ಡಯಾಲಸಿಸ್ ಯೂನೀಟ್ ಅವಾಂತರ – ಬಾಲಕ ಸಾವು – ತನಿಖೆಗೆ ಆದೇಶ

ಡಯಾಲಸಿಸ್ ಯೂನಿಟ್ ತೊಂದರೆಯಿಂದ ಓರ್ವ ಬಾಲಕ ಸಾವನ್ನಪ್ಪಿದ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಘಟನೆ ನಡೆದ ಬೆನ್ನ ಹಿಂದೆಯೇ ಆರೋಗ್ಯ ಇಲಾಖೆ ಉಪ ನಿರ್ದೇಶಕ ಚೆಲ್ವರಾಜ್ ನೇತೃತ್ವದ ತಂಡ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿತು. ಕೆಮಿಕಲ್ ಪ್ರಮಾಣದ ಹೆಚ್ಚಳದಿಂದ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿಲ್ಲ. ಘಟನೆಗೆ ಕಾರಣವಾದ ಅಂಶದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಪ ನಿರ್ದೇಶಕರು ತಿಳಿಸಿದ್ದಾರೆ. ಇನ್ನು ಯೂನಿಟ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಡಯಾಲಸಿಸ್ ಗೆಂದು ಬಂದ ರೋಗಿಗಳು ಪರದಾಡುವಂತಾಯಿತು. ಮತ್ತೊಂದೆಡೆ ಸಮಸ್ಯೆಗೆ ಗುರಿಯಾದ ರೋಗಿಗಳಿಗೆ ಜಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಕಲಬುರ್ಗಿ ಜಿಲ್ಲಾ ಆಸ್ಪತ್ರೆ ಇದೀಗ ಡಯಾಲಸಿಸ್ ಯೂನಿಟ್ ತೊಂದರೆಯಿಂದ ಓರ್ವ ಬಾಲಕ ಸಾವನ್ನಪ್ಪಿ, ಹಲವರು ಸಮಸ್ಯೆಗೆ ಗುರಿಯಾದ ಘಟನೆಯಿಂದ ಮತ್ತೊಂದೆ ಚರ್ಚೆಗೆ ಗ್ರಾಸವಾಗಿದೆ. ಡಯಾಲಸಿಸ್ ಯೂನಿಟ್ ನಲ್ಲಿ ಉಂಟಾದ ತೊಂದರೆಯಿಂದ ಶಹಾಬಾದ್ ನ ಆಕಾಶ್ ಎಂಬ ಬಾಲಕ ಸಾವನ್ನಪ್ಪಿದ್ದ. 12 ಜನ ಸಮಸ್ಯೆಗೆ ಗುರಿಯಾಗಿದ್ದರು.ಈ ಪೈಕಿ ಮುವ್ವರ ಸ್ಥಿತಿ ಗಂಭೀರವಾಗಿತ್ತು. ಒಂಬತ್ತು ರೋಗಿಗಳಿಗೆ ಜಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಡಯಾಲಸಿಸ್ ಯೂನಿಟ್ ಅವಘಡ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ.

ಇಂದು ಆರೋಗ್ಯ ಇಲಾಖೆ ಉಪ ನಿರ್ದೇಶಕ ಚೆಲ್ವರಾಜ್ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಡಯಾಲಸಿಸ್ ಯೂನಿಟ್ ಪರಿಶೀಲನೆ ನಡೆಸಿದರು. ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸ್ತ್ರತಜ್ಞ, ಜಿಮ್ಸ್ ಅಧೀಕ್ಷಕ ಮತ್ತಿತರರು ಉಪಸ್ಥಿತರಿದ್ದು, ಘಟನೆಯ ಕುರಿತು ಮಾಹಿತಿ ನೀಡಿದರು. ಆರೋಗ್ಯಾಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದ ಚೆಲ್ವರಾಜ್, ಯೂನಿಟ್ ನ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚೆಲ್ವರಾಜ್, ಸಮಸ್ಯೆಗೆ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ. ಕೆಮಿಕಲ್ ಪ್ರಮಾಣದ ಹೆಚ್ಚಳದಿಂದ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿಲ್ಲ. ಘಟನೆಗೆ ಕಾರಣವೇನೆಂಬುರ ಪತ್ತೆ ಮಾಡಲಾಗುವುದು. ಯಾರ ದೋಷದಿಂದ ಘಟನೆ ನಡೆದಿದೆ ಎಂಬುದನ್ನು ಪತ್ತೆ ಹತ್ತಿ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಡಯಾಲಸಿಸ್ ಯೂನಿಟ್ ನಲ್ಲಿನ ತೊಂದರೆಯಿಂದಾಗಿ ಬಡ ರೋಗಿಗಳು ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ಮುಂಚಿತವಾಗಿಯೇ ಡಯಾಲಸಿಸ್ ಚಿಕಿತ್ಸೆಗಾಗಿ ಸಮಾಯಾವಕಾಶ ಪಡೆದಿದ್ದ ರೋಗಿಗಳು ಇಂದು ಜಿಲ್ಲಾ ಆಸ್ಪತ್ರೆಗೆ ಬಂದು ನಿರಾಸೆಯಿಂದ ವಾಪಸ್ ಮಾರಳುವಂತಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಸಿಸ್ ಮಾಡಿಸಬೇಕೆಂದರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಸ್ಥಗಿತಗೊಂಡಿರುವುದರಿಂದ ತೀವ್ರ ತೊಂದರೆಯಾಗಿದೆ. ಮುಂದೆ ದಾರಿಯೇ ಕಾಣದಂತಾಗಿದೆ ಎಂದು ಕೆಲ ರೋಗಿಗಳ ಸಂಬಂಧಿಕರು ಕಣ್ಣೀರು ಹಾಕಿದರು.

ಖಾಸಗಿ ಆಸ್ಪತ್ರೆಯಲ್ಲಿ ಡಯಾಲಸಿಸ್ ಮಾಡಿಸೋ ಶಕ್ತಿ ತಮಗಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಡಯಾಲಸಿಸ್ ಮಾಡಿಸಿಕೊಳ್ಳದೇ ಇದ್ದರೆ ತುಂಬಾ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಆಂಧ್ರದಲ್ಲಿ ಡಯಾಲಸಿಸ್ ಚಿಕಿತ್ಸೆಗಾಗಿ ಒಬ್ಬ ರೋಗಿಗೆ 10 ಸಾವಿರ ರೂಪಾಯಿ ನೀಡುತ್ತಾರೆ. ಅದೇ ಮಾದರಿಯಲ್ಲಿ ತಮಗೂ ನೀಡಿದರೆ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆದುಕೊಳ್ಳಬಹುದಂದು ರೋಗಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
.ತಜ್ಞರ ಪರಿಶೀಲನೆಯ ನಂತರ, ಅವರು ನೀಡೋ ವರದಿಯ ಅನ್ವಯ ಡಯಾಲಸಿಸ್ ಯೂನಿಟ್ ಮತ್ತೆ ಆರಂಭಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕ ಚೆಲ್ವರಾಜ್ ಮಾಹಿತಿ ನೀಡಿದ್ದಾರೆ. ಅಲ್ಲಿಯವರೆಗೆ ಡಯಾಲಸಿಸ್ ಮಾಡಿಕೊಳ್ಳಲು ಬರೋ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ. ಇನ್ನು ಡಲಾಯಲಸಿಸ್ ಯೂನಿಟ್ ನಲ್ಲಿ ಉಂಟಾದ ಘಟನೆಯಿಂದ ತೊಂದರೆಗೀಡಾದವರು ಜಿಮ್ಸ್ ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಗುಣಮುಖರಾದ ನಂತರ ಅವರನ್ನು ಮನೆಗೆ ಕಳುಹಿಸಿಕೊಡಲಾಗುವುದು ಎಂದು ಚಿಕಿತ್ಸೆ ನೀಡುತ್ತಿರೋ ವೈದ್ಯರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published.