ಲಾಕ್‌ಡೌನ್‌: ಶ್ರಮಿಕ್‌ ರೈಲಿನಲ್ಲಿ ಸಾವನ್ನಪ್ಪಿದ ವಲಸೆ ಕಾರ್ಮಿಕರ ಅಂಕಿಅಂಶ ಬಿಡುಗಡೆ ಮಾಡಿದ ಕೇಂದ್ರ

ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಹೇರಲಾದ ಲಾಕ್‌ಡೌನ್‌ ಸಂದರ್ಭದಲ್ಲಿ  ಮೌಲಭೂತ ಸೌಕರ್ಯಗಳಿಲ್ಲದೆ ತಮ್ಮೂರು ಸೇರಲು ಹೊರಟು ಹಸಿವು, ಬಳಲಿಕೆಯಿಂದ ಸಾವನ್ನಪ್ಪಿದ್ದ ವಲಸೆ ಕಾರ್ಮಿಕರ ಅಂಕಿ-ಅಂಶವೇ ನಮ್ಮ ಬಳಿ ಇಲ್ಲವೆಂದು ಹೇಳಿ ತೀವ್ರ ಟೀಕೆಗೆ ಒಳಗಾಗಿದ್ದ ಕೇಂದ್ರ ಸರ್ಕಾರ, ಈಗ ಶ್ರಮಿಕ್ ರೈಲಿನಲ್ಲಿ ಸಾವನ್ನಪ್ಪಿದ ಕಾರ್ಮಿಕರ ಸಂಖ್ಯೆಯನ್ನು ಬಹಿರಂಗ ಪಡಿಸಿದೆ.
ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ರೈಲುಗಳ ಮೂಲಕ ಕಳಿಸುವ ಸಂದರ್ಭದಲ್ಲಿ ಶ್ರಮಿಕ್ ರೈಲುಗಳಲ್ಲಿ ಪ್ರಯಾಣ ಹೊರಟ್ಟಿದ್ದವರಲ್ಲಿ 97 ವಲಸೆ ಕಾರ್ಮಿಕರು ರೈಲಿನಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಸಂಸತ್‌ನಲ್ಲಿ ಮಾಹಿತಿ ನೀಡಿರುವ  ರೈಲ್ವೆ ಸಚಿವ ಪ್ರಿಯೂಶ್ ಗೋಯಲ್ ಅವರು ಸೆಪ್ಟೆಂಬರ್ 09, 2020ರ ವರೆಗೆ ಸುಮಾರು 97 ಮಂದಿ ಶ್ರಮಿಕ್‌ ರೈಲಿನಲ್ಲಿ ಸಾವನ್ನಪ್ಪಿದ್ದಾರೆ. ಅವರಲ್ಲಿ 87 ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈವರೆಗೆ ಒಟ್ಟು 51 ಮರಣೋತ್ತರ ವರದಿಗಳನ್ನು ಆಯಾ ರಾಜ್ಯ ಪೊಲೀಸ್ ಅಧಿಕಾರಿಗಳಿಂದ ಪಡೆಯಲಾಗಿದ್ದು, ಅದರಲ್ಲಿ ಹೆಚ್ಚಾಗಿ ಸಾವಿನ ಕಾರಣಗಳನ್ನು ಹೃದಯ ಸ್ತಂಭನ, ಹೃದಯ ಕಾಯಿಲೆ, ಮೆದುಳಿನ ರಕ್ತಸ್ರಾವ, ಮೊದಲೇ ಅಸ್ತಿತ್ವದಲ್ಲಿರುವ ದೀರ್ಘಕಾಲದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ದೀರ್ಘಕಾಲದ ಯಕೃತ್ತಿನ ಕಾಯಿಲೆಯಿಂದ ಎಂದು ಹೇಳಿದ್ದಾರೆ.
ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕರು ನೆಲೆ ಇಲ್ಲದೆ ತಮ್ಮ ತವರು ರಾಜ್ಯಗಳಿಗೆ ನಡೆದು ಹೊರಟ್ಟಿದ್ದರು. ಲಕ್ಷಾಂತರ ಜನರು ರಸ್ತೆಯಲ್ಲಿ ನಡೆಯಲು ಆರಂಭಿಸಿದ ನಂತರ, ಸಮಾಜದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಜನರ ಒತ್ತಡಕ್ಕೆ ಮಣಿದ ಸರ್ಕಾರ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ತಲುಪಿಸಲು ವಿಶೇಷ ಶ್ರಮಿಕ್ ರೈಲುಗಳನ್ನು ವ್ಯವಸ್ಥೆ ಮಾಡಿತ್ತು.
ಆದರೆ, ಧೀರ್ಘಕಾಲದ ಪ್ರಯಾಣದಲ್ಲಿ ಕಾರ್ಮಿಕರಿಗೆ ಬೇಕಿರುವ ಅಗತ್ಯ ಸೌಕರ್ಯಗಳನ್ನು (ಊಟ, ತಿಂಡಿ, ನೀರು) ರೈಲಿನಲ್ಲಿ ಒದಗಿಸಲಾಗಿರಲಿಲ್ಲ. ಹೀಗಾಗಿ ರೈಲಿನಲ್ಲಿ ಊಟವು ಸಿಗದೆ, ನೀರು ಸಿಗದೆ ಹಲವಾರು ಮಂದಿ ಸಾವನ್ನಪ್ಪಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights