ಕೊರೊನ ಬಿಕ್ಕಟ್ಟು: ವಿಕೇಂದ್ರೀಕರಣದತ್ತ ಮುಖ ಮಾಡಿದ ಕೇರಳ ಸರ್ಕಾರ; ಸರ್ಕಾರಿ ಅಡುಗೆಮನೆಗಳ ಯೋಜನೆಗೆ ಚಾಲನೆ

21 ದಿನಗಳ ಲಾಕ್ ಡೌನ್ ಸಮಯದಲ್ಲಿ ಯಾರೂ ಹಸಿವಿನಿಂದ ನರಳದೆ ಇರುವಂತೆ ನೋಡಿಕೊಳ್ಳಲು ಕೇರಳ ಸರ್ಕಾರ ಬುಧವಾರ ಪಂಚಾಯಿತಿಗಳು, ನಗರಪಾಲಿಕೆಗಳು ಮತ್ತು ಇತ್ಯಾದಿ ಪ್ರಾದೇಶಿಕ ಆಡಳಿತಗಳು ನಡೆಸಬಹುದಾದ ಸಮುದಾಯ ಕೇಂದ್ರಿತ ಅಡುಗೆಮನೆಗಳನ್ನು ಬುಧವಾರ ಘೋಷಿಸಿದೆ. ಊಟಕ್ಕಾಗಿ ಕರೆ ಮಾಡಿದರೆ ಮನೆ ಬಾಗಿಲಿಗೆ ಸ್ವಯಂಸೇವಕರು ಊಟ ತಲುಪಿಸುವ ವ್ಯವಸ್ಥೆ ಇದಾಗಿದ್ದು, ಪ್ರತ್ಯೆಕಗೊಂಡಿರುವ ಸೋಂಕಿತ ಶಂಕಿತರಿಗೂ ಊಟ ಒದಗಿಸಲಿದೆ.

ವಲಸೆ ಬಂದಿರುವ ಕಾರ್ಮಿಕರಿಗೂ ವಸತಿ ಮತ್ತು ಊಟ ಒದಗಿಸಲು ಪ್ರಾದೇಶಿಕ ಆಡಳಿತಗಳು ಮತ್ತು ಕಂದಾಯ ಇಲಾಖೆಗೆ ಕೇರಳ ಸರ್ಕಾರ ನಿರ್ದೇಶಿಸಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ಸದ್ಯದ ಪರಿಸ್ಥಿತಿ ಹಲವರನ್ನು ಹಸಿವಿಗೆ ನೂಕಲಿದೆ. ಆದರೆ ಈ ಲಾಕ್ ಡೌನ್ ನಿಂದ ಕೇರಳದಲ್ಲಿ ಯಾರೂ ಹಸಿವಿನಿಂದ ಇರಬಾರದು. ಪ್ರಾದೇಶಿಕ ಸ್ವಯಂ ಆಡಳಿತ ಸಂಸ್ಥೆಗಳು ಯಾರಿಗೆ ಆಹಾರ ತಯಾರಿಸಿಕೊಳ್ಳಲು ಸಾಧ್ಯವಿಲ್ಲವೋ ಅವರಿಗೆ ಊಟ ಒದಗಿಸಲಿವೆ…” ಎಂದು ಘೋಷಿಸಿದ್ದಾರೆ.

“ಒಂದು ಕೇಂದ್ರದಿಂದ ಎಲ್ಲರ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಆದುದರಿಂದ ಈ ಸಮಸ್ಯೆಯನ್ನು ಎದುರಿಸಲು ಸುದೀರ್ಘ ವಿಕೇಂದ್ರೀಕರಣ ವ್ಯವಸ್ಥೆಯನ್ನು ಸಿದ್ಧಪಡಿಸಲಾಗುತ್ತಿದೆ. ವಾರ್ಡ್ ವಲಯಗಳಲ್ಲಿ ಸ್ವಯಂಸೇವಕರ ತಂಡ ಕೆಲಸ ಮಾಡಲಿದೆ” ಎಂದು ವಿಜಯನ್ ಹೇಳಿದ್ದಾರೆ.

ಗ್ರಾಮ ಪಂಚಾಯಿತಿಗಳು, ನಗರಸಭೆಗಳು, ಪುರಸಭೆಗಳು ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಬೇಕು. ಎಷ್ಟು ಜನಕ್ಕೆ ಆಹಾರದ ಅಗತ್ಯ ಇದೆ ಎಂಬುದನ್ನು ಅವುಗಳು ಊಹಿಸಬೇಕು ಎಂದಿರುವ ಮುಖ್ಯಮಂತ್ರಿ “ಕೆಲವರು ಹುಸಿ ಗೌರವದಿಂದ ಆಹಾರಕ್ಕೆ ಬೇಡಿಕೆ ಇಡದೆ ಇರುವ ಸಾಧ್ಯತೆ ಇದೆ. ಆದರೆ ದೂರವಾಣಿ ಸಂಖ್ಯೆ ನೀಡಿದರೆ ಇದನ್ನು ತಪ್ಪಿಸಬಹುದು. ಅವರು ಆಹಾರ ಕೇಳಲಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಊಟದಿಂದ ವಂಚಿಸಬಾರದು” ಎಂದಿರುವ ಅವರು, ಅಡುಗೆ ಸಿದ್ಧಪಡಿಸಲು ಮತ್ತು ವಿತರಿಸಲು ಈ ಆಡಳಿತಗಳು ಸ್ವಯಂಸೇವಕರನ್ನು ಕಂಡುಹಿಡಿಯಬೇಕು. ಪ್ರತ್ಯೆಕಗೊಳಿಸಿರುವ ಪ್ರದೇಶದ ಮನೆಗಳಿಗೂ ಆಹಾರ ಸರಬರಾಜು ಆಗಬೇಕು ಎಂದು ಅವರು ಹೇಳಿದ್ದಾರೆ.

ಕೇರಳಕ್ಕೆ ವಲಸೆ ಬಂದಿರುವ ಕಾರ್ಮಿಕರ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಸರ್ಕಾರ ಮುಂದಾಗಿದೆ. ಉತ್ತರ ಮತ್ತು ಈಶಾನ್ಯ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರ ವಲಸೆ ಮತ್ತು ಆಹಾರದ ಸಮಸ್ಯೆಯನ್ನು ಪರಿಹರಿಸಲು ತಹಶೀಲ್ದಾರ್ ಗಳಿಗೆ ಸೂಚಿಸಲಾಗಿದೆ.