ಆ ಊರಲ್ಲಿ ಯಾರೂ ಗದ್ದೆ ನಾಟಿ ಮಾಡೋದಿಲ್ಲ ಯಾಕಂದ್ರೆ ಇವರಿಬ್ಬರ ಕಾಟ…..

ಆ ಊರಲ್ಲಿ ಯಾರೂ ಗದ್ದೆ ನಾಟಿ ಮಾಡೋದಿಲ್ಲ. ಯಾಕಂದ್ರೆ, ನಾಟಿ ಮಾಡಿದ್ರೆ ಪೈರನ್ನ ಕಟಾವು ಮಾಡೋ ಕೆಲಸವೇ ಅವರಿಗೆ ಇರೋದಿಲ್ಲ. ಹಾಗಾಗೇ, ಈ ಬಾರಿಯೂ ಗದ್ದೆ ನಾಟಿ ಮಾಡೋದೇ ಬೇಡ ಅಂತ ತೀರ್ಮಾನಿಸಿದ್ರು. ಆದ್ರೆ, ಎಲ್ಲರೂ ಧೈರ್ಯ ಕೊಟ್ಟ ಮೇಲೆ ಕೆಲವರು ಗದ್ದೆ ನಾಟಿ ಮಾಡೋ ಸಾಹಸಕ್ಕೆ ಕೈ ಹಾಕಿದ್ರು. ಆದ್ರೆ, ಪ್ರತಿ ವರ್ಷ ನಾಟಿಯ ಗದ್ದೆಗಳನ್ನ ಒಬ್ರು ಮಾತ್ರ ಹಾಳು ಮಾಡ್ತಿದ್ರು, ಆದ್ರೆ, ಈ ಬಾರಿ ಇಬ್ರಿಬ್ರು ಹಾಳ್ ಮಾಡಿದ್ದಾರೆ.

ಹೌದು…  ಗದ್ದೆಯ ದಶ ದಿಕ್ಕಿನಲ್ಲೂ ಯದ್ವಾ-ತದ್ವಾ ಹರಿಯುತ್ತಿರೋ ನೀರು. ಇದು ಗದ್ದೆಯೋ ಅಥವ ಹಳ್ಳವೋ ಗೊತ್ತಾಗದಂತೆ ಹರಿಯುತ್ತಿರೋ ಗಂಗಾಮಾತೆ. ಉಸ್ಸಾಪ್ಪಾ…. ಕೊನೆಗೂ ಗದ್ದೆಗೆ ಹತ್ತಿದ್ದ ನೀರು ಇಳಿಯಿತು ಅನ್ನುವಷ್ಟರಲ್ಲಿ ನಾಟಿ ಮಾಡಿದ ಸಸಿಯನ್ನ ಗುಳುಂ ಸ್ವಾಹಾ ಮಾಡಿರೋ ಕಾಡಾನೆಗಳು. ಆನೆ ನಡೆದಿದ್ದೇ ದಾರಿ ಎಂಬಂತೆ ಗದ್ದೆಯಲ್ಲೆಲ್ಲಾ ಗಜರಾಜನದ್ದೇ ಹೆಜ್ಜೆ. ಹೌದು… ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ, ಮೂಲರಹಳ್ಳಿ, ಕೆಂಜಿಗೆ, ಗೌಡಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ದುಸ್ಥಿತಿ. ಈ ಊರಿಗೂ ಕಾಡಾನೆಗಳಿಗೂ ಅವಿನಾಭಾವ ಸಂಬಂಧ. ಹಾಗಾಗೇ, ಈ ಊರ ಮಂದಿ ಗದ್ದೆ ಮಾಡೋದನ್ನೇ ಬಿಟ್ಟಿದ್ದಾರೆ. ಎಷ್ಟೇ ಬೆವರು ಸುರಿಸಿದ್ರು ಫಸಲನ್ನ ಕಟಾವು ಮಾಡೋ ಭಾಗ್ಯ ಈ ಊರಿನೋರ್ಗೆ ಇರೋದಿಲ್ಲ. ಹಾಗಾಗಿ, ಈ ವರ್ಷವೂ ಗದ್ದೆ ಮಾಡೋದು ಬೇಡವೆಂದು ಬಿಟ್ಟಿದ್ರು. ಆದ್ರೆ, ಕೆಟ್ಟ ಧೈರ್ಯದಿಂದ ಗದ್ದೆ ನಾಟಿ ಮಾಡಿಯೇ ಬಿಟ್ರು. ಆದ್ರೆ, ಅದೇನ್ ನತದೃಷ್ಟವೋ ಏನೋ….. ಈ ಬಾರಿಯೂ ನಾಟಿ ಮಾಡಿದ ಗದ್ದೆಗಳನ್ನ ಕಾಡಾನೆಗಳಿಗಿಂತ ಮೊದಲು ಅಟ್ಯಾಕ್ ಮಾಡಿದ್ದು ಮಳೆರಾಯ, ತದನಂತರ, ಕಾಡಾನೆಗಳು.

 

ಮಲೆನಾಡಿನ ಮಹಾ ಮಳೆಯಿಂದ ಎಲ್ಲೆಂದರಲ್ಲಿ ನುಗ್ಗಿದ್ದ ನೀರು ಗದ್ದೆಗಳನ್ನ ಹಳ್ಳ-ಕೊಳ್ಳ-ನದಿಗಳನ್ನಾಗಿಸಿತ್ತು. ತಿಂಗಳ ಬಳಿಕ ಅಯ್ಯೋ… ದೇವ್ರೆ, ಕೊನೆಗೂ ಮಳೆ ಸ್ವಲ್ಪ ಕಡಿಮೆ ಆಯ್ತು ಅನ್ನುವಷ್ಟರಲ್ಲಿ ಹಳೆ ನೆಂಟರು ಮತ್ತೆ ಗದ್ದೆಗಳತ್ತ ಮುಖ ಮಾಡಿದ್ರು. ಕಳೆದ ಐದಾರು ದಿನಗಳಿಂದ ಸಂಜೆಯಾಗುತ್ತಲೇ ಫೀಲ್ಡಿಗಿಳಿಯುವ ಕಾಡಾನೆಗಳು ಹೊಲಗದ್ದೆ, ತೋಟಗಳಲ್ಲಿ ಓಡಾಟ ನಡೆಸಿ ಸಂಪೂರ್ಣವಾಗಿ ನಾಶ ಮಾಡ್ತಿವೆ. ಅಧಿಕಾರಿಗಳ ಗಮನಕ್ಕೆ ತಂದ್ರೆ ಯಾವಾಗ್ಲೋ ಬರ್ತಾರೆ, ಎಲ್ಲೋ ನಿಂತು ಪಟಾಕಿ ಸಿಡಿಸಿ ಹೋಗ್ತಾರೆಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ದಯವಿಟ್ಟು, ನಮ್ಮನ್ನ ಸ್ಥಳಾಂತರ ಮಾಡಿ, ಇಲ್ಲಾ ಕಾಡಾನೆಗಳನ್ನ ಇಲ್ಲಿಂದ ಸ್ಥಳಾಂತರ ಮಾಡಿ ಅನ್ನೋ ಅಳಲು ಗ್ರಾಮಸ್ಥರದ್ದು.

ಒಟ್ಟಾರೆ, ರೈತರನ್ನ ಒಂದೆಡೆ ಮಳೆ, ಮತ್ತೊಂದೆಡೆ ಕಾಡನೆಗಳು ಅರ್ಧ ಜೀವ ಮಾಡ್ತಿದ್ರೆ, ಸರ್ಕಾರ-ಅಧಿಕಾರಿಗಳು-ಜನಪ್ರತಿನಿಧಿಗಳು ಜೀವಂತ ಹೆಣ ಮಾಡ್ತಿದ್ದಾರೆ. ಕಾಡಾನೆಗಳಿಂದ ಭಯ ಬೀಳ್ತಿದ್ದ ಈ ಊರ ಜನರೀಗ, ಮಹಾಮಳೆಗೂ ಹೈರಾಣಾಗಿದ್ದಾರೆ. ಮಳೆಯ ಬಳಿಕವೂ ಕಾಡಾನೆ ದಾಳಿ ಗ್ರಾಮಸ್ಥರಿಗೆ ದಾರಿ ಕಾಣದಾಗಿಸಿದೆ. ಹಾಗಾಗಿ, ಸ್ಥಳಿಯರು ಒಂದು ನಮ್ಮನ್ನ ಈ ಊರಿಂದ ಕಳಿಸಿ, ಇಲ್ಲ ಕಾಡಾನೆಗಳನ್ನ ಕಳಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ…..

Leave a Reply

Your email address will not be published.