ಮಾಧ್ಯಮಗಳಿಗೆ ಇಳಿಯದ ಡ್ರಗ್ಸ್‌ ನೆಶೆ: ಸುವರ್ಣ ನ್ಯೂಸ್‌ಗೆ ಎಲ್ಲೆಲ್ಲೂ ಸಂಜನಾದ್ದೇ ಜಪ!

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ ವರೆಗೆ ಸಿನಿಮಾ ಸ್ಟಾರ್‌ಗಳು ಮಾಧ್ಯಮಗಳ ಮೇಲೆ ಕಿಡಿ ಕಾರುತ್ತಿದ್ದಾರೆ. ನಿನ್ನೆ ಅಕ್ಷಯ್‌ ಕುಮಾರ್‌, ಶಾರುಕ್‌ ಖಾನ್‌, ಸಲ್ಮಾನ್‌ ಖಾನ್‌, ಅಮಿರ್‌ ಖಾನ್‌ ಸೇರಿದಂತೆ ಬಾಲಿವುಡ್‌ ಸ್ಟಾರ್‌ಗಳು ರಿಪಬ್ಲಿಕ್‌ ಟಿವಿ ಮತ್ತು ಟೈಮ್ಸ್‌ ನೌ ಸುದ್ದಿವಾಹಿನಿಗಳ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಸುಶಾಂತ್‌ಸಿಂಗ್‌ ಸಾವಿಗೆ ಡ್ರಗ್ಸ್‌ ತಳುಕು ಹಾಕಿ ಬಾಲಿವುಡ್‌ ವಿರುದ್ಧ ಬೇಜವಾಬ್ದಾರಿಯ ಸುದ್ದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಬಾಲಿವುಡ್‌ ಮಂದಿ ಹಿಂದಿ ಹಾಗೂ ಇಂಗ್ಲಿಷ್‌ ಚಾನೆಲ್‌ಗಳ ಮೇಲೆ ಸಿಟ್ಟಾಗಿದ್ದಾರೆ.

ಈ ಮಧ್ಯೆ, ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಎಂದು ಸಿನಿಮಾ ಸ್ಟಾರ್‌ಗಳ ಹಿಂದೆ ಬಿದ್ದು ಸಿಸಿಬಿ ಪೊಲೀಸರಿಗೂ ಮಿಗಿಲಾಗಿ ತಲೆನೋವಾಗಿದ್ದ ಕನ್ನಡ ಸುದ್ದಿ ವಾಹಿನಿಗಳು ಇನ್ನೂ ತಮ್ಮ ಡ್ರಗ್ಸ್‌ ನೆಶೆಯಿಂದ ಹೊರಬಂದಿಲ್ಲ. ನಟಿ ರಾಣಿಗಿ, ಸಂಜನಾ ಎಂದೇ ಬೆಳಗ್ಗೆಯಿಂದ ಸಂಜೆ ವರೆಗೂ ಚಂದನವನದಲ್ಲಿ ಮಾದಕ ಎಂದು ಸಿಕ್ಕ ಸಿಕ್ಕ ಸ್ಟಾರ್‌ಗಳ ತಲೆ ತಿನ್ನುತ್ತಿದ್ದ ಮಾಧ್ಯಮಗಳು ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆದ ಹಲವಾರು ವಿದ್ಯಾಮಾನಗಳನ್ನು ಕಡೆಗಣಿಸಿ ತಾವೇ ಡ್ರಗ್ಸ್‌ ಸೇವಿಸಿದಂತೆ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದವು.

ಮಾಧ್ಯಮಗಳ ವಿರುದ್ಧ ಹಿಂದಿ ಮಾಧ್ಯಮಗಳಲ್ಲಿ ಕಂಗನಾ, ಕನ್ನಡ ಮಾಧ್ಯಮಗಳಲ್ಲಿ ಸಂಜನಾ, ಸುದ್ದಿಯಾಗದ ಕೊರೊನಾ ಎಂದೆಲ್ಲಾ ನೆಟ್ಟಿಗರು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ನಡುವೆ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರು ಎಂದು ಕರೆದು ನಟಿ ಕಂಗನಾ ಟ್ವೀಟ್‌ ಮಾಡಿದ್ದರು. ಅವರ ಟ್ವೀಟ್‌ಗೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.ಅಲ್ಲದೆ, ಇಂದು ತುಮಕೂರಿನ ಕ್ಯಾತಸಂದ್ರ ಪೊಲೀಸ್‌ ಠಾಣೆಯಲ್ಲಿ ನಟಿ ಕಂಗನಾ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಈ ಬಗ್ಗೆ ಸುದ್ದಿ ಮಾಡಿರುವ ಸುವರ್ಣ ನ್ಯೂಸ್‌ ಚಾನೆಲ್‌, ಕಂಗನಾ ಸುದ್ದಿಯಲ್ಲೂ ಸಂಜನಾರನ್ನು ಮರೆತಿಲ್ಲ. ಕಂಗನಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಬರೆಯುವ ಬದಲಿಗೆ ಸಂಜನಾ ವಿರುದ್ಧ ದೂರು ದಾಖಲು ಎಂದು ಬರೆದಿದ್ದಾರೆ.

ದಿನನಿತ್ಯ ಸಂಜನಾ ಕುರಿತ ಸುದ್ದಿ ಪ್ರಸಾರ ಮಾಡುತ್ತಲೇ ಇರುವ ಸುವರ್ಣ ನ್ಯೂಸ್‌ ಎಲ್ಲೆಲ್ಲೂ ಸಂಜನಾರನ್ನೇ ನೆನಪಿಸಿಕೊಳ್ಳುತ್ತಿದೆ.

ಟಿಆರ್‌ಪಿ ಗೀಳು ಮತ್ತು ಬಿಜೆಪಿ ಹೊಗಳು ಭಟ್ಟರಾಗಿರುವ ಮಾಧ್ಯಮಗಳು, ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ 5,000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪವನ್ನು ಮರೆಮಾಚಲು ಮುನ್ನೆಲೆಗೆ ತಂದದ್ದು, ಡ್ರಗ್ಸ್‌ ಮಾಫಿಯಾದ ಕತೆಯನ್ನು.

ಮೂರು ಮತ್ತೊಬ್ಬರು ಭಾಗಿಯಾರಿಬಹುದಾದ ಡ್ರಗ್ಸ್‌ ಮಾಫಿಯಾದಲ್ಲಿ ಇಡೀ ಸ್ಯಾಂಡಲ್‌ವುಡ್‌ ಚಿತ್ರರಂಗವೇ ಭಾಗಿಯಾಗಿದೆ ಎಂಬಂತೆ ಬಿಂಬಿಸಿ ನಟ-ನಟಿಯನ್ನು ಸಿಸಿಬಿ ಪೊಲೀಸರಿಗಿಂತ ಹೆಚ್ಚು ಕಾಡುತ್ತಿರುವ ಕನ್ನಡ ನ್ಯೂಸ್‌ ಚಾನೆಲ್‌ಗಳು, ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಜಾರಿಯಾದ ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ, ಕಾರ್ಮಿಕ ಕಾನೂನು ತಿದ್ದುಪಡಿ ಮಸೂದೆಗಳ ಬಗ್ಗೆ, ಮತ್ತು ಅವುಗಳನ್ನು ವಿರೋಧಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ.

ಸದಾ ರಾಗಿಣಿ, ಸಂಜನಾ ಜಪ ಮಾಡುತ್ತಾ, ಡ್ರಗ್ಸ್‌ ನೆಶೆಯಲ್ಲಿರುವ ಮಾಧ್ಯಮಗಳು (ಸುವರ್ಣ ನ್ಯೂಸ್‌) ಪ್ರಾಸ ಇರುವ ಹೆಸರುಗಳ ಸುದ್ದಿಗೆ ಸಂಜನಾರನ್ನೇ ಬರೆದುಕೊಳ್ಳುತ್ತಿದೆ.


ಇದನ್ನೂ ಓದಿ: ರೈತರನ್ನು ಭಯೋತ್ಪಾದಕರು ಎಂದಿದ್ದ ನಟಿ ಕಂಗನಾ: ತುಮಕೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights