ನಾಳೆ ದೇಶದಾದ್ಯಂತ ತೆರೆ ಕಾಣಲಿರುವ ‘ಕುರುಕ್ಷೇತ್ರ’ ಚಿತ್ರ ವೀಕ್ಷಿಸಿದ ದಚ್ಚು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಆಗಸ್ಟ್ 9ರಂದು ದೇಶದಾದ್ಯಂತ ತೆರೆ ಕಾಣಲಿದ್ದು, ತಮ್ಮ ನೆಚ್ಚಿನ ನಾಯಕನ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುನಿರತ್ನ ನಿರ್ಮಾಣದ ಈ ಚಿತ್ರ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದ್ದು, ಚಿತ್ರದ ಕುರಿತು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ದರ್ಶನ್ ಅಭಿನಯದ 50ನೇ ಚಿತ್ರ ಇದಾಗಿದ್ದು, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ನಿಖಿಲ್ ಕುಮಾರ್, ರವಿಶಂಕರ್ ಸೇರಿದಂತೆ ಹಲವು ಘಟಾನುಘಟಿ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ಆರಂಭದಿಂದಲೂ ಭಾರಿ ನಿರೀಕ್ಷೆ ಮೂಡಿಸಿರುವ ಕುರುಕ್ಷೇತ್ರ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗಿದೆ.

ಆಗಸ್ಟ್ 9 ರ ವರಮಹಾಲಕ್ಷ್ಮಿ ಹಬ್ಬದಂದು ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಇದಕ್ಕೂ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಜೊತೆ ಕುರುಕ್ಷೇತ್ರವನ್ನು ವೀಕ್ಷಿಸಿದ್ದಾರೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದು, ಚಿತ್ರ ನೋಡಿದ ಬಳಿಕ ಇದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆನ್ನಲಾಗಿದೆ.

Leave a Reply

Your email address will not be published.