ಮಹಾಡ್ ಸತ್ಯಾಗ್ರಹಕ್ಕೆ 93; ಇಂದಿಗೂ ಕನಸಾಗಿರುವ ಅಸ್ಪೃಶ್ಯತೆಯ ನಿರ್ಮೂಲನೆ

ಭಾರತೀಯ ಸಂವಿಧಾನ 17ನೆ ಆರ್ಟಿಕಲ್ ನಲ್ಲಿ (1955ರ ಅಸ್ಪೃಶ್ಯತೆ ಅಪರಾಧ ಕಾಯ್ದೆ/ 1976ರ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ) ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಿ, ಅಸ್ಪೃಶ್ಯತೆಯ ಆಚರಣೆ ಅಪರಾಧ ಎನ್ನುತ್ತದೆ. ಆದರೆ ಭಾರತದಲ್ಲಿ ಅಸ್ಪೃಶ್ಯತೆಯ ಕತೆಗಳು ದಿನದಿನಕ್ಕೂ ಕಾಣಸಿಗುತ್ತವೆ. ಇನ್ನೂ ಬಹುಸಂಖ್ಯಾತ ದೇವಸ್ಥಾನಗಳು ಎಷ್ಟೋ ಜನರಿಗೆ ನಿಷಿದ್ಧ. ಸವರ್ಣೀಯರು ದಲಿತರನ್ನು ಥಳಿಸುವ ಕಥೆಗಳು ದಿನನಿತ್ಯದ ಸುದ್ದಿ ಪುಟಗಳಲ್ಲಿ ಕಾಣಿಸುತ್ತವೆ. ಮರ್ಯಾದಾ ಹತ್ಯೆಗಳೂ ನಿಂತಿಲ್ಲ. ಸೆಪ್ಟಂಬರ್ 2018ರಲ್ಲಿ, ತನ್ನ ಬಸುರಿ ಮಗಳ ಎದುರಿನಲ್ಲಿಯೇ, ಜಾತಿ  ಅಹಂಕಾರದಿಂದ ಅಳಿಯನನ್ನು ಕೊಲೆ ಮಾಡಿಸಿದ ತೆಲಂಗಾಣದ ಟಿ ಮಾರುತಿ ರಾವ್ ಅಂತಹವರನ್ನು ಖಂಡಿಸದೆ ಸಮರ್ಥಿಸಿಕೊಳ್ಳುವ ಮಾಧ್ಯಮಗಳೂ ಇನ್ನೂ ಉಳಿದುಕೊಂಡಿವೆ.

ಸಂವಿಧಾನದ ನೈತಿಕತೆಯನ್ನೂ ಪಾಲಿಸದೆ ವೈಯಕ್ತಿಕ ನೈತಿಕ ಮೌಲ್ಯಗಳನ್ನೂ ಮೈಗೂಡಿಸಿಕೊಳ್ಳಲು ಸಾಧ್ಯವಾಗದೆ ಎಷ್ಟೋ ಲಕ್ಷಾಂತರ ಜನ ಈ ದೇಶವನ್ನು ಶತಮಾನಗಳ ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯಕ್ಕೆ, ಅಸ್ಪೃಶ್ಯತೆ ಎಂಬ ರೋಗಕ್ಕೆ ಇನ್ನೂ ತೀವ್ರವಾದ ಮದ್ದು ಬೇಕಾಗಿದೆ. ಅದಕ್ಕೆ ಹಿಂದೆ ನಡೆದ ಹೋರಾಟಗಳನ್ನು, ಸತ್ಯಾಗ್ರಹಗಳ ಕಥೆಗಳನ್ನು ನೆನೆಯುವುದು ಒಂದು ಔಷಧವಾಗಬಹುದೇನೋ!

ಮಾರ್ಚ್ 20 ಮಹಾಡ್ ಸತ್ಯಾಗ್ರಹ ನಡೆದ ದಿನ. 1927ರಲ್ಲಿ ನಡೆದ ಈ ಸತ್ಯಾಗ್ರಹ ಡಾ. ಬಿ ಆರ್ ಅಂಬೇಡ್ಕರ್ ಅವರು ನಡೆಸಿದ ಸಾರ್ವಜನಿಕ ಹೋರಾಟಗಳಲ್ಲಿ ಬಹಳ ಪ್ರಮುಖವಾದದ್ದು. ವಿಶ್ವದಲ್ಲಿಯೇ ನಾಗರಿಕ ಹಕ್ಕುಗಳ ಹೋರಟಕ್ಕಾಗಿ ನಡೆದ ಮೊದಲ ಸತ್ಯಾಗ್ರಹ ಇದು ಎಂಬುದು ಹಲವು ಸಮಾಜ ಶಾಸ್ತ್ರಜ್ಞರ- ರಾಜಕೀಯ ಶಾಸ್ತ್ರಜ್ಞರ ನಂಬಿಕೆ.

ಬಾಂಬೆ ಪ್ರಾಂತ್ಯದ ಮಹಾಡ್ ಗ್ರಾಮದಲ್ಲಿ ಎಲ್ಲ ಕೆರೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ 1924ರಲ್ಲಿ ಗ್ರಾಮ ಪಂಚಾಯ್ತಿಯ ನಿರ್ಣಯ ಆಗಿರುತ್ತದೆ. ಆದರೆ ಹಿಂದೂ ಸವರ್ಣೀಯ ಜಾತಿಗಳ ಪ್ರಬಲರು, ಸಮಾಜದ ನಿರ್ಲಕ್ಷಿತ ಸಮುದಾಯಗಳಿಗೆ ಈ ಕೆರೆಗೆಳಿಂದ ನೀರು ತೆಗೆದುಕೊಳ್ಳುವ ನಿಷೇಧವನ್ನು ಮುಂದುವರೆಸಿರುತ್ತಾರೆ.

ಈಮಧ್ಯೆ ಮಾರ್ಚ್19-20, 1927ರಲ್ಲಿ ಕೊಲಬ ಜಿಲ್ಲೆಯ ನಿರ್ಲಕ್ಷಿತ ಸಮುದಾಯಗಳು ಆಯೋಜಿಸಿದ್ದ ಎರಡು ದಿನದ ಸಮಾವೇಶಕ್ಕೆ ಡಾ. ಅಂಬೇಡ್ಕರ್ ಅಧ್ಯಕ್ಷರಾಗಿ ಹೋಗಿರುತ್ತಾರೆ. ಈ ಸಮಾವೇಶದ ಸಂದರ್ಭದಲ್ಲಿ, ಸಮಾವೇಶದಲ್ಲಿ ಭಾಗಿಯಾಗಿರುವವರು ಮಹಾಡ್ ನಲ್ಲಿರುವ ಚಾವ್ದರ್ ಕೆರೆಗೆ ನಡೆದು, ನೀರು ಕುಡಿದು ಪ್ರತಿಭಟನೆ ನಡೆಸಬೇಕೆಂದು ನಿಶ್ಚಯಿಸಲಾಗುತ್ತದೆ. ಇದರ ಭಾಗವಾಗಿ ಮಾರ್ಚ್ 20ರಂದು ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸುಮಾರು 2500 ಜನ ಮುಖ್ಯ ಬೀದಿಗಳಲ್ಲಿ ನಡೆದು ಚಾವ್ದರ್ ಕೆರೆಯಲ್ಲಿ ನೀರು ಕುಡಿಯುತ್ತಾರೆ. ಇದೇ ಮಹಾಡ್ ಸತ್ಯಾಗ್ರಹ.

ಈ ಕಾರ್ಯಕ್ರಮ ಬಹಳ ಶಾಂತಿಯುತವಾಗಿ ನಡೆದು, ಸತ್ಯಾಗ್ರಹದಲ್ಲಿ ಭಾಗವಹಿಸಿದ್ದವರೆಲ್ಲ ಹಿಂದಿರುಗುತ್ತಾರೆ. ಆದರೆ ಇದರ ಬಗ್ಗೆ ಕುಪಿತಗೊಳ್ಳುವ ಸವರ್ಣೀಯ ಜಾತೀಯ ಮನಸ್ಸುಗಳು, ಮೇಲ್ಜಾತಿಗಳ ದೇವಸ್ಥಾನವನ್ನು ಹೊಕ್ಕಲು ಸತ್ಯಾಗ್ರಹಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿಸುತ್ತಾರೆ. ಇದರ ಜೊತೆಗೆ ಗಲಭೆಯನ್ನು ಎಬ್ಬಿಸುವ ಸವರ್ಣೀಯರು, ಸಮಾವೇಶಕ್ಕೆ ಹಾಕಿದ್ದ ಪೇಂಡಾಲ್ ಹರಿದು, ಕಟ್ಟಿದ್ದ ಬೊಂಬುಗಳನ್ನು ಮುರಿದು, ಹಲವು ಸತ್ಯಾಗ್ರಹಿಗಳ ಮೇಲೆ ಹಲ್ಲೆ ಮಾಡುತ್ತಾರೆ. ಇದರಲ್ಲಿ 20ಕ್ಕೂ ಹೆಚ್ಚು ಜನಗಳಿಗೆ ಗಾಯವಾಗುತ್ತದೆ.

ಇಂತಹ ಗಲಭೆಗಳ ನಡುವೆಯೂ ಸತ್ಯಾಗ್ರಹಿಗಳನ್ನು ಕಾನೂನು ಮುರಿಯದಂತೆ ಮತ್ತು ಶಾಂತಿ ಕಾಪಾಡುವಂತೆ ಅಂಬೇಡ್ಕರ್ ನೋಡಿಕೊಳ್ಳುತ್ತಾರೆ. ಇದರ ಬಗ್ಗೆ ನಂತರ ತನಿಖೆಯಾಗಿ ಅಶಾಂತಿ ಮತ್ತು ಹಲ್ಲೆಗೆ ಕಾರಣರಾದ ಸವರ್ಣೀಯ ಹಿಂದೂಗಳಿಗೆ ಜೂನ್ 1927ರಲ್ಲಿ ಶಿಕ್ಷೆಯಾಗುತ್ತದೆ.

ಸ್ವತಹ ತಾವೇ ಅಸ್ಪೃಶ್ಯತೆಯನ್ನು ಅನುಭವಿಸಿ, ಎದುರಿಸಿ, ಅಸ್ಪೃಶ್ಯತೆಯ ಹೋರಾಟಗಳಲ್ಲಿ ನೊಂದವರ ಮೇಲೆಯೇ ಮತ್ತೆ ಹಲ್ಲೆಗಳನ್ನು ನೋಡುತ್ತಿದ್ದ ಅಂಬೇಡ್ಕರ್ ಅವರ ಈ ಮಾತುಗಳು ಇವತ್ತಿಗೂ ಸತ್ಯ “ಬಾಲ ಗಂಗಾಧರ್ ತಿಲಕ್ ಅಸ್ಪೃಶ್ಯರಾಗಿ ಹುಟ್ಟಿದ್ದರೆ ಅವರು ‘ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು’ ಎಂಬ ಘೋಷಣೆ ಕೂಗುವುದಕ್ಕಿಂತಲೂ ಮಾನವನ ಘನತೆಯನ್ನು ಉಳಿಸುವುದು ಮತ್ತು ಅಸ್ಪೃಶ್ಯತೆಯ ನಿರ್ಮೂಲನೆಯನ್ನು ತಮ್ಮ ಪ್ರಥಮ ಕರ್ತವ್ಯವನ್ನಾಗಿ ಮಾಡಿಕೊಳ್ಳುತ್ತಿದ್ದರು. ಹಾಗೆಯೇ ಲೆನಿನ್ ಭಾರತದಲ್ಲಿ ಹುಟ್ಟಿದ್ದರೆ ತಮ್ಮ ಕ್ರಾಂತಿಯ ಕಾರ್ಯಕ್ರಮಕ್ಕಿಂತಲೂ ಅಸ್ಪೃಶ್ಯತೆಯ ನಿರ್ಮೂಲನೆಗೆ ಮೊದಲು ಮುಂದಾಗುತ್ತಿದ್ದರು” ಎಂದು ಅಂಬೇಡ್ಕರ್ ಹೇಳಿದ್ದನ್ನು ಮಹಾಡ್ ಸತ್ಯಾಗ್ರದ 93ನೇ ವರ್ಷದಂದು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights