ಉಪಚುನಾವಣೆ: ಬಿಜೆಪಿ ಪ್ರಚಾರಕ್ಕೆ ಬಾರದ ಸಚಿವರು; ತಾರಾಟೆಗಿಳಿದ ಬಿಎಸ್‌ವೈ

ಮುಂದಿನ ತಿಂಗಳು ನಡೆಯಲಿರುವ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಗೆಲ್ಲೇಬೇಕು ಎಂಬ ಸಿಎಂ ಬಿಎಸ್ವೈ ಫರ್ಮಾನಿನ ಬಳಿಕ ಸಚಿವರ ದಂಡು ಪ್ರಚಾರ ಕ್ಷೇತ್ರಕ್ಕೆ ಧುಮುಕಿದೆ.ಉಪಚುನಾವಣೆ ಗೊಡವೆ ನಮಗೇಕೆ ಎಂದು ತಟಸ್ಥರಾಗಿದ್ದ ಸಚಿವರಿಗೆ ಯಡಿಯೂರಪ್ಪ ಅವರು ಕ್ಲಾಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಬದಲಾವಣೆ ಕಂಡುಬಂದಿದೆ.

ಶಿರಾದಲ್ಲಿ ವಿಜಯೇಂದ್ರಗೆ ಹೊಣೆ ನೀಡಿರುವುದನ್ನೇ ನೆಪವಾಗಿಸಿಕೊಂಡು ಹಲವಾರು ಸಚಿವರು ಅತ್ತ ಸುಳಿದಿರಲಿಲ್ಲ. ಇನ್ನೂ ಆರ್‌ಆರ್‍ ನಗರದಲ್ಲಿಯೂ ಅಭ್ಯರ್ಥಿ ಮುನಿರತ್ನ ಅವರೇ ಕರೆಯಲಿ ಎಂದು ಕೆಲ ಸಚಿವರು ಮುಗುಮ್ಮಾಗಿ ಉಳಿದಿದ್ದರು.

ಆದರೆ ಗುರುವಾರದ ಸಂಪುಟ ಸಭೆಯಲ್ಲಿ ಬಿಎಸ್ವೈ ಈ ಎರಡೂ ಕ್ಷೇತ್ರಗಳ ಚುನಾವಣೆಯನ್ನು ಗಂಭಿರವಾಗಿ ಪರಿಗಣಿಸಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುವಂತೆ ಸಚಿವರಿಗೆ ಆದೇಶಿಸಿದರು. ಸಿಎಂ ಕೆಂಗಣ್ಣಿಗೆ ಗುರಿಯಾಗುವುದೇಕೆ ಎಂದು ಶಿರಾ ಮತ್ತು ಆರ್‌ಆರ್ ನಗರಕ್ಕೆ ಸಚಿವರು ಒಬ್ಬರ ಮೇಲೊಬ್ಬರಂತೆ ಧಾವಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡರು.

ಡಿಸಿಎಂ ಸವದಿ, ಸಮಾಜ ಕಲ್ಯಾಣ ಮಂತ್ರಿ ಶ್ರೀರಾಮುಲು, ಸೋಮಣ್ಣ ಮುಂತಾದವರು ಸಕ್ರಿಯವಾಗಿ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಿಂದೆ ಬಿಎಸ್ವೈ ತಿವಿತವೇ ಕಾರಣ ಎಂದು ಹೇಳಲಾಗಿದೆ.

ಇನ್ನು ಕೆಲ ಪ್ರಭಾವಿ ಸಚಿವರು ಶಿರಾ ಗೊಡವೆಗೆ ಹೋಗದೇ ಆರ್‌ಆರ್‍ ನಗರಕ್ಕೆ ಮಾತ್ರ ತಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಶಿರಾದಲ್ಲಿ ವಿಜಯೇಂದ್ರ ದರ್ಬಾರ್ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇದನ್ನರಿತಿರುವ ಸಿಎಂ ಯಡಿಯೂರಪ್ಪ ಹೇಗಾದರೂ ಮಾಡಿ ಈ ಸಚಿವರ ಮನವೊಲಿಸಿ ಅವರನ್ನು ವಿಜಯೇಂದ್ರ ಜೊತೆ ಒಟ್ಟುಗೂಡಿಸಿ ಪ್ರಚಾರಕ್ಕೆ ಅಣಿ ಮಾಡುವ ಪ್ರಯತ್ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಕೆಆರ್‌ ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ವಿಜಯೇಂದ್ರ ಕಾರಣವಲ್ಲ! ಹಾಗಿದ್ದರೆ ಗೆದ್ದದ್ದು ಹೇಗೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights