ನೀಡಿದ ಭರವಸೆಗಳೆಲ್ಲವೂ ಸುಳ್ಳಾದವು. ಬಡಜನರಿಗೆ ಭೂಮಿ ಮತ್ತು ಮನೆಗಳನ್ನು ನೀಡುವಂತೆ ಒತ್ತಾಯಿಸಿ ಹಲವು ಮನವಿಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್‌.ಎಸ್‌ ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ಮತ್ತು ಭೂಮಿ ಇಲ್ಲದವರಿಗೆ ಭೂಮಿ, ಮನೆಯಿಲ್ಲದವರಿಗೆ ಮನೆಗಳನ್ನು ನೀಡುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೃತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭವಾಗಿದೆ.

ಮಧುಗಿರಿ ತಾಲೂಕಿನ ಬ್ಯಾಲ್ಯ, ಕೊಡಿಗೇನಹಳ್ಳಿ ಮತ್ತು ಶಿರಾ ತಾಲೂಕಿನಿಂದ ಆಗಮಿಸಿದ್ದ 100 ಹೆಚ್ಚು ಮಂದಿ ಭೂರಹಿತರು, ಮನೆ ಇಲ್ಲದ ಬಡವರು ವಾಸಕ್ಕೆ ಮನೆ ಉಳುಮೆ ಮಾಡಲು ಒಂದಿಷ್ಟು ಭೂಮಿ ನೀಡುವಂತೆ ಒತ್ತಾಯಿಸಿದರು. ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಹೋರಾತ್ರಿ ಧರಣಿಗೆ ಚಾಲನೆ ನೀಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಭಾರತೀಯರಾದ ಎಲ್ಲರಿಗೂ ಬದುಕಿ ಬಾಳುವ ಹಕ್ಕಿದೆ. ಬರೀ ಓಟು ಕೊಟ್ಟರೆ ಸಾಲದು ಊಟ ಕೊಡಬೇಕು, ಉದ್ಯೋಗ ಕೊಡಬೇಕು, ನೆಲೆ ಮತ್ತು ನೆಲ ಕೊಡಬೇಕು ಎಂದು ಒತ್ತಾಯಿಸಿದರು.

ಈ ಜನರನ್ನು ಕರಿಬೇವಿನ ಸೊಪ್ಪಿನಂತೆ ಬಳಸಬಾರದು. ರಸ ಬಿಟ್ಟು ಮೇಲೆ ಅದನ್ನು ಎಸೆಯುವಂತೆ ಜನರನ್ನು ಬಳಸಿ ಬೀದಿಗೆ ಎಸೆಯುವಂತೆ ಕಾಣುತ್ತಿದೆ ಈ ದೇಶ. ಜನರನ್ನು ಮರ್ಯಾದೆಯಿಂದ ನಡೆಸಿಕೊಳ್ಳುವುದನ್ನು ಮೊದಲು ಸರ್ಕಾರಗಳು, ಜನಪ್ರತಿನಿಧಿಗಳು ಕಲಿಯಬೇಕು. ಪೊಲೀಸರು, ಅಧಿಕಾರಿಗಳು, ಮಂತ್ರಿಗಳು, ಜಿಲ್ಲಾಧಿಕಾರಿ ಎಲ್ಲರೂ ಜನರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಈ ಜನ ನಿಮಗೆ ಓಟು ಕೊಡೋರು. ಅಧಿಕಾರದಲ್ಲಿ ಕೂರಿಸೋರು. ಇವರನ್ನು ನೀವು ನಿರ್ಲಕ್ಷ್ಯ ಮಾಡ್ತೀರಾ? ಕಸದ ಕಡ್ಡಿಯಂತೆ ಕಾಣ್ತೀರಾ? ನಿಮಗೆ ನಾಚಿಕೆ ಆಗುವುದಿಲ್ಲವೇ? ಎಷ್ಟು ದಿನ ಹಸಿದುಕೊಂಡಿರಬೇಕು. ಎಷ್ಟು ದಿನ ಬೀದಿಯಲ್ಲಿರಬೇಕು. ಮನೆ ನೀಡುವುದು, ಭೂಮಿ ನೀಡುವುದು ಸರ್ಕಾರದ ಕರ್ತವ್ಯ. ಸರ್ಕಾರಗಳು ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು. ಇಲ್ಲಿದಿದ್ದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಕೊಡಗಿನ ದಿಡ್ಡಹಳ್ಳಿಯಲ್ಲಿ ನೂರಾರು ಕುಟಂಬಗಳನ್ನು ಒಕ್ಕಲೆಬ್ಬಿಸಿದರು. ನಾವು ಹೋರಾಟ ಮಾಡಿದೆವು. ಪರಿಣಾಮ ಅವರಿಗೆ ಮನೆಗಳನ್ನು ನೀಡಲು ಸಿದ್ದತೆ ನಡೆದಿದೆ. ಮನೆ, ಭೂಮಿ ಪಡೆಯುವುದು ನಮ್ಮ ಹಕ್ಕು. ಸರ್ಕಾರವನ್ನು ಯಾರಿಗೋಸ್ಕರ ನಡೆಸುತ್ತೀರಿ. ಶ್ರೀಮಂತರಿಗಾಗಿ ನಡೆಸುತ್ತೀರಾ? ಬಡವರು ಬದುಕಬೇಡವೇ? ಎಂದು ಪ್ರಶ್ನಿಸಿದ್ದಾರೆ.

ಜನರಿಗೆ ವಂಚನೆ ಮಾಡೋರು ಪ್ರತಿನಿಧಿಗಳೇನ್ರಿ? ಅಯೋಗ್ಯರು ಅವರು. ಇಂಥವರು ನಮ್ಮ ಪ್ರತಿನಿಧಿಗಳಾ? ಒಂದು ತತ್ವಕ್ಕೆ ಬದ್ದರಾಗಲ್ಲ, ಒಂದು ಪಕ್ಷಕ್ಕೆ ಬದ್ದರಾಗಲ್ಲ, ವಿಚಾರಕ್ಕೆ ಬದ್ದರಾಗಿಲ್ಲ. ಮರ್ಯಾದೆ ಇಲ್ಲ ಇವರಿಗೆ. ಕಳಚಿಕೊಂಡು ಹೋಗುತ್ತಿರುತ್ತಾರೆ. ಇದೇನ್ರಿ ಇದು? ಇಂಥಾ ಅನ್ಯಾಯ ನಡೆಯುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರ್ತಿರಲ್ಲಾ ನೀವು ಯುವಕರು. ಇದಕ್ಕೇನಾ ನಾವು ಸ್ವಾತಂತ್ರ್ಯ ತಂದು ಕೊಟ್ಟಿದ್ದು? ಲೂಟಿ ಮಾಡುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೀರಾ? ಲಕ್ಷಾಧಿಪತಿಗೆ ಜೈ ಅನ್ನುತ್ತೀರಾ? ಅವನು ಕೊಟ್ಟ ಹೆಂಡ, ಅವನು ಕೊಟ್ಟ ಖಂಡ ತಿಂದು ಜೈ ಅನ್ನೋದೇ ನಿಮ್ಮ ಬದುಕಾಗಿದೆಯೇ? ಯುವಕರು ಎಚ್ಚೆತ್ತುಕೊಳ್ಳದಿದ್ದರೆ ಈ ದೇಶಕ್ಕೆ ಉಳಿಗಾಲವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮಾನಮರ್ಯಾದೆ ಇಲ್ಲದ ರಾಜಕೀಯ ಪಕ್ಷಗಳನ್ನು ನೋಡಿದ್ರೆ ಬೇಸರವಾಗುತ್ತೇ. ರಾಜಕೀಯ ಹೊಲಸೆದ್ದು ಹೊಗಿದೆ. ಸಿಕ್ಕಿದ್ದನ್ನು ಲೂಟಿ ಮಾಡಿಕೊಂಡು ಹೋಗಬಹುದು ಎಂದು ತಿಳಿದುಕೊಂಡಿದ್ದಾರೆ. ಪಿತೂರಿ ಮಾಡಿ ಇನ್ನೊಂದು ಪಕ್ಷವನ್ನು ಧ್ವಂಸ ಮಾಡಬೇಕೆಂದು ಚಿಂತನೆ ನಡೆಸುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಕೀಯ ಆಟ ಅನ್ನುತ್ತಾರೆ. ಆಟ ಆಡಬೇಕೆಂದರೆ ನೀವು ಮನೆಗೆ ಹೋಗಿ ಎಂದು ಕಿಡಿಕಾರಿದರು.

ಹಳ್ಳಿಗಳಲ್ಲಿ ಬಡವರು, ಆದಿವಾಸಿಗಳು, ದಲಿತರು ಸರ್ಕಾರಿ ಭೂಮಿಗಳಲ್ಲಿ ಸಾಗುವಳಿ ಮಾಡಿಕೊಂಡು ಹಕ್ಕುಪತ್ರ ನೀಡುವಂತೆ ಕೇಳುತ್ತಿದ್ದಾರೆ. ಸಮಸ್ಯೆ ತೀವ್ರವಾಗಿದೆ. ಆದರೂ ಸರ್ಕಾರ ಗಮನಹರಿಸುತ್ತಿಲ್ಲ. ಕಳೆದ ಮೂರು ವರ್ಷಗಳಿಂದಲೂ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹೋರಾಟ ಮಾಡುತ್ತಲೇ ಬರುತ್ತಿದೆ ಎಂದು ಸಿರಿಮನೆ ನಾಗರಾಜ್ ಹೇಳಿದರು.

ಜಮೀನು ಇಲ್ಲದವರಿಗೆ, ಮನೆ ಇಲ್ಲದವರಿಗೆ ಭೂಮಿ ಮತ್ತು ಮನೆ ಕೊಡಬೇಕು. ಅಧಿಕಾರಿಗಳಲ್ಲಿ, ಜನಪ್ರತಿನಿಧಿಗಳಲ್ಲಿ ಬಡವರ ಬಗ್ಗೆ ಕಾಳಜಿಯೇ ಇಲ್ಲ. ಆರು ಸುತ್ತಿನ ಹೋರಾರ ನಡೆದರೂ  ಕಿಮ್ಮತ್ತು ನೀಡುತ್ತಿಲ್ಲ. ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಹೋರಾಟಗಳನ್ನು ಮಾಡಿದ್ದೇವೆ. ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೇವೆ.  ಸರ್ಕಾರ ಸಮಸ್ಯೆಯನ್ನು ಬಗೆಹರಿಸಲು ಒಪ್ಪಿಕೊಂಡಿದೆ. ಭೂಮಿ ಮತ್ತು ಮನೆ ಒದಗಿಸುವ ಭರವಸೆಯನ್ನು ಜಗದೀಶ್ ಶೆಟ್ಟರ್ ನೀಡಿದ್ದರು. ಆದರೆ ಆಗಿರುವ ಕೆಲಸಗಳು ಏನೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಲೇ ಇದೆ. ಅಧಿಕಾರಿಗಳು ಪೊಲೀಸರನ್ನು ಮುಂದಿಟ್ಟುಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ. ಹೋರಾಟ ನಡೆಸಿದ ಭಾಗವಾಗಿ ಎರಡು ವರ್ಷಗಳಿಂದ ಒಕ್ಕಲೆಬ್ಬಿಸುವ ಕೆಲಸ ನಡೆದಿಲ್ಲ, ಆದರೆ ಅಧಿಕಾರಿಗಳ ಕಿರುಕುಳ ಮಾತ್ರ ತಪ್ಪಿಲ್ಲ ಎಂದು ಆರೋಪಿಸಿದರು.