ಬಿಜೆಪಿ ಬಾವುಟ ಹಿಡಿದು ಸಂಭ್ರಮಿಸಿದ ಕಾಂಗ್ರೆಸ್​-ಜೆಡಿಎಸ್​ನ 16 ಶಾಸಕರು : ಅನರ್ಹರಿಗೆ ಅಭಯ ನೀಡಿದ ಸಿಎಂ

ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್​​ ಅವಕಾಶ ನೀಡಿ ಆದೇಶ ನೀಡಿದ ಹಿನ್ನೆಲೆ ಶಿವಾಜಿನಗರ ಅನರ್ಹ ಶಾಸಕ ರೋಷನ್​ ಬೇಗ್​ ಹೊರತು ಪಡಿಸಿ ಉಳಿದ  ಕಾಂಗ್ರೆಸ್​-ಜೆಡಿಎಸ್​ನ 16 ಶಾಸಕರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡನೆಗೊಂಡರು.

ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡರು. ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗದ ಬೃಹತ್ ವೇದಿಕೆಯ ಮೇಲೆ ಕೇಸರಿ ಶಾಲು ಹೊದ್ದು ಮಿಂಚುತ್ತಿದ್ದ ಅನರ್ಹ ಶಾಸಕರು ಒಬ್ಬೊಬ್ಬರಾಗಿಯೇ ಬಂದು ಬಿಎಸ್ ವೈಯಿಂದ ಪಕ್ಷದ ಬಾವುಟ ಸ್ವೀಕರಿಸಿ, ಮುರಳೀಧರ್ ರಾವ್, ನಳೀನ್ ಕುಮಾರ್ ಕಟೀಲ್ ರವರು ಎಲ್ಲರ ಕೈ ಕುಲುಕಿ ಸ್ವಾಗತಿಸಿದರು.

ಮಹೇಶ್​ ಕುಮಟಹಳ್ಳಿ, ರಮೇಶ್​ ಜಾರಕಿಹೊಳಿ, ಹೆಚ್.ವಿಶ್ವನಾಥ್​, ಶಂಕರ್​, ಆನಂದ್​ ಸಿಂಗ್​, ಪ್ರತಾಪ್​ ಗೌಡ ಪಾಟೀಲ್​, ಬಿ.ಸಿ.ಪಾಟೀಲ್​, ಶಿವರಾಮ್​ ಹೆಬ್ಬಾರ್, ನಾರಾಯಣಗೌಡ, ಎಸ್​.ಟಿ.ಸೋಮಶೇಖರ್​, ಗೋಪಾಲಯ್ಯ, ಭೈರತಿ ಬಸವರಾಜು, ಮುನಿರತ್ನ,  ಸುಧಾಕರ್​, ಶ್ರೀಮಂತ ಪಾಟೀಲ್ ಎಲ್ಲರೂ ಹೆಗಲ ಮೇಲೆ ಕೇಸರಿ ಶಾಲು ಹೊದ್ದು, ಬಿಜೆಪಿ ಬಾವುಟ ಹಿಡಿದು ಸಂಭ್ರಮಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ,  ನಿಮಗೆ ನೀಡಿದ ಭರವಸೆ ಹುಸಿಗೊಳಿಸುವುದಿಲ್ಲ.  ವಿಶ್ವಾಸ ದ್ರೋಹ ಮಾಡುವುದಿಲ್ಲ ಎಂದು ಕಮಲಪಾಳೆಯ ಸೇರಿದ ಎಲ್ಲಾ ಅನರ್ಹರಿಗೆ ಅಭಯ ನೀಡಿದರು.

ದೇಶದಲ್ಲಿ ಒಟ್ಟಿಗೆ 17 ಶಾಸಕರು ಏಕಕಾಲಕ್ಕೆ ರಾಜೀನಾಮೆ ಕೊಟ್ಟ ಇತಿಹಾಸವಿಲ್ಲ. ಪಕ್ಷಕ್ಕೆ ಸೇರಿದ  ಈ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲೆ ಇದೆ. ಅವರ ಗೆಲುವಿಗೆ ತನು, ಮನ, ಧನದಿಂದ ಕಾರಣರಾಗಬೇಕು ಎಂದು ಇದೇ ವೇಳೆ ಕಾರ್ಯಕರ್ತರಿಗೆ ಕರೆ ನೀಡಿದರು.

ಅನರ್ಹತರ ಜೊತೆಗೆ 26 ಸಂಸದರು. ನೂರಾರು ಶಾಸಕರು, ಕಾರ್ಯಕರ್ತರು ನಿಮ್ಮ ಜೊತೆ ಇದ್ದೇವೆ. ಕೇಂದ್ರದ ನಾಯಕತ್ವ ಕೂಡ ನಿಮ್ಮ ಜೊತೆಗೆ ಇದೆ. ಶಾಸಕ ಸ್ಥಾನ ತ್ಯಾಗ ಮಾಡಿ ನೀವು ಬಂದಿದ್ದೀರಾ.  ಯಾವುದೇ ಒಡಕಿನ ಮಾತಿಗೆ ಕಿವಿಕೊಡಬೇಡಿ ನಿಮ್ಮ ಜೊತೆ ನಾವು ಸದಾ ಇದ್ದೇವೆ. ನಿಮ್ಮ ಗೆಲುವು ಶೇ 100ರಷ್ಟು ನಿಶ್ಚಿತ ಎಂದು ಭವಿಷ್ಯ ನುಡಿದರು.

 

 

Leave a Reply