ಜ್ಯೂಸ್‌ನಲ್ಲಿ ಮತ್ತಿನ ಮಾತ್ರೆ ಹಾಕಿ ಸ್ನೇಹಿತನಿಂದಲೇ ಸ್ಯಾಂಡಲ್‌ವುಡ್‌ ನಟಿ ಮೇಲೆ ಅತ್ಯಾಚಾರ!

ಜ್ಯೂಸ್​ನಲ್ಲಿ ಮತ್ತು ಬರುವ ಮಾತ್ರ ಹಾಕಿ ಸ್ಯಾಂಡಲ್​ವುಡ್ ನಟಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ನಟಿಯ ಸ್ನೇಹಿತ ಆಕೆಯ ಹುಟ್ಟುಹಬ್ಬದ ದಿನವೇ ಅತ್ಯಾಚಾರ ಎಸಗಿದ್ದು, ಅತ್ಯಾಚಾರವನ್ನು ಮೊಬೈಲ್‌ನಲ್ಲಿ ಸರೆ ಹಿಡಿದಿದ್ದಾನೆ. ಅದರ ವಿಡಿಯೋ ತೋರಿಸಿ ವಿಡಿಯೋ ವೈರಲ್‌ ಮಾಡುವುದಾಗಿ ಹೆದರಿಸಿ, ಪದೇಪದೆ ಅತ್ಯಾಚಾರವೆಸಗಿದ್ದಾನೆ.

ತನ್ನ ಸ್ನೇಹಿತನೇ ಅತ್ಯಾಚಾರವೆಸಗಿರುವ ಬಗ್ಗೆ ಕನ್ನಡದ ನಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಖಾಸಗಿ ಕಂಪನಿ ಸಿಇಒ ಎಂದು ಹೇಳಿಕೊಂಡು ಪರಿಚಿತನಾಗಿದ್ದ ಮೋಹಿತ್ ಎಂಬಾತನ ವಿರುದ್ಧ ನಟಿ ಅತ್ಯಾಚಾರದ ಆರೋಪ ಮಾಡಿದ್ದಾರೆ.

2018ರ ಡಿಸೆಂಬರ್​ನಲ್ಲಿ​ ಗಾಂಧಿ ಬಜಾರ್​ನ ಕಾಫಿ ಡೇ ಒಂದರಲ್ಲಿ ಪರಿಚಯವಾಗಿದ್ದ ಮೋಹಿತ್ ತನ್ನ ಕಂಪನಿಯ ರಾಯಭಾರಿಯನ್ನಾಗಿ ಮಾಡುವುದಾಗಿ ಹೇಳಿದ್ದ. ಆತನ ಮಾತು ನಂಬಿ, ಆತನೊಂದಿಗೆ ಗೋವಾಗೆ ಹೋಗಿ ಫೋಟೋಶೂಟ್ ಮಾಡಿಸಿದ್ದ ನಟಿ ಆತನ ಜೊತೆ ಸ್ನೇಹ ಬೆಳೆಸಿದ್ದಳು.

ಆದರೆ, ಆ ಸ್ನೇಹವನ್ನು ದುರ್ಬಳಕೆ ಮಾಡಿಕೊಂಡಿದ್ದ ಮೋಹಿತ್ ಕಳೆದ ವರ್ಷ ನಟಿಯ ಬರ್ತಡೇಯನ್ನು ತನ್ನ ಮನೆಯಲ್ಲೇ ಆಚರಿಸಿದ್ದ. ಆ ಬರ್ತಡೇ ಪಾರ್ಟಿ ವೇಳೆ ಜ್ಯೂಸ್​ನಲ್ಲಿ ಮತ್ತು ಬರುವ ಔಷಧ ಬೆರೆಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಅದನ್ನು ವಿಡಿಯೋ ಮಾಡಿಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ. ಆ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡುವುದಾಗಿ ಹೆದರಿಸಿ, ಪದೇಪದೆ ಅತ್ಯಾಚಾರ ನಡೆಸಿದ್ದ. ಅಲ್ಲದೆ, ನಟಿಯಿಂದಲೇ ಹಣ ವಸೂಲಿ ಮಾಡುತ್ತಿದ್ದ.

ಹಲವು ಕನ್ನಡ ಸಿನಿಮಾಗಳು ಮತ್ತು ತಮಿಳಿನಲ್ಲಿಯೂ ನಟಿಸಿರುವ ನಟಿ ತನ್ನ ವಿಡಿಯೋ ಯೂಟ್ಯೂಬ್​ನಲ್ಲಿ ಅಪ್​ಲೋಡ್ ಆಗಬಹುದು ಎಂಬ ಭಯದಿಂದ ಸುಮ್ಮನಿದ್ದರು. ಆತ ಇನ್ನೂ ಹೆದರಿಸಿ, ಅತ್ಯಾಚಾರ ನಡೆಸುವುದು ನಿಲ್ಲದ ಕಾರಣ ಹಾಗೂ ಆತನಿಂದ 20 ಲಕ್ಷ ರೂ. ಕಳೆದುಕೊಂಡಿರುವ ಕಾರಣ ಇದೀಗ ನಟಿ ಜಗಜೀವನ ರಾಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ಬೆಂಗಳೂರಿನ ನಾಯಂಡಹಳ್ಳಿ ನಿವಾಸಿಯಾಗಿರುವ ಆರೋಪಿ ಮೋಹಿತ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *