ಕುತ್ತೇ.. ಕನ್ವರ್ ನಹೀ, ಕನ್ವರ್ ಲಾಲ್ ಬೋಲೋ ಡೈಲಾಗ್ ಸೃಷ್ಟಿಸಿದ ಕಥೆ ಗೊತ್ತಾ ?

 

ambi

ಕುತ್ತೇ..ಕನ್ವರ್ ನಹೀ, ಕನ್ವರ್‌ಲಾಲ್ ಬೋಲೋ. ಅಂತ ಸಿನಿಮಾದ ಈ ಡೈಲಾಗ್ ಕನ್ನಡ ಸಿನಿಮಾರಂಗದ ಎವರ್‌ಗ್ರೀನ್ ಡೈಲಾಗ್ ಅಂದ್ರೆ ತಪ್ಪಾಗಲ್ಲ. ೧೯೮೧ರಲ್ಲಿ ಬಂದ ಅಂತ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅದರಲ್ಲೂ ಈ ‘ಕುತ್ತೇ..ಕನ್ವರ್ ನಹೀ, ಕನ್ವರ್‌ಲಾಲ್ ಬೋಲೋ’ ಡೈಲಾಗ್ ಮಾಡಿದ ಮ್ಯಾಜಿಕ್ಕೇ ಬೇರೆ.

ಖಳನಾಯಕನಾಗಿ ಚಿತ್ರರಂಗಕ್ಕೆ ಬಂದ ಅಂಬರೀಶ್ ಮುಂದೆ ರೆಬಲ್ ಸ್ಟಾರ್ ಆಗಿದ್ದು ಗೊತ್ತಿರುವ ಸಂಗತಿ. ನಾಗರಹಾವು ಚಿತ್ರದಲ್ಲಿ ‘ಏನ್ ಬುಲ್ ಬುಲ್ ಮಾತಾಡಕ್ಕಿಲ್ವಾ’ ಅಂದುಕೊಂಡು ಫಿಲ್ಮ್ ಇಂಡಸ್ಟ್ರಿಗೆ ಅಡಿಯಿಟ್ಟ ಅಂಬರೀಶ್‌ಗೆ ಮತ್ತಷ್ಟು ಮೈಲೇಜ್ ತಂದುಕೊಟ್ಟ ಡೈಲಾಗ್ “ಕುತ್ತೇ..ಕನ್ವರ್ ನಹೀ, ಕನ್ವರ್‌ಲಾಲ್ ಬೋಲೋ”

12

‘ಅಂತ’ ಸಿನಿಮಾದಲ್ಲಿ ಅಂಬರೀಶ್ ದ್ವಿಪಾತ್ರದಲ್ಲಿ ಅಭಿನಯಿಸಿದರು. ಸುಶೀಲ್ ಕುಮಾರ್ ಅನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದ ಅಂಬಿ, ಕನ್ವರ್‌ಲಾಲ್ ಅನ್ನುವ ನೆಗೆಟಿವ್ ಶೇಡ್ ಪಾತ್ರದಲ್ಲೂ ಪರಕಾಯ ಪ್ರವೇಶ ಮಾಡಿದರು. ಚಿತ್ರದಲ್ಲಿ ಈ ಪಾತ್ರ ನಾಯಕನ ಪಾತ್ರವನ್ನೇ ನುಂಗಿಹಾಕಿತ್ತು ಅಂದ್ರೆ ಅತಿಶಯೋಕ್ತಿ ಆಗುವುದಿಲ್ಲ. ಹೀಗಾಗಿ ಕನ್ವರ್‌ಲಾಲ್ ಪಾತ್ರಕ್ಕೆ ಈ ಡೈಲಾಗ್ ಮತ್ತಷ್ಟು ಖದರ್ ತಂದುಕೊಟ್ಟಿತ್ತು. ಇದೇ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಕೂಡ ಆಯಿತು.

“ಕುತ್ತೇ..ಕನ್ವರ್ ನಹೀ, ಕನ್ವರ್‌ಲಾಲ್ ಬೋಲೋ” ಅನ್ನುವ ಈ ಖಡಕ್ ಡೈಲಾಗ್ ಸೃಷ್ಟಿಸಿದ ಕ್ರೇಝ್ ಅಷ್ಟಿಷ್ಟಲ್ಲ. ಸಿಗರೇಟ್ ಸೇದುತ್ತಾ ಒರಟು ಒರಟಾಗಿ ಅಂಬಿ ಹೊಡೆದ ಡೈಲಾಗ್ ಡೆಲಿವರಿಗೆ ಬಾಲಿವುಡ್ ಮಂದಿ ಕೂಡ ಮಾರುಹೋದರು. ಇದೇ ಕಾರಣಕ್ಕೆ ೮೦ರ ದಶಕದಲ್ಲಿ ಅಂತ ಸಿನಿಮಾ ಹೊಸ ದಾಖಲೆಯನ್ನೇ ಬರೆಯಿತು.

ಆದರೆ ನಿಮಗೆ ಗೊತ್ತಿರಲಿ ಭಾರತೀಯ ಸಿನಿಮಾರಂಗದಲ್ಲಿ ಶೋಲೆ ಸಿನಿಮಾದ ಗಬ್ಬರ್ ಸಿಂಗ್ ಡೈಲಾಗ್ ಬಿಟ್ಟರೆ ಆ ಮಟ್ಟಿಗೆ ಜನಪ್ರಿಯತೆ ಗಳಿಸಿದ್ದ ಮತ್ತೊಂದು ಡೈಲಾಗ್ “ಕುತ್ತೇ..ಕನ್ವರ್ ನಹೀ, ಕನ್ವರ್‌ಲಾಲ್ ಬೋಲೋ” ಎಸ್.ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದ `ಅಂತ’ ಚಿತ್ರದ ಈ ಡೈಲಾಗ್ ಬರೆದಿದ್ದು ಹೆಚ್.ವಿ ಸುಬ್ಬಾರಾವ್.

ಕನ್ವರ್‌ಲಾಲ್ ಪಾತ್ರ ಮತ್ತು ಈ ಡೈಲಾಗ್ ಎಷ್ಟರಮಟ್ಟಿಗೆ ಸದ್ದು ಮಾಡಿತ್ತು ಅಂದರೆ ಉಪೇಂದ್ರ ನಿರ್ದೇಶನದಲ್ಲಿ ‘ಅಂತ’ ಚಿತ್ರದ ಸೀಕ್ವೆಲ್ ಕೂಡ ಬಂತು. ಇಲ್ಲೂ ಅಂಬರೀಶ್ ಕನ್ವರ್‌ಲಾಲ್ ಆಗಿ ವಿಜೃಂಭಿಸಿದರು. ಆ ನಂತರ ತಿಪ್ಪಾರಳ್ಳಿ ತರ‍್ಲೆಗಳು ಚಿತ್ರದಲ್ಲೂ ಈ ಪಾತ್ರ ಮುಂದುವರೆಯಿತು. ಆ ಮಟ್ಟಿಗೆ ಈ ಡೈಲಾಗ್ ಮತ್ತೆ ಮತ್ತೆ ಸದ್ದು ಮಾಡುತ್ತಾ ಬರುತ್ತಿದೆ.

Comments are closed.