ಸುಗಂಧಿ ಬೇರು-16: ‘ಜೀವಯಾನ’ : ನೆಲದಲ್ಲಿ ಬೇರಿದ್ದರೂ ಲೋಕಕ್ಕೆ ನೆರಳಾಗದ ಕಾವ್ಯ

ಆಧುನಿಕ ಕನ್ನಡ ಕಾವ್ಯ ಲೋಕದಲ್ಲಿ ತಮ್ಮದೇ ದಾರಿಯನ್ನು ಕಂಡುಕೊಂಡಿದ್ದ ಎಸ್. ಮಂಜುನಾಥ್‌ರವರು ಜನವರಿ 31, 2017ರಂದು ಅಕಾಲಿಕ ಮರಣಕ್ಕೆ ತುತ್ತಾದಾಗ ಅವರಿಗೆ ಐವತ್ತೇಳು ವರ್ಷವಾಗಿತ್ತು. ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿ ಜನಿಸಿದ ಮಂಜುನಾಥ್‌ರವರು ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕೆ ಆರ್ ನಗರದ ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ನೌಕರರಾಗಿದ್ದ ಅವರಿಗೆ ಕಾವ್ಯವೆಂದರೆ ಉತ್ಕಟವಾದ ವ್ಯಾಮೋಹ; ಕಾವ್ಯವೇ ಮೊದಲ ಹಾಗೂ ಕೊನೆಯ ಆಯ್ಕೆಯಾಗಿತ್ತು. ಮಂಜುನಾಥ್‌ರವರ ‘ಹಕ್ಕಿ ಪಲ್ಟಿ’, ‘ಬಾಹುಬಲಿ’, ‘ನಂದಬಟ್ಟಲು’, ‘ಮೌನದ ಮಣಿ’, ‘ಕಲ್ಲ ಪಾರಿವಾಳಗಳ ಬೇಟ’, ‘ಮಗಳು ಸೃಜಿಸಿದ ಸಮುದ್ರ’, ‘ಜೀವಯಾನ’ ಹಾಗೂ ಇನ್ನೂ ಕೆಲವು ಕವನ ಸಂಕಲನಗಳು ಪ್ರಕಟವಾಗಿವೆ. ಇವುಗಳಲ್ಲಿ ಅಂಕಿತ ಪ್ರಕಾಶನದಿಂದ ಪ್ರಕಟವಾದ ‘ಜೀವಯಾನ’ (2009) ಸಂಕಲನವು ಅವರಿಗೆ ಅತ್ಯಂತ ಪ್ರಿಯವಾಗಿತ್ತು; ಇದು ತಮ್ಮ ಕಾವ್ಯಯಾನದ ಮುಖ್ಯ ಘಟ್ಟವೆಂಬ ನಂಬಿಕೆಯು ಬಲವಾಗಿತ್ತು; ತಮ್ಮನ್ನು ‘ಜೀವಯಾನ’ದ ಮಂಜುನಾಥ್ ಎಂದೇ ಕರೆದುಕೊಳ್ಳಲು ಬಯಸುತ್ತಿದ್ದರು.

‘ಜೀವಯಾನ’ ಸಂಕಲನದ ಕವಿತೆಗಳ ಓದು ಆಪ್ತವಾದ ಅನುಭೂತಿಯನ್ನು ನೀಡುತ್ತದೆ. ಈ ಕವಿತೆಗಳಲ್ಲಿ ಹುದಿಗಿರುವ ಭಾವವು ಭೋರ್ಗರೆಯುವ ಸಮುದ್ರದ ಅಲೆಗಳಂತಲ್ಲ; ರಭಸದಿಂದ ಚಿಮ್ಮುವ ಕಡಲ ಅಲೆಗಳು ಒಮ್ಮೆಲೇ ಮೈಮನಸ್ಸನ್ನು ತೋಯಿಸಿ ತೊಪ್ಪೆಯಾಗಿಸುತ್ತವೆ; ಆದರೆ ಈ ಕವಿತೆಗಳು ಸರೋವರದ ಅಲೆಗಳಂತೆ ನಿಧಾನವಾಗಿಯೇ ಓದುಗರ ಅಂತರಾಳಕ್ಕೆ ಇಳಿದುಕೊಂಡು ಮೈಮನವನ್ನು ಆವರಿಸಿಕೊಳ್ಳುತ್ತವೆ. ಇದರಿಂದಾಗಿ ಕವಿತೆಗಳ ಉತ್ಕಟವಾದ ಸಂವೇದನೆಯ ಭಾವವು ಓದುಗರ ಅಂತರಂಗದ ಮೂಲೆ ಮೂಲೆಯನ್ನೂ ಕಲಕಿಬಿಡುತ್ತದೆ. ನನಗೂ ವೈಯಕ್ತಿಕವಾಗಿ ಈ ಕವಿತೆಗಳನ್ನು ಇಷ್ಟವಾಗಿವೆ. ಆಗಾಗ ಏಕಾಂತದಲ್ಲಿ ಓದಿ ಮೌನವಾಗಿದ್ದೇನೆ.

‘ಜೀವಯಾನ’ ಸಂಕಲನದ ಕವಿತೆಗಳನ್ನು ಒಳಗಿನಿಂದಲೇ ಗುದ್ದಿಕೊಂಡು ಬರುವ ನೆನಪುಗಳಿಂದಲೇ ಬರೆಯಲಾಗಿದೆ. ಮನುಷ್ಯ ಯಾವುದರಿಂದ ತಪ್ಪಿಸಿಕೊಂಡರೂ ತನ್ನ ನೆನಪುಗಳಿಂದ ತಪ್ಪಿಸಿಕೊಳ್ಳಲಾಗದು. ಇಲ್ಲಿಯ ಕವಿತೆಗಳ ನಿರೂಪಕ ಕಳೆದು ಹೋದ ತನ್ನ ಬದುಕಿನ ಘಟನೆಗಳನ್ನು ಮತ್ತೆ ಮತ್ತೆ ಮರು ನೆನಪಿಸಿಕೊಳ್ಳುವುದನ್ನು ಕಾಣುತ್ತೇವೆ. ಬಾಲ್ಯದ ನೆನಪುಗಳಿಗೆ ಮರಳುವುದೇ ಈ ಕವಿತೆಗಳ ಪ್ರಧಾನ ಲಕ್ಷಣವಾಗಿದೆ. ಆದ್ದರಿಂದ ‘ಜೀವಯಾನ’ದ ಕವಿತೆಗಳು ನೆನಪುಗಳನ್ನು ನೆರಳನ್ನಾಗಿಸಿಕೊಳ್ಳುವ ಚಿತ್ರಣಗಳಿಂದ ತುಂಬಿ ಹೋಗಿವೆ. ಕವಿತೆಗಳ ನಿರೂಪಕನಿಗೆ ತನ್ನ ಬಾಲ್ಯದಲ್ಲಿ ಅನುಭವಿಸಿದ ಹಸಿವು, ಬಡತನ, ಒಂಟಿತನ, ತಬ್ಬಲಿತನ ಹಾಗೂ ಅನಾಥಪ್ರಜ್ಞೆ – ಇವುಗಳ ಬಗ್ಗೆ ಇನ್ನಿಲ್ಲದ ವಿಷಾದನೀಯ ಭಾವವಿದೆ. ಇದರ ಜೊತೆಯಲ್ಲಿ ತಾಯ್ತತನದಿಂದ ಪೊರೆಯುವ ಜೀವ ಶಕ್ತಿಯ ಬಗ್ಗೆ ಅಗಾಧವಾದ ಅಭಿಮಾನವಿದೆ; ಅದು ತಾಯಿಯೇ ಆಗಬೇಕೆಂದಿಲ್ಲ; ಹಸಿವನ್ನು ನೀಗಿಸಿ ಪೊರೆಯುವ ಸಂಗೋಪನೆಯ ತುಡಿತವಿರುವ ಅಕ್ಕ, ಮಗಳು – ಯಾರು ಬೇಕಾದರೂ ಆಗಬಹುದು. ಮಂಜುನಾಥ್‌ರು ತಮ್ಮ ಕಣ್ಣಳತೆಗಷ್ಟೇ ದಕ್ಕಿದ್ದನ್ನು ಕಲಾತ್ಮಕವಾಗಿ ಹಾಗೂ ಸಮರ್ಥವಾಗಿಯೇ ಕಾವ್ಯದ ಆಕಾರವನ್ನು ನೀಡಬಲ್ಲರು ಎಂಬುದಕ್ಕೆ ಇಲ್ಲಿಯ ಕವಿತೆಗಳು ಅತ್ಯುತ್ತಮ ನಿದರ್ಶನಗಳಾಗಿವೆ. ಆದರೆ ಕವಿಯ ಕಣ್ಣೋಟವು ಕೌಟುಂಬಿಕ ಚೌಕಟ್ಟಿನೊಳಗೆ ನಿರ್ದಿಷ್ಟವಾದ ಸಂಗತಿಗಳ ಸುತ್ತವೇ ಗಿರಕಿ ಹೊಡೆಯುವುದನ್ನು ಗಮನಿಸಬಹುದು. ವೈಯಕ್ತಿಕತೆಯನ್ನು ಮೀರಿ ಲೋಕದ ಸಾಮಾಜಿಕ ಆಯಾಮಗಳಿಗೆ ಚಾಚಿಕೊಳ್ಳದಿರುವುದೇ ಕವಿತೆಗಳ ದೊಡ್ಡ ಮಿತಿಯಾಗಿದೆ.

‘ಜೀವಯಾನ’ದಲ್ಲಿ ನೋಡಿರದ ತಾಯಿಯನ್ನು ಕಾಣುವ ಹಂಬಲವು ಉತ್ಕಟವಾಗಿದೆ. ‘ಎಲ್ಲಿ ಹೋದಳು ಅಮ್ಮ ಹೇಳೆ ಅಕ್ಕಯ್ಯ| ಬೊಗಸೆಯಿಂದಲಿ ಬಿದ್ದು ಕಡಲಾದಳೆ| ಹೇಗಿದ್ದಳು ಅವಳು ಹೇಳೆ ಅಕ್ಕಯ್ಯ| ಯಾವ ಮುಖದಲ್ಲೀಗ ಅವಳ ಚಹರೆ|’ ಎನ್ನುವಲ್ಲಿ ತಾಯಿಯ ಹುಡುಕಾಟವು ತೀವ್ರವಾಗಿದೆ. ಇಲ್ಲದ ತಾಯಿಯ ವಾತ್ಸಲ್ಯವನ್ನು ತಮ್ಮ ಕುಟುಂಬದಲ್ಲಿಯೇ ಕಂಡುಕೊಳ್ಳುವ ಹಂಬಲವಿದೆ. ‘ಮಗಳಲ್ಲದ ಮಗಳು ನೀನು ನನಗೆ| ತಾಯಿಯಲ್ಲದ ತಾಯಿ ನಾನು ನಿನಗೆ|’ ಎನ್ನುವುದರಲ್ಲಿ ಪರಸ್ಪರವಾಗಿ ತಾಯ್ತನದ ತಂತು ಆವರಿಸಿಕೊಳ್ಳುತ್ತದೆ. ಕಾವ್ಯದ ನಿರೂಪಕ ಪಡೆಯುವ ಜೀವನಪ್ರೀತಿಯನ್ನು ಪುನರ್ ಮರಳಿಸುವ ತವಕವಿದೆ. ‘ಉಸಿರ ಬಿಸುಪನೂದುವೆ ನಿನ್ನ ಜೀವಕ್ಕೆ| ನನ್ನ ಸಾರವನೆ ಗಂಜಿ ಮಾಡಿ ಎರೆಯುವೆ…|’ ಎನ್ನುವ ಸಾಲುಗಳಲ್ಲಿ ನಿರೂಪಕನೇ ತಾಯಿಯಾಗಿ ಪೊರೆಯುವ ಚೈತನ್ಯವಾಗುತ್ತಾನೆ. ಸದರಿ ಸಂಕಲನದುದ್ದಕ್ಕೂ ಇಂತಹ ತಾಯ್ತನದ ಜೀವಯಾನವು ಚಿರಂತನವಾಗಿದೆ.

‘ಜೀವಯಾನ’ದ ಕವಿತೆಗಳಲ್ಲಿ ನಿರೂಪಕನ ಸಂದು ಹೋದ ಜೀವನದ ಪಯಣವಿದೆ. ಈ ಬಾಳ ಪಯಣದಲ್ಲಿ ದೀರ್ಘವಾದ ನಿಟ್ಟುಸಿರುಗಳಿವೆ; ನಿರಾಳತೆಯ ಜೊತೆಯಲ್ಲಿ ಕಾಯುವಿಕೆ, ಬೇಯುವಿಕೆ ಹಾಗೂ ಮಾಗುವಿಕೆಯ ಗುರುತುಗಳಿವೆ. ‘ಕುದ್ದದ್ದು ಗಂಜಿಮಾತ್ರವೆ ಅಲ್ಲ ಎನ್ನಿಸುವುದು| ಎಷ್ಟು ಬೆಂದಿರಬೇಕು ಎಷ್ಟು ನೊಂದಿರಬೇಕು| ಅಗುಳಾಗುತ್ತ ಪ್ರತಿ ಅಕ್ಕಿಕಾಳು|’ ಎನ್ನುವ ಸಾಲುಗಳು ಜೀವದ ಪಾಡನ್ನು ಹೇಳುತ್ತಿರುವುದು ಸ್ಪಷ್ಟವಾಗಿದೆ. ಮಂಜುನಾಥ್‌ರ ಕವಿತೆಗಳಲ್ಲಿ ಅಕ್ಕಿಕಾಳುಗಳ ಪ್ರಸ್ತಾಪವು ಹೇರಳವಾಗಿದೆ. ಆದರೆ ಅವರ ಕವಿತೆಗಳಲ್ಲಿ ಅಪ್ಪಿತಪ್ಪಿಯು ಕೂಡ ರಾಗಿ ಕಾಳುಗಳ ಪ್ರಸ್ತಾಪವಿಲ್ಲದಿರುವುದು ಸೋಜಿಗ ತರುತ್ತದೆ. ಯಾಕೆಂದರೆ ಅವರು ಬದುಕಿದ್ದ ಮೈಸೂರು ಭಾಗವು ಯಥೇಚ್ಚವಾಗಿ ರಾಗಿ ಬೆಳೆಯುವ ಪ್ರದೇಶವಾಗಿದೆ. ಮಂಜುನಾಥ್ ಅವರದ್ದು ಬಹಿರ್ಮುಖ ಪಯಣವಲ್ಲ; ಅದೇನೇ ಇದ್ದರೂ ಅವರದ್ದು ಅಂತರಮುಖಿ ಪಯಣವೇ ಆಗಿದೆ. ಈ ಮಾತಿಗೆ ಅವರ ಕವಿತೆಯೊಂದರ ‘ಊರಿಂದ ಊರಿಗೆ ಸಾಗುವುದಲ್ಲ, ಊರಿದ| ಬೇರಿನಗುಂಟ ಇಳಿಯುವುದು’ ಎಂಬ ಸಾಲುಗಳು ಸಾಕ್ಷಿಯಾಗಿವೆ. ಇದು ನೆಲದ ಸತ್ವವನ್ನು ಹೀರಿಕೊಂಡು ಸಹಜವಾಗಿ ಬೆಳೆಯುವ ಮರವನ್ನು ಸಂಕೇತಿಸುತ್ತದೆ. ಅವರಿಗೆ ಕವಿತೆಯು ಸಹ ಹೀಗೆ ಆಳವಾದ ಅನುಭವದಿಂದ ಒಡಮೂಡಬೇಕೆನ್ನುವ ಆಶಯವಿದೆ. ಈ ಪ್ರಕ್ರಿಯೆಯಲ್ಲಿ ಕವಿತೆಯು ಹೂವು ಅರಳುವಷ್ಟೇ ಸಹಜವಾಗಿರಬೇಕು ಎನ್ನುವ ಹಂಬಲವಿದೆ.

 

ಕಾವ್ಯವನ್ನು ಕಟ್ಟುವ ಕಲೆಯಲ್ಲಿ ಮಂಜುನಾಥ್‌ರವರು ಅಸಾಧಾರಣ ಕುಶಲತೆಯನ್ನು ಸಿದ್ಧಿಸಿಕೊಂಡಿದ್ದ ಕವಿ ಎಂಬುದು ಕಾವ್ಯಾಸಕ್ತರಿಗೆ ಗೊತ್ತಿರುವ ಸಂಗತಿಯಾಗಿದೆ. ಅವರು ತಮಗೆ ಕಂಡದ್ದನ್ನು ಕವಿತೆಯಲ್ಲಿ ಕಲಾತ್ಮಕವಾಗಿ ಹೆಣೆಯುವುದರಲ್ಲಿ ನಿಷ್ಣಾತರಾಗಿದ್ದರು. ಈ ವಿಷಯದಲ್ಲಿ ಮಂಜುನಾಥ್‌ರವರು ಜಗತ್ತಿನ ಶ್ರೇಷ್ಠ ಕವಿಗಳಾದ ರೈನರ್ ಮರಿಯಾ ರಿಲ್ಕ್ ಹಾಗೂ ಚಾರ್ಲ್ಸ್ ಬೋದಿಲೇರ್‌ನ ಕಾವ್ಯದಿಂದ ಪ್ರಭಾವಿತರಾಗಿದ್ದಾರೆ. ರಿಲ್ಕ್ ಕವಿಯು ಆಗಸ್ಟೆ ರೋಡಿನ್ ಎಂಬ ಪ್ರೆಂಚ್ ಶಿಲ್ಪಿಯ ಕಾರ್ಯದರ್ಶಿಯಾಗಿದ್ದಾಗ, ಆತ ಹೊರಗೆ ಹೋಗಿ ಕಣ್ಣಿಗೆ ಬೀಳುವ ವಸ್ತುಗಳನ್ನು ನೋಡು, ಅಧ್ಯಯನ ಮಾಡು ಎಂದು ಬೋಧಿಸಿದ. ಈ ಮಾತಿನಿಂದ ಪ್ರಭಾವಿತನಾದ ರಿಲ್ಕ್ ಕಣ್ಣಿಗೆ ಕಾಣುವ ವಸ್ತುಗಳ ಅಂತಸ್ಸತ್ವವವನ್ನು ಕಾವ್ಯದಲ್ಲಿ ಹಿಡಿದಿಡಲು ಪ್ರಯತ್ನಿಸಿದ. ಆಗ ರಿಲ್ಕ್ ತಾನು ಕಂಡ ಪ್ರಾಣಿ, ಹೂ, ಭೂದೃಶ್ಯ ಹಾಗೂ ಕಲಾಕೃತಿಗಳನ್ನು ಆಸ್ವಾದಿಸಿ ಅನುಭವಿಸಿದ್ದನ್ನು ವೈಯಕ್ತಿಕತೆಯ ಸ್ಪರ್ಶವಿಲ್ಲದ ಸಂಕೇತಗಳಾಗಿ ಪರಿವರ್ತಿಸಿ ಬರೆದ ಕವಿತೆಗಳ ಸಂಕಲನವೇ  ‘ನ್ಯೂ ಪೊಯೆಮ್ಸ್’ ಎಂದು ಡಾ. ಓ.ಎಲ್. ನಾಗಭೂಷಣಸ್ವಾಮಿಯವರು ತಮ್ಮ ಅನುವಾದಿತ ‘ಯುವ ಕವಿಗೆ ಬರೆದ ಪತ್ರಗಳು’ ಎಂಬ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಆದರೆ ರಿಲ್ಕ್ ನ ಕಾವ್ಯದಲ್ಲಿರುವ ಪ್ರತಿಮಾ ಸೃಷ್ಟಿ ಹಾಗೂ ರೂಪಕ ಶಕ್ತಿ ಮಂಜುನಾಥ್‌ರ ಕವಿತೆಗಳಲ್ಲಿಲ್ಲ. ಎಷ್ಟಾದರೂ ಕುಶಲತೆ ಎಂಬುದು ಕಾವ್ಯ ನಿರ್ಮಾಣದ ತಾಂತ್ರಿಕ ಸಂಗತಿಯಾಗಿದೆ; ಅದು ಕಾವ್ಯದ ಜೀವಾಳವಲ್ಲ.

ಮಂಜುನಾಥ್‌ರವರು ‘ಜೀವಯಾನ’ ಸಂಕಲನವನ್ನು “….‘ಸಖೀಗೀತ’ ಹಾಗೂ ‘ಮಲೆದೇಗುಲ’ಗಳ ಭಾವವನ್ನು ಮುಟ್ಟಿ ನಮಿಸಿ ಬರೆದೆ” ಎಂದು ಬರೆದುಕೊಂಡಿದ್ದಾರೆ. ಅವರಿಗೆ ಕನ್ನಡದ ಬೇಂದ್ರೆ ಹಾಗೂ ಪು.ತಿ.ನ. ಅತ್ಯಂತ ಮೆಚ್ಚಿನ ಕವಿಗಳಾಗಿದ್ದಾರೆ. ಆದರೆ ಬೇಂದ್ರೆ ಕಾವ್ಯದ ಲಯ, ಸ್ಪರ್ಶ, ಗಂಧ, ವಾಸನೆಯ ವಿವಿಧ ರೂಪಗಳು ಮಂಜುನಾಥ್‌ರ ಕಾವ್ಯವು ಒಳಗೊಳ್ಳಲಿಲ್ಲ. ಮಂಜುನಾಥ್‌ರು ತಮ್ಮ ಬದುಕನ್ನು ಕಟ್ಟಿಕೊಂಡದ್ದು ಮೈಸೂರು ಪ್ರದೇಶದಲ್ಲಿಯೇ ಎಂಬುದನ್ನು ಈ ಲೇಖನದ ಆರಂಭದಲ್ಲಿಯೇ ಪ್ರಸ್ತಾಪಿಸಲಾಗಿದೆ. ಅಲ್ಲಿಯೇ ಜೀವಿಸಿ ತಮ್ಮ ಕಾವ್ಯ ಹಾಗೂ ಸಾಹಿತ್ಯದ  ಮೂಲಕ ವಿಶ್ವಮಾನವ ಪ್ರಜ್ಞೆಯನ್ನು ರೂಪಿಸಿಕೊಂಡಿದ್ದ ಕುವೆಂಪು ಅವರ ಪ್ರಭಾವವು ಮಂಜುನಾಥ್‌ರ ಮೇಲೆ ಆಗದಿರುವುದು ವಿಚಿತ್ರವಾಗಿದೆ. ಮಂಜುನಾಥ್‌ರ ಕಾವ್ಯವು  ವ್ಯಕ್ತಿನಿಷ್ಠತೆ ಮತ್ತು ಕೌಟುಂಬಿಕ ನೆಲೆಯಲ್ಲಿಯೇ ಉಳಿದುಕೊಂಡಿತು. ಇದನ್ನು ದಾಟಿಕೊಂಡು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬಿಕ್ಕಟ್ಟುಗಳ ಕಡೆಗೆ ಚಲಿಸಲಿಲ್ಲ. ಅವರು ತನ್ನದಲ್ಲದ ಲೋಕದ ವೇದನೆಯನ್ನು ಸ್ಪರ್ಶಿಸಲಿಲ್ಲ. ತಮ್ಮ ಸುತ್ತ ತಾವೇ ವೃತ್ತವನ್ನು ಬರೆದುಕೊಂಡು, ಅದರಲ್ಲಿ ಕಂಡಷ್ಟನ್ನೇ ಕಾವ್ಯವನ್ನಾಗಿಸಿದರು. ಕಾವ್ಯಕ್ಕಾಗಿ ಕಾವ್ಯ, ಕಲೆಗಾಗಿ ಕಲೆ ಎನ್ನುವ ಧೋರಣೆಯೇ ಇದಕ್ಕೆ ಕಾರಣವಾಗಿರುವಂತೆ ತೋರುತ್ತದೆ.

ಮಂಜುನಾಥ್‌ರ ಸಮಗ್ರ ಕಾವ್ಯವು ‘ನೆಲದ ಬೇರು ನಭದ ಬಿಳಲು’ (೨೦೧೨) ಎಂಬ ಶೀರ್ಷಿಕೆಯಲ್ಲಿ ಅಂಕಿತ ಪ್ರಕಾಶನದಿಂದ ಹೊರ ಬಂದಿದೆ. ‘ನೆಲದ ಬೇರು ನಭದ ಬಿಳಲು’ ಇದರ ನಂತರದಲ್ಲಿಯೂ ಮಂಜುನಾಥ್‌ರ ಎರಡು ಕವನ ಸಂಕಲನಗಳು ಪ್ರಕಟವಾಗಿವೆ. ಈ ಸಂಕಲನದ ತಮ್ಮ ಮಾತುಗಳಲ್ಲಿ ಅವರು “ಲಂಬವಾದ್ದಕ್ಕಿಂತಲು ಸಮವಾದ್ದು, ತಾರಕಕ್ಕಿಂತಲು ಮಂದ್ರ, ವೇಗಕ್ಕಿಂತಲು ನಿಧಾನ, ದೊಡ್ಡ ಅಪೂರ್ಣತೆಗಿಂತ ಸಣ್ಣ ಅಪೂರ್ಣತೆ, ಎಲ್ಲಾ ಊಟಕ್ಕಿಂತಲು ನಮ್ಮ ಮನೆಯ ಊಟ, ಎಲ್ಲ ದೇವರಿಗಿಂತಲು ನಮ್ಮ ಮನೆಯ ಗೂಡೊಳಗಿನ ಪಟ-ಗೊಂಬೆ, ದೇವರ ಅತೀತತೆಗಿಂತಲು ಸರ್ವಾಂತರ‍್ಯಾಮಿತನ – ಇದೆಲ್ಲ ಪ್ರಿಯ. ನನಗೆ ಅತ್ಯಂತ ಪ್ರಿಯವಾದ ದೃಶ್ಯವೆಂದರೆ ಸುಲಭವಾಗಿ ನೋಡ ಸಿಗುವ ದಿಗಂತದ ದೀರ್ಘ ಗೆರೆ” ಎಂದು ಬರೆದುಕೊಂಡಿದ್ದಾರೆ. ಇದು ಮಂಜುನಾಥ್‌ರ ಜೀವನದ ನಿಲುವಷ್ಟೇ ಅಲ್ಲ; ಅವರ ಕಾವ್ಯದ ಧೋರಣೆಯು ಹೌದು. ಅವರ ಕಾವ್ಯದ ಬೇರುಗಳು ನೆಲದಾಳದಲ್ಲಿರುವುದು ನಿಜ. ಆದರೆ ಆ ಬೇರುಗಳ ಮೂಲಕ ಬೆಳೆಯುವ ಮರವು ಆಗಸದೆತ್ತರಕ್ಕೆ ಚಾಚಿಕೊಳ್ಳಲಿಲ್ಲ; ಸಂಕಷ್ಟಗಳಿಂದ ಬೇಯುವ ಲೋಕಕ್ಕೆ ನೆರಳಾಗಲಿಲ್ಲ.  ಈ ಮಾತುಗಳು ಅವರ ಒಟ್ಟಾರೆ ಕಾವ್ಯಕ್ಕೂ ಅನ್ವಯವಾಗುತ್ತದೆ. ಕಾವ್ಯದ ಸೌಂದರ್ಯವು ಅದರ ರಚನೆಯಲ್ಲಷ್ಟೇ ಇರುವುದಿಲ್ಲ; ಲೋಕದಲ್ಲಿ ಕಾಣುವ ವಿಸ್ಮಯ, ಬೆರಗು, ಚಮತ್ಕಾರಗಳನ್ನು ಕಾವ್ಯದ ಮೂಲಕ ಹೊರಹೊಮ್ಮಿಸುವುದು ಕೂಡ ಅತ್ಯುತ್ತಮ ಕಾವ್ಯ ಎನ್ನಿಸಿಕೊಳ್ಳದು; ಲೋಕದ ಸಂಕಟಗಳಿಗೆ ಕೊರಳಾಗದ ಕಾವ್ಯವು ಅದು ಎಷ್ಟೇ ಕಲಾತ್ಮಕತೆ ಹಾಗೂ ಸೌಂದರ್ಯಾತ್ಮಕತೆಯಿಂದ ಕೂಡಿದ್ದರೂ ಶ್ರೇಷ್ಠ ಕಾವ್ಯವಾಗದು.

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು [email protected][email protected]ಇಲ್ಲಿಗೆ ಬರೆಯಿರಿ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights