ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ : ಮಂಗಗಳಿಗೆ ಖುಷಿಯೋ ಖುಷಿ

ಕೋತಿಗಳ ಕೂಗು ಭಗವಂತನಿಗೂ ಕೇಳ್ಸಿದೆ. ಹಸಿವಿನ ದಾಹ ದೈವದ ಒಡಲು ಮುಟ್ಟಿದೆ. ಹಣ್ಣು ಕೊಟ್ಟವರಿಗೆ ಖುಷಿ ಪಡ್ಸಿ, ಕೊಡದಿದ್ದವರಿಗೆ ಹೆದರಿಸುತ್ತಿದ್ದ ಮಂಗಗಳ ಮುಖದಲ್ಲಿ ಚೈತನ್ಯವೇ ಇರಲಿಲ್ಲ. ನೆಲದ ಮೇಲಿದ್ರೂ ನೀರು, ಮರದ ಮೇಲಿದ್ರೂ ನೀರು. ತಿನ್ನೋಕೂ ಆಹಾರವಿಲ್ದೆ ಸಪ್ಪೆ ಮುಖದಲ್ಲಿ ಸೊರಗಿದ್ವು ಆಂಜನೇಯನ ಅವತಾರ ಪರುಷರು. ಆದ್ರೆ, ಸರ್ಕಾರದ ಅದೊಂದೇ ಒಂದು ಆದೇಶ, ಕೋತಿಗಳಿಗೂ ಚಿರತೆ ಶಕ್ತಿ ಬಂದಿದೆ.

ಹೌದು.. ಜನರನ್ನು ಕಂಡು ಖುಷಿಯಾಗಿರೋ ಮಂಗಗಳು, ಎರಡು ತಿಂಗಳು ತಿನ್ನೋಕೆ ಆಹಾರವಿಲ್ದೆ ನೀರು ಕುಡಿದು ಬದುಕಿದ್ದ ಮಂಗಗಳ ಮುಖದಲ್ಲಿ ಮಂದಹಾಸ. ವಾಹನಗಳನ್ನ ಕಂಡು ವಾಹನಗಳ ಮೇಲೆ ಹತ್ತುತ್ತಿರೋ ಮಂಗಗಳು. ಮಂಗಗಳಿಗೆ ಆಹಾರ ಹಾಕ್ತಿರೋ ಜನರು. ಹೌದು, ಈ ದೃಶ್ಯ ಕಂಡುಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ. ಹೌದು, ಚಾರ್ಮಾಡಿ ಘಾಟ್ ನಲ್ಲಿರುವ ಮಂಗಗಳು ಜನರನ್ನ ಕಂಡು ನಮಗೆ ಏನು ಸಿಗ್ತಿಲ್ಲ….ಏನು ತಿಂನ್ದೆ ಎರಡ್ ತಿಂಗಳಾಯ್ತು… ಮಕ್ಳು ಅಮ್ಮಾ.. ಊಟ… ಅಂತಾವೆ, ನೀರ್ ಕುಡ್ದು ಬದುಕ್ತಿದ್ದೇವ್ರೋ…. ಏನಾರು ಇದ್ರೆ ಕೊಡ್ರೋ…ಊಟ ಹುಡುಕಂಡ್ ಹೋದ್ರೆ ಬರೀ ಮರಳು ತುಂಬಿದ ಸಿಮೆಂಟ್ ಮೂಟೆಗಳೇ ಸಿಗ್ತಿವೆ… ನನ್ ಮೇಲೆ ಕೋಪ ಇದ್ರೆ ಒಂದ್ ಏಟ್ ಹಾಕ್ಬೀಡಿ…. ಏನಾದ್ರು ಇದ್ರೆ ಕೊಡಿ….ಪ್ಲೀಸ್ ಅಂತಿದ್ದಾವೆ. ಈ ವರ್ಷ ಮಲೆನಾಡಲ್ಲಿ ವರುಣ ರಾಕ್ಷಸತ್ವಕ್ಕೆ ಮಲೆನಾಡೇ ಜಲಾವೃತಗೊಂಡಿತ್ತು. ಚಾರ್ಮಾಡಿ ರಸ್ತೆಯ 23 ಕಿ.ಮೀ. ವ್ಯಾಪ್ತಿಯಲ್ಲಿ 40 ಕಡೆ ಗುಡ್ಡ ಕುಸಿದು, ಎರಡು ತಿಂಗಳಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಮಾರ್ಗದಲ್ಲಿ ಪ್ರವಾಸಿಗರಿಂದ್ಲೇ ಬದುಕಿದ್ದ ಕೋತಿಗಳ ಸಂತತಿ ತಿನ್ನೋಕೆ ಆಹಾರವಿಲ್ದೆ ನೀರು ಕುಡಿದು ಬದುಕ್ತಿದ್ವು. ಅವುಗಳ ಹಸಿವಿನ ದಾಹ ಆಂಜನೇಯನಿಗೂ ಮುಟ್ಟಿತ್ತು ಅನ್ಸತ್ತೆ. ಇದೀಗ, ಜಿಲ್ಲಾಡಳಿತ ಚಾರ್ಮಾಡಿಯಲ್ಲಿ ಸಂಚಾರಕ್ಕೆ ಅನುಮತಿ ನೀಡಿರೋದು, ಹೊಟ್ಟೆ ತುಂಬಾ ಊಟ ಸಿಗುತ್ತೆಂಬ ಒಂದೇ-ಒಂದೇ ಕಾರಣಕ್ಕೆ ಮನುಷ್ಯರಿಗಿಂತ ಮಂಗಗಳಿಗೆ ಡಬಲ್ ಖುಷಿಯಾಗಿದೆ.

 

ಅಣ್ಣಪ್ಪಸ್ವಾಮಿ ದೇವಸ್ಥಾನ ಸೇರಿದಂತೆ ಜಾರ್ಮಾಡಿ ಘಾಟ್ ರಸ್ತೆಯುದ್ಧಕ್ಕೂ ಹತ್ತಾರು ಜಲಪಾತಗಳಿವೆ. ಅಲ್ಲೆಲ್ಲಾ ನೂರಾರು ಪ್ರವಾಸಿಗರಿರ್ತಾರೆ. ಪ್ರವಾಸಿಗರ ಗಾಡಿಗಳು ನಿಂತ ಕೂಡಲೇ ಕೋತಿಗಳ ಹಿಂಡು ಮಕ್ಕಳಂತೆ ಓಡೋಡಿ ಬರ್ತಿದ್ವು. ಬಂದು ಏನಾದ್ರು ಹಾಕ್ತಾರಾ ಎಂದು ಕೈಯನ್ನೇ ನೋಡ್ತಿದ್ವು. ಪ್ರವಾಸಿಗರು ಬಾಳೆಹಣ್ಣು, ಬಿಸ್ಕತ್ ಅದು-ಇದು ಹಾಕ್ತಿದ್ರು, ಅದನ್ನ ತಿಂದು ಬದುಕ್ತಿದ್ವು. ಮಕ್ಕಳಿಗೆ ಪುಕ್ಕಟೆ ಮನೋರಂಜನೆ ನೀಡ್ತಿದ್ವು. ಆದ್ರೆ, ಈ ಬಾರಿ ಒಂದೇ ದಿನ 22 ಇಂಚು ಮಳೆಯಾಗಿ, ಚಾರ್ಮಾಡಿಯೇ ಅಲ್ಲೋಲ-ಕಲ್ಲೋಲವಾಗಿ, 40 ಕಡೆ ಗುಡ್ಡ ಕುಸಿದಿದ್ರಿಂದ ಸಂಚಾರ ಬಂದ್ ಆಗಿತ್ತು. ಬೇರೆಡೆ ಹೋಗಲಾಗದೆ, ಊಟ ಸಿಗದೆ ಕೋತಿಗಳ ಸಂತತಿಯೇ ಮಮ್ಮುಲ ಮರುಗಿತ್ತು. ದೇವ್ರೆ, ಈ ರೋಡ್ ಯಾವಾಗ್ ಓಪನ್ ಆಗುತ್ತಪ್ಪಾ… ಬೇಗ ಓಪನ್ ಆಗ್ಲಿ ಎಂದು ಕೋತಿಗಳು ಹರಕೆ ಕಟ್ಕೊಂಡಿದ್ವು ಅನ್ಸತ್ತೆ. ಅದಕ್ಕೇ ಏನೋ….. ಸರ್ಕಾರ ಚಾರ್ಮಾಡಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಿಲ್ ಕೊಟ್ಟಿರೋದು ಕೋತಿಗಳಿಗೆ ಸತ್ತು ಬದುಕಿದಂತಾಗಿ, ಬದುಕುವ ಆಸೆ ಮೂಡಿದೆ.

ಒಟ್ಟಾರೆ, ರಿಪೇರಿಯೇ ಆಗದಂತ ಸ್ಥಿತಿಯಲ್ಲಿದ್ದ ಚಾರ್ಮಾಡಿಯನ್ನ ಸರ್ಕಾರ 300 ಕೋಟಿ ವ್ಯಯ ಮಾಡಿ ದುರಸ್ಥಿಗೆ ಮುಂದಾಗಿದೆ. ಸದ್ಯಕ್ಕೆ ಸರ್ಕಾರ ಲಘು ವಾಹನಗಳಿಗೆ ಅವಕಾಶ ಕೊಟ್ಟಿರೋದ್ರಿಂದ ಕೋತಿಗಳಿಗೆ ಎಲ್ಲಿಲದ ಖುಷಿ ಮೂಡಿಸಿದೆ.

Leave a Reply