ಕಲಬುರ್ಗಿಯಲ್ಲಿ 6 ಕೋಟಿ ಮೌಲ್ಯದ ಗಾಂಜಾ ಪತ್ತೆ; ಬಂಧಿತ ಆರೋಪಿ ಬಿಜೆಪಿ ಕಾರ್ಯಕರ್ತ??

ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾದ ಬಗೆಗಿನ ಚರ್ಚೆ ಸ್ಯಾಂಡಲ್‌ವುಡ್‌ ದಾಟಿ, ರಾಜಕೀಯಕ್ಕೆ ಎಂಟ್ರಿ ಕೊಟ್ಟಿದೆ. ಈ ಬೆನ್ನಲೇ ಕಲಬುರ್ಗಿಯಿಂದ ರಾಜ್ಯಕ್ಕೆ ಹೆಚ್ಚು ಪ್ರಮಾಣದಲ್ಲಿ ಅಕ್ರಮವಾಗಿ ಗಾಂಜಾ ಪೂರೈಸಲಾಗುತ್ತಿತ್ತೆಂಬ ಮಾಹಿತಿ ಈಗ ಬಹಿರಂಗಗೊಂಡಿದೆ. ಕಲಬುರ್ಗಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಗುರುವಾರ 6 ಕೋಟಿ ಮೌಲ್ಯದ 1200 ಕೆ.ಜಿ. ಗಾಂಜಾ ವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಲಕ್ಷ್ಮಣ ನಾಯಕ ತಾಂಡಾದ ಚಂದ್ರಕಾಂತ್ ಚವ್ಹಾಣ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕಲಬುರ್ಗಿ ಜಿಲ್ಲೆ ಕಾಳಗಿ ಪಟ್ಟಣದ ಹೊರವಲಯದ ಲಕ್ಷ್ಮಣನಾಯಕ್ ತಾಂಡಾದಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ.  ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ ಭೂಮಿಯಲ್ಲಿ(ಹಗೇವು) ಅಡಗಿಸಿಡಲಾಗಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಒಂದೇ ಕಡೆ ಬರೋಬ್ಬರಿ 1200 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಕಲಬುರ್ಗಿ ಜಿಲ್ಲೆಯ ವಿವಿಧೆಡೆ ದಾಳಿ ಮಾಡಲಾಗಿದ್ದು, ಶೇಷಾದ್ರಿಪುರಂ ಪೊಲೀಸರು ಒಟ್ಟು 1352 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ಸುಮಾರು 6 ಕೋಟಿ ರೂಪಾಯಿ ಎನ್ನಲಾಗಿದೆ. ಬೆಂಗಳೂರಿನಲ್ಲಿ ಬಂಧಿಸಿದ್ದ ಸಿದ್ಧನಾಥ್ ಎಂದ ಆರೋಪಿ ನೀಡಿದ್ದ ಮಾಹಿತಿ ಆಧರಿಸಿ ಕಲಬುರ್ಗಿಗೆ ಬಂದ ಬೆಂಗಳೂರು ಪೊಲೀಸರು ಮೂರು-ನಾಲ್ಕು ದಿನ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ಗಾಂಜಾ ಖರೀದಿದಾರರ ವೇಷದಲ್ಲಿ ಆರೋಪಿಗಳನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ.

ಯಾವಾಗ ಆರೋಪಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎನ್ನೋದು ಖಾತ್ರಿಯಾಗುತ್ತಿದ್ದಂತೆಯೇ ಅವರ ವಾಸಿಸೋ ಮನೆ ಇತ್ಯಾದಿಗಳ ಮೇಲೆ ದಾಳಿ ಮಾಡಲಾಗಿದೆ. ಆದರೆ ಕುರಿಗಳ ಆಶ್ರಯಕ್ಕೆಂದು ನಿರ್ಮಿಸಿರೋ ಶೆಡ್ ನಲ್ಲಿ ಕೂಲಂಕುಷವಾಗಿ ಪರಿಶೀಲಿಸಿದಾಗ ಗಾಂಜಾ ಅಡಗಿಸಿಟ್ಟ ಸ್ಥಳ ಪತ್ತೆಯಾಗಿದೆ. ಭೂಮಿಯ ಆಳದಲ್ಲಿ ಹಗೇವು ನಿರ್ಮಿಸಿ, ಅಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು.

ಇದನ್ನೂ ಓದಿ: ಡ್ರಗ್ಸ್‌ ಮಾಫಿಯಾ: ನಟಿ ರಾಗಿಣಿಯಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಯತ್ನ!

ಲಕ್ಷ್ಮಣ ನಾಯಕ ತಾಂಡಾದ ಚಂದ್ರಕಾಂತ್ ಚವ್ಹಾಣ ಎಂಬಾತನಿಗೆ ಸೇರಿದ ಕುರಿದೊಡ್ಡಿಯಲ್ಲಿ ನೂರಾರು ಕೆ.ಜಿ. ಗಾಂಜಾ ಪತ್ತೆಯಾಗಿದೆ. ಒಂದೇ ಕಡೆ ಭೂಮಿಯಲ್ಲಿ 1200 ಕೆ.ಜಿ. ಗಾಂಜಾ ಅಡಗಿಸಿಡಲಾಗಿತ್ತು. ಹೀಗಾಗಿ ಗಾಂಜಾವನ್ನು ಜಪ್ತಿ ಮಾಡಿರುವ ಪೊಲೀಸರು ಹೊಲದ ಮಾಲೀಕ ಚಂದ್ರಕಾಂತ್ ಚವ್ಹಾಣ್ ಹಾಗೂ ನಾಗನಾಥ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಚಂದ್ರಕಾಂತ್ ಚವ್ಹಾಣ್ ಎಂಬ ವ್ಯಕ್ತಿ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತ ಎಂದು ಕಾಂಗ್ರೆಸ್‌ ರಾಜ್ಯ ಘಟಕ ಆರೋಪಿಸಿದೆ.

ಈ ಕುರಿತು ಪೋಟೋ ಸಮೇತ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, “ಕಲ್ಬುರ್ಗಿಯಲ್ಲಿ ವಶಪಡಿಸಿಕೊಂಡ 1,200ಕೆಜಿ ಗಾಂಜಾ ಪ್ರಕರಣದ ಪ್ರಮುಖ ಆರೋಪಿ ಬಿಜಪಿಯ ಕಾರ್ಯಕರ್ತ. ಡ್ರಗ್ಸ್, ಗಾಂಜಾ ಮುಂತಾದ ಅಕ್ರಮ ಚಟುವಟಿಕೆಗಳ ತಾಣವಾದ ಬಿಜೆಪಿ “ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಮೆತ್ತಿದಂತೆ” ಎಂಬ ಗಾದೆ ಮಾತಿನಂತೆ ಅನ್ಯರತ್ತ ಹುಸಿ ಆರೋಪ ಮಾಡಿ ತಮ್ಮ ಮಾನ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ” ಎಂದು ಕಿಡಿಕಾರಿದೆ.

ಈ ಹಿಂದೆ ನಗರದ ಪ್ರಮುಖ ಡ್ರಗ್ ಪೆಡ್ಲರ್‌ ಹಾಗೂ ಚಿತ್ರ ನಟಿ ರಾಗಿಣಿ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದಾಗಲೂ ಸಹ ಕಾಂಗ್ರೆಸ್‌ ಘಟಕ ಬಿಜೆಪಿ ನಾಯಕರ ಜೊತೆಗೆ ಈ ಡ್ರಗ್ಸ್‌ ಪೆಡ್ಲರ್‌ಗಳು ಕಾಣಿಸಿಕೊಂಡಿದ್ದ ಪೊಟೋಗಳನ್ನು ಟ್ವೀಟ್‌ ಮಾಡುವ ಮೂಲಕ ಡ್ರಗ್ಸ್‌ ದಂಧೆಕೋರರಿಗೂ ಬಿಜೆಪಿ ನಾಯಕರಿಗೂ ಇರುವ ಸಂಬಂಧ ಏನು? ಎಂದು ಕಟುವಾಗಿ ಪ್ರಶ್ನಿಸಿತ್ತು.


ಇದನ್ನೂ ಓದಿ: ಡ್ರಗ್ಸ್ ಮಾಫಿಯಾ : ಎನ್‌ಸಿಬಿ ವಿಚಾರಣೆಯಲ್ಲಿ ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್, ಮುಖೇಶ್ ಛಾಬ್ರಾ ಹೆಸರೇಳಿದ ರಿಯಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights