ಮುಸ್ಲಿಮರ ವಿರುದ್ಧ ‘UPSC ಜಿಹಾದ್‌’ ಕಾರ್ಯಕ್ರಮ; ಪ್ರಸಾರಕ್ಕೆ ತಡೆಯೊಡ್ಡಿದ ಸುಪ್ರೀಂ ಕೋರ್ಟ್‌

ಬಲಪಂಥೀಯ ಮತ್ತು ಮುಸ್ಲೀಂ ವಿರೋಧಿ ನಿಲುವುಳ್ಳ ಸುದರ್ಶನ್‌ ಸುದ್ದಿವಾಹಿನಿಯು ಯುಪಿಎಸ್‌ಸಿ ಸೇವೆಗಳನ್ನು ಮುಸ್ಲೀಮರು ಆಕ್ರಮಣ ಮಾಡಿಕೊಳ್ಳುತ್ತಿದ್ದಾರೆ ಎಂದು UPSC ಪಾಸು ಮಾಡಿದ್ದ ಜಾಮಿಯಾ ಯುನಿವರ್ಸಿಟಿ ವಿದ್ಯಾರ್ಥಿಗಳ ವಿರುದ್ಧ “ಯುಸಿಎಸ್‌ಸಿ ಜಿಹಾದ್” ಎಂಬ ಟೈಟಲ್‌ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡಲು ಮುಂದಾಗಿತ್ತು. ಈ ಕಾರ್ಯಕ್ರಮದ ಪ್ರಸಾರ ಮಾಡದಂತೆ ಸುಪ್ರೀಂ ಕೋರ್ಟ್‌ ತಡೆಯೊಡ್ಡಿದ್ದು, ಇದು ಸಮುದಾಯವನ್ನು ಕೆಣಕುವ ಪ್ರಯತ್ನವೆಂದು ಆಕ್ರೋಶ ವ್ಯಕ್ತಪಡಿಸಿ, ಕಾರ್ಯಕ್ರಮವನ್ನು “ರೋಗಗ್ರಸ್ಥ” ಎಂದು ಕರೆದಿದೆ.

ಸುಪ್ರೀಂ ಕೋರ್ಟ್, “ಒಂದು ಸಮುದಾಯವನ್ನು ಗುರಿಯಾಗಿಸಲು ಮತ್ತು ನಿರ್ದಿಷ್ಟ ರೀತಿಯಲ್ಲಿ ಬ್ರಾಂಡ್ ಮಾಡಲು ಸಾಧ್ಯವಿಲ್ಲ” ಎಂದು ಸುದರ್ಶನ್ ಟಿವಿ‌ಗೆ ಹೇಳಿದೆ.

ಸಮುದಾಯವನ್ನು ಗುರಿಯಾಗಿಸಲು, ಪ್ರತಿಷ್ಠೆಯನ್ನು ಹಾಳುಮಾಡಲು, ವ್ಯಕ್ತಿತ್ವಕ್ಕೆ ಮಸಿಬಳಿಯುವಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಪಾಲು ದೊಡ್ಡದಾಗಿದೆ ಎಂದು, ಪ್ರಕರಣದ ವಾದಗಳ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ವಿಚಾರಣೆಯ ಸಂಧರ್ಭ ನ್ಯಾಯಾಧೀಶರೊಬ್ಬರು “ಎಲೆಕ್ಟ್ರಾನಿಕ್ ಮಾಧ್ಯಮದ ಸಮಸ್ಯೆ ಟಿಆರ್‌ಪಿಗಳದ್ದೇ ಆಗಿದೆ, ಇದು ಹೆಚ್ಚು ಹೆಚ್ಚು ಉದ್ರೇಕಗೊಳಿಸಿ ಜನರ ಪ್ರತಿಷ್ಠೆಯನ್ನು ಹಾಳು ಮಾಡುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಮೂರು ನ್ಯಾಯಾಧೀಶರ ಪೀಠವು ಐದು ಗಣ್ಯ ನಾಗರಿಕರ ಸಮಿತಿಯು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಮಾನದಂಡಗಳನ್ನು ತರಲು ಕರೆ ನೀಡಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಈಗಾಗಲೇ ನಿಯಮಗಳು ಜಾರಿಯಲ್ಲಿವೆ ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, “ನಿಜವಾಗಿಯೂ ಇದೆಯೆ? ಎಲ್ಲವೂ ಉತ್ಕೃಷ್ಟವಾಗಿ ನಡೆಯುತ್ತಿದ್ದರೆ ನಾವು ಟಿವಿಯಲ್ಲಿ ಪ್ರತಿದಿನ ನೋಡುವುದನ್ನು ನೋಡಬೇಕಾಗಿರಲಿಲ್ಲ” ಎಂದು ಚಾಟಿ ಬೀಸಿದ್ದಾರೆ.

ಸುದರ್ಶನ್ ಟಿವಿಯ ಕಾರ್ಯಕ್ರಮವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ, ಆಂಕರ್‌ನ ಸಂಕಟವೇನೆಂದರೆ, ಒಂದು ನಿರ್ದಿಷ್ಟ ಗುಂಪು ನಾಗರಿಕ ಸೇವೆಗಳಿಗೆ ಪ್ರವೇಶ ಪಡೆಯುತ್ತಿದೆ ಎಂಬುವುದಾಗಿದೆ ಎಂದು ಹೇಳಿದರು.

“ಇದು ಎಷ್ಟು ಕಪಟತನದಿಂದ ಕೂಡಿದೆ? ಇಂತಹ ಕಪಟ ಆರೋಪಗಳು ಯುಪಿಎಸ್ಸಿ ಪರೀಕ್ಷೆಗಳ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುತ್ತದೆ. ಇವುಗಳೆಲ್ಲವೂ ವಾಸ್ತವಿಕ ಆಧಾರವಿಲ್ಲದೆ ಆರೋಪಗಳು, ಇದನ್ನು ಹೇಗೆ ಅನುಮತಿಸಬಹುದು? ಮುಕ್ತ ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳನ್ನು ಅನುಮತಿಸಬಹುದೇ” ಎಂದು ನ್ಯಾಯಾಮೂರ್ತಿ ಹೇಳಿದರು.

ಸುದರ್ಶನ್ ಟಿವಿ ವಕೀಲ ಶ್ಯಾಮ್ ದಿವಾನ್ ಅವರನ್ನು ಉದ್ದೇಶಿಸಿ “ನಿಮ್ಮ ಕಕ್ಷಿದಾರ ರಾಷ್ಟ್ರಕ್ಕೆ ಅಪಚಾರ ಮಾಡುತ್ತಿದ್ದಾರೆ. ವೈವಿಧ್ಯಮಯ ಸಂಸ್ಕೃತಿಯ ಸ್ಥಳವಾದ ಭಾರತವನ್ನು ಸ್ವೀಕರಿಸುತ್ತಿಲ್ಲ. ನಿಮ್ಮ ಕಕ್ಷಿದಾರ ತನ್ನ ಸ್ವಾತಂತ್ರ್ಯವನ್ನು ಎಚ್ಚರಿಕೆಯಿಂದ ಚಲಾಯಿಸಬೇಕಾಗಿದೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಸುದರ್ಶನ ಟಿವಿಯ ಸುರೇಶ್ ಚಾವಂಕೆ ಆಗಸ್ಟ್ 25 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್‌ಗೆ ಟ್ಯಾಗ್ ಮಾಡಿ ವಿವಾದಾತ್ಮಕ ಪ್ರೋಮೋವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ಭಾರತೀಯ ಅಧಿಕಾರಶಾಹಿಯಲ್ಲಿ ಮುಸ್ಲಿಮರ ನುಸುಳುಕೋರತನ ಎಂದು ಕರೆದು, ಮುಸ್ಲಿಮರು ಪ್ರತಿಷ್ಠಿತ ನಾಗರಿಕ ಸೇವೆಗಳ ಪರೀಕ್ಷೆಯನ್ನು ಭಾರಿ ಸಂಖ್ಯೆಯಲ್ಲಿ ಹೇಗೆ ಉತ್ತೀರ್ಣರಾಗುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ. ಅವರು ಜಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ವಿದ್ಯಾರ್ಥಿಗಳನ್ನು “ಜಿಹಾದಿಸ್ ಆಫ್ ಜಾಮಿಯಾ” ಎಂದು ಉಲ್ಲೇಖಿಸಿ, ‘ಯುಪಿಎಸ್‌ಸಿ ಜಿಹಾದ್’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಕೂಡಾ ಬಳಸಿದ್ದರು.

ಇದನ್ನು ವಿರೋಧಿಸಿ ಮಾಜಿ ನಾಗರೀಕ ಸೇವಾ ಅಧಿಕಾರಿಗಳ ಗುಂಪಾದ “ಕಾನ್ಸ್ಟ್ಯೂಷನಲ್ ಕಂಡಕ್ಟ್” ಕಾರ್ಯಕ್ರಮವು ಧ್ವೇಷ ಕಾರುವ ವ್ಯಾಪ್ತಿಯಲ್ಲಿದ್ದು ಆದ್ದರಿಂದ ಹಸ್ತಕ್ಷೇಪ ನಡೆಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.


ಇದನ್ನೂ ಓದಿ: IAS ಜಿಹಾದ್:’ UPSC ಸೇವೆಗಳಲ್ಲಿ ಮುಸ್ಲಿಮರ ಆಕ್ರಮಣ’ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ನೀಡಿದ ಬಿಜೆಪಿ ಸರ್ಕಾರ

Leave a Reply

Your email address will not be published. Required fields are marked *