು ಎಲ್ಲರ ಜವಾಬ್ದಾರಿ. ಇದು ರಾಜಕೀಯದ ಸಮಯವಲ್ಲ ಎಂದು ಪ್ರಿಯಾಂಕ ಗಾಂಧಿ ತಿಳಿಸಿದ್ದಾರೆ.

ಅಲ್ಲದೇ ಕಾಂಗ್ರೆಸ್‌ ಪಕ್ಷವು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಬಸ್‌ಗಳಲ್ಲಿರುವ ವಲಸೆ ಕಾರ್ಮಿಕರು “ಇಲ್ಲಿರುವವೆಲ್ಲ ಬಸ್‌ಗಳೆ ಹೊರತು, ಬೈಕ್‌ ಆಟೋಗಳಲ್ಲ. ಒಂದು ದಿನದಿಂದ ಬಸ್‌ನಲ್ಲಿ ಕೂಗು ಕಾಯುತ್ತಿದ್ದೇವೆ. ದಯವಿಟ್ಟು ಅನುಮತಿ ಕೊಟ್ಟು ನಾವು ನಮ್ಮ ಊರುಗಳನ್ನು ಸೇರಿಕೊಳ್ಳಲು ಅವಕಾಶ ಮಾಡಿಕೊಡಿ” ಎಂದು ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights