ಚೀನಾ ಆಕ್ರಮಿಸಿಕೊಂಡಿರುವ ಲಡಾಖ್‌ ಭೂಮಿಯನ್ನು ಯಾವಾಗ ವಶಕ್ಕೆ ಪಡೆಯುತ್ತೀರಿ: ಮೋದಿಗೆ ರಾಹುಲ್‌ ಪ್ರಶ್ನೆ

ಬಿಹಾರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಮತ್ತು ಮಹಾಘಟಬಂಧನ್‌ ಪರ ಪ್ರಚಾರ ಆರಂಭಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ, ದೇಶದ ರಕ್ಷಣೆಗಾಗಿ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ಜೂನ್‌ ತಿಂಗಳಿನಲ್ಲಿ ನಡೆದ ಘರ್ಷಣೆಯಲ್ಲಿ 23 ಸೈನಿಕರ ಹತ್ಯೆಯಾಗಿದೆ. ಚೀನಾ ಸೇನೆ ಗಾಲ್ವಾನ್‌ ಕಣಿವೆಯಲ್ಲಿ ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡಿದೆ. ಆ ಭೂಮಿಯನ್ನು ಯಾವಾಗ ಮರಳಿ ವಶಪಡಿಕೊಸಿಕೊಳ್ಳುತ್ತೀರಿ ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದಾರೆ.

ಲಡಾಕ್‌ ಕಣಿವೆಯಲ್ಲಿ ಭಾರತೀಯ ಭೂಪ್ರದೇಶದೊಳಗೆ ಚೀನೀ ಸೇನೆ ಒಳನುಸುಳಿಲ್ಲ ಎಂದು ಹೇಳಿ, ದೇಶದ ಜನರಿಗೆ ಮೋದಿ ಸುಳ್ಳು ಹೇಳಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ ಎಂದು ರಾಹುಲ್‌ಗಾಂಧಿ ಆರೋಪಿಸಿದ್ದಾರೆ.

“ಮೋದಿಯವರೇ, ಬಿಹಾರದ ಜನರಿಗೆ ಸುಳ್ಳು ಹೇಳಬೇಡಿ. ನೀವು ಬಿಹಾರಿಗಳಿಗೆ ಉದ್ಯೋಗ ನೀಡಿದ್ದೀರಾ? ಕಳೆದ ಚುನಾವಣೆಯಲ್ಲಿ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದೀರಿ, ಆದರೆ ಯಾರಿಗೂ ಉದ್ಯೋಗ ಸಿಗಲಿಲ್ಲ. ಸಾರ್ವಜನಿಕವಾಗಿ ತಾನು ಸೈನ್ಯ, ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ತಲೆ ಬಾಗುತ್ತೇನೆ ಎಂದು ಹೇಳುತ್ತೀರ, ಆದರೆ ಅಂಬಾನಿ ಮತ್ತು ಅದಾನಿಗಾಗಿ ಮಾತ್ರ ಕೆಲಸ ಮಾಡುತ್ತೀರಿ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಹಾರ: ಮಹಾಘಟಬಂಧನ್ ಪ್ರಣಾಳಿಕೆ ಬಿಡುಗಡೆ‌; ಕೃಷಿ ನೀತಿ ರದ್ದತಿ, ಉದ್ಯೋಗ ಸೃಷ್ಟಿಯ ಗುರಿ

ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌, ವಲಸೆ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ರಾಹುಲ್, “ಎಲ್ಲಾ ವಲಸೆ ಕಾರ್ಮಿಕರನ್ನು ಮತ್ತೆ ಬಿಹಾರಕ್ಕೆ ವಾಪಸ್ ಕಳುಹಿಸಲಾಯಿತು. ಆ ಸಮಯದಲ್ಲಿ ವಲಸೆ ಕಾರ್ಮಿಕರು ಮೈಲುಗಟ್ಟಲೇ ನಡೆದುಕೊಂಡು ಹೋಗುತ್ತಿದ್ದಾಗ ಪ್ರಧಾನಿ ಮೋದಿ ಏನು ಮಾಡುತ್ತಿದ್ದರು? ಅವರು ನಿಮಗೆ ಸಾರಿಗೆ ಸಂಪರ್ಕಕ್ಕಾಗಿ ರೈಲುಗಳನ್ನು ಒದಗಿಸಿದ್ದಾರೆಯೇ? ” ಎಂದು ಪ್ರಶ್ನಿಸಿದ್ದಾರೆ.

ನೋಟು ಅಮಾನ್ಯೀಕರಣದ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಅಂಬಾನಿ, ಅದಾನಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ನೀವು ನೋಡಿದ್ದೀರಾ? ಇವರೆಲ್ಲರೂ ಎಸಿ ಕೋಣೆಗಳಲ್ಲಿರುತ್ತಾರೆ. ಮೋದಿ ಶ್ರೀಮಂತರ ಪರವಾಗಿದ್ದಾರೆ. ರೈತರು ಮತ್ತು ಸಣ್ಣ ಉದ್ಯಮಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದರು.

ದೇಶವನ್ನು ಮತ್ತು ರಾಜ್ಯವನ್ನು ಕಾಪಾಡಲು ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಮತ ನೀಡಬೇಡಿ ಎಂದು ರಾಹುಲ್ ಗಾಂಧಿ ಪ್ರಚಾರ ವೇಳೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: “ಬಿಹಾರದಲ್ಲಿ ಮಾತ್ರ ಉಚಿತ ಲಸಿಕೆ?”: ಮತದಾನದ ಭರವಸೆಯ ಭರದಲ್ಲಿ ಎಡವಿತಾ ಬಿಜೆಪಿ…?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights