ಶಿರಾದಲ್ಲಿ ದೇವೇಗೌಡ, ಕುಮಾರಸ್ವಾಮಿಯೇ ಸ್ಪರ್ಧಿಸಿದರೂ ಗೆಲವು ಜಯಚಂದ್ರರದ್ದೇ: ಕೆಎನ್‌ ರಾಜಣ್ಣ

ಶಿರಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಚಂದ್ರ ಹೆಸರು ಘೋಷಣೆಯಾಗಿದೆ. ಹೀಗಾಗಿ ಜಯಚಂದ್ರ ಅವರು  ತುಮಕೂರಿನಲ್ಲಿ ಕೆ.ಎನ್‌.ರಾಜಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಳಿಕ ಮಾತನಾಡಿರುವ ಕೆ.ಎನ್‌. ರಾಜಣ್ಣ , ಜೆಡಿಎಸ್‌ನಿಂದ ದೇವೇಗೌಡ ಅಥವಾ ಕುಮಾರಸ್ವಾಮಿಯೇ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಗೆಲವು ಜಯಚಂದ್ರ ಅವರದ್ದೇ ಎಂದು ಹೇಳಿದ್ದಾರೆ.

“ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನನ್ನ ಮತ್ತು ಜಯಚಂದ್ರ ನಡುವೆ ಕೆಲವು ಅಸಮಾಧಾನ ಇದ್ದುದು ನಿಜ. ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿಕೆ, ಇನ್ನಿತರ ವಿಷಯಗಳಲ್ಲಿ ಗೊಂದಲಗಳು ಉಂಟಾಗಿದ್ದವು. ಪಕ್ಷದ ರಾಜ್ಯ ಮುಖಂಡರು ನಮ್ಮನ್ನು ಕರೆಸಿ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಗೊಂದಲಗಳು ಬಗೆಹರಿದಿವೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಮರೆತು ಶಿರಾ ಉಪಚುನಾವಣೆಯಲ್ಲಿ ಜಯಚಂದ್ರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಕೆಎನ್‌ ರಾಜಣ್ಣ ಭರವಸೆ ನೀಡಿದ್ದಾರೆ.

“ಹೈಕಮಾಂಡ್ ನಾಯಕರು ನಮ್ಮ ನಡುವಿನ ಗೊಂದಲಗಳನ್ನು ನಿವಾರಿಸಿರುವುದರಿಂದ ಸ್ವಾಭಿಮಾನದ ಪ್ರಶ್ನೆ ಉದ್ಭವಿಸುವುದಿಲ್ಲ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಮುಖ್ಯ. ನಾವು ಜೋಡೆತ್ತುಗಳು, ಒಂದೇ ಬಣ್ಣ ಒಂದೇ ರೀತಿಯ ಕೊಂಬುಗಳು ಇವೆ. ಹಾಗಾಗಿ ನಮ್ಮ ನಡುವೆ ವ್ಯತ್ಯಾಸ ಬರುವುದಿಲ್ಲ. ಮಂಡ್ಯ ಎತ್ತುಗಳು ಒಂದು ಕರಿಯ ಬಣ್ಣದ್ದು, ಮತ್ತೊಂದು ಬಿಳಿಯ ಬಣ್ಣದ್ದು. ಹಾಗಾಗಿ ಅಲ್ಲಿ ವ್ಯತ್ಯಾಸ ಬರುತ್ತದೆ. ಜಿಲ್ಲೆಯಲ್ಲಿ ಅಂತಹ ವ್ಯತ್ಯಾಸ ಬರುವುದಿಲ್ಲ” ಎಂದು ವ್ಯಾಖ್ಯಾನಿಸಿದರು.

“ಡಾ.ಜಿ.ಪರಮೇಶ್ವರ್ ಮತ್ತು ನನ್ನ ನಡುವೆ ಭಿನ್ನಾಬಿಪ್ರಾಯಗಳು ಇವೆ. ಅಸಮಾಧಾನವೂ ಇತ್ತು. ಇಂತಹ ಅಸಮಾಧಾನ, ಗೊಂದಲ ರಾಜಕಾರಣದಲ್ಲಿ ಸಹಜ. ಅವು ಬರುತ್ತವೆ ಹೋಗುತ್ತವೆ. ಪಕ್ಷ, ಜನರ ಹಿತದೃಷ್ಟಿ ಮತ್ತು ಮುಂದಿನ ಬೆಳವಣಿಗೆಗಳ ಹಿತದೃಷ್ಟಿಯಿಂದ ಒಂದಾಗಿ ಹೋಗಬೇಕೆಂದು ನಮ್ಮ ನಾಯಕರು ಹೇಳಿದ್ದಾರೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ” ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯ ವಿರೋಧಿ ಅಲೆ ಎದ್ದಿದೆ. ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಪ್ರಧಾನಿ ಮೋದಿ ಆಡಳಿತ ವಿರುದ್ಧ ಜನರ ತಿರುಗಿಬಿದ್ದಿದ್ದಾರೆ. ಮೋದಿ ಅಲೆ ಕೆಲಸ ಮಾಡುವುದಿಲ್ಲ. ಇತ್ತೀಚೆಗೆ ಮೋದಿ ವಿಡಿಯೋಗಳಿಗೆ ಜನ ಡಿಸ್ ಲೈಕ್ ಒತ್ತಿರುವುದು ಕಂಡುಬಂದಿದೆ. ಅಂದರೆ ಜನ, ಮೋದಿ ಅವರ ಆಡಳಿತವನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ಶಿರಾದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಲಿದೆ. ಆಡಳಿತ ಪಕ್ಷ ಇದ್ದಾಗ ಶೇ.10ರಷ್ಟು ಮತಗಳು ಸರ್ಕಾರದ ಪರವಾಗಿ ಬೀಳುತ್ತವೆ. ಹಾಗಾಗಿ ಮೂರನೇ ಸ್ಥಾನ ಪಡೆಯಲಿದೆ ಎಂದು ಕೆ.ಎನ್‌.ರಾಜಣ್ಣ ವಿಶ್ಲೇಷಿಸಿದರು.

ಇದನ್ನೂ ಓದಿ: ಭ್ರಷ್ಟಾಚಾರಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಿರಿ: ಶಂಕರ್ ಬಿದರಿ

ಮಾಜಿ ಸಚಿವ ಹಾಗೂ ಶಿರಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮಾತನಾಡಿ, “ಜನರು ಮತ್ತು ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಹೋಗಬೇಕಾಗಿದೆ. ಜಿಲ್ಲೆಯಲ್ಲಿ ಪರಮೇಶ್ವರ್, ಷಡಕ್ಷರಿ, ಕೆ.ಎನ್.ರಾಜಣ್ಣ ಮತ್ತು ನಮೆಗೆಲ್ಲ ವಯಸ್ಸಾಯಿತು. ಪಕ್ಷದ ಬೆಳವಣಿಗೆ ದೃಷ್ಟಿ ಮತ್ತು ಹೊಸ ನಾಯಕತ್ವದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗಬೇಕು. ಇದು ಅನಿವಾರ್ಯ ಎಂಬುದು ಬೆಂಗಳೂರಿನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ವ್ಯಕ್ತವಾಗಿದೆ” ಎಂದು ಅಭಿಪ್ರಾಯಪಟ್ಟರು.

“ಕೆ.ಎನ್.ರಾಜಣ್ಣ ಮುಕ್ತವಾಗಿ ಮಾತನಾಡುತ್ತಾರೆ. ಅದನ್ನೇ ಮಾಧ್ಯಮದವರು ದೊಡ್ಡದು ಮಾಡುತ್ತೀರಾ ಮತ್ತು ತಪ್ಪು ವ್ಯಾಖ್ಯಾನ ಮಾಡುತ್ತೀರ. ನಮ್ಮ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ನಮ್ಮ ರಾಜಕೀಯ ಅನುಭವ ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಪಕ್ಷವನ್ನು ಬಲಪಡಿಸಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಲ ರಾಜಣ್ಣ, ಪುತ್ರ ಆರ್. ರಾಜೇಂದ್ರ ಇತರರು ಉಪಸ್ಥಿತರಿದ್ದರು.


ಇದನ್ನೂ ಓದಿ: ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . . .

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights