ಸುಗಂಧಿ ಬೇರು-3: ಪ್ರಣಯ ಪದಾವಳಿ: ಮೈ ಮನಗಳ ಸುಳಿಯ ತೊಳಲಾಟ

ಇಂದಿಗೂ ಮಿಥಿಲೆಯಲ್ಲಿ ಮದುವೆಯಾಗಿ ಗಂಡನ ಮನೆಗೆ ಬರುವ ವಧುವನ್ನು ಎಲ್ಲರೂ ಕೇಳುವ ಪ್ರಶ್ನೆ ಒಂದಿದೆಯಂತೆ- ‘ವಿದ್ಯಾಪತಿಯ ಯಾವ ಯಾವ ಹಾಡುಗಳು ಬರುತ್ತವೆ?’ ಎಂದು. ಇದು ಕವಿಯೊಬ್ಬ, ನವ ತಾರುಣ್ಯಕ್ಕೆ ಕಾಲಿಡುವ ಹೆಣ್ಣುಗಳ ಮನದಾಳಕ್ಕೆ ಲಗ್ಗೆಯಿಟ್ಟ ಬಗೆಯನ್ನು ಹೇಳುತ್ತದೆ. ಅದರಲ್ಲಿಯೂ ವಿದ್ಯಾಪತಿ ಎಂಬ ಕವಿಯೊಬ್ಬ ಹರೆಯದ ಹೆಣ್ಣುಗಳ ಅಂತರಾಳಕ್ಕೆ ಪ್ರವೇಶವನ್ನು ಪಡೆದಿರುವುದು ಅವನ ಜನಪ್ರಿಯತೆಯ ಉತ್ತುಂಗ ಶಿಖರವೇ ಆಗಿದೆ.

ಕಾವ್ಯದ ಸೆಲೆಯು ಜಿನುಗುವುದು ಸಂವೇದನಶೀಲರಾದ ಓದುಗರಲ್ಲಿಯೇ ಎಂಬುದು ನಿರ್ವಿವಾದ. ನಿಜವಾದ ಕಾವ್ಯವು ಜನಮಾನಸದಲ್ಲಿ ಬೆರೆತು ಹೋಗಿರುತ್ತದೆ. ಭಾರತೀಯ ಸಾಹಿತ್ಯದಲ್ಲಿ ವಿದ್ಯಾಪತಿ ಠಾಕೂರ್ ಒಬ್ಬ ಅನನ್ಯ ಕವಿಯಾಗಿದ್ದಾನೆ. 14-15ನೇ ಶತಮಾನದ ಈ ಕವಿಯು ಮೈಥಿಲಿ ಭಾಷೆಯಲ್ಲಿ ರಾಧಾ-ಕೃಷ್ಣರ ಪ್ರೇಮ ಪ್ರಣಯಗಳ ನೂರಾರು ಮುಖಗಳನ್ನು ತನ್ನ ‘ಪದಾವಳಿ’ಯಲ್ಲಿ ತೆರೆದಿಟ್ಟಿದ್ದಾನೆ. ಅವನ ‘ಪದಾವಳಿ’ಯಲ್ಲಿ ಸಾವಿರಕ್ಕೂ ಹೆಚ್ಚು ಪ್ರೇಮ ಪದ್ಯಗಳಿವೆ. ಹಾ.ಮಾ.ನಾಯಕರು ಇದರಿಂದ ಅರವತ್ತೊಂದು ಪದ್ಯಗಳನ್ನು ಕನ್ನಡಕ್ಕೆ ಭಾಷಾಂತರಿಸಿ ‘ಪ್ರಣಯ ಪದಾವಳಿ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದು ಮೈಸೂರಿನಿಂದ ತಳುಕಿನ ವೆಂಕಯ್ಯ ಸ್ಮಾರಕ ಗ್ರಂಥಮಾಲೆಯಿಂದ 1984ರಲ್ಲಿ ಬಂದಿರುವ ಪುಟ್ಟ ಪುಸ್ತಕವಾಗಿದೆ.

ಈ ಮೊದಲು ವಿದ್ಯಾಪತಿಯ ಕೆಲವು ಕವಿತೆಗಳು ಕನ್ನಡಕ್ಕೆ ಭಾಷಾಂತರವಾಗಿದ್ದವು; ಎಂ.ಎಸ್. ಕೃಷ್ಣಮೂರ್ತಿ, ಹಾ.ಮಾ. ನಾಯಕ ಮತ್ತು ಇನ್ನೂ ಕೆಲವರ ಭಾಷಾಂತರಗಳು ‘ಪ್ರಬುದ್ಧ ಕರ್ನಾಟಕ’ದಲ್ಲಿ ಪ್ರಕಟವಾಗಿದ್ದವು. ಕನ್ನಡದಲ್ಲಿ ವಿದ್ಯಾಪತಿಯ ಕವಿತೆಗಳು ಪುಸ್ತಕ ರೂಪದಲ್ಲಿ ಮೊದಲು ಬಂದದ್ದು ‘ಪ್ರಣಯ ಪದಾವಳಿ’ಯೇ ಆಗಿದೆ. ಹಾ.ಮಾ. ನಾಯಕರು 1950ರ ದಶಕದಲ್ಲಿ ತೌಲನಿಕ ಭಾಷಾವಿಜ್ಞಾನದ ಅಧ್ಯಯನಕ್ಕಾಗಿ ಕೊಲ್ಕೊತ್ತಾದ ವಿಶ್ವವಿದ್ಯಾಲಯದಲ್ಲಿರುತ್ತಾರೆ. ಒಂದು ದಿನ ಡಾ. ಸುಕುಮಾರ ಸೇನ್‍ರವರು ತಮ್ಮ ತರಗತಿಯಲ್ಲಿ ವಿದ್ಯಾಪತಿಯ ಕೆಲವು ಕವಿತೆಗಳನ್ನು ಲೀಲಾಜಾಲವಾಗಿ ಸಂಸ್ಕೃತ, ಬಂಗಾಳಿ ಮತ್ತು ಇಂಗಿಷಿನಲ್ಲಿ ಭಾಷಾಂತರಿಸಿದರಂತೆ. ಇದರಿಂದ ತಮಗೆ ವಿದ್ಯಾಪತಿಯ ಪರಿಚಯವಾಯಿತೆಂದು ಹಾ.ಮಾ. ನಾಯಕ ಹೇಳಿಕೊಂಡಿದ್ದಾರೆ. ‘ಪ್ರಣಯ ಪದಾವಳಿ’ ಪುಸ್ತಕದಿಂದ ಪ್ರೇರಿತರಾದ ಡಿ.ಎ. ಶಂಕರ್ ಅವರಿಗೆ ಆಕಸ್ಮಿಕವಾಗಿ ವಿದ್ಯಾಪತಿಯ ಕತೆಗಳ ಪುಸ್ತಕವು ಕಣ್ಣಿಗೆ ಬೀಳುತ್ತದೆ; ಆಂಗ್ಲ ಪ್ರಾಧ್ಯಾಪಕರು ಮತ್ತು ಅನುವಾದಕರಾದ ಶಂಕರ್ ಅವರು ವಿದ್ಯಾಪತಿಯ ಕತೆಗಳಿಗೆ ಮನಸೋತು ಅನುವಾದಕ್ಕೆ ಇಳಿದುಬಿಡುತ್ತಾರೆ. ವಿದ್ಯಾಪತಿಯ ಕೆಲವು ಕತೆಗಳನ್ನು ಅನುವಾದಿಸಿ ಡಿ.ಆರ್. ನಾಗರಾಜ್‍ರ ಗಮನಕ್ಕೆ ತರುತ್ತಾರೆ. ಈ ಕತೆಗಳನ್ನು ಡಿ.ಆರ್. ನಾಗರಾಜ್‍ರು ಮೆಚ್ಚಿಕೊಳ್ಳುತ್ತಾರೆ. ಹೀಗೆ ಡಿ.ಆರ್. ಅವರ ಮೂಲಕ ವಿದ್ಯಾಪತಿಯ ‘ಪುರುಷ ಪರೀಕ್ಷೆ’(1992) ಸಂಕಲನವು ಅಕ್ಷರ ಚಿಂತನ ಮಾಲೆಯಲ್ಲಿ ಪ್ರಕಟವಾಗುತ್ತದೆ. ಅಷ್ಟೇ ಅಲ್ಲದೇ ದೇಹಲಿಯ ಸಾಹಿತ್ಯ ಅಕಾಡೆಮಿ ತನ್ನ ‘ಭಾರತೀಯ ಸಾಹಿತ್ಯದ ನಿರ್ಮಾಪಕರು’ ಎಂಬ ಮಾಲೆಯಲ್ಲಿ ಪ್ರಕಟಿಸಿರುವ ರಮಾನಾಥ ಝಾ ಅವರ ‘ವಿದ್ಯಾಪತಿ’ ಎಂಬ ಪುಸ್ತಕವನ್ನು ಸಿ.ಪಿ.ಕೆ.ಯವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಹೀಗೆ ಮೈಥಿಲಿ ಭಾಷೆಯ ವಿದ್ಯಾಪತಿಯು ಕನ್ನಡ ಸಾಹಿತ್ಯದಲ್ಲಿ ತಕ್ಕಮಟ್ಟಿಗೆ ಪರಿಚಿತನಾಗಿದ್ದಾನೆ.

ಹಾ.ಮಾ. ನಾಯಕರು ತಮ್ಮ ಪುಸ್ತಕದಲ್ಲಿ ‘ನಾನು ಈ ಹಾಡುಗಳನ್ನು ಪದಶಃ ಭಾಷಾಂತರಿಸಿಲ್ಲ. ಕೆಲವು ಸೃಷ್ಟ್ಯಂತರವನ್ನೂ ಮಾಡಿದ್ದೇನೆ. ಆದರೆ ಈ ನೆವದಲ್ಲಿ ಮೂಲ ಲೇಖಕನಿಂದ ಸಿಡಿದು ಹೋಗುವ ಸ್ವಾತಂತ್ರ್ಯ ವಹಿಸಿಲ್ಲ. ವಿದ್ಯಾಪತಿಯ ಹಾಡುಗಳನ್ನು ಪುನರಾವರ್ತನೆಯ ಭಾರದಿಂದ ತಪ್ಪಿಸಲು ಪ್ರಯತ್ನಿಸಿದ್ದೇನೆ. ಹಾಡಿನ ಮುಖ್ಯ ಮೂಲಭಾವ ಕಳೆದು ಹೋಗದಂತೆ ನೋಡಿಕೊಂಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ವಿದ್ಯಾಪತಿಯ ಹಾಡುಗಳು ಇಂಗ್ಲಿಷಿಗೆ ಭಾಷಾಂತರಗೊಂಡು, ಅಲ್ಲಿಂದ ಕನ್ನಡಕ್ಕೆ ಹಾದು ಬರುವಷ್ಟರಲ್ಲಿ ಮೂಲ ಭಾಷೆಯೊಳಗಿನ ಎಷ್ಟೋ ಸ್ವೋಪಜ್ಞತೆಯು ಸೋರಿ ಹೋಗಿರುತ್ತದೆ; ಯಾವುದೇ ಭಾಷೆಯ ಸಾಹಿತ್ಯವು ಅಷ್ಟು ಸುಲಭದಲ್ಲಿ ಮತ್ತೊಂದು ಭಾಷೆಗೆ ತನ್ನೆಲ್ಲ ಲಾಲಿತ್ಯ ಮತ್ತು ಮಾಧುರ್ಯವನ್ನು ಬಿಟ್ಟುಕೊಡುವುದಿಲ್ಲ. ಭಾಷೆಗಳು ತಮ್ಮ ಶ್ರೇಷ್ಠ ಕಾವ್ಯವನ್ನು ತಮ್ಮೊಳಗೆ ರಹಸ್ಯವಾಗಿ ಬಚ್ಚಿಟ್ಟುಕೊಂಡಿರುತ್ತವೆ. ಆದರೂ ಹಾ.ಮಾ. ನಾಯಕರ ಈ ಅನುವಾದದ ಹಾಡುಗಳು ಕನ್ನಡದಲ್ಲಿಯೇ ಓದಿದ ಅನುಭವವನ್ನು ನೀಡುತ್ತವೆ; ಓದಿನ ಸುಖವನ್ನೂ ನೀಡುವುದರಲ್ಲಿ ಸಫಲವಾಗಿವೆ. ಆದರೆ ಅವರು ಅನೇಕ ಕಡೆಗಳಲ್ಲಿ ಸಂಸ್ಕೃತ ಪದಗಳ ಮೊರೆ ಹೋಗಿದ್ದಾರೆ. ಅದೇನು ಅಷ್ಟು ಅನಿವಾರ್ಯ ಇರಲಿಲ್ಲವೇನೋ. ಈ ಪುಸ್ತಕದ ಮತ್ತೊಂದು ವೈಶಿಷ್ಟ್ಯವೆಂದರೆ ಪ್ರತಿಯೊಂದು ಪುಟಗಳಲ್ಲಿಯೂ ಮೇಲಿನ ಮತ್ತು ಕೆಳಗಿನ ಅಂಚುಗಳಲ್ಲಿ ರಾಧಾ-ಕೃಷ್ಣರ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಚಂದ್ರನಾಥ ಆಚಾರ್ಯರ ಈ ಚಿತ್ರಗಳು ಮನಮೋಹಕವಾಗಿವೆ.

ವಿದ್ಯಾಪತಿಯ ಹಾಡುಗಳ ನಾಯಕ ಕೃಷ್ಣನಲ್ಲ; ಅದು ರಾಧೆ ಎನ್ನುವುದೇ ಮುಖ್ಯವಾದ ಸಂಗತಿಯಾಗಿದೆ. ಅವನ ಹಾಡುಗಳಲ್ಲಿ ಬರುವ ರಾಧೆಯಲ್ಲಿ ತುಂಟತನ, ತಮಾಷೆ, ಲಘು ಹಾಸ್ಯಗಳಿವೆ. ಇಲ್ಲಿ ರಾಧೆಯ ಎಷ್ಟೊಂದು ಮುಖಗಳಿವೆ. ಪ್ರಿಯಕರನ ಸಮಾಗಮಕ್ಕಾಗಿ ಹಂಬಲಿಸುವ, ವಿಷಾದಿಸುವ, ವ್ಯಥೆಪಡುವ, ವಿರಹತಾಪದಿಂದ ಬಳಲುವ, ಹುಸಿ ಮುನಿಸಿಕೊಳ್ಳುವ, ಹಗಲಿರುಳು ಕನವರಿಸುವ-ರಾಧೆಯಲ್ಲಿ ಅಸಂಖ್ಯಾತ ಮನೋಗತಗಳಿವೆ. ರಾಧೆಯು ತನ್ನೊಳಗಿನ ಎಲ್ಲ ಮನದ ಇಂಗಿತಗಳನ್ನು ತೋಡಿಕೊಳ್ಳುವುದು ತನ್ನ ಪ್ರಿಯ ಸಖಿಯರಲ್ಲಿ. ಅವಳದ್ದು ಕೃಷ್ಣನೊಂದಿಗೆ ನೇರಾನೇರ ಮಾತು ಕಡಿಮೆಯೇ. ಇವುಗಳಲ್ಲಿ ವಯೋಸಹಜವಾದ ಹೆಣ್ಣಿನ ಲೈಂಗಿಕ ಕಾಮನೆಗಳಿವೆ. ರಾಧೆ-ಕೃಷ್ಣನ ಪ್ರಣಯ ಸಲ್ಲಾಪಗಳಲ್ಲಿ ಬಣ್ಣ ಬಣ್ಣದ ಹೂವು, ದುಂಬಿ, ಮರ, ಎಲೆ, ಚಿಗುರು, ಮಾವು, ತಳಿರು, ಕೋಗಿಲೆ ಎಲ್ಲವೂ ಈ ಹಾಡುಗಳಲ್ಲಿ ಹಾಸುಹೊಕ್ಕಾಗಿವೆ. ಇಲ್ಲಿ ಪ್ರಕೃತಿಯ ಚರಾಚರವೆಲ್ಲವೂ ಜೀವಂತಿಕೆಯಿಂದ ಪುಟಿಯುತ್ತದೆ. ಕೋಗಿಯಂತು ಅದೆಷ್ಟು ಬಾರಿ ಬರುತ್ತದೆಯೋ ಲೆಕ್ಕವೇ ಇಲ್ಲ.  ಈ ರಾಧೆಯು ಯಾವ ಹೆಣ್ಣಾದರು ಆಗಬಲ್ಲಳು ಎಂಬುದೇ ಈ ಹಾಡುಗಳ ಹಿರಿಮೆಯಾಗಿದೆ. ಕಾವ್ಯಕ್ಕಿರುವ ಶಕ್ತಿಯೆಂದರೆ ಇವುಗಳಿಗೆ ‘ಶೃಂಗಾರ’ ಮತ್ತು ‘ಭಕ್ತಿ’ ಎನ್ನುವ ಬಟ್ಟೆಗಳನ್ನು ಹೊದಿಸಲಾಗಿದೆ. ನೇರವಾಗಿ ಹೇಳಿದರೆ ಯಾವುದು ವಾಚ್ಯವಾಗುವುದೋ ಅದನ್ನೇ ವಿದ್ಯಾಪತಿ ಸೂಚ್ಯವಾಗಿ, ಧ್ವನಿಪೂರ್ಣವಾಗಿ, ರೂಪಕವಾಗಿ ಕಾವ್ಯದಲ್ಲಿ ಹಿಡಿದಿಟ್ಟಿದ್ದಾನೆ. ಇಂದಿಗೂ ಮಿಥಿಲೆಯಲ್ಲಿ ಹಾಡುಗಳನ್ನು ಹಾಡಲಾಗುತ್ತದೆ; ಅವು ಸಂಗೀತಕ್ಕೆ ಹೊಂದುವ ಲಯವನ್ನು ಹೊಂದಿವೆ. ವಿದ್ಯಾಪತಿಯು ತನಗೆ ಬೇಕಾದಂತೆ ಭಾಷೆಯನ್ನು ಹಾಡಬಲ್ಲ; ಅದನ್ನು ತನಗೆ ಬೇಕಾದಂತೆ ಕುಣಿಸಬಲ್ಲ ಗಾರೂಡಿಗನೇ ಆಗಿದ್ದಾನೆ. ವಿದ್ಯಾಪತಿ ಕೆಲವೇ ಪದಗಳಲ್ಲಿ ಒಂದು ದೃಶ್ಯವನ್ನೇ ಕಟ್ಟಬಲ್ಲವನಾಗಿದ್ದಾನೆ. ಅದಕ್ಕಾಗಿಯೇ ಈ ಕವಿಯ ಹಾಡುಗಳು ಜನರ ನರನಾಡಿಗಳಲ್ಲಿ ಒಂದಾಗಿವೆ.

ಭಾರತೀಯ ಚಿತ್ರರಂಗದ ದುರಂತ ನಟ, ನಿರ್ದೇಶಕನಾದ ಗುರುದತ್ ‘ಕಾಗಜ್ ಕೇ ಫೂಲ್’ನಲ್ಲಿ ಒಂದು ವಿಶೇಷವಾದ ದೃಶ್ಯವಿದೆ. ಅದರಲ್ಲಿ ಗುರುದತ್ ತನ್ನ ಟೀಂನೊಂದಿಗೆ ಕುಳಿತುಕೊಂಡು ಒಂದು ಸಿನಿಮಾದ ದೃಶ್ಯವನ್ನು ನೋಡುತ್ತಿರುತ್ತಾನೆ. ಅದು ಕವಿ ವಿದ್ಯಾಪತಿಯ ಜೀವನವನ್ನು ಆಧರಿಸಿದ ‘ವಿದ್ಯಾಪತಿ’ ಎಂಬ ಚಲನಚಿತ್ರವೇ ಆಗಿರುತ್ತದೆ. ಅಷ್ಟರ ಮಟ್ಟಿಗೆ ಗುರುದತ್ ಕವಿ ವಿದ್ಯಾಪತಿಗೆ ಗೌರವ ಸಲ್ಲಿಸಿದ್ದಾನೆ. ದೇವಕಿ ಬೋಸ್ ಮತ್ತು ಕಾಜಿ ನಜ್ರುಲ್ ಇಸ್ಲಾಂ ನಿರ್ದೇಶನದ ‘ವಿದ್ಯಾಪತಿ’ (1937) ಸಿನಿಮಾ ಆ ಕಾಲದಲ್ಲಿ ತುಂಬಾ ಜನಪ್ರಿಯವೇ ಆಗಿತ್ತು. ಇದರಲ್ಲಿ ವಿದ್ಯಾಪತಿಯ ಹಾಡುಗಳನ್ನು ಬಳಸಲಾಗಿದೆ. ವಿದ್ಯಾಪತಿಯ ಪಾತ್ರದಲ್ಲಿ ಪಹಾರಿ ಸನ್ಯಾಲ್, ಅನುರಾಧಾಳ ಪಾತ್ರದಲ್ಲಿ ಕಾನನ್ ದೇವಿ ಮತ್ತು ರಾಜ ಶಿವ ಸಿಂಘನ ಪಾತ್ರದಲ್ಲಿ ಪೃಥ್ವಿರಾಜ್ ಕಪೂರ್ ನಟಿಸಿದ್ದರು.

ಮೈಥಿಲಿ ಭಾಷೆಯು ಮಾಗಧೀ ಪ್ರಾಕೃತದಿಂದ ಹುಟ್ಟಿದ್ದು; ಇದು ಹಿಂದಿ ಮತ್ತು ಬಂಗಾಳಿಯ ಮಧ್ಯದ ಭಾಷೆ. ಇದರಲ್ಲಿ ಈ ಎರಡೂ ಭಾಷೆಗಳ ಲಕ್ಷಣಗಳಿವೆ. ಇಂದಿಗೂ ಮೈಥಿಲಿಯು ಬಿಹಾರ ಮತ್ತು ಜಾರ್ಖಂಡ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಪ್ರಚಲಿತವಾಗಿದೆ. ಭಾರತದ ಸಂವಿಧಾನದ ಎಂಟನೇ ಶೆಡ್ಯೂಲಿನಲ್ಲಿರುವ 22 ಭಾಷೆಗಳಲ್ಲಿ ಮೈಥಿಲಿಯು ಸೇರಿದೆ. ಈ ಭಾಷೆಯನ್ನು ಮಾತನಾಡುವ ಜನರು ನೆಪಾಳದಲ್ಲಿಯೂ ಇದ್ದಾರೆ. ‘ಮೈಥಿಲಿ ಕೋಕಿಲ’ ಎಂದೇ ಕರೆಯಲ್ಪಡುವ ವಿದ್ಯಾಪತಿ ಜಗತ್ತಿನ ಸಾಹಿತ್ಯದಲ್ಲಿ ತನ್ನ ಭಾಷೆಗೆ ಒಂದು ಶಾಶ್ವತ ಸ್ಥಾನವನ್ನು ಗಳಿಸಿಕೊಟ್ಟ ಮೇರು ಕವಿಯಾಗಿದ್ದಾನೆ. ‘ಗೀತ ಗೋವಿಂದ’ವನ್ನು ಬರೆದ 12ನೇ ಶತಮಾನದ ಜಯದೇವನ ಪ್ರಭಾವವು ಇವನ ಮೇಲಿರುವುದರಿಂದ ವಿದ್ಯಾಪತಿಯನ್ನು ‘ಅಭಿನವ ಜಯದೇವ’ ಎಂದೂ ಕರೆಯಲಾಗಿದೆ. ವಿದ್ಯಾಪತಿಯು ಮೈಥಿಲಿ ಮತ್ತು ಬಂಗಾಳಿ ಭಾಷಿಕರಿಗೆ ಪ್ರಿಯನಾದ ಕವಿಯಾಗಿದ್ದಾನೆ. ಇವನು ರವೀಂದ್ರನಾಥ ಠಾಗೋರರ ಅಚ್ಚುಮೆಚ್ಚಿನ ಕವಿಯಾಗಿದ್ದಾನೆ. ಅವರು ಈತನನ್ನು ‘ಸುಖದ ಕವಿ’ ಎಂದು ಕರೆದಿದ್ದಾರೆ; ಅವನಿಗೆ ‘ಪ್ರೇಮವೇ ಸಾರಸರ್ವಸ್ವ’ ಎಂದಿದ್ದಾರೆ. ಅವನ ಕವಿತೆಗಳು ಭಕ್ತಿ ಮತ್ತು ಶೃಂಗಾರದಲ್ಲಿ ಅದ್ದಿ ತೆಗೆದವುಗಳಾಗಿವೆ.

ವಿದ್ಯಾಪತಿ ಸಂಸ್ಕೃತ ಪಂಡಿತನಾಗಿದ್ದ. ಅವನು ಸಂಸ್ಕೃತದಲ್ಲಿಯು ಹಲವು ಕೃತಿಗಳನ್ನು ರಚಿಸಿದ್ದಾನೆ. ವೈದಿಕ ಪರಂಪರೆಯ ಈ ಕವಿಯು ಸಂಪ್ರದಾಯಸ್ಥನೇ ಹೌದು; ಆದರೂ ಜನಸಾಮಾನ್ಯರ ದೇಶೀ ಭಾಷೆಯಾದ ಮೈಥಿಲಿಯಲ್ಲಿಯೂ ಬರೆದದ್ದು ಅವನ ಭಾಷಾಭಿನದ ಹೆಗ್ಗಳಿಕೆಯಾಗಿದೆ. ಕವಿಯೊಬ್ಬ ಕಾವ್ಯದ ಮೂಲಕ ತನ್ನ ವೈದಿಕತೆಯನ್ನು ಅಲ್ಲಲ್ಲಿ ಗಾಳಿಗೆ ತೂರಿದ್ದಾನೆ; ಹೆಣ್ಣಿನ ಅಂತರಂಗದೊಳಕ್ಕೆ ಹೊಕ್ಕು ಮನದ ಪದರು ಪದರುಗಳನ್ನು ಭಿಡೆಯಿಲ್ಲದೇ ಬಿಚ್ಚಿಟ್ಟಿದ್ದಾನೆ. ಅವನ ಹಾಡುಗಳು ಆಧುನಿಕ ಸ್ತ್ರೀವಾದಿ ನೆಲೆಯಿಂದಲೂ ಅಧ್ಯಯನವನ್ನು ಅಪೇಕ್ಷಿಸುತ್ತವೆ. ಅವನ ಹಾಡುಗಳಲ್ಲಿ ಹೆಣ್ಣು ಮೈ ಮನಗಳ ಸುಳಿಯಲ್ಲಿ ತೊಳಲಾಡುವ ಹಲವು ಆಯಾಮಗಳ ಚಿತ್ರಗಳಿವೆ. ಪಾಶ್ಚಾತ್ಯ ವಿದ್ವಾಂಸ ಗ್ರಿಯರ್ಸನ್ ‘ವಿದ್ಯಾಪತಿ ಅಂಡ್ ಹಿಸ್ ಕಂಟೆಪೊರರೀಸ್’ ಎಂಬ ಪುಸ್ತಕದಲ್ಲಿ “ಹಿಂದೂ ಧರ್ಮದ ಸೂರ್ಯ ಮುಳುಗಿ ಹೋಗಬಹುದು, ಕೃಷ್ಣನಲ್ಲಿ ಶ್ರದ್ಧೆ ಅಳಿದು ಹೋಗಬಹುದು, ಭವರೋಗದ ಔಷಧಿಗಳಾದ ಕೃಷ್ಣನ ಸ್ತುತಿಗಳೂ ಕಣ್ಮರೆಯಾಗಬಹುದು, ಆದರೆ ರಾಧಾಕೃಷ್ಣರ ಲೀಲಾಗಾನವಿರುವ ವಿದ್ಯಾಪತಿಯ ಪದ್ಯಗಳು ಮಾತ್ರ ಎಂದೆಂದಿಗೂ ಅಳಿಯುವು” ಎಂದೇ ಹೊಗಳಿದ್ದಾನೆ. ವಿದ್ಯಾಪತಿಯ ಕವಿತೆಗಳು ಅಪೂರ್ವ ಲಾಲಿತ್ಯ ಮತ್ತು ಮಾಧುರ್ಯದಿಂದ ಕೂಡಿವೆ. ‘ಪ್ರಣಯ ಪದಾವಳಿ’ಯಿಂದ ನೀವು ಓದಿ ಸುಖಿಸಲು ಕೆಲವು ಪದ್ಯಗಳನ್ನು ಇಲ್ಲಿ ನೀಡಿದ್ದೇನೆ.

‘ವಸ್ತ್ರ ಕಳೆಯುತ್ತಲೆ

ಲಜ್ಜೆ ದೂರಾಯಿತು.

ಇನಿಯನ ಮೈಯೆ

ನನ್ನ ಉಡುಗೆಯಾಯಿತು.

ಮುಖ ಕೆಳಗೆ ಹಾಕಿಕೊಂಡು

ಅವನು ದೀಪ ನೋಡುತ್ತಾನೆ

ಚಾತಕದಂಥ ಮನ್ಮಥನಿಗೆ

ನಾಚಿಕೆಯಿಲ್ಲ.

ಕೈಗೆ ಸಿಕ್ಕಿದ ಒಡನೆ

ಅವನ ಮುಖ ಹೊಳೆಯುತ್ತದೆ.

ಅವನ ವಿಪರೀತಗಳಿಗೆ

ನನ್ನ ಮನಸ್ಸೇ ನಾಚುತ್ತದೆ.

ಏನು ಹೇಳಲಿ ನಿನಗೆ?

ಕಾತರದಿ ನಾನು ನಡುಗುತಿರುವೆ.’ (ಮೈ ವಸ್ತ್ರ)

 

***

‘ಬ್ರಹ್ಮ ನನಗೆ ಸಿಕ್ಕಿದರೆ

ಕೈಕಾಲು ಕಟ್ಟಿ ಬಾವಿಗೆ ಎಸೆಯುತ್ತೇನೆ.

ಸಂಪನ್ನ ಗಂಡನಿಲ್ಲದ ಹೆಣ್ಣಿಗೆ

ಅವನೇಕೆ ರೂಪ ಕೊಟ್ಟ ?

ರೂಪವೇ ವೈರಿಯಾಗಿದೆ.

ದೇಹ ಬೆಳೆದಿದೆ.

ಬೇರೆಯವರಿಗೆ ಇದು ಹಿತ

ನನಗೋ ವಿನಾಶಪಥ.

ವಿದೇಶದಲ್ಲಿ ಇನಿಯ

ಬೇರೊಬ್ಬಳ ಬೆನ್ನು ಹತ್ತಿದ್ದಾನೆ

ಬರುವುದಿಲ್ಲ ಸನಿಯ.’ (ರೂಪ)

***

 

‘ಯಾರೊಬ್ಬರೂ ಹುಟ್ಟದಿರಲಿ

ಹುಟ್ಟಿದರೂ ಹುಡುಗಿಯಾಗದಿರಲಿ

ಹುಡುಗಿಯಾದರೂ ಪ್ರೇಮಿಸದಿರಲಿ

ಪ್ರೇಮಿಸಿದರೂ ಕುಲದ ಕಟ್ಟು ಇಲ್ಲದಿರಲಿ

ಓ ದೇವರೆ,

ಕೊನೆಯವರೆಗೂ ಉಳಿಸಿಕೊಡು:

ನನ್ನಿನಿಯನಲ್ಲಿ ಪ್ರೇಮ ತುಂಬಿರಲಿ

ಮತ್ತೊಬ್ಬಳ ಬಳಿ ಸುಳಿಯದಿರಲಿ

ಬೇರೊಬ್ಬಳ ಪ್ರೇಮಕ್ಕೆ ಬಲಿಯಾದರೆ

ಪೂರ್ವಾಪರಗಳ ವಿವೇಕವಿರಲಿ.’ (ಬಯಕೆ)

***

‘ಕೃಷ್ಣಾ-

ನೀನು ಹಿಂದಿರುಗುವ ಕಾಲ ಬಂತೆಂದು

ಅವಳು ಮತ್ತೆ ಮತ್ತೆ ಹೇಳಿ ಕಳಿಸುತ್ತಾಳೆ !

ಮಾವು ಚಿಗುತಿದೆ

ಕೋಗಿಲೆ ಹಾಡುತ್ತಿದೆ

ದುಂಬಿ ಹೀರುತ್ತಿವೆ.

ಮಧುಮಾಸದ ರಾತ್ರಿಗಳ

ನೀನಿಲ್ಲದೆ ಕಳೆವಳೆಂತು ಅವಳು ?

ನೀನಿಲ್ಲದೆ ಸಾವೆ ಸಮ ಎನ್ನುವಳು !

ಕುಚ ರುಚಿ ಕುಸಿದಿದೆ

ತನು ರುಚಿ ನಶಿಸಿದೆ

ಕಂಬನಿಯ ಕೋಡಿ ಹರಿದಿದೆ.

ವಿರಹ ಸಮುದ್ರದಲ್ಲಿ

ಕಾಮನೇ ನಾವೆ

ಆಸೆಯೇ ಅಂಬಿಗ.’ (ಪಯಣ)

***

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು [email protected][email protected]ಇಲ್ಲಿಗೆ ಬರೆಯಿರಿ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights