ಭಾರತದ ಭೂಭಾಗವನ್ನು ತನ್ನ ನಕ್ಷೆಯಲ್ಲಿ ಸೇರಿಸಿಕೊಂಡಿರುವ ಪಾಕಿಸ್ಥಾನ: SCO ಸಭೆಯಿಂದ ಹೊರನಡೆದ ಭಾರತ!

ಜಮ್ಮುಕಾಶ್ಮೀರದ ಕೆಲವು ಪ್ರದೇಶವನ್ನು ಪಾಕಿಸ್ತಾನವು ತನ್ನ ನಕ್ಷೆಯಲ್ಲಿ ಪಾಕಿಸ್ತಾನದ ವಿವಾದಿತ ಭೂಪ್ರದೇಶ ಎಂದು ಸೇರಿಸಿ ಹೊಸ ನಕ್ಷೆ ತಯಾರಿಸಿರುವುದನ್ನು ವಿರೋಧಿಸಿ, ಭಾರತ ಸರ್ಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಂಗಳವಾರ ಶಾಂಘೈ ಸಹಕಾರ ಸಂಸ್ಥೆ (SCO)ಯ ವರ್ಚುವಲ್ ಸಭೆಯಿಂದ ಹೊರಬಂದಿದ್ದಾರೆ.

SCO ಅಧ್ಯಕ್ಷ ಸ್ಥಾನದಲ್ಲಿರುವ ರಷ್ಯಾ ಆಯೋಜಿಸಿದ್ದ SCO ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ(NSAs) ಸಭೆಯಲ್ಲಿ ಪಾಕಿಸ್ತಾನ ಉದ್ದೇಶಪೂರ್ವಕವಾಗಿ ವಿವಾದಾತ್ಮಕವಾದ ಕಾಲ್ಪನಿಕ ನಕ್ಷೆಯನ್ನು ತಯಾರಿಸಿದೆ ಎಂದು ಸಭೆಯ ಬಳಿಕ ನಡೆದ ಸುದ್ಧಿಗೋಷ್ಟಿಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದರು.

ಈ ಅಕ್ರಮ ನಕ್ಷೆಯನ್ನು ಪಾಕಿಸ್ತಾನ ಬಳಸುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪಾಕಿಸ್ತಾನವನ್ನು ಮನವೊಲಿಸಲು ರಷ್ಯಾ ಪ್ರಯತ್ನಿಸಿತು ಎಂದು ಮೂಲಗಳು ತಿಳಿಸಿರುವುದಾಗಿ ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.

ಪಾಕಿಸ್ತಾನದ ಕ್ರಮವು ಆತಿಥೇಯರ ವಿರುದ್ಧದ ಸಲಹೆಯನ್ನು ನಿರ್ಲಕ್ಷಿಸಿ ಮತ್ತು ಸಭೆಯ ಮಾನದಂಡಗಳನ್ನು ಉಲ್ಲಂಘಿಸಿದೆ. ಆತಿಥೇಯರೊಂದಿಗೆ ಸಮಾಲೋಚಿಸಿದ ನಂತರ, ಭಾರತೀಯ NSA ಆ ಸಂದರ್ಭದಲ್ಲಿ ಪ್ರತಿಭಟಿಸಿ ಸಭೆಯಿಂದ ಹೊರಬಂದರು ಎಂದು ಶ್ರೀವಾಸ್ತವ ಹೇಳಿದರು.

ಪಾಕಿಸ್ತಾನದ ಈ ಕೃತ್ಯವನ್ನು ಬೆಂಬಲಿಸುವುದಿಲ್ಲ ಮತ್ತು ಇಸ್ಲಾಮಾಬಾದ್‌ನ ಪ್ರಚೋದನಕಾರಿ ಕೃತ್ಯವು SCO ದಲ್ಲಿ ಭಾರತದ ಭಾಗವಹಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆಶಿಸುತ್ತಿದೆ ಎಂದು ರಷ್ಯಾದ ಮೂಲಗಳು ದೋವಲ್‌ಗೆ ತಿಳಿಸಿವೆ.

SCO ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ದೋವಲ್‌ಗೆ ವೈಯಕ್ತಿಕವಾಗಿ ತುಂಬಾ ಕೃತಜ್ಞರಾಗಿರುವುದಾಗಿ ರಷ್ಯಾದ ಒಕ್ಕೂಟದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ಭಾರತದ ಭೂಭಾಗವನ್ನು ತನ್ನ ನಕ್ಷೆಗೆ ಸೇರಿಸಿಕೊಳ್ಳಲು ಮಸೂದೆ ಮಂಡಿಸಿದ ನೇಪಾಳ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights