ಜನರಿಗೆ ಪರಿಹಾರ ಕೊಡಲು ನಿಮಗೇನು ರೋಗ : ಬಿಎಸ್ ವೈ ಗೆ ತಾಕತ್ತೇ ಇಲ್ಲ – ಬಿಜೆಪಿ ವಿರುದ್ಧ ಸಿದ್ದು ಗರಂ

ಬೆಳಗಾವಿಯ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ.

ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂಧಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ‌ ವಿಫಲವಾಗಿದೆ. ನೆರೆ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲಲು ಪ್ರತಿಭಟನಾ ಸಮಾವೇಶ ನಡೆಸುತ್ತಿದ್ದೇವೆ‌. ಇದು ನಮ್ಮ ಹೋರಾಟದ ಪ್ರಾರಂಭ. 105 ವರ್ಷಗಳ ನಂತರ ಕರ್ನಾಟಕದಲ್ಲಿ ಇಂತಹ ಭೀಕರ ಪ್ರವಾಹ ಬಂದಿದೆ. ಉತ್ತರ ಕರ್ನಾಟಕದಲ್ಲಿ ಬಹಳದೊಡ್ಡ ಪ್ರಮಾಣದ ಹಾನಿಯಾಗಿದೆ. 103 ತಾಲ್ಲೂಕುಗಳ ಜನರು ಪ್ರವಾಹಕ್ಕೆ ತುತ್ತಾಗಿ ಬೆಳೆ, ಮನೆ, ಚರಾಸ್ತಿ ಕಳೆದುಕೊಂಡಿದ್ದಾರೆ‌. ಏಳರಿಂದ ಎಂಟು ಲಕ್ಷ ಜನರು ಬೀದಿ ಪಾಲಾಗಿದ್ದಾರೆ.

ಇಪ್ಪತ್ತು ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇಂತಹ ಕೆಟ್ಟ ಪರಿಸ್ಥಿತಿ ಹಿಂದೆಂದೂ ಬಂದಿಲ್ಲ‌. ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ. ಯಡಿಯೂರಪ್ಪರನ್ನು ಟೀಕಿಸಲು ನಾವು ಪ್ರತಿಭಟನಾ ಸಭೆ ನಡೆಸುತ್ತಿಲ್ಲ. ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಒತ್ತಾಯ ಮಾಡುತ್ತಿದ್ದೇವೆ. ಯಡಿಯೂರಪ್ಪನವರು ಏನೂ ನಷ್ಟವೇ ಆಗಿಲ್ಲ ಅನ್ನೋ ಹಾಗೆ ಮಾತನಾಡುತ್ತಿದ್ದಾರೆ. ನಿಮ್ಮದು ಮನುಷ್ಯ ಚರ್ಮವೋ ಎಮ್ಮೇ ಚರ್ಮವೋ ಗೊತ್ತಾಗುತ್ತಿಲ್ಲ. ಕೇಂದ್ರ ಸಚಿವರ ಪ್ರವಾಸದಿಂದ ನಯಾಪೈಸೆ ಪ್ರಯೋಜನವಾಗಿಲ್ಲ‌. ಜನರಿಗೆ ಸ್ಪಂಧಿಸಲು ಆಗದಿದ್ದರೆ ನಿವ್ಯಾಕೆ ಅಧಿಕಾರದಲ್ಲಿ ಇರಬೇಕು? ಅಧಿಕಾರ ನಡೆಸಲು ಆಗದಿದ್ದರೆ ಕೆಳಗೆ ಇಳಿಯಿರಿ. ನಾವು ಬಂದು ಜನರ ಕಷ್ಟ ಪರಿಹಾರ ಮಾಡುತ್ತೇವೆ. ಜನರಿಗೆ ಪರಿಹಾರ ಕೊಡಲು ನಿಮಗೇನು ರೋಗ ಬಂದಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಅನ್ನಭಾಗ್ಯ ಯೋಜನೆಯ ಪಡಿತರದಲ್ಲಿ ಕಡಿತ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ನಿಲ್ಲಿಸಲು ಹೊರಟಿದ್ದರು. ರಾಜ್ಯ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ‌. ಪ್ರಧಾನಿ ಮೋದಿಯವರಿಗೆ ರಾಜ್ಯಕ್ಕೆ ಬಂದು ಜನರ ಕಷ್ಟ ಕೇಳಲು ಆಗಿಲ್ಲ. ಅಮೆರಿಕಕ್ಕೆ ಹೋಗಿ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡುತ್ತಿದ್ದಾರೆ‌‌. ಮುಂದಿನ ವರ್ಷ ಅಮೆರಿಕದಲ್ಲಿ ಚುನಾವಣೆಯಿದ್ದು ಡೊನಾಲ್ಡ್ ಟ್ರಂಪ್ ಪರ ಪ್ರಚಾರ ನಡೆಸುತ್ತಿದ್ದಾರೆ. ಅಮೆರಿಕಾಕ್ಕೆ ಹೋಗಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ‌‌. ರಾಜ್ಯದಲ್ಲಿ ಸರ್ವನಾಶ ಆಗುತ್ತಿದ್ದರೂ ಇಲ್ಲಿಗೆ ಬರುತ್ತಿಲ್ಲ‌. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತ ಹೋರಾಟಗಾರ ಅಂತೀರಲ್ಲಾ, ರೈತರ ಕಷ್ಟ ಕಣ್ಣಿಗೆ ಕಾಣಲ್ವಾ. ಕೇಂದ್ರದಿಂದ ಒಂದೇ ಒಂದು ರೂಪಾಯಿ ಪರಿಹಾರ ತರಲು ಆಗಿಲ್ಲ.

ಸಂಸದ ತೇಜಸ್ವಿ ಸೂರ್ಯ ಒಬ್ಬ ಅಪ್ರಬುದ್ಧ ರಾಜಕಾರಣಿ. ನನ್ನ ಮಗನಿಗಿಂತ ಸಣ್ಣ ವಯಸ್ಸಿನವನು, ಅವನಿಗೆ ಜನರ ಸಮಸ್ಯೆ ಗೊತ್ತಿಲ್ಲ. ನೆರೆಯಿಂದ 38 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಅಂತಾ ನೀವೇ ಒಪ್ಪಿಕೊಂಡಿದ್ದೀರಲ್ಲಪ್ಪ. ಬಿಜೆಪಿ ಕಾರ್ಯಕರ್ತರು ಹೇಳಿದವರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಮನೆ ಕಳೆದುಕೊಂಡವರಿಗೆ ಒಂದೇ ಒಂದು ಶೆಡ್ ನಿರ್ಮಿಸಿ ಕೊಟ್ಟಿಲ್ಲ. ಸುಳ್ಳು ಹೇಳಿ ಜನಗಳಿಗೆ ಮೋಸ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೆರೆ ಸಂತ್ರಸ್ತರ ಬಗ್ಗೆ ಕಾಳಜಿಯಿಲ್ಲ‌. ಯಡಿಯೂರಪ್ಪನವರೇ ನಿಮಗೆ ಮುಖ್ಯಮಂತ್ರಿ ಆಗಿ ಕೆಲಸ ಮಾಡಲು ಆಗದಿದ್ದರೆ ಬಿಟ್ಟುಬಿಡಿ. ಖುರ್ಚಿಬಿಟ್ಟು ಕೆಳಗೆ ಇಳಿಯಿರಿ‌. ಇಪ್ಪತ್ತೈದು ಕೋಟಿ ಕೊಟ್ಟು ಶಾಸಕರನ್ನು ಖರೀದಿಸಿದ್ರಿ‌. ಆಪರೇಷನ್ ಕಮಲ‌ ಮಾಡಿ ಅಧಿಕಾರಕ್ಕೆ ಬಂದ್ರಿ.
ಯಡಿಯೂರಪ್ಪನವರನ್ನು ನೋಡಿದ್ರೆ ನನಗೆ ಅಯ್ಯೋ ಅನಿಸುತ್ತೆ. ಯಡಿಯೂರಪ್ಪನವರಿಗೆ ತಾಕತ್ತೇ ಇಲ್ಲ. ಇಸ್ರೋಗೆ ಬಂದಿದ್ದ ಪ್ರಧಾನಿಗಳು ಯಡಿಯೂರಪ್ಪರನ್ನು ಕಣ್ಣೆತ್ತಿಯೂ ನೋಡಿಲ್ಲ.

ಯಡಿಯೂರಪ್ಪನವರೇ ರೈತರ ಸೊಸೈಟಿ ಸಾಲ, ಬ್ಯಾಂಕ್‌ಗಳ ಸಂಪೂರ್ಣ ಸಾಲ ಮನ್ನಾ ಮಾಡಿ. ಈಶ್ವರಪ್ಪ ಪರಿಹಾರ ಸಂತ್ರಸ್ತರಿಗೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದೇ ಹೆಚ್ಚು ಅಂತಾನೆ. ಅವಾ ಮಾತ್ರ ನೋಟ್ ಎಣಿಸುವ ಮಷೀನ್ ಇಟ್ಕೊಂಡವನೆ ಗಿರಾಕಿ. ಇಷ್ಟು ಮಾನಗೆಟ್ಟವರು, ಲಜ್ಜೆಗೆಟ್ಟವರು, ಜನ ವಿರೋಧಿಗಳನ್ನು ನಾನು ನೋಡಿರಲಿಲ್ಲ‌. ಬೆಳಗಾವಿಯಲ್ಲಿಯೇ ವಿಧಾನಸಭೆ ಅಧಿವೇಶನ ನಡೆಯಬೇಕು. ಮಿಸ್ಟರ್ ಯಡಿಯೂರಪ್ಪ ಬೆಳಗಾವಿಯಲ್ಲಿ ಅಧಿವೇಶನ ಮಾಡಿ. ನೆರೆ ಪರಿಹಾರದ ಬಗ್ಗೆ ಚರ್ಚಿಸುವಂತೆ ಅಧಿವೇಶನದಲ್ಲಿ ಪಟ್ಟು ಹಿಡಿಯುತ್ತೇವೆ. ರಾಜ್ಯಾದ್ಯಂತ ಕಾನೂನು ಉಲ್ಲಂಘನೆ ಚಳುವಳಿ ಮಾಡಬೇಕಾಗುತ್ತೆ‌. ಈ ಬಾರಿ ಅಸೆಂಬ್ಲಿ ನಡೆಯಲು ಬಿಡಲ್ಲ‌.

ಬೆಳಗಾವಿಯಲ್ಲಿ ಅಧಿವೇಶನ ನಡೆಸದಿದ್ದರೆ ಉತ್ತರ ಕರ್ನಾಟಕದ ಜನರಿಗೆ ಮಾಡುವ ದ್ರೋಹ. ಮೋದಿ, ಮೋದಿ ಅಂತಾ 25 ಜನರನ್ನು ಗೆಲ್ಲಿಸಿಕೊಟ್ರು. ಮೋದಿ ಎಲ್ಲಿದ್ದಾರೆ ಈಗ ? ಎಲ್ಲ ಯುವಕರ ನೌಕರಿ ಕಳೆದ್ರು. ದೇಶದ ಹಣಕಾಸಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಎಲ್ಲರನ್ನೂ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ, ಬಡವರ ಬಾಯಿಗೆ ಮಣ್ಣು ಹಾಕುತ್ತಿದ್ದಾರೆ. ಪ್ರವಾಹ ಪರಿಹಾರಕ್ಕೆ ದುಡ್ಡು ಕೊಡದ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿದ್ದಾರೆ. ಅಭಿವೃದ್ಧಿ ಅನುದಾನವನ್ನು ನೆರೆ ಪರಿಹಾರಕ್ಕೆ ಬಳಸಿದ್ರೆ ರಾಜ್ಯದಲ್ಲಿ ಬೆಂಕಿ ಹತ್ತಿಕೊಳ್ಳುತ್ತೆ.

ಕಾಂಗ್ರೆಸ್ ಪಕ್ಷ ಬಡವರು, ದಲಿತರು, ಮಹಿಳೆಯರ ಪಕ್ಷ‌. ಪ್ರವಾಹ ಸಂತ್ರಸ್ತರು ಹೆದರುವ ಅವಶ್ಯಕತೆಯಿಲ್ಲ, ನಾವು ನಿಮ್ಮ ಜೊತೆ ಇದ್ದೇವೆ. ನಿಮಗಾಗಿ ಜೈಲಿಗೆ ಹೋಗಲೂ ಸಿದ್ಧ, ಜೈಲ್ ಭರೋ ಚಳುವಳಿ ಮಾಡುತ್ತೇವೆ. ನೆರೆ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ.

Leave a Reply

Your email address will not be published.