ಜಾದವ್ ಪರ ವಾದಿಸಲು ಭಾರತೀಯ ವಕೀಲರನ್ನು ನೇಮಿಸಲು ಅವಕಾಶವಿಲ್ಲ: ಪಾಕಿಸ್ಥಾನ

ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾದವ್ ಅವರ ಪರವಾಗಿ ನ್ಯಾಯಯುತ ವಿಚಾರಣೆಯನ್ನು ನಡೆಸುವುದಕ್ಕಾಗಿ ಭಾರತೀಯ ವಕೀಲ ಅಥವಾ ಕ್ವೀನ್ ಕೌನ್ಸೆಲ್ ನೇಮಿಸಲು ಅವಕಾಶ ನೀಡಬೇಕು ಎಂದು ಭಾರತವು ಪಾಕಿಸ್ಥಾನಕ್ಕೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಯನ್ನು ತಿರಸ್ಕರಿಸಿರುವ ಪಾಕಿಸ್ತಾನ ಭಾರತೀಯ ವಕೀಲರ ನೇಮಕಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.

ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆಗೆ ಗುರಿಯಾದ ಜಾಧವ್ ಅವರ ಪರ ಪಾಕಿಸ್ತಾನದ ಹೊರಗಿನ ವಕೀಲರನ್ನು ಪ್ರತಿನಿಧಿಸಲು ಅವಕಾಶ ನೀಡುವ ಅವಾಸ್ತವಿಕ ಬೇಡಿಕೆಯನ್ನು ಇಡುತ್ತಲೇ ಬಂದಿದೆ ಎಂದು ಪಾಕಿಸ್ಥಾನದ ವಿದೇಶಾಂಗ ಕಚೇರಿ ವಕ್ತಾರ ಜಾಹಿದ್ ಹಫೀಜ್ ಚೌಧರಿ ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಕಾನೂನು ಅಭ್ಯಾಸ ಮಾಡಲು ಪರವಾನಗಿ ಹೊಂದಿರುವ ವಕೀಲರಿಗೆ ಮಾತ್ರವೇ ಪಾಕಿಸ್ತಾನದ ನ್ಯಾಯಾಲಯಗಳಲ್ಲಿ ಹಾಜರಾಗಲು ಅವಕಾಶವಿದೆ. ಇದನ್ನು ಈ ಮೊದಲೇ ಭಾರತಕ್ಕೆ ತಿಳಿಸಿದ್ದೇವೆ. ಈ ನಿಯಮ ಅಂತಾರಾಷ್ಟ್ರೀಯ ಕಾನೂನು ಅಭ್ಯಾಸಕ್ಕೆ ಅನುಗುಣವಾಗಿದೆ. ಈ ವಿಚಾರದಲ್ಲಿ ಯಾವುದೇ ಬದಲಾವಣೆಗಳಿಲ್ಲ’ ಎಂದು ಅವರು ಹೇಳಿದ್ದಾರೆ.

ಕುಲಭೂಷಣ್‌ ಜಾಧವ್‌ ಪರ ವಾದ ಮಂಡಿಸುವುದಕ್ಕಾಗಿ ವಕೀಲರನ್ನು ನೇಮಕ ಮಾಡಿಕೊಳ್ಳಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಪಾಕಿಸ್ತಾನ ಸರಕಾರಕ್ಕೆ ಅಲ್ಲಿನ ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ, ಪಾಕ್‌ ಸರಕಾರ ಇದಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ.

ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ವಿರುದ್ಧ ಪಾಕಿಸ್ತಾನವು ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪ ಹೊರಿಸಿ ಗಲ್ಲುಶಿಕ್ಷೆಗೆ ಗುರಿ ಪಡಿಸಿದೆ.


ಇದನ್ನೂ ಓದಿ: ಭಾರತೀಯ ನಿವೃತ್ತ ಸೇನಾಧಿಕಾರಿ ಜಾದವ್‌ಗೆ ಮರಣದಂಡನೆ; ಅಪ್ರಾಮಾಣಿಕತೆ ಮೆರೆಯುತ್ತಿದೆಯಾ ಪಾಕಿಸ್ತಾನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights