ದೆಹಲಿಯಲ್ಲಿ ವಿಷಕಾರಿ ಹೊಗೆ : ಹವಾಮಾನ ತುರ್ತು ಪರಿಸ್ಥಿತಿ ಘೋಷಣೆ

ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿಯ ಗುಣಮಟ್ಟ ದಿನೇ ದಿನೇ ಕೆಳಮಟ್ಟಕ್ಕೆ ಇಳಿಯುತ್ತಿದೆ. ಮಂಗಳವಾರ ಬೆಳಗ್ಗೆ ವಿಷಕಾರಿ ಹೊಗೆ ಮತ್ತೆ ದೆಹಲಿಯನ್ನು ಕಾಡಿದ್ದು,  ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ದೆಹಲಿ ಸುತ್ತಮುತ್ತಲ ಭಾಗದಲ್ಲಿ ರೈತರು ಕಠಾವಾದ ಗದ್ದೆಗೆ ಬೆಂಕಿ ಹಚ್ಚುತ್ತಿದ್ದಾರೆ. ಇದರ ಜೊತೆ ಗಾಳಿ ಬೀಸುವ ವೇಗ ಕಡಿಮೆ ಆಗುತ್ತಿದೆ. ಹೀಗಾಗಿ, ದೆಹಲಿಯ ಪರಿಸ್ಥಿತಿ ಮತ್ತೂ ಹದಗೆಟ್ಟಿದೆ. ಹೀಗಾಗಿ ದೆಹಲಿ ಜನತೆ ಆತಂಕಕ್ಕೊಳಗಾಗಿದೆ.

ಇಂದು ಬೆಳಗ್ಗೆ ನೋಯ್ಡಾ ಸೆಕ್ಟರ್​ 62ನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 768 ತಲುಪಿದೆ. ಈ ಮೂಲಕ ವಾಯುವಿನ ಗುಣಮಟ್ಟ ಅಪಾಯಕಾರಿ ಮಟ್ಟವನ್ನೂ ಮೀರಿ ಹೋಗಿದೆ. ಗಜಿಯಾಬಾದ್​ (714), ದಿಟೆ ಓಕ್ಲಾ (624), ಬವಾನಾ (792), ರೋಹಿಣಿ (692) ಹಾಗೂ ಆನಂದ್​ ವಿಹಾರ್​ನಲ್ಲಿ ಗಾಳಿಯ ಗುಣಮಟ್ಟ 666  ಇದೆ.

0-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತೀ ಕಳಪೆ, 401-500 ಅಪಾಯಕಾರಿ, 500 ನಂತರ ಅತಿ ಅಪಾಯಕಾರಿ ಎಂದು ವಿಂಗಡಿಸಲಾಗಿದೆ. ಈಗ ದೆಹಲಿ ಅತಿ ಅಪಾಯಕಾರಿ ಸಾಲಿನಲ್ಲಿ ನಿಂತಿದೆ.
ದೆಹಲಿ ಸರ್ಕಾರ ಈಗಾಗಲೇ ರಾಷ್ಟ್ರ ರಾಜಧಾನಿಯಲ್ಲಿ ಅಧಿಕ ವಾಯು ಮಾಲಿನ್ಯವಿರುವ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಅಲ್ಲದೆ, ಎಲ್ಲರಿಗೂ ಉಚಿತವಾಗಿ ಮಾಸ್ಕ್ ಅನ್ನು ಸಹ ನೀಡಿ, ಸಾರ್ವಜನಿಕರು ತಮ್ಮ ಹಾಗೂ ತಮ್ಮ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಹಾಗೂ ಮನೆಯಿಂದ ಹೊರಬರದಂತೆ ಸೂಚಿಸಿದೆ.

Leave a Reply