ದೇಶದಲ್ಲಿ ಪ್ರತಿದಿನ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ; 16 ನಿಮಿಷಕ್ಕೊಂದು ದೌರ್ಜನ್ಯ!

ಭಾರತೀಯ ಸಮಾಜ ಮತ್ತು ರಾಜಕೀಯ ಈವರೆಗೆ ದಲಿತರನ್ನು ಕೇವಲ ಮತಗಳನ್ನಾಗಷ್ಟೇ ನೋಡಿವೆಯೇ ವಿನಃ ಮನುಷ್ಯರನ್ನಾಗಿ ಕಂಡಿಲ್ಲ ಎಂಬುದಕ್ಕೆ ನಮ್ಮೆದುರು ಸಾಕಷ್ಟು ನಿದರ್ಶನಗಳಿವೆ. ಈ ನಿದರ್ಶನಗಳಿಗೆ ಹೊಸ ಸೇರ್ಪಡೆಯೇ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಗಾಳ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಅನಿಲ ಇಂಗಳಗಿಯ ಹತ್ಯೆ! (27 ಆಗಸ್ಟ್ 2020)

28 ವರ್ಷದ ಯುವಕ ಅನಿಲ ಇಂಗಳಗಿ ಇಂದು ನಮ್ಮ ಜೊತೆ ಇಲ್ಲ. ಇದಕ್ಕೆ ಕಾರಣ ಜಾತಿ ಎಂಬ ವಿಷಬೀಜ. ಇಷ್ಟಕ್ಕೂ ಅನಿಲ ಕೊಲೆಗೀಡಾಗುವಷ್ಟರ ಮಟ್ಟಿಗೆ ಮಾಡಿದ ತಪ್ಪಾದರೂ ಏನು ಗೊತ್ತಾ? ದೇವಾಲಯದ ಕಟ್ಟೆ ಮೇಲೆ ಪರಿಶಿಷ್ಟ ಜಾತಿಗೆ ಸೇರಿದ ಅನಿಲ ತಮಗೆ ಸರಿಸಮಾನವಾಗಿ ಕುಳಿತಿದ್ದ ಎಂಬ ಏಕೈಕ ಕಾರಣಕ್ಕೆ ಮೇಲ್ಜಾತಿಯವರು ಆತನನ್ನು ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದಾರೆ.

ಅಸಲಿಗೆ ಕರ್ನಾಟಕ ಅಥವಾ ಭಾರತದ ಮಟ್ಟಿಗೆ ಜಾತಿ ತಾರತಮ್ಯ ಮತ್ತು ವೈಷಮ್ಯದ ಕಾರಣಕ್ಕಾಗಿ ಕೊಲೆಗೀಡಾದ ಮೊದಲ ವ್ಯಕ್ತಿಯಲ್ಲ ಅನಿಲ ಇಂಗಳಗಿ. ಹಾಗೆಯೇ ಈತ ಕೊನೆಯ ವ್ಯಕ್ತಿಯಾಗಿರಲೂ ಸಾಧ್ಯವಿಲ್ಲ ಎಂಬುದು ನಮಗೆ ಗೋಚರಿಸುತ್ತದೆ. ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳು ಏರುತ್ತಲೇ ಇದೆ.

ಹಾಗಾದರೆ ಭಾರತದಲ್ಲಿ ಪ್ರತಿವರ್ಷ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳ ಪ್ರಮಾಣವೆಷ್ಟು? ದಲಿತ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರ ಪ್ರಕರಣಗಳೆಷ್ಟು? ಯಾವ-ಯಾವ ರಾಜ್ಯದಲ್ಲಿ ದಲಿತರ ಮೇಲೆ ಅತಿಹೆಚ್ಚು ದೌರ್ಜನ್ಯಗಳಾಗುತ್ತಿವೆ? ಈ ಪೈಕಿ ಎಷ್ಟು ಪ್ರಕರಣಗಳು ದಾಖಲಾಗಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ? ತನಿಖೆಯೇ ನಡೆಯದೆ ಹಾದಿ ತಪ್ಪಿದ ಪ್ರಕರಣಗಳ ಸಂಖ್ಯೆ ಎಷ್ಟು? ಸರಕಾರದ ಸಂಸ್ಥೆಯೇ ನೀಡುವ ಅಂಕಿಅಂಶಗಳು ಬೆಚ್ಚಿಬೀಳಿಸುತ್ತವೆ.

ವರ್ಷವೊಂದಕ್ಕೆ ದಲಿತರ ಮೇಲಾಗುವ ದೌರ್ಜನ್ಯಗಳು ಎಷ್ಟು ಗೊತ್ತಾ?

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‍ಸಿಆರ್‌ಬಿ ) ನೀಡುವ ಅಂಕಿಅಂಶಗಳ ಪ್ರಕಾರ 2017-18ರಲ್ಲಿ ದಲಿತರ ಮೇಲೆ ಎಸಗಲಾಗಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಭಾರತದಾದ್ಯಂತ ದಾಖಲಾಗಿರುವ ಅಪರಾಧ ಪ್ರಕರಣಗಳ ಸಂಖ್ಯೆ 5,775. ಈ ಪೈಕಿ 3172 (ಶೇ.55) ರಷ್ಟು ಪ್ರಕರಣಗಳು ಉದ್ದೇಶಪೂರ್ವಕವಾಗಿ ಅವಮಾನಿಸಿದ ಹಾಗೂ ಬೆದರಿಸಿ ದೈಹಿಕವಾಗಿ ಹಲ್ಲೆ ನಡೆಸಿದ ಪ್ರಕರಣಗಳಾಗಿವೆ.

ಇದಲ್ಲದೆ, 47 ಭೂ ಕಬಳಿಕೆ, 63 ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ಸ್ಥಳಗಳನ್ನು ಬಳಸಬಾರದು ಎಂಬ ಕಾರಣಕ್ಕೆ ಹಲ್ಲೆಯಾದ ಸುಮಾರು 12 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಕರ್ನಾಟಕದಲ್ಲೇ. ರಾಜ್ಯದಲ್ಲಿ 1175 ಪ್ರಕರಣಗಳು ದಾಖಲಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ಉತ್ತರಪ್ರದೇಶದಲ್ಲಿ 804 ಪ್ರಕರಣಗಳು ದಾಖಲಾಗಿವೆ.

ಇದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಾದರೆ, ಇನ್ನೂ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಬರೋಬ್ಬರಿ 43,203. ಈ ಸಂಖ್ಯೆ 2016-17ಕ್ಕಿಂತ ಶೇ.6ರಷ್ಟು ಅಧಿಕ ಎಂದು ಅಂಕಿಅಂಶಗಳೇ ಹೇಳುತ್ತಿವೆ. ಆದರೆ, ಇಷ್ಟು ಪ್ರಮಾಣದ ಪ್ರಕರಣಗಳ ಪೈಕಿ ತನಿಖೆಗೆ ಒಳಗಾಗಿರುವ ಮತ್ತು ಶಿಕ್ಷೆಯಾಗಿರುವ ಪ್ರಕರಣಗಳ ಸಂಖ್ಯೆ ಕೇವಲ ಶೇ.23 ರಷ್ಟು ಮಾತ್ರ.

ಕೊಲೆ-ಅತ್ಯಾಚಾರಕ್ಕೀಡಾಗುವ ದಲಿತರ ಸಂಖ್ಯೆ ಎಷ್ಟು ಗೊತ್ತಾ?

ಭಾರತ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 2007-17ರ ನಡುವಣ ಹತ್ತು ವರ್ಷಗಳ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಪ್ರಮಾಣ ಶೇ. 66ರಷ್ಟು ಹೆಚ್ಚಾಗಿದೆ. ಪ್ರತಿನಿತ್ಯ 16 ನಿಮಿಷಕ್ಕೊಮ್ಮೆ ದಲಿತರ ವಿರುದ್ಧ ದೌರ್ಜನ್ಯ ನಡೆಸಲಾಗುತ್ತಿದೆ. ಪ್ರತಿವಾರಕ್ಕೆ 13 ದಲಿತರು ಮೇಲ್‍ಜಾತಿಯವರಿಂದ ಕೊಲೆಗೀಡಾಗುತ್ತಿದ್ದಾರೆ.

ದೇಶದಲ್ಲಿ ನಿತ್ಯ ಸರಾಸರಿ ಆರು ಮಂದಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. 2012ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣ ಇಡೀ ಭಾರತದ ಗಮನ ಸೆಳೆದಿತ್ತು. ದೊಡ್ಡ ಮಟ್ಟದ ಹೋರಾಟಕ್ಕೆ ಕಾರಣವಾಗಿ ಕೊನೆಗೆ ಅಪರಾಧಿಗಳನ್ನು ಪತ್ತೆಹಚ್ಚಿ ಅವರಿಗೆ ಗಲ್ಲುಶಿಕ್ಷೆಯನ್ನೂ ನೀಡಲಾಗಿತ್ತು.

ಆದರೆ, ಅದೇ ವರ್ಷ ಭಾರತದಲ್ಲಿ ಸುಮಾರು 1574 ದಲಿತ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗಿತ್ತು. 651 ದಲಿತರ ಕೊಲೆಯಾಗಿತ್ತು. ಇದಲ್ಲದೆ ದಲಿತರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದಂತಹ ಹೇಯ ಕೃತ್ಯಗಳೂ ಸಹ ದಾಖಲಾಗಿವೆ. ಆದರೆ, ಇಂತಹ ಹೀನ ಅಪರಾಧಗಳಲ್ಲಿ ಭಾಗಿಯಾದ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂದು ಹುಡುಕುತ್ತಾ ಹೊರಟರೆ ಫಲಿತಾಂಶ ಮಾತ್ರ ಕಡಿಮೆಯಲ್ಲಿ ಕಡಿಮೆ.

ಕರ್ನಾಟಕದ ಅಂಕಿಸಂಖ್ಯೆ ಏನು?

‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯಿದೆ’ ಅನುಷ್ಠಾನದ 2019ರ ವಾರ್ಷಿಕ ರಾಜ್ಯ ವರದಿ ಪ್ರಕಾರ ಕರ್ನಾಟಕದಲ್ಲಿ ಪ್ರತಿ ಐದು ದಿನಕ್ಕೊಬ್ಬ ದಲಿತ ವ್ಯಕ್ತಿಯ ಕೊಲೆಯಾದರೆ, ಎರಡು ದಿನಕ್ಕೊಂದು ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಆದರೆ ಶಿಕ್ಷೆಯಾಗುತ್ತಿರುವ ಆರೋಪಿಗಳ ಪ್ರಮಾಣ ಬೆರಳೆಣಿಕೆ ಮಾತ್ರ ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ ಶೇ. 11.92ರಷ್ಟು ಹೆಚ್ಚಾಗಿವೆ. ಆದರೆ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕೇವಲ ಶೇ.3.79ರಷ್ಟು ಮಾತ್ರ. ಇತ್ತೀಚಿನ ವರ್ಷಗಳಲ್ಲಿ ಕೊಲೆ ಯತ್ನದ ಪ್ರಕರಣಗಳು ಕಡಿಮೆಯಾದರೂ, ಅತ್ಯಾಚಾರದ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಲೇ ಇವೆ.

ಕಳೆದ ವರ್ಷ 2,140 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಕೇವಲ 121 ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ. ಉಳಿದವು ಇತ್ಯರ್ಥವಾಗಿಲ್ಲ. 375 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ29.57ರಷ್ಟು ಹೆಚ್ಚಾಗಿವೆ. ಬೆಂಗಳೂರು ನಗರದಲ್ಲಿಯೇ ಹೆಚ್ಚು ದೌರ್ಜನ್ಯಗಳು ದಾಖಲಾಗಿವೆ ಎನ್ನುತ್ತಿವೆ ಅಂಕಿಅಂಶಗಳು.

ಈ ಎಲ್ಲಾ ಅಂಕಿಅಂಶಗಳು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿಯನ್ನು ಆಧರಿಸಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ನೀಡುವ ಅಂಕಿಅಂಶಗಳು. ಇನ್ನು ಈ ದೇಶ ಹಲವು ರಾಜ್ಯಗಳ ಅನೇಕ ಕುಗ್ರಾಮಗಳಲ್ಲಿ ಹೆಣ್ಣುಮಕ್ಕಳ ಮೇಲಾಗುವ ಅತ್ಯಾಚಾರ ಕೊಲೆಗಳು ಅಲ್ಲಲ್ಲಿನ ಪಂಚಾಯಿತಿ ಕಟ್ಟೆಗಳಲ್ಲೇ ಸದ್ದಿಲ್ಲದೆ ಬಗೆಹರಿದುಬಿಡುತ್ತವೆ ಅಂದರೆ ಸಂತ್ರಸ್ತರ ದನಿಯನ್ನು ಅಡಗಿಸಿ ಮೌನವಾಗಿಸಲಾಗುತ್ತಿದೆ. ದಾಖಲಾಗುವ ಪ್ರಕರಣಗಳ ಸಂಖ್ಯೆಗಿಂತ ಹೀಗೆ ದಾಖಲಾಗದೆ ಉಳಿದ ಸಂಖ್ಯೆಯೇ ಹೆಚ್ಚು ಎನ್ನಲಾಗುತ್ತಿದೆ.

ಮಿಸ್ರಿಯಾ

ಭಾರತದಲ್ಲಿ ದಲಿತರ ಮೇಲಿನ ಇಂತಹ ದೌರ್ಜನ್ಯಗಳನ್ನು ತಡೆಯುವ ಸಲುವಾಗಿಯೇ ಕಟ್ಟುನಿಟ್ಟಿನ ಕಾನೂನುಗಳನ್ನು ರಚಿಸಲಾಗಿದೆ. ಆದರೆ, ಕಾನೂನು ರಚನೆ ಮಾಡಿದವರು ಈವರೆಗೆ ಈ ಕಾನೂನನ್ನು ತಳಮಟ್ಟದ ಜನರ ರಕ್ಷಣೆಗೆ ನಿಖರವಾಗಿ ಮತ್ತು ಸಂಪೂರ್ಣವಾಗಿ ಬಳಸದಂತೆ ಮಾಡಿರುವುದು ವಿಪರ್ಯಾಸ. ಪರಿಣಾಮ ದಿನದ ಸರಾಸರಿ ದಲಿತರ ಸಾವಿನ ಅಂಕಿ ಏರುತ್ತಲೇ ಇದೆ. ಡಾ. ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ಮೂಡಿದ ಸಂವಿಧಾನಕ್ಕೆ ಬೆಲೆ ಸಿಕ್ಕುವ ದಿನಗಳು ಬರುವುದೆಂದು? ಅಂಬೇಡ್ಕರ್ ಅವರನ್ನು ಹಿಂದುತ್ವದ ತೆಕ್ಕೆಗೆ ತೆಗೆದುಕೊಳ್ಳಲು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ಸಂಘ ಪರಿವಾರದವರು ದಲಿತರ ದೌರ್ಜನ್ಯಗಳು ಮತ್ತು ಕೊಲೆಗಳ ಬಗ್ಗೆ ಸೊಲ್ಲೆತ್ತದೆ ಇರುವುದೇಕೆ? ಸರ್ವರ ಶ್ರೇಯೋಭಿವೃದ್ಧಿಯ ಬಗ್ಗೆ ಭಾಷಣ ಬಿಗಿರುವ ರಾಜಕಾರಿಣಿಗಳು ‘ಅಭಿವೃದ್ಧಿ’ ಪದವನ್ನು ಪಠಿಸುವ ಸಮಯದ ಒಂದಂಶದಲ್ಲಿ ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿರುವ ಈ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಂಡರೆ ಅವರ ಅಭಿವೃದ್ಧಿ ಗಿಣಿಪಾಠಕ್ಕೆ ಅರ್ಥ ಬಂದೀತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights