ಕೃಷಿ ಮಸೂದೆ: ರಾಜ್ಯಸಭೆಯಲ್ಲಿ ಗದ್ದಲ; ಒಂದು ವಾರದ ಕಾಲ 08 ರಾಜ್ಯಸಭಾ ಸದಸ್ಯರ ಅಮಾನತು!

ಕೃಷಿ ಮಸೂದೆ ವಿಚಾರವಾಗಿ ರಾಜ್ಯಸಭೆಯಲ್ಲಿ ಉಂಟಾದ ಗದ್ದಲದಿಂದಾಗಿ 08 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿರುವುದಾಗಿ  ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಹೇಳಿದ್ದಾರೆ.

ಕೃಷಿ ಮಸೂದೆಯ ಅಂಗೀಕಾರವನ್ನು ವಿರೋಧಿಸಿದ ವಿಪಕ್ಷಗಳು, ಮಸೂದೆಯ ಅಂಗೀಕಾರಕ್ಕೆ ಆಯ್ಕೆ ಸಮಿತಿಗೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ಸದನದಲ್ಲಿ ಗದ್ದಲ ಉಂಟಾಗಿತ್ತು. ಅಲ್ಲದೆ, ಉಪ ಸಭಾಪತಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಕಾರಣದಿಂದಾಗಿ ಕಲಾಪಕ್ಕೆ ಅಡ್ಡಿಯುಂಟಾಗಿದೆ ಎಂದು ಹೇಳಿರುವ ವೆಂಕಯ್ಯನಾಯ್ಡು, ಅಶಿಸ್ತಿನ ವರ್ತನೆ ಎಂದು ಆರೋಪಿಸಿ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್  ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಿದ್ದಾರೆ.

ರೈತರ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆಗಳ ವಿರುದ್ಧ ಬಹುಮತ ಸಾಧಿಸಲು ವಿಪಕ್ಷಗಳ ಸಂಖ್ಯಾ ಬಲ ಕಡಿಮೆ ಇದ್ದುದರಿಂದಾಗಿ, ಮಸೂದೆಯನ್ನು ಪರಿಶೀಲನಾ ಸಮಿತಿಗೆ ಕಳಿಸುವಂತೆ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು.

ಆದರೆ,  ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವ ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೂ ಧ್ವನಿಮತಕ್ಕೆ ಹಾಕುವುದಾಗಿ ಉಪ ಸಭಾಪತಿ ಹರಿವಂಶ ಸಿಂಗ್‌ ಪ್ರಕಟಿಸಿದ್ದು, ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಹಾಗಾಗಿ ಘೋಷಣೆ ಕೂಗುತ್ತ ಸಭಾಪತಿ ಪೀಠದತ್ತ ನುಗ್ಗಿದ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ನಾಯಕ ಡೆರೆಕ್‌ ಒಬ್ರಿಯಾನ್ ಸೇರಿದಂತೆ ಹಲವರು ರೂಲ್‌ ಬುಕ್‌ ಎತ್ತಿಕೊಂಡಡು, ಕೈಗೆ ಸಿಕ್ಕ ಮೈಕ್ರೊಫೋನ್‌ಗಳನ್ನು ಮುರಿದು ಹಾಕಿದ್ದಾರೆ. ಅಲ್ಲದೆ, ಕಾಗದದ ಚೂರುಗಳನ್ನು ಹರಿದು ತೂರಿದರು. ಟೇಬಲ್‌ಗಳ ಮೇಲೆ ಹತ್ತಿ ನಿಂತು ಘೋಷಣೆ ಕೂಗಿದ್ದಾರೆ. ಈ ಗದ್ದಲದ ನಡುವೆಯೂ ಧ್ವನಿ ಮತದ ಮೂಲಕ ಮಸೂದೆಯನ್ನು ರಾಜ್ಯಸಂಭೆಯಲ್ಲಿ ಅಂಗೀಕರಿಸಲಾಗಿದೆ.

ವಿರೋಧದ ನಡುವೆಯೇ ಆತುರದಲ್ಲಿ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿದ ಉಪ ಸಭಾಪತಿ ಹರಿವಂಶ‌ ವಿರುದ್ಧ ಅವಿಶ್ವಾಸ ಮಂಡಿಸುವುದಾಗಿ ವಿರೋಧ ಪಕ್ಷಗಳು ಹೇಳಿವೆ.

ಇದನ್ನೂ ಓದಿ: ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . . .

ಸರ್ಕಾರ ಈ ಮಸೂದೆಗಳಿಂದ ಯಾರಿಗೆ ಒಳಿತಾಗಲಿದೆ ಎಂದು ಹೇಳಿಕೊಳ್ಳುತ್ತಿದೆಯೋ ಅದೇ ರೈತರು ಬೀದಿಗಿಳಿದಿದ್ದಾರೆ. ಪಂಜಾಬ್, ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ಮಸೂದೆಯ ವಿರೋಧ ವ್ಯಕ್ತವಾಗುತ್ತಿದೆ. ಈ ಮಸೂದೆಗಳಿಂದ ಸರ್ಕಾರ ಕನಿಷ್ಟ ಬೆಂಬಲ ಬೆಲೆ ನೀಡಿ ಬೆಳೆಗಳನ್ನು ಖರೀದಿಸುವ ಪ್ರಕ್ರಿಯೆ ಕೊನೆಯಾಗಲಿದೆ. ಈ ಮಸೂದೆಗಳು ರೈತರ ಮರಣ ಶಾಸನವಾಗಿದ್ದು, ಕಾಂಗ್ರೆಸ್‌ ಇದಕ್ಕೆ ಸಹಿ ಹಾಕುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ  ಹೇಳಿದ್ದಾರೆ.

ಅಲ್ಲದೆ, ಕೃಷಿ ವಿಚಾರವು ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಹಾಗಾಗಿ ಈ ಎರಡೂ ಮಸೂದೆಗಳು ಒಕ್ಕೂಟ ವ್ಯವಸ್ಥೆಯ ವಿರೋಧಿ ಮಸೂದೆಗಳಾಗಿವೆ. ಎರಡೂ ಮಸೂದೆಗಳನ್ನು ಅಂಗೀಕಾರಕ್ಕೂ ಮುನ್ನ ಆಯ್ಕೆ ಸಮಿತಿಗೆ ಕಳಿಸಬೇಕೆಂದು ಆಗ್ರಹಿಸಿದ್ದಾರೆ.

ದೇಶದ ಒಟ್ಟು ಜಿಡಿಪಿಗೆ ಕನಿಷ್ಠ 20% ಕೊಡುಗೆ ನೀಡುವ ರೈತರನ್ನು ಈ ಮಸೂದೆಗಳು ಗುಲಾಮರನ್ನಾಗಿ ಮಾಡುತ್ತವೆ ಎಂದು ಡಿಎಂಕೆ ಪಕ್ಷ ಹೇಳಿದೆ.


ಇದನ್ನೂ ಓದಿ: ಕೃಷಿ ಮಸೂದೆಗಳು ರೈತರ ಡೆತ್‌ವಾರೆಂಟ್‌ಗಳೆಂದು ಕಾಂಗ್ರೆಸ್‌ ವಿರೋಧ; ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights