ಪ್ರಶಾಂತ್‌ ಭೂಷಣ್‌ ನ್ಯಾಯಾಂಗ ನಿಂದನೆ ಪ್ರಕರಣ: ನಾಳೆ ಶಿಕ್ಷೆ ಪ್ರಕಟ

ಸುಪ್ರೀಂ ಕೋರ್ಟ್ ಕಾರ್ಯವೈಖರಿ ಹಾಗೂ ಹಾಲಿ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಟ್ವಿಟ್ಟರ್‌ನಲ್ಲಿ ಟೀಕಿಸಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್‌ರವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಶಿಕ್ಷೆ ಪ್ರಕಟಿಸಲಿದೆ.

ಆಗಸ್ಟ್ 5 ರಂದು ಭೂಷಣ್ ವಿರುದ್ಧ ವಿಚಾರಣೆ ಆರಂಭವಾಗಿತ್ತು. ಆಗಸ್ಟ್ 14 ರಂದು ಅವರು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿ, ಆಗಸ್ಟ್ 20 ರಂದು ಶಿಕ್ಷೆ ಪ್ರಮಾಣ ಘೊಷಿಸುವುದಾಗಿ ಹೇಳಿತ್ತು. ಆದರೆ ಆಗಸ್ಟ್ 20 ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ನಿರ್ದೇಶನದಂತೆ ಬೇಷರತ್ ಕ್ಷಮೆಯಾಚಿಸಲು ಭೂಷಣ್ ನಿರಾಕರಿಸಿದರು. ನೀವೆಷ್ಟೇ ಸಮಯ ಕೊಟ್ಟರೂ ತನ್ನ ಪ್ರಯೋಜನವಿಲ್ಲ ಎಂದಿದ್ದರು.

“ನನ್ನ ಉದ್ದೇಶವನ್ನು ಅರಿಯದೇ, ಸ್ವಷ್ಟ ವಿಚಾರಣೆ ನಡೆಸದೆ ನ್ಯಾಯಾಲಯವು ಈ ತೀರ್ಮಾನಕ್ಕೆ ಬಂದು ತಲುಪಿದ ಬಗ್ಗೆ ನನಗೆ ಆಘಾತವಾಗಿದೆ. ನನ್ನ ಟ್ವೀಟ್‌ಗಳು ನಾಗರಿಕನಾಗಿ ನನ್ನ ಕರ್ತವ್ಯವನ್ನು ನಿಭಾಯಿಸುವ ಉತ್ತಮ ಪ್ರಯತ್ನದ ಭಾಗವಾಗಿವೆ. ಇತಿಹಾಸದ ಈ ಹಂತದಲ್ಲಿ ನಾನು ಮಾತನಾಡದಿದ್ದರೆ ನಾನು ನನ್ನ ಕರ್ತವ್ಯದಲ್ಲಿ ವಿಫಲವಾಗುತ್ತಿದ್ದೆ. ನ್ಯಾಯಾಲಯವು ವಿಧಿಸಬಹುದಾದ ಯಾವುದೇ ದಂಡವನ್ನು ನಾನು ಸಲ್ಲಿಸುತ್ತೇನೆ. ಕ್ಷಮೆಯಾಚಿಸುವುದಿಲ್ಲ” ಎಂದು ಭೂಷಣ್ ತಿಳಿಸಿದ್ದರು.

ಆದರೂ ಸುಪ್ರೀಂ ಕೋರ್ಟ್ ಅವರಿಗೆ ಕ್ಷಮೆ ಕೇಳಲು ಮತ್ತು ತಮ್ಮ ಹೇಳಿಕೆಯನ್ನು ಬದಲಿಸಲು ಮೂರುದಿನಗಳ ಸಮಯ ನೀಡಿತ್ತು. ಆಗಸ್ಟ್ 24 ರಂದು ಮತ್ತೆ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯ ಅಂದೂ ಸಹ ಸಮಯ ನೀಡಿ ಕ್ಷಮೆ ಕೇಳುವಂತೆ ನಿರ್ದೇಶಿಸಿತ್ತು. ಆದರೆ ಅಂದು ಕೂಡ ಭೂಷಣ್ ಕ್ಷಮೆಯಾಚಿಸಲಿಲ್ಲ.

“ನನ್ನ ಟ್ವೀಟ್‌ಗಳು ನನ್ನ ನಂಬಿಕೆಯನ್ನು ಪ್ರತಿನಿಧಿಸುತ್ತವೆ. ಷರತ್ತುಬದ್ಧ ಅಥವಾ ಬೇಷರತ್ತಾದ ಕ್ಷಮೆಯು ಈ ನಂಬಿಕೆಗಳಿಗೆ ಅಪ್ರಾಮಾಣಿಕ ಎಂದು ಭಾವಿಸುತ್ತೆನೆ. ಯಾವುದೇ ಕ್ಷಮೆಯಾಚನೆಯು ನ್ಯಾಯಾಲಯವು ಹೇಳಿದಂತೆ ಕೇವಲ ಪ್ರಚೋದನೆಯಾಗಿರಬಾರದು. ಅದು ಪ್ರಾಮಾಣಿಕವಾಗಿರಬೇಕು. ಕ್ಷಮೆ ಕೇಳುವುದಿಲ್ಲ, ಅದು ನನ್ನ ಆತ್ಮಸಾಕ್ಷಿಯ ನಿಂದನೆಯಾಗುತ್ತದೆ” ಎಂದು ಭೂಷಣ್ ನುಡಿದಿದ್ದರು.

ವಕೀಲ, ಹೋರಾಟಗಾರ ಪ್ರಶಾಂತ್ ಭೂಷಣ್ ಅವರಿಗೆ ಎಚ್ಚರಿಕೆ ನೀಡಿ, ಪ್ರಕರಣ ಬಿಡಬೇಕು ಎಂದು ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸೆಪ್ಟಂಬರ್ 25ರಂದು ಮನವಿ ಮಾಡಿದ್ದರು. ನ್ಯಾಯಮೂರ್ತಿ ಅರುಣ್ ಮಿಶ್ರಾ, ಬಿ.ಆರ್ ಗವಾಯಿ ಮತ್ತು ಕೃಷ್ಣಮುರಾರಿಯವರಿದ್ದ ಪೀಠದ ಎದುರು ಭೂಷಣ್ ಪರವಾಗಿ ಹಿರಿಯ ವಕೀಲರಾದ ದುಷ್ಯಂತ್ ಧವೆ ಮತ್ತು ರಾಜೀವ್ ಧವನ್ ವಾದಿಸಿದ್ದರು.

2009ರ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸೆಪ್ಟಂಬರ್ 10ಕ್ಕೆ ಮುಂದೂಡಿದ ನ್ಯಾಯಾಲಯವು ಇತ್ತೀಚಿನ ಪ್ರಕರಣದ ಕುರಿತು ನಾಳೆ ಶಿಕ್ಷೆ ಪ್ರಕಟಿಸಲಿದೆ. ಎಚ್ಚರಿಕೆ ನೀಡಿ ಬಿಡಲಾಗುವುದು ಎಂದು ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.


Read Also: ಪ್ರಜಾಪ್ರಭುತ್ವ ಮೇಲೆ ಸರ್ವಾಧಿಕಾರಿ, ರಾಷ್ಟ್ರ ವಿರೋಧಿಗಳ ಪ್ರಭಾವ ಹೆಚ್ಚುತ್ತಿದೆ: ಸೋನಿಯಾ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights