ಶ್ರಮಿಕ್ ರೈಲು ಓಡುತ್ತಿಲ್ಲ; ಕಾರ್ಮಿಕರ ನಡಿಗೆ ನಿಲ್ಲುತ್ತಿಲ್ಲ; ಸರದಿ ಸಾಲು ಮುಗಿಯುತ್ತಿಲ್ಲ

ಲಾಕ್ ಡೌನ್ ಮುಂದುವರೆಯುತ್ತಿದೆ ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ವಲಸೆ ಕಾರ್ಮಿಕರು ತಮ್ಮ ಕುಟುಂಬವನ್ನು ಸೇರುವ ತವಕ ಮತ್ತು ಅನಿವಾರ್ಯತೆಯಿಂದ ನಾರೂರು ಮೈಲುಗಳ ಹಾದಿಯನ್ನು ನಡೆದೇ ಕ್ರಮಸಲು ಮುಂದಾದರು. ನಡೆದು ಹೊರಟವರಲ್ಲಿ ಹಚಿವು,ಬಳಲಿಕೆ, ರಸ್ತೆ ಅಫಘಾತಗಳಿಂದಾಗಿ ಸುಮಾರು 150ಕ್ಕೂ ಹೆಚ್ಚು ಜನರು ಹಸುನೀಗಿದರು.

ಇಷ್ಟಾದರೂ ಕಾರ್ಮಿಕರ ಬವಣೆಯನ್ನು ಕೇಳಿಸಿಕೊಳ್ಳಬೇಕಾದ ಸರ್ಕಾರಗಳ ಕಿವಿ ಕಿವುಡಾಗಿಯೇ ಇತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿ ಖಂಡನೆ ಮತ್ತು ಒತ್ತಡ ಮಣಿದ ಸರ್ಕಾರಗಳು ಕಾರ್ಮಿಕರಿಗೆ ಬಸ್ – ರೈಲುಗಳ ವ್ಯವಸ್ಥೆಯನ್ನೇನೋ ಮಾಡಿದವು. ಆದರೆ, ದಿನಕ್ಕೊಂದು ರೀತಿಯ ನೀತಿ-ನಿಯಮಗಳನ್ನು ಮಾಡುತ್ತಿರುವ ಸರ್ಕಾರ ಕಾರ್ಮಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಯಿತು. ನಂತರ ಒಮ್ಮುಖ ದರ ನಿಗದಿ ಮಾಡಿತು. ಅದಾದ ಮೇಲೆ ಉಚಿತವೆಂದು ಘೋಷಿಸಿತು. ಬಸ್ ಗಳಲ್ಲಿ ಉಚಿತ ಪ್ರಯಾಣ ಘೋಷಿಸುವ ಹೊತ್ತಿಗೆ ಬಸ್ ಪ್ರಯಾಣ ಮಾಡಬೇಕಿದ್ದ ಶೇ.90 ರಷ್ಟು ಕಾರ್ಮಿಕರು ಹಣ ನೀಡಿ ತಮ್ಮೂರು ಸೇರಿದ್ದರು. ಇದೆಲ್ಲವೂ ಹಳೆಯದಾದ ವಿಷಯವಾಗಿದೆ ಎಂದೆನಿಸಬಹುದು.

ಆದರೆ, ಹೊಸ ವಿಚಾರಗಳೂ ಕಣ್ಣೆದುರು ಇನ್ನೂ ಇವೆ. ರಾಜ್ಯದ ಒಳಭಾಗದ ಕಾರ್ಮಿಕರು ಊರು ಸೇರಿದರೂ ಅನ್ಯ ರಾಜ್ಯಗಳ ಕಾರ್ಮಿಕರ ಪರದಾಟ, ಹಪಾಹಪಿಕೆ ಇನ್ನೂ ನಿಂತಿಲ್ಲ. ಅನ್ಯ ರಾಜ್ಯಗಳ ಕಾರ್ಮಿಕರನ್ನು ಅವರ ಊರುಗಳಿಗೆ ಸಾಗಿಸಲು ಶ್ರಮಿಕ್ ಸ್ಪೆಷನ್ ರೈಲುಗಳನ್ನು ಸರ್ಕಾರ ಓಡಿಸುತ್ತಿದೆ. ರಾಜಕೀಯ ಕಿತ್ತಾಟದಿಂದಾಗಿ ಕಾರ್ಮಿಕರ ರೈಲು ಪ್ರಯಾಣ ಉಚಿತವೆಂದು ಒಕ್ಕೂಟ ಸರ್ಕಾರ ಘೋಷಿಸಿತು. ಆದರೆ, ಇದುವೆರೆಗೂ ಯಾವ ರೈಲೂ ಕೂಡ ಉಚಿತವಾಗಿ ಓಡಿಲ್ಲ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಿನಕ್ಕೆ 300 ರೈಲುಗಳ ಕಾರ್ಮಿಕರಿಗಾಗಿ ಓಡುತ್ತಿವೆ ಎಂದು ತಿಳಿಸಿದ್ದಾರೆ. ಈ 300 ರೈಗಳಲ್ಲಿ ಕರ್ನಾಟಕದಿಂದ ಕಳೆದ ಒಂದು ವಾರದಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋದ ರೈಲುಗಳ ಸಂಖ್ಯೆ 08 ಮಾತ್ರ. ಅದೂ ಬಿಎಂಟಿಸಿ ಬಸ್ ದರವನ್ನೂ ಸೇರಿಸಿ ಆ ಕಾರ್ಮಿಕರಿಂದ ವಸೂಲಿ ಮಾಡಲಾಗಿದೆ. ಕರ್ನಾಟಕಕ್ಕೆ ಬಂದದ್ದು ಒಂದೇ ರೈಲು (ದೆಹಲಿಯಿಂದ).

ಸರ್ಕಾರದ ಈ ಮಟ್ಟದ ಬೇಜವಾಬ್ದಾರಿ ನಿರ್ಲಕ್ಷ್ಯತನದಿಂದಾಗಿ ಹೊರ ರಾಜ್ಯಗಳ ಕಾರ್ಮಿಕರು ರಸ್ತೆಗಳಲ್ಲಿ ಸಾಲುಗಟ್ಟಿನಿಂತು ಪರದಾಡುತ್ತಿದ್ದಾರೆ. ಇಂದು ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಕರ್ನಾಟಕಕ್ಕೆ ಬರುತ್ತಿದ್ದವರನ್ನು ತಡೆಯಲಾಗಿದ್ದು, ಅವರ ಅಲ್ಲಿಯೇ ಕಾದುಕುಳಿತಿದ್ದಾರೆ ಎಂಬ ಸುದ್ದಿ ಬಂದಿತ್ತು. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬೆಂಗಳೂರು ಮತ್ತು ತಮಿಳುನಾಡಿನ ಹೊಸೂರು ಗಡಿ ಭಾಗದ ಹೆದ್ದಾರಿಗೆ ವರದಿ ಮಾಡಲು ಹೋಗಿದ್ದಾಗ ಕಂಡುಬಂದದ್ದು, ಕರ್ನಾಟಕಕ್ಕೆ ಬರಲು ಪ್ರಯತ್ನಿಸುತ್ತಿರುವ ಜನರ ಸಮಸ್ಯೆಗಳಲ್ಲ. ಬದಲಾಗಿ ಕರ್ನಾಟಕದಿಂದ ತಮ್ಮೂರುಗಳಿಗೆ ಹೋಗಲು ಆತೊರೆಯುತ್ತಿರುವ ವಲಸೆ ಕಾರ್ಮಿಕರ ಅಳಲು.

ಇಂದು ಒಂದೇ ದಿನ ಸುಮಾರು 3,000ಕ್ಕೂ ಹೆಚ್ಚು ಕಾರ್ಮಿಕರು ಅತ್ತಿಬೆಲೆ ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಪೊಲೀಸ್ ಠಾಣೆಯ ಮುಂದೆ ಸರತಿ ಸಾಲಿನಲ್ಲಿ, ಗುಂಪುಗೂಡಿ ಕುಳಿತಿದ್ದರು. ಅವರೆಲ್ಲರೂ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಉತ್ತರ ಭಾರತದಿಂದ ಬಂದವರು.

ಸುಮಾರು ದಿನಗಳಿಂದ ಉದ್ಯೋಗವೂ ಇಲ್ಲದೆ, ಆಹಾರ, ಅಗತ್ಯ ಸಾಮಗ್ರಿಗಳನ್ನು ಕೊಳ್ಳಲು ಹಣವೂ ಇಲ್ಲದೆ, ತಮ್ಮೂರಿಗೆ ಹೋಗುವ ನಿರ್ಧಾರ ಮಾಡಿಕೊಂಡು ಬಂದುನಿಂತಿದ್ದಾರೆ. ಅವರಲ್ಲ, ನೂರಾರು ಹೆಣ್ಣುಮಕ್ಕಳೂ ಸೇರಿದ್ದಾರೆ. ಎಲೆಕ್ಟ್ರಾನ್ ಸಿಟಿ ಐಟಿ ಹಬ್ ಪ್ರದೇಶದಲ್ಲಿರುವ ಹಲವಾರು ಕಾರ್ಖಾನೆಗಳು, ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಸಾವಿರಾರು ಕಾರ್ಮಿಕರಲ್ಲಿ ಬಹುಸಂಖ್ಯಾತರು ತಮ್ಮೂರಿಗೆ ಹೋಗಲು ನೊಂದಣಿಗಾಗಿ ಕಾದು ಕುಳಿತಿದ್ದರು. ಬಹುಶಃ ಇಂದು ಸೇರಿದ್ದ ಆ ಸಂಖ್ಯೆಯ ಕಾರ್ಮಿಕರ ನೊಂದಣಿ ಮಾಡಿಕೊಳ್ಳಲು ಅತ್ತಿಬೆಲೆ ಪೊಲೀಸರಿಗೆ ಮೂರು-ನಾಲ್ಕುದಿನವಾದರೂ ಬೇಕಾಗಬಹುದು.

ಅವರನ್ನು ಸಾಗಿಸಲು ಸರ್ಕಾರಕ್ಕೆ ಎಷ್ಟು ದಿನಗಳು ಬೇಕು ಎಂಬುದೇ ಈಗಿರುವ ಪ್ರಶ್ನೆ, ಬಿಲ್ಡರ್ ಗಳ ಲಾಬಿಗೆ ಮಣಿದೆ ಎರಡು ದಿನಗಳ ಕಾಲ ಶ್ರಮಿಕ್ ರೈಲು ಸಂಚಾರವನ್ನೇ ರದ್ದುಗೊಳಿಸಿತ್ತು ಕರ್ನಾಟಕ ಸರ್ಕಾರ. ಕಾರ್ಮಿಕರ ಹಕ್ಕುಗಳನ್ನೇ ಕಸಿದುಕೊಳ್ಳಲು ಮುಂದಾಗಿರುವ ಸರ್ಕಾರಗಳಿಗೆ ಎಲ್ಲಾ ಕಾರ್ಮಿಕರು ತಮ್ಮೂರಿಗೆ ಮರಳಿದರೆ, ಬಿಲ್ಡರ್ ಗಳ ಕೆಲಸಗಳು ನಿಂತುಹೋಗುತ್ತವೆ, ಖಜಾನೆ ಬರಿದಾಗುತ್ತದೆ ಎಂಬುದೇ ಚಿಂತೆ.

ಹಾಗಾಗಿಯೇ ರೈಲುಗಳನ್ನು ಓಡಿಸಲೋ ಬೇಡವೋ ಎಂಬ ದ್ವಂದ್ವದಲ್ಲಿಯೇ ಸರ್ಕಾರ ನಿಂತಿದೆ. ಕಾರ್ಮಿಕರನ್ನು ಊರುಗಳಿಗೆ ತಲುಸುವ ಇಚ್ಛಾಸಕ್ತಿಯೂ ಸರ್ಕಾರಕ್ಕಿಲ್ಲ. ಕೇಲವ ಅತ್ತಿಬೆಲೆ ಒಂದೇ ಸ್ಥಳದಲ್ಲುಇ ಇಷ್ಟೊಂದು ಕಾರ್ಮಿಕರು ತುಂಬಿರುವಾಗ, ಇಡೀ ಬೆಂಗಳೂರಿನಾದ್ಯಂತ ಎಷ್ಟು ಕಾರ್ಮಿಕರಿದ್ದಾರೆ ಎಂಬುದನ್ನೂ ಆಲೋಚಿಸಲೇ ಬೇಕು.

ತಮ್ಮೂರಿಗೆ ಹೋಗುತ್ತೇವೆ ಎಂಬ ಭರವಸೆಯಿಂದ ನೊಂದಣಿ ಮಾಡಿಸುತ್ತಿರುವ ಕಾರ್ಮಿಕರಿಗೆ ಯಾವಾಗ ತಮ್ಮೂರು ತಲುಪುತ್ತೇವೆ ಎಂಬುದೇ ತಿಳಿದಿಲ್ಲ. ಪೊಲೀಸರು ಕರೆ ಮಾಡಿದಾಗ ಬಂದು ರೈಲು ಹತ್ತುತ್ತೇವೆ ಎಂಬುದಷ್ಟೇ ಸದ್ಯಕ್ಕೆ ಅವರಿಗೆ ತಿಳಿದಿರುವುದು. ಹಾಗಾಗಿ ಇಷ್ಟು ದಿನ ಕಾದುಕುಳಿತ ಹಲವಾರು ಕಾರ್ಮಿಕರು ಮತ್ತೆ ಕಾಲುಗಳ ಮೊರೆ ಹೋಗಿದ್ದು, ನಡೆಯಲು ಆರಂಭಿಸಿದ್ದಾರೆ. ನಡೆದೇ ಸಾಗುತ್ತಿದ್ದಾರೆ.

ಶ್ರಮಿಕ್ ರೈಲುಗಳಿಗೆ ಕರ್ನಾಟಕದಿಂದ ಹೊರಡುವ ಮನಸ್ಸಿಲ್ಲ, ಹಸಿವಿನ ಬಳಲಿಕೆಯನ್ನು ತಡೆಯಲಾರದೆಯೂ ನಡೆಯುತ್ತಿರುವ ಕಾರ್ಮಿಕರ ಕಾಲುಗಳು ನಿಂತಿಲ್ಲ. ಸರ್ಕಾರಕ್ಕೆ ಕಾರ್ಮಿಕರ ಸಂಕಟದ ಅರಿವಾಗುತ್ತಿಲ್ಲ. ಅರಿವಾದರೂ, ಬಿಲ್ಡರ್ ಗಳ ಒತ್ತಡವನ್ನು ಮೀರಲಾಗುತ್ತಿಲ್ಲ. ದೇಶಕಟ್ಟಿದವರ ದನಿಗೆ ಯಾವ ಪ್ರಭುತ್ವವೂ ಕಿವಿಗೊಡುತ್ತಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights