ಕ್ರೀಡಾಂಗಣ ಸಜ್ಜ ಕುಸಿದು ಓರ್ವ ಸಾವು, ಹತ್ತು ವಿದ್ಯಾರ್ಥಿಗಳು ಗಂಭೀರ ಗಾಯ

ಕ್ರೀಡಾಂಗಣದ ಸಜ್ಜ ಕುಸಿದು ನೋಡಲು ಬಂದ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇನ್ನೋರ್ವ ಪರಿಸ್ಥಿತಿ ಗಂಭೀರ ಗಾಯವಾದ ಘಟನೆ ಬಳ್ಳಾರಿಯ ಸಿರುಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದೆ. ಕ್ರೀಡಾಂಗಣದ ಪ್ರೇಕ್ಷಕರು ಕೂರುವ ಮೆಟ್ಟಿಲು ಹಿಂಭಾಗದ ಸಜ್ಜ ದಿಢೀರ್ ಬಿದ್ದಿದೆ. ಇಂದು ವಲಯ ಮಟ್ಟದ ಕ್ರೀಡಾಕೂಟ ಜರುಗುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳು, ಪ್ರೇಕ್ಷಕರು ಆಗಮಿಸಿದ್ದರು.

ಜಾಗದ ಕೊರತೆಯಿಂದ ಸಜ್ಜಾದ ಮೇಲೆ ನಿಂತಿದ್ದ ಜನರ ಭಾರ ತಡೆಯಲಾರದೆ ಬಿದ್ದಿದೆ. ಬಿದ್ದ ಪರಿಣಾಮ ಸಿರುಗುಪ್ಪ ನಿವಾಸಿ ಶಿವು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಬೆಳಗಲ್ ನಿವಾಸಿ ರಾಮು ಪರಿಸ್ಥಿತಿ ಗಂಭೀರವಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ಗಾಯಗಳಾಗಿದ್ದು, ಸಿರುಗುಪ್ಪ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡು ಹೆಚ್ಚಿನ ಚಿಕಿತ್ಸೆಗೆ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಸಿರುಗುಪ್ಪ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘುಲಾಠಿ ಪ್ರಹಾರ ಮಾಡಬೇಕಾಯಿತು. ಘಟನಾ ಸ್ಥಳಕ್ಕೆ ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಭೇಟಿ ಮಾಡಿ ಪರಿಶೀಲಿಸಿದರು.

Leave a Reply