ಶಿರಾ ಬೈ ಎಲೆಕ್ಷನ್‌: ಜಯಚಂದ್ರ ಮತ್ತು ರಾಜಣ್ಣ ನಡುವೆ ಟಿಕೆಟ್‌ ಫೈಟ್‌; ಕಾಂಗ್ರೆಸ್‌ಗೆ ತಲೆನೋವು!

ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ತಲೆನೊವಾಗಿ ಪರಿಣಮಿಸಿದೆ. ಜೆಡಿಎಸ್‌ನ ಸತ್ಯನಾರಾಯಣ ಅವರ ಅಕಾಲಿಕ ಸಾವಿನಿಂದ ತೆರವಾಗಿರುವ ಕ್ಷೇತ್ರಕ್ಕೆ ನವೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್‌ಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿ ನಿಂತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದ ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ಟಿಬಿ ಜಯಚಂದ್ರ ಮತ್ತು ಮಧುಗಿರಿಯ ಮಾಜಿ ಶಾಸಕ ರಾಜಣ್ಣ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಶಿರಾ ಕ್ಷೇತ್ರವನ್ನು ಸಾಕಷ್ಟು ಬಾರಿ ಪ್ರತಿನಿಧಿಸಿರುವ ಜಯಚಂದ್ರ ಅವರಿಗೆ ಟಿಕೆಟ್ ನಿರಾಕರಿಸಲು ಯಾವುದೇ ಕಾರಣಗಳಿಲ್ಲ. ಆದರೆ ರಾಜಕೀಯ ನೆಲೆ ಮರುಸ್ಥಾಪನೆ ದೃಷ್ಟಿಯಿಂದ ರಾಜಣ್ಣ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ಧರಾಮಯ್ಯ ಜೊತೆ ಭಾನುವಾರ ಸುದೀರ್ಘ ಚರ್ಚೆ ನಡೆಸಿದ್ದರು. ಟಿಕೆಟ್ ಆಕಾಂಕ್ಷಿಗಳನ್ನು ಒಂದೆಡೆ ಸೇರಿಸಿ ಪರಿಸ್ಥಿತಿ ಮನವರಿಕೆ ಮಾಡಿಕೊಡುವ ಬಗ್ಗೆ ಈ ಮಾತುಕತೆಯಲ್ಲಿ ನಿಶ್ಕರ್ಷೆಯಾಗಿತ್ತು.

ಇವರಿಬ್ಬರನ್ನು ಕರೆದು ಸಂಧಾನ ಮಾಡಿಸುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ನಡೆದಿದೆ. ಅದಕ್ಕೆ ಪೂರ್ವಭಾವಿ ಎಂಬಂತೆ ರಾಜಣ್ಣ ಅವರು ಸೋಮವಾರ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‍ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆ ಪುನರುಚ್ಛರಿಸಿದ್ದಾರೆ.

ಒಂದು ವೇಳೆ ಜಯಚಂದ್ರ ಅವರಿಗೇ ಮಣೆ ಹಾಕಿದರೇ ಹೊಂಚು ಹಾಕಿ ಕಾದು ಕುಳಿತಿರುವ ಬಿಜೆಪಿಯು ರಾಜಣ್ಣ ಅವರನ್ನು ತನ್ನತ್ತ ಸೆಳೆದುಕೊಂಡು ಕಣಕ್ಕಿಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ಮಧ್ಯೆ ಸತ್ಯನಾರಾಯಣ ಅವರ ಪುತ್ರ ಅಥವಾ ಸಂಬಂಧಿಯನ್ನು ಕಣಕ್ಕಿಳಿಸಿ ಅನುಕಂಪದ ಮತಗಳನ್ನು ತನ್ನದಾಗಿಸಿಕೊಳ್ಳುವತ್ತ ಜಾತ್ಯತೀತ ಜನತಾ ದಳವು ಮನಸ್ಸು ಮಾಡಿದೆ.


ಇದನ್ನೂ ಓದಿ: ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳು ಖಾಲಿ; ಯಾವಾಗ ಇವುಗಳ ಭರ್ತಿ

Leave a Reply

Your email address will not be published. Required fields are marked *