Layoff: ಜೊಮ್ಯಾಟೋ ನಂತರ ಈಗ ಸುದ್ದಿಯಲ್ಲಿ ಸ್ವಿಗ್ಗಿ; ಮುಂದಿನ ಕೆಲವು ದಿನಗಳಲ್ಲಿ 1100 ಜನರ ಉದ್ಯೋಗ ಕಡಿತ

ಉದ್ಯೋಗ ಕಡಿತ ಮಾಡುತ್ತಿರುವುದಾಗಿ ಊಟ – ಆಹಾರ ಉತ್ಪನ್ನಗಳನ್ನು ತಲುಪಿಸುವ ಸಂಸ್ಥೆ ಜೊಮ್ಯಾಟೋ ಘೋಷಿಸಿದ ಬೆನ್ನಲ್ಲೇ ಅದರ ಸ್ಪರ್ಧಾಳು ಸಂಸ್ಥೆ ಸ್ವಿಗ್ಗಿ ಮುಂದಿನ ದಿನಗಳಲ್ಲಿ ಸುಮಾರು 1100 ಉದ್ಯೋಗಗಳನ್ನು ಕಡಿತ ಮಾಡುವುದಾಗಿ ಘೋಷಿಸಿದೆ.

ನೌಕರರನ್ನು ಉದ್ಯೋಗದಿಂದ ತೆಗೆಯುವುದಲ್ಲದೆ ಖರ್ಚುಗಳನ್ನು ತಗ್ಗಿಸುವ ಮತ್ತು ಕಡಿಮೆ ಸರಬರಾಜಿನಲ್ಲಿಯೂ ಲಾಭವನ್ನು ಹೆಚ್ಚಿಸಿಕೊಳ್ಳುವ ಯೋಜನೆ ನಕ್ಷೆಯನ್ನು ತಯಾರಿಸಿಕೊಂಡಿದೆ.

ತನ್ನೆಲ್ಲಾ ನೌಕರರಿಗೆ ಈಮೇಲ್ ಕಳುಹಿಸಿರುವ ಸ್ವಿಗ್ಗಿ ಸಂಸ್ಥೆಯ ಸಿಇಒ ಮತ್ತು ಸಹ ಸಂಸ್ಥಾಪಕ ಶ್ರೀಹರ್ಶ ಮ್ಯಾಜೆಟಿ ಕೋವಿಡ್-19 ಸ್ವಿಗ್ಗಿ ವ್ಯವಹಾರಕ್ಕೆ ದೊಡ್ಡ ಹೊಡೆತ ನೀಡಿದೆ. ಇದಕ್ಕಾಗಿ ಸಂಸ್ಥೆ ಮುಂದಿನ ದಿನಗಳಿಗೆ ಹಲವು ತಯಾರಿಗಳನ್ನು ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಹಲವು ನೌಕರರು ಉದ್ಯೋಗ ಕಳೆದುಕೊಳ್ಳುವ ಕೆಟ್ಟ ಸುದ್ದಿಯನ್ನು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮಾನವ ಸಂಪನ್ಮೂಲ ತಂಡ ಮತ್ತು ವ್ಯವಸ್ಥಾಪಕರು ಉದ್ಯೋಗ ಕಳೆದುಕೊಳ್ಳುವ ನೌಕರರ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಈ ಪ್ರಕ್ರಿಯೆಯನ್ನು ಗೌರವಯುತವಾಗಿ ಮಾಡಲಿದ್ದೇವೆ ಎಂದು ಕೂಡ ಹೇಳಿದ್ದಾರೆ. ಉದ್ಯೋಗ ಕಳೆದುಕೊಳ್ಳುವ ಎಲ್ಲ ನೌಕರರಿಗೂ ಕನಿಷ್ಠ ಮೂರು ತಿಂಗಳ ವೇತನ ನೀಡುವುದಾಗಿಯೂ ಅವರು ಹೇಳಿದ್ದು, ಅದರ ಜೊತೆಗೆ ಸಂಸ್ಥೆಯ ಜೊತೆಗೆ ದುಡಿದ ಪ್ರತಿ ಒಂದು ವರ್ಷಕ್ಕೆ ಒಂದು ತಿಂಗಳ ವೇತನವನ್ನು ಪರಿಹಾರವಾಗಿ ನೀಡಲಿದ್ದಾರೆ. ಅಂದರೆ ಉದ್ಯೋಗಿಯೊಬ್ಬ ಸಂಸ್ಥೆಯ ಜೊತೆಗೆ ಐದು ವರ್ಷ ದುಡಿದಿದ್ದರೆ ಮತ್ತು ಮೂರು ತಿಂಗಳ ನೋಟಿಸ್ ಒಪ್ಪಂದವಾಗಿದ್ದರೆ ಅಂತಹ ನೌಕರರಿಗೆ 8 ತಿಂಗಳ ವೇತನ ಪರಿಹಾರವಾಗಿ ದೊರಕಲಿದೆ.

ಹೀಗೆ ಉದ್ಯೋಗ ಕಳೆದುಕೊಳ್ಳುವ ನೌಕರರಿಗೆ ಮತ್ತು ಅವರ ಪೋಷಕರಿಗೆ ಈ ವರ್ಷ ಡಿಸೆಂಬರ್ ಅಂತ್ಯದವರೆಗೂ ಅರೋಗ್ಯ ವಿಮೆ ವಿಸ್ತರಿಸುವುದಾಗಿಯೂ ಸ್ವಿಗ್ಗಿ ತಿಳಿಸಿದೆ. ಉದ್ಯೋಗ ಕಳೆದುಕೊಳ್ಳಲಿರುವ ನೌಕರರಿಗೆ ಹಲವು ಸೌಲಭ್ಯಗಳನ್ನು ನೀಡಿರುವ ಭರವಸೆಯ ನಡುವೆಯೂ ಅನಿಶ್ಚಿತತೆ ಹಲವು ಉದ್ಯೋಗಿಗಳಲ್ಲಿ ಮನೆ ಮಾಡಿದೆ.

ಕೋವಿಡ್-19 ಭಾರತದಾದ್ಯಂತ ಲಕ್ಷಾಂತರ ಉದ್ಯೋಗ ಕಡಿತಕ್ಕೆ ಕಾರಣವಾಗುತ್ತಿದೆ. ಈ ಸಮಸ್ಯೆ ಮುಂದೆ ಯಾವ ರೂಪ ಪಡೆಯುವುದೋ ಎಂಬ ಆತಂಕ ನಾಗರಿಕರಲ್ಲಿ ಮನೆಮಾಡಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights