Fact Check: ಡಿಜೆ ಹಳ್ಳಿ ಪ್ರಕರಣಕ್ಕೆ ಹೋಲಿಸಿ ನಾರ್ವೆಯ ಮಾನವ ಸರಪಳಿಯ ಹಳೆಯ ಚಿತ್ರವನ್ನು ಸ್ವೀಡನ್‌ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ!

ಸ್ವೀಡನ್‌ನ ಚರ್ಚುಗಳು ಮತ್ತು ಜ್ಯೂಯಿಶ್ ಪ್ರಾರ್ಥನಾ ಮಂದಿರಗಳಾದ  ಸಿನೆಗಾಗ್‌ ಗಳನ್ನು ರಕ್ಷಿಸಲು ಸ್ವೀಡನ್‌ನ ಮುಸ್ಲಿಮರು ಮಾನವ ಸರಪಳಿಗಳನ್ನು ರಚಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ ನಲ್ಲಿರುವ ಚಿತ್ರದಲ್ಲಿ ಮುಸ್ಲಿಂ ಮಹಿಳೆಯರು ರಚಿಸಿದ ಮಾನವ ಸರಪಳಿಯನ್ನು ನಾವು ನೋಡಬಹುದು. ಬೆಂಗಳೂರಿನ ಡಿಜೆಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭದಲ್ಲಿ, ಹಿಂದೂ ದೇವಾಲಯವನ್ನು ರಕ್ಷಿಸಲು ಮುಸ್ಲಿಂ ಯುವಕರು ಇದೇ ರೀತಿಯ ಮಾನವ ಸರಪಳಿ ರಚಿಸಿದ್ದ ಸುದ್ದಿಗಳನ್ನು ನಾವು ನೋಡಿದ್ದೇವೆ. ಅಲ್ಲದೆ, ಮುಸ್ಲಿಂ ಮಹಿಳೆಯರ ಸರಪಳಿ ಹಾಗೂ ಡಿಜೆಹಳ್ಳಿಯ ಸರಪಳಿಯವನ್ನು ಒಂದಕ್ಕೊಂದು ಹೋಲಿಸಿ ಮುಸ್ಲಿಮರನ್ನು ಅವಹೇಳನ ಮಾಡಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಸ್ವೀಡನ್‌ ನಲ್ಲಿನ ಚರ್ಚುಗಳು ಮತ್ತು ಸಿನೆಗಾಗ್‌ ಗಳನ್ನು ರಕ್ಷಿಸಲು ಮುಸ್ಲಿಮರು ಮಾನವ ಸರಪಳಿಗಳನ್ನು ರಚಿಸಿರುವ ಫೋಟೋ.

ನಿಜಾಂಶ: 2015 ರಲ್ಲಿ ನಾರ್ವೆಯ ಓಸ್ಲೋದ ಸಿನೆಗಾಗ್‌ ಹೊರಗೆ ಮುಸ್ಲಿಂ ಮಹಿಳೆಯರ ಗುಂಪು ಮಾನವ ಸರಪಳಿ ರೂಪಿಸುತ್ತಿರುವುದನ್ನು ಪೋಸ್ಟ್‌ ನಲ್ಲಿರುವ ಫೋಟೋ ತೋರಿಸುತ್ತದೆ. 2015 ರಲ್ಲಿ, ಡೆನ್ಮಾರ್ಕ್‌ನಲ್ಲಿ ಯಹೂದಿ ವಿರೋಧಿ ಹಿಂಸೆಯ ವಿರುದ್ಧ ತಮ್ಮ ಒಗ್ಗಟ್ಟು ಪ್ರದರ್ಶಿಸಲು ಓಸ್ಲೋ ನಗರದ ಸಿನೆಗಾಗ್‌ ನಲ್ಲಿ 1000 ಕ್ಕೂ ಹೆಚ್ಚು ಮುಸ್ಲಿಮರು ಮಾನವ ಸರಪಳಿಗಳನ್ನು ರಚಿಸಿದ್ದರು. ಹಾಗಾಗಿ ಇತ್ತೀಚಿನ ಸ್ವೀಡನ್ ಗಲಭೆಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ‘+972 ಮ್ಯಾಗಜೀನ್’ ವೆಬ್‌ಸೈಟ್‌ ನಲ್ಲಿ 23 ಫೆಬ್ರವರಿ 2015 ರಂದು ಪ್ರಕಟಿಸಿದ ಲೇಖನದಲ್ಲಿ ಅದೇ ಚಿತ್ರ ಕಂಡುಬಂದಿದೆ. ನಾರ್ವೆಯ ಓಸ್ಲೋದ ಸಿನೆಗಾಗ್‌ನಲ್ಲಿ ಮುಸ್ಲಿಂ ಯುವಜನರು ಆಯೋಜಿಸಿದ್ದ ಒಗ್ಗಟ್ಟಿನ ಪ್ರತಿಭಟನೆಗೆ ಈ ಫೋಟೋ ಸಂಬಂಧಿಸಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. 2015 ರಲ್ಲಿ, ಡೆನ್ಮಾರ್ಕ್‌ನಲ್ಲಿ ನಡೆದ ಯಹೂದಿ ವಿರೋಧಿ ಹಿಂಸಾಚಾರದ ವಿರುದ್ಧ ಒಗ್ಗಟ್ಟನ್ನು ವ್ಯಕ್ತಪಡಿಸಲು 1000 ಕ್ಕೂ ಹೆಚ್ಚು ಮುಸ್ಲಿಂ ಯುವಜನರು ಓಸ್ಲೋದ ಸಿನೆಗಾಗ್ ಮುಂದೆ ಮಾನವ ಸರಪಳಿಗಳನ್ನು ರಚಿಸಿದ್ದರು.

ಈ ಘಟನೆಯ ಇತರ ಫೋಟೋಗಳೊಂದಿಗೆ ಅದೇ ಫೋಟೋವನ್ನು ಹಂಚಿಕೊಳ್ಳುತ್ತಾ, ನಾರ್ವೆಯ ಮುಸ್ಲಿಮರು ಆಯೋಜಿಸಿರುವ ಈ ಮಾನವ ಸರಪಳಿಯ ಬಗ್ಗೆ ‘INDEPENDENT’ ವೆಬ್‌ಸೈಟ್‌  ಕೂಡ ಲೇಖನವನ್ನು ಪ್ರಕಟಿಸಿತು. ಈ ಲೇಖನದಲ್ಲಿ 1000 ಕ್ಕೂ ಹೆಚ್ಚು ಮುಸ್ಲಿಂ ಬೆಂಬಲಿಗರು ‘ಯಹೂದಿ ವಿರೋಧ ಬೇಡ, ಇಸ್ಲಾಮೋಫೋಬಿಯಾ ಬೇಡ’ ಎಂದು ಘೋಷಣೆ ಕೂಗಿದ್ದರು. ಅದರ ಜೊತೆಗೆ ಅವರು ಯಹೂದಿ ಪೂಜಾ ಸ್ಥಳದ ಸುತ್ತ ‘ಶಾಂತಿಯ ಉಂಗುರ’ ಎಂದು ಕರೆದ ಮಾನವ ಸರಪಳಿಯನ್ನು ನಿರ್ಮಿಸಿದ್ದರು.

 ‘25 ಆಗಸ್ಟ್ 2020 ’ರಂದು, ಸ್ವೀಡಿಷ್ ನಗರವಾದ ಮಾಲ್ಮೋದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅಲ್ಲಿ, ಇಸ್ಲಾಂ ವಿರೋಧಿ ಚಟುವಟಿಕೆಗಳನ್ನು 300 ಕ್ಕೂ ಹೆಚ್ಚು ಮುಸ್ಲಿಮರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಮಾಲ್ಮೋದಲ್ಲಿ ಬಲಪಂಥೀಯ ತೀವ್ರಗಾಮಿ ಪಕ್ಷ ಸ್ಟ್ರಾಮ್ ಕುರ್ಸ್ ನ ಸದಸ್ಯರು ಕುರಾನ್‌ ಪುಸ್ತಕದ ಪ್ರತಿಯನ್ನು ಸುಟ್ಟುಹಾಕಿದ ನಂತರ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಆ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ನಾನಾ ರೀತಿಯ ವಸ್ತುಗಳನ್ನು ಎಸೆದು ಕಾರಿನ ಟೈರ್‌ ಗಳನ್ನು ಸುಟ್ಟುಹಾಕಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ‘26 ಆಗಸ್ಟ್ 2020 ’ರಂದು ಸ್ವೀಡನ್‌ನಲ್ಲಿ ನಡೆದ ಗಲಭೆಗಳ ನಂತರ, ನಾರ್ವೆಯ ಓಸ್ಲೋ ನಗರದಲ್ಲಿರುವ ಸಂಸತ್ತಿನ ಕಟ್ಟಡದ ಬಳಿ ‘ಸ್ಟಾಪ್ ಇಸ್ಲಾಮೀಕರಣ ಆಫ್ ನಾರ್ವೆ (ಸಿಯಾನ್)’ ಸಂಘಟನೆಯು ನಡೆಸಿದ ಇಸ್ಲಾಂ ವಿರೋಧಿ ರ್ಯಾಲಿಯಲ್ಲಿ ಘರ್ಷಣೆಗಳು ನಡೆದವು.

ಒಟ್ಟಾರೆಯಾಗಿ ಹೇಳುವುದಾದರೆ, ಸ್ವೀಡನ್‌ ನ ಮುಸ್ಲಿಮರು ಚರ್ಚುಗಳು ಮತ್ತು ಸಿನೆಗಾಗ್‌ಗ ಳನ್ನು ರಕ್ಷಿಸಲು ಮಾನವ ಸರಪಳಿಗಳನ್ನು ರೂಪಿಸಿದ್ದಾರೆ ಎಂದು ನಾರ್ವೆಯ ಒಗ್ಗಟ್ಟಿನ ಪ್ರತಿಭಟನೆಗೆ ಸಂಬಂಧಿಸಿದ 2015ರ ಹಳೆಯ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಡಿಜೆಹಳ್ಳಿಯಲ್ಲಿ ದೇವಸ್ಥಾನವನ್ನು ರಕ್ಷಿಸಿದ ಯುವಕರು ಹೀಗೆ ಹೇಳಿದ್ದಾರೆ, “ಯಾರೋ ಒಬ್ಬ ಕೋಮು ವಿರೋಧಿ ಅನ್ಯ ಧರ್ಮದ ವಿರುದ್ಧ ಮಾಡುವಂತಹ ಕೃತ್ಯಗಳಿಂದ ಇಡೀ ಸಮುದಾಯವನ್ನು ಹೊಣೆಯನ್ನಾಗಿಸಬಾರದು. ನವೀನ್ ಎಂಬಾತನ ತಪ್ಪಿಗೆ ಆತನಿಗೆ ಶಿಕ್ಷೆಯಾಗಬೇಕು. ಆದರೆ, ಅದು ಎರಡು ಸಮುದಾಯಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಬಾರದು. ಎಲ್ಲಾ ಸಮುದಾಯಗಳಲ್ಲೂ ಮೂರ್ಖರು ಇದ್ದೇ ಇರುತ್ತಾರೆ. ಅಂತಹ ಮೂರ್ಖರಿಂದ ಆಗುವ ಅನಾಹುತಗಳಿಗೆ ಇಡೀ ಸಮುದಾಯವನ್ನೇ ಹೊಣೆ ಮಾಡಲಾಗುತ್ತದೆ.ನಮ್ಮ ಏರಿಯಾದಲ್ಲಿ ಇಂತಹ ಘಟನೆಗಳನ್ನು ನಾವು ಸಹಿಸಲ್ಲ, ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಇದ್ದೇವೆ. ಅದನ್ನು ಉಳಿಸಿಕೊಳ್ಳಬೇಕು. ಹಾಗಾಗಿ, ದೇವಸ್ಥಾನವನ್ನು ರಕ್ಷಿಸಿವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.

– ಸೋಮಶೇಖರ್ ಚಲ್ಯ


ಇದನ್ನೂ ಓದಿ: ಡಿಜಿ ಹಳ್ಳಿ ದೇವಾಲಯವನ್ನು ಮುಸ್ಲೀಂ ಯುವಕರು ರಕ್ಷಿಸಿದ್ದೇಕೆ: ಯಾರು ಅವರು? ಅವರು ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights