SSLC ಪಬ್ಲಿಕ್ ಪರೀಕ್ಷೆ ನಡೆಸುವುದು ಸೂಕ್ತವಲ್ಲ: ಶಿಕ್ಷಣ ತಜ್ಞರು

ಶಿಕ್ಷಣ ಇಲಾಖೆಯು ಜೂನ್‌ 25 ರಿಂದ SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಈ ಕುರಿತು ತಯಾರಿಗಳನ್ನು ಆರಂಭಿಸಿದೆ. ಆದರೆ ಇದೇ ಸಂದರ್ಭದಲ್ಲಿ ಕೋವಿಡ್ 19 ಸೋಂಕು ಹರಡುತ್ತಿರುವ ಕಾರಣದಿಂದ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ಹಲವು ಶಿಕ್ಷಣ ತಜ್ಞರು, ಹೋರಾಟಗಾರರು, ವಿದ್ಯಾರ್ಥಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ SSLC ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾದ ವಿದ್ಯಾರ್ಥಿಗಳ ಅಂದಾಜು ಸಂಖ್ಯೆ: 8.5 ಲಕ್ಷ (ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ ಮಾಹಿತಿಯಂತೆ). ಪರೀಕ್ಷೆಯ ನಿರ್ವಾಹಕ ಸಿಬ್ಬಂದಿ ಅಂದಾಜು 2.2 ಲಕ್ಷ. ಇವರಲ್ಲಿ ದುರದೃಷ್ಟವಶಾತ್ ಯಾರಿಗಾದರೂ ಸೋಂಕು ಉಂಟಾಗಿ ಅಲ್ಲಿಂದ ಹರಡಿದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಕುಟುಂಬದವರಿಗೆ ಕಾಡುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆಯ ಬಳಿ ಉತ್ತರವಿದೆಯೇ ಎಂದು ಚಿಂತಕರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿಗಳು ಕೂಡ ಕೊರೊನಾ ಹರಡುವ ಇಂತಹ ಭಯದ ಸನ್ನಿವೇಶದಲ್ಲಿ ಹೇಗೆ ಅವರು ತಮ್ಮ ಗಮನವನ್ನು ಕೇಂದ್ರೀಕರಿಸಿ ಆತಂಕರಹಿತವಾಗಿ ಪರೀಕ್ಷೆಯನ್ನು ಬರೆಯಲು ಹೇಗೆ ಸಾಧ್ಯವಾಗುತ್ತದೆ? ಪರೀಕ್ಷೆಯ ನಿರ್ವಾಹಕ ಸಿಬ್ಬಂದಿಯು ಹೇಗೆ ತಾನೇ ಮಾನಸಿಕ ಒತ್ತಡದಲ್ಲಿ ಪರೀಕ್ಷೆಯನ್ನು ನಡೆಸಲು ಸಾಧ್ಯ?
ಪರೀಕ್ಷೆ ನಡೆಸುವ ಹಾಗು ನಂತರದಲ್ಲಿ ಪರೀಕ್ಷೆಯಲ್ಲಿ ನೇರವಾಗಿ ಭಾಗಿಯಾಗುವವರಿಗೆ ಸೋಂಕು ಹರಡುವ ಭಯ, ಅವರ ಕುಟುಬದವರಿಗೆ ಯಾವಾಗ ಏನಾಗುವುದೋ ಎನ್ನುವ ಆತಂಕ ಮತ್ತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಕೂಡ ಅದೇ ಬಗೆಯ ಉದ್ವೇಗ ಮತ್ತು ಒತ್ತಡ ಹೆಚ್ಚುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬಹುತೇಕ ಪರೀಕ್ಷಾ ಕೇಂದ್ರಗಳಿರುವುದು ಜಿಲ್ಲಾ ಕೇಂದ್ರಗಳಲ್ಲಿ. ಆದರೆ ರಾಮನಗರ ಹೊರತು ಪಡಿಸಿ ಎಲ್ಲಾ ಜಿಲ್ಲೆಗಳು ಕೋವಿಡ್‌ ಕಂಟೈನ್‌ಮೆಂಟ್ ಜೋನ್ನಲ್ಲಿವೆ. ಇನ್ನು ಉಳಿದಿರುವ ಕೇಂದ್ರಗಳು ಹೋಬಳಿ ಮತ್ತು ತಾಲೂಕು ಮಟ್ಟದ ಕ್ಲಸ್ಟರ್ ಕೇಂದ್ರಗಳಾಗಿರುವುದರಿಂದ ಮತ್ತೊಮ್ಮೆ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಮತ್ತು ಅಷ್ಟೇ ಸಂಖ್ಯೆಯ ಪೋಷಕರು ಪರಸ್ಪರ ಭೇಟಿಯಾದರೆ ಇದಕ್ಕಿಂತ ದುರಂತ ಮತ್ತೇನಿದೆ. ಜಿಲ್ಲಾ ಕೇಂದ್ರಗಳು ಹಲವು ಶಾಲೆಗಳನ್ನು ಹೊಂದಿರುವ ಕ್ಲಸ್ಟರ್ ಪರೀಕ್ಷಾ ಕೇಂದ್ರ ಗಳನ್ನು ಹೊಂದಿರುವುದರಿಂದ ಇದು ಪೋಷಕರು ಮತ್ತು ವಿದ್ಯಾರ್ಥಿಗಳು ನಗರದಾದ್ಯಂತ ಸಂಚರಿಸಲು ಅನುವು ಮಾಡಿಕೊಟ್ಟಂತಾಗುವುದಿಲ್ಲವೇ ?
ಇನ್ನು ಪ್ರಶ್ನೆ ಪತ್ರಿಕೆ ಪೂರೈಕೆಯಾಗುವುದು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಿಂದ ಇದರಿಂದ ಕೋವಿಂದ್ ಸೋಂಕು ಜಿಲ್ಲಾ ಕೆಂದ್ರಗಳಿಂದ ತಾಲೂಕು ಕೇಂದ್ರ ಗಳತ್ತ ಪಸರಿಸಲು ಇದು ದಾರಿ ಮಾಡಕೊಡುವುದಿಲ್ಲವೆ ಎಂಬುದು ಅವರ ಪ್ರಶ್ನೆಯಾಗಿದೆ.

ಹಾಗಾಗಿ ಸರ್ಕಾರವು SSLC ಪರೀಕ್ಷೆ ನಡೆಸುವ ನಿರ್ಧಾರವನ್ನು ಕೈಬಿಟ್ಟು ಮಕ್ಕಳ –ಪಾಲಕರ-ಇಲಾಖೆಯ ಅಧಿಕಾರಿಗಳ/ಸಿಬ್ಬಂದಿಯ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಪರೀಕ್ಷೆಯನ್ನು ರದ್ದುಗೊಳಿಸಿ ಎಲ್ಲಾ ಮಕ್ಕಳನ್ನು ತೇರ್ಗಡೆ ಮಾಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪತ್ರಿಕಾ ಹೇಳಿಕೆಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್‌, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಮಾವಳ್ಳಿ ಶಂಕರ್, ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ)ಯ ನಿರಂಜನಾರಾದ್ಯ .ವಿ.ಪಿ, ಪ್ರಾಥಮಿಕ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್)ನ ಬಸವರಾಜ ಗುರಿಕಾರ, ಕರ್ನಾಟಕ ರಾಜ್ಯ ನಿವೃತ್ತ ಶಿಕ್ಷಣ ಅಧಿಕಾರಿಗಳ ವೇದಿಕೆಯ ಜಗನ್ನಾಥರಾವ್ .ಡಿ ಸಹಿ ಮಾಡಿರುವವರಲ್ಲಿ ಪ್ರಮುಖರಾಗಿದ್ದಾರೆ.

ಅದೇ ರೀತಿಯಾಗಿ ಶ್ರೀಮತಿ ಜಯಮ್ಮ (ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಫೆಡರೇಷನ್), ಶುಭಂಕರ್ (ಭಾರತ ಜ್ಞಾನ ವಿಜ್ಞಾನ ಸಮಿತಿ), ವಿದ್ಯಾ ಪಾಟೀಲ್ (ರಾಜ್ಯ ಮಹಿಳಾ ಒಕ್ಕೂಟ), ಜ್ಯೋತಿ.ಕೆ (ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್), ಮೊಹಮ್ಮದ್ ಪೀರ್ ಲಟಗೇರಿ (ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್) ಕರ್ನಾಟಕ, ಮೊಯ್ಯುದ್ದೀನ್ ಕುಟ್ಟಿ (ಕರ್ನಾಟಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ), ಬಿ. ಶ್ರೀಪಾದ್ ಭಟ್ (ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ), ಸರೋವರ್ ಬೆಂಕಿಕೆರೆ, (ಕರ್ನಾಟಕ ವಿದ್ಯಾರ್ಥಿ ಸಂಘಟನೆ), ಗಂಗಾಧರ (ಸಮ ಸಮಾಜಕ್ಕಾಗಿ ಗೆಳೆಯರ ಬಳಗ), ಗಾಯತ್ರಿ ದೇವಿ ದತ್ (ನಿವೃತ್ತ ನಿರ್ದೇಶಕರು,ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ), ಸಿದ್ಧರಾಮ ಮನೋಳ್ಳಿ
(ನಿವೃತ್ತ ನಿರ್ದೇಶಕರು,ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ), ಸಿ.ವಿ.ತಿರುಮಲರಾವ್
(ನಿವೃತ್ತ ಜಂಟಿ-ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ), ಫಾದರ್ ಸತೀಸ್ (ವಿಮುಕ್ತಿ) ಮುಂತಾದವರು ಪತ್ರಿಕೆ ಹೇಳಿಕೆಗೆ ಸಹಿ ಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights