ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಪ್ರಶಸ್ತಿ ಸ್ವೀಕರಿಸಿ ರವೀಶ್ ಕುಮಾರ್ ಮಾಡಿದ ಪೂರ್ಣ ಭಾಷಣದ ಕನ್ನಡ ಅನುವಾದ

ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ‘ಗೌರಿ ಲಂಕೇಶ್ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಎನ್.ಡಿ.ಟಿ.ವಿ ಹಿಂದಿಯ ವ್ಯವಸ್ಥಾಪಕ ಸಂಪದಾಕರಾದ ರವೀಶ್ ಕುಮಾರ್ ರವರು ಪ್ರಶಸ್ತಿ ಸ್ವೀಕರಿಸ ಮಾಡಿದ ಸಂಪೂರ್ಣ ಭಾಷಣವನ್ನು ಕರ್ನಾಟಕದ ಓದುಗರಿಗಾಗಿ ಮಲ್ಲಿಗೆ ಸಿರಿಮನೆಯವರು ಕನ್ನಡೀಕರಿಸಿದ್ದಾರೆ.

ರವೀಶ್ ಕುಮಾರ್, ಗೌರಿ ಸ್ಮಾರಕ ಪ್ರಶಸ್ತಿ ವಿಜೇತ ಪತ್ರಕರ್ತರು:

ನಾನು ಹ್ಯೂಸ್ಟನ್‍ನಲ್ಲಿ ಇಲ್ಲ, ಬೆಂಗಳೂರಿನಲ್ಲಿದ್ದೇನೆ.

‘ಗೌರಿ ಲಂಕೇಶ್ ನಿರಂತರ’ ಇದು ನಾನು ಇವತ್ತು ಸ್ವಲ್ಪವೇ ಕಲಿತ ಕನ್ನಡ. ಇಂದಿರಾ ಲಂಕೇಶ್ ಅವರೇ, ಇವತ್ತು ನಿಮ್ಮ ಮಗಳ ಹೆಸರಿನ ಪ್ರಶಸ್ತಿ ತೆಗೆದುಕೊಳ್ಳುತ್ತಿದ್ದೇನೆ. ನನಗೆ ಬಹಳ ಗೌರವದ ಸಂಗತಿ ಇದು. ಜೀವನದಲ್ಲಿ ನನ್ನಿಂದ ಏನಾದರೂ ತಪ್ಪಾದರೆ ಮಗ ಅಂದುಕೊಂಡು ಕ್ಷಮಿಸಿ ಬಿಡಿ.

ನಾನು ಭಾರತದ ಯಾವ ಭಾಗದಿಂದ ಬಂದಿದ್ದೇನೆಂದರೆ, ಸರಳವಾಗಿ ಅದನ್ನು ಉತ್ತರ ಭಾರತ ಎಂದು ಕರೆಯಲಾಗುತ್ತದೆ. ಆ ಭಾಗದ ಪುಣ್ಯ ಪ್ರಸೂನ್ ವಾಜಪೇಯಿ ಮೊದಲ್ಗೊಂಡು ಅನೇಕ ಪತ್ರಕರ್ತರು ಸಂಸ್ಥೆಯನ್ನು ತೊರೆಯಬೇಕಾಗಿ ಬಂದಾಗ ಅವರ ಪರವಾಗಿ ಯಾರೂ ನಿಲ್ಲಲಿಲ್ಲ. ಆದರೆ ನೀವಿಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ, ಈ ಸಭಾಂಗಣದಲ್ಲಿರುವ ಎಲ್ಲರೂ ಬಹಳ ಒಳ್ಳೆಯ ಜನ, ಒಬ್ಬ ಪತ್ರಕರ್ತೆಯ ಪರವಾಗಿ ಸೇರಿದ್ದೀರಿ. ಇದು ಬಹಳ ಹೆಮ್ಮೆಯ ವಿಚಾರ.

ಯಾವ ಸಮಯದಲ್ಲಿ ಹಿಂದಿಯ ಪತ್ರಕರ್ತ ಪ್ರಭುತ್ವದ ಸನ್ನೆಯ ಮೇಲೆ ರಸ್ತೆಗೆ ಎಸೆಯಲ್ಪಟ್ಟನೋ ಆಗ ಅವರ ಹಿಂದಿ ಕೆಲಸಕ್ಕೆ ಬರಲಿಲ್ಲ. ಹಿಂದಿಯ ಹೆಸರಿನಲ್ಲಿ ಬಾಕಿ ಹಿಂದೂಸ್ಥಾನವನ್ನು ಹೆದರಿಸುವವರು ಹಿಂದಿಯನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಅವರು ಹಿಂದಿ ಮಾತನಾಡುವವರನ್ನು ಹೆದರಿಸಿಟ್ಟಿದ್ದಾರೆ; ಆದ್ದರಿಂದ ಕನ್ನಡ ಮರಾಠಿ ತೆಲುಗು ಮಾತಾಡುವವರನ್ನೂ ಹೆದರಿಸಬಹುದು ಅಂದುಕೊಂಡಿದ್ದಾರೆ. ಉತ್ತರದಿಂದ ಬಂದು ಹಿಂದಿಯ ಹೆಸರಿನಲ್ಲಿ ಯಾರಾದರೂ ನಿಮ್ಮನ್ನು ಹೆದರಿಸಲು ನೋಡಿದರೆ ಹೆದರಬೇಡಿ. ಅದರ ಬದಲು, ನಿಮಗೆ ಹಿಂದಿಯನ್ನಾಡುವ ಉತ್ತರದ ಸಾಮಾನ್ಯ ಜನರ ಬಗ್ಗೆ ಕರುಣೆ ಇರಲಿ, ಹಿಂದಿ ಆಡುವ ಅವರ ಆಳುವವರು ಅವರನ್ನು ಮೋಸಗೊಳಿಸಿ ಬಹಳ ದುಃಸ್ಥಿತಿಯಲ್ಲಿಟ್ಟಿದ್ದಾರೆ. ಅವರಿಗೆ ಆ ಜನರೊಂದಿಗೆ ಹೇಳಲು ಏನೂ ಉಳಿದಿಲ್ಲ. ಅದಕ್ಕೆ ನಿಮ್ಮನ್ನು ಹೆದರಿಸಲು ಬಂದಿದ್ದಾರೆ.

ಆ ಭಾಗದಲ್ಲಿ ಒಂದೂ ಅಂತಹ ವಿಶ್ವವಿದ್ಯಾಲಯ ಉಳಿದಿಲ್ಲ, ಅದರ ಬಗ್ಗೆ ಆ ಭಾಗದ ಯುವಜನರು ತಲೆ ಎತ್ತಿ ಅಭಿಮಾನದಿಂದ ಮಾತನಾಡಬಹುದಾದದ್ದು. ಅದಕ್ಕೇ ಅಲ್ಲಿನ ಯುವಜನರು ಎಸ್‍ಎಸ್‍ಎಲ್‍ಸಿ ಮುಗಿದ ಕೂಡಲೇ ದೇಶದ ಬೇರೆ ಯಾವ ಭಾಗಕ್ಕೆ ಹೋಗಲಿ ಎಂದು ಗಂಟು ಮೂಟೆ ಕಟ್ಟಿ ಹಿಂದಿ ಭಾಗದಿಂದ ಪಲಾಯನ ಮಾಡುತ್ತಾರೆ. ಆದ್ದರಿಂದ ಅವರ ಬಗ್ಗೆ ಕರುಣೆ ಇರಲಿ……….

ದೇವಿಯವರು ಹೇಳಿದಂತೆ ನಾವು ಪ್ರತಿಭಟಿಸದೇ ಸುಮ್ಮನಿದ್ದು ನಮ್ಮ ನೈತಿಕ ಶಕ್ತಿ ಬಹಳ ದುರ್ಬಲ ಆಗಿಹೋಗಿದೆ. ಈ ಪಕ್ಷಗಳಲ್ಲಿ, ಅವರ ನೇತಾರರಲ್ಲಿ ಯಾವುದೇ ನೈತಿಕ ಶಕ್ತಿ ಉಳಿದಿಲ್ಲ. ಗಾಂಧೀಜಿ, ನೌಖಾಲಿಯಲ್ಲಿ ಅವರ ಮೇಲೆ ಕಲ್ಲು ಎಸೆಯಲಾಗುತ್ತಿದ್ದಾಗಲೂ, ಸಮಾಜದಲ್ಲಿ ದ್ವೇಷ ತುಂಬಿದ್ದಾಗಲೂ; ಮುಸಲ್ಮಾನರು ಹಿಂದೂಗಳನ್ನು ಕೊಲ್ಲುವಲ್ಲೂ, ಹಿಂದೂಗಳು ಮುಸಲ್ಮಾನರನ್ನು ಕೊಲ್ಲುವಲ್ಲೂ ನೈತಿಕ ಶಕ್ತಿಯಿಂದ ಹೇಳಿದರು, “ನಾನು ಹಿಂದೂ ಪಾರ್ಸಿ ಸಿಖ್ಖ್ ಮತ್ತು ಮುಸಲ್ಮಾನನಿದ್ದೇನೆ” ಎಂದು.

ಆ ನೈತಿಕ ಶಕ್ತಿಯಿಂದ ಇವತ್ತಿಗೆ ನೇತಾರರು ಬಹಳ ದೂರ ಹೊರಟು ಹೋಗಿದ್ದಾರೆ. ನಾವು ನಮ್ಮನ್ನು ನಾವು ಸ್ವತಂತ್ರರಾಗಿಸಿಕೊಂಡು ನಮ್ಮೊಳಗಿನ ನೈತಿಕ ಶಕ್ತಿಯನ್ನು ಜಾಗೃತಗೊಳಿಸಬೇಕು. ನಾವೆಲ್ಲರೂ ನಾಯಕರಾಗಬೇಕು, ಇತಿಹಾಸ ಒಂದು ಅವಕಾಶ ನಮಗೆ ಕೊಟ್ಟಿದೆ. ನಾವು ಆ ಬದಲಾವಣೆ ತರಬಲ್ಲವೇ?

ಬಹಳ ಸುಳ್ಳನ್ನು ಪ್ರಜಾತಂತ್ರದ ಹೆಸರಿನಲ್ಲಿ ಹರಡಿಬಿಟ್ಟಿದ್ದೇವೆ. ಸಾಮಾನ್ಯ ಜನರಿಗೆ 20 ವರ್ಷಗಳಾದರೂ ನ್ಯಾಯ ಸಿಗುವುದಿಲ್ಲ. ಇದು ಹೇಗೆ ಪ್ರಜಾತಂತ್ರ? ಕೇವಲ ಮತ ಚಲಾಯಿಸುವುದಷ್ಟೇ ಪ್ರಜಾತಂತ್ರವಲ್ಲ. ನಾವು ಯಾವುದೇ ಸರ್ಕಾರ ಅಥವಾ ಪ್ರತಿಪಕ್ಷವನ್ನು ಸರಿಯಾಗಿ ಮೌಲ್ಯಮಾಪನ ಮಾಡಿಲ್ಲವಾದರೆ ಓಟು ಹೇಗೆ ಕೊಡುತ್ತೇವೆ?

ಯಾವ ಕಾಲದಲ್ಲಿ ಮೀಡಿಯಾ ಸ್ವತಂತ್ರವಾಗಿಲ್ಲವೋ, ಆ ಕಾಲದಲ್ಲಿ ಸರ್ಕಾರದ ಮೌಲ್ಯಮಾಪನ ಹೇಗೆ ಮಾಡಿದಿರಿ? ಹ್ಯೂಸ್ಟನ್‍ನಲ್ಲಿ ಎಷ್ಟು ಜನರನ್ನು ತಂದು ತುಂಬಲಾಯಿತು ಎಂಬ ಆಧಾರದ ಮೇಲೆಯೇ? ಟಿವಿ ಚಾನಲ್‍ಗಳ ಆಂಕರ್‍ಗಳ ಭಾಷೆ ನೋಡಿದರೆ, ಪ್ರತಿಭಟನೆಯ ಸ್ವರಗಳನ್ನು ‘ಶತ್ರು’, ದೇಶದ್ರೋಹಿ ಮೊದಲಾಗಿ ಬರೆಯಲಾಗುತ್ತದೆ. ಇವರು ಮುಂದಿಡುವ ಅಭಿಪ್ರಾಯದ ಆಧಾರದಲ್ಲಿ ಯಾವುದೇ ಸರ್ಕಾರವನ್ನಾದರೂ ಮೌಲ್ಯಮಾಪನ ಮಾಡಲು ಸಾಧ್ಯವೇ?

ಭಾರತದ ಪ್ರಜಾತಂತ್ರದೊಂದಿಗೆ ಪ್ರೀತಿ ಇರುವುದೇ ಆದರೆ, ಇವತ್ತು ಮೀಡಿಯಾದ ಜೊತೆಗೆ ನೀವು ಹೋರಾಡಲೇಬೇಕು. ಇವತ್ತು ಹೋರಾಡದಿದ್ದರೂ ನಾಳೆ ರಸ್ತೆಗಿಳಿದು ನೀವು ಇವರ ವಿರುದ್ಧ ಹೋರಾಡಲೇಬೇಕಾಗುತ್ತದೆ. ಬಹಳಷ್ಟು ಜನರು ಯಾರೆಲ್ಲ ತಮ್ಮ ಸಮಸ್ಯೆಗಳಿಗಾಗಿ ರಸ್ತೆಗಿಳಿಯುತ್ತಿದ್ದಾರೋ, ಅವರು ಪ್ರಧಾನ ಮಂತ್ರಿಗಳ ಮತದಾರರೇ ಆಗಿದ್ದರು. ಅವರು ಗಂಟೆಗಟ್ಟಲೆ ಮೆರವಣಿಗೆ ಮಾಡಿದರೂ ಮಾಧ್ಯಮಗಳಲ್ಲಿ ಅವರ ಬಗ್ಗೆ ಒಂದು ಸಾಲಿನ ಸುದ್ದಿ ಪ್ರಸಾರವಾಗುವುದಿಲ್ಲ; ಜಾಲತಾಣಗಳಲ್ಲಿ ಅವರೇ ತಮ್ಮ ಸುದ್ದಿ ಮಾಡಿಕೊಳ್ಳಬೇಕಾಗಿದೆ.

ಯುವಜನರು ಟ್ವಿಟರ್‍ನಲ್ಲಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿ ಟ್ರೆಂಡ್ ಮಾಡುತ್ತಿದ್ದಾರೆ, ಆದರೆ ಇದು ಚಾನಲ್ ಗಳ ಮಾಲೀಕರಿಗೆ, ಆಂಕರ್‍ಗಳಿಗೆ ಕಾಣುತ್ತಿಲ್ಲ. ಅವರು ಪ್ರಧಾನಮಂತ್ರಿಗಳನ್ನು ಅವತಾರ ಎನ್ನುತ್ತಿದ್ದಾರೆ. ಇದು ಅತ್ಯಂತ ದುರದೃಷ್ಟದ ವಿಚಾರ.

ಕೇವಲ ಓಟು ಹಾಕಿ ಆ ಬೆರಳು ತೋರಿಸುತ್ತಾ ಸೆಲ್ಫೀ ಹಾಕುವುದು ಅತ್ಯಂತ ಅಸಹ್ಯಕರ ವಿಚಾರ. 80% ಮತದಾನವಾದರೆ, ಅದು ಮಾತ್ರ ಲೋಕತಂತ್ರದ ಮಹತ್ವದ ಕೆಲಸವಲ್ಲ, ಅದರ ಕೆಲಸ ಅಲ್ಲಿಂದ ಮುಂದೆ ಆರಂಭವಾಗುತ್ತದೆ, ವೋಟು ಹಾಕಿದ ಮೇಲೆ ಅವರು ಏನು ಮಾಡಿದರು ಎಂಬುದು ಮುಖ್ಯ.

ಯುವಜನರು ಅಷ್ಟು ದೊಡ್ಡ ಪ್ರಮಾಣದಲ್ಲಿ ಮತ ಹಾಕಿದರೂ, ತಾವೇ ಮತ ಹಾಕಿದವರಿಗೆ ತಮ್ಮ ಮಾತನ್ನು ತಲುಪಿಸಲು ನೋಡಿದರೆ, ಮೀಡಿಯಾ ಅವರ ನಡುವೆ ಅಡ್ಡಿಯಾಗಿ ನಿಂತಿದೆ.

ಪ್ರತಿ ಸಂಜೆ ಭಾರತದ ಪ್ರಜಾತಂತ್ರವನ್ನು ಕೊಲೆ ಮಾಡಲಾಗುತ್ತಿದೆ. ಒಬ್ಬ ಸಂಸದ ಕಾಶ್ಮೀರಕ್ಕೆ ಹೋಗಲು ಸುಪ್ರಿಂ ಕೋರ್ಟ್‍ನಿಂದ ವೀಸಾಗೆ ಅನುಮತಿ ತೆಗೆದುಕೊಳ್ಳುವ ಸ್ಥಿತಿಯಿರುವಾಗ, ಪ್ರಧಾನಮಂತ್ರಿಗಳು ಕಾಶ್ಮೀರದ ಜನರನ್ನು ಅಪ್ಪಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಅಲ್ಲಿ ಹೋಗಿ ಯಾರಾದರೂ ನಿಜಕ್ಕೂ ಅಪ್ಪಿಕೊಳ್ಳಲು ನೋಡಿದರೆ ಅವರನ್ನು ರಾಜಕೀಯ ಮಾಡುತ್ತಿದ್ದೀರಿ ಎಂದು ಜೈಲಿಗೆ ಹಾಕಬಹುದು.

ಇಂದು ಯುವಜನರು ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಹಿಂದೂ ಮುಸ್ಲಿಂ ವಿರೋಧದ ಡಿಬೇಟನ್ನು ಬಹಳ ಚೆನ್ನಾಗಿ ಮಾಡುವ ಈ ಯುವಕರು ಕೊನೆಗೊಮ್ಮೆ ತಮ್ಮ ಬದುಕು ಇವರಿಂದ ಮುಗಿದುಹೋಯಿತು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ; ಅರ್ಥಮಾಡಿಕೊಳ್ಳುವ ದಿನಗಳು ಬರುತ್ತವೆ.

ಯುಪಿ ಬಿಹಾರವನ್ನು ನರಕವಾಗಿಸುವುದಕ್ಕಾಗಿ, ಕಾಶ್ಮೀರವನ್ನು ಸ್ವರ್ಗವಾಗಿಸುವ ಕನಸನ್ನು ಅಲ್ಲಿ ಹಂಚುತ್ತಿದ್ದಾರೆ. ಜಾಧವ್‍ಪುರ ಯೂನಿವರ್ಸಿಟಿಯ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಮಾತನ್ನು ಆಳುವವರು ಆಡುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯಗಳನ್ನು ಸಲೀಸಾಗಿ ಪಾಕಿಸ್ತಾನ ಎಂದು ಕರೆದುಬಿಡುವ ಜನರು ಹೇಗೆ ನಮ್ಮ ಬದುಕನ್ನು ಸ್ವರ್ಗವಾಗಿಸಲು ಸಾಧ್ಯ? ಅಂತಹ ದೇಶ ಸ್ವರ್ಗವಾಗಲು ಸಾಧ್ಯವಿಲ್ಲ.

ಹಿಂದಿ ಪ್ರದೇಶದ ಜನರ ಬಗ್ಗೆ ನನಗೆ ಬಹಳ ದುಃಖವಾಗುತ್ತದೆ. ಓದಲು ಕಲಿಯಲು ಸರಿಯಾದ ಒಂದು ಕಾಲೇಜಿಲ್ಲ, ಯೂನಿವರ್ಸಿಟಿಯಿಲ್ಲ. ತಮ್ಮ ಮಕ್ಕಳನ್ನು ಓದಿಸಲು ಅಲ್ಲಿನ ಪೋಷಕರು ದುಬಾರಿ ದರ ತೆತ್ತು ಇಂಜಿನಿಯರಿಂಗ್ ಓದಿಸುತ್ತಾರೆ. ಆದರೆ ಕೊನೆಯಲ್ಲಿ ಒಬ್ಬ ಸುಸಜ್ಜಿತ ಉದ್ಯಮಿ ಅವರಿಗೆ ಭಾಷಣ ಕೊಡುತ್ತಾನೆ “ಭಾರತದ ಶೇ.90ರಷ್ಟು ಎಂಜಿನಿಯರ್‍ಗಳು ಉದ್ಯೋಗಕ್ಕೆ ಅರ್ಹರಲ್ಲ”! ಇದನ್ನು ಹೇಳುವವರು, ಇಂಜಿನಿಯರಿಂಗ್ ಓದುವಾಗ ಫೀಸ್ ಕಟ್ಟುವಾಗ ಯಾಕೆ ಅದನ್ನು ಹೇಳಲಿಲ್ಲ. ಅವರ ಮೇಲೆ ಕ್ರಮ ಆಗಬೇಕು ತಾನೆ? ಇಂತಹ ಕೆಟ್ಟ ಶಿಕ್ಷಣ ಕೊಟ್ಟಿದ್ದಕ್ಕೆ.

ನಾನು ನಿಮಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಲು ಆಗುತ್ತಿಲ್ಲ. ಹಿಂದಿಯಲ್ಲಿ ಮಾತನಾಡಬೇಕಾಗಿ ಬಂದಿದೆ. ಕ್ಷಮೆ ಇರಲಿ. ನನ್ನ ಮಾತೃಭಾಷೆ ಭೋಜಪುರಿ.

ನನಗೆ ಹಿಂದಿ, ಭೋಜಪುರಿ, ಉರ್ದು ಬರುತ್ತದೆ. ಇಂಗ್ಲೀಷನ್ನು ಪ್ರತಿಭಟಿಸಿ ಅದನ್ನು ನಾನು ಕಲಿಯಲಿಲ್ಲ. ಅದು ನನಗೆ ಭಯ ಹುಟ್ಟಿಸಿತು. ಹಿಂದಿಯೊಳಗೆ ಹೋಗಿ ಅಡಗಿಕೊಂಡೆ. ಭಯ ಬಂದಾಗ ಹುಟ್ಟುವ ಬೆವರನ್ನು ಒರೆಸುವ ಒಣಗಿದ ಸೀರೆಯಂತೆ ನನಗೆ ಹಿಂದಿ ಭಾಸವಾಗುತ್ತಿತ್ತು. ನನಗೆ ಗೊತ್ತಿರುವ ಹಿಂದಿ, ಜನಸಾಮಾನ್ಯರ ಬದುಕಿನೊಂದಿಗೆ ಹೆಣೆದುಕೊಂಡಿರುವುದು. ಅವರ ಬೆವರೊರೆಸುವುದು, ಅವರ ಹೆಗಲಿನ ಟವೆಲ್, ಸೊಂಟಕ್ಕೆ ಸುತ್ತುವ ಬಟ್ಟೆ ಏನುಬೇಕಾದರೂ ಆಗಬಹುದು. ಆದರೆ ಇನ್ನೊಂದು ಭಾಷೆಯನ್ನು ಬೆದರಿಸುವಂಥದ್ದಲ್ಲ.

ಆದ್ದರಿಂದ ನನ್ನ ಹಿಂದಿಯಿಂದ ನೀವು ಹೆದರಬಾರದು ಎಂದು ಆಶಿಸುತ್ತೇನೆ. ಇದು, ಯಾವಾಗ ನಾವು ಯಾರನ್ನಾದರೂ ಪ್ರೀತಿಸುತ್ತೇವೋ ಆಗ, ಅವರ ಜೊತೆಗೆ ಹೃದಯದ ಮಾತುಕತೆ ಮಾಡಲು ಬೇಕಿರುವ ಸಾಧನ. ನಿಮ್ಮೊಂದಿಗೆ ನಾನು ಏನೆಲ್ಲ ಮಾತನಾಡಬೇಕೆಂದುಕೊಂಡು ಬಂದಿದ್ದೇನೋ, ಅದೆಲ್ಲವನ್ನೂ ಮನಸ್ಪೂರ್ವಕವಾಗಿ ಮಾತಾಡಲು ಬೇಕಾದಷ್ಟು ಇಂಗ್ಲೀಷ್ ನನಗೆ ಚೆನ್ನಾಗಿ ಬರುವುದಿಲ್ಲ. ಮನೀಲಾದಲ್ಲಿ ಮ್ಯಾಗ್ಸೆಸೆ ತೆಗೆದುಕೊಂಡಾಗ ಮಾಡಿದ ಭಾಷಣವೂ ನಾನು ಇಂಗ್ಲೀಷಿನಲ್ಲಿ ಬರೆದಿದ್ದಲ್ಲ, ಹಿಂದಿಯಲ್ಲಿ ಬರೆದುಕೊಂಡದ್ದನ್ನು ನನ್ನ ಪತ್ನಿ ಮತ್ತು ಸ್ನೇಹಿತರ ನೆರವಿನಿಂದ ಇಂಗ್ಲೀಷಿಗೆ ಅನುವಾದಿಸಿ, ರಿಹರ್ಸಲ್ ಮಾಡಿಕೊಂಡು ಓದಿದ್ದು. ನನ್ನ ಮಾತೃಭಾಷೆ ಹಿಂದಿಯಲ್ಲ, ಭೋಜಪುರಿ. ಬಿಹಾರದ ದುಡಿದು ಬದುಕುವ ಜನರ ಭಾಷೆ. ಅವರು ಎಲ್ಲಿ ಹೋದರೂ ದೈಹಿಕ ಕೆಲಸ ಮಾಡಲು ಹಿಂಜರಿಯದ ಜನರು. ಅಂತೆಯೇ, ಸಾಮಾನ್ಯ ಜನರ ಹಿಂದಿಯೂ ಕೂಡಾ ಹಿಂದಿಯೂ ಕೂಡಾ ಭೋಜಪುರಿಯಂತೇ ಇದೆ, ಕೂಲಿ ಕೆಲಸ ಮಾಡುತ್ತಿದೆ, ಬಸ್ಸುಗಳಲ್ಲಿ ಕೂತು ತಿನ್ನುತ್ತಿದೆ, ಇಂಗ್ಲೀಷಿನ ಹೆಸರಿನಲ್ಲಿ ಕೆಳತಳ್ಳಲ್ಪಟ್ಟಿದೆ.

ಈ ಹಿಂದಿಯನ್ನು ನೇತಾಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಹಿಂದಿ ಭಾಷೆಗೆ ಗೊತ್ತಿದೆ. ಇಂದಿಗೂ ಹಿಂದಿ ಪ್ರದೇಶಗಳಲ್ಲಿ ಹಿಂದಿಯ ಹೆಸರಿನಲ್ಲಿ ಸರಿಯಾದ ಶಾಲೆ, ಕಾಲೇಜು ಅಲ್ಲಿನ ಮಕ್ಕಳಿಗೆ ಸಿಗಲಿಲ್ಲ. ಅವರು ಕೆಲಸ ಹುಡುಕಿ ಕಛೇರಿಗಳನ್ನು ತಲುಪಿದರೆ ಅವರಿಗೆ ಅಲ್ಲಿ ಇಂಗ್ಲೀಷ್ ಬೇಟೆಗಾರನಂತೆ ಕಾಡುತ್ತದೆ. ಕುರ್ಚಿಯ ಮೇಲೆ ಕೂತ ತಕ್ಷಣ ಹಿಂದಿಯೂ ಇಂಗ್ಲೀಷಿನಂತೆ ಬೇಟೆಗಾರನ ರೂಪ ತಾಳುತ್ತದೆ.  ಹಿಂದಿಯ ಜನರೂ ಕೂಡಾ ಅಭದ್ರತೆಯಲ್ಲಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸಾಮಾನ್ಯ ಹಿಂದಿಭಾಷಿಕರನ್ನು ನಮ್ಮವರಾಗಿಸಿಕೊಳ್ಳಬೇಕು. ಶಿವರಾಜ್‍ಸಿಂಗ್ ಚೌಹಾಣ್ ಅವರನ್ನು ಈ ಮಾತು ಕೇಳಿದರೆ ಬೇಸರಗೊಂಡು ಇಂಗ್ಲೀಷಿನಲ್ಲಿ ಮಾತನಾಡುತ್ತಾರೆ.

ಯಾಕೆ ಯುಪಿಎಸ್‍ಸಿ ಬರೆಯುವವರಲ್ಲಿ ಹಿಂದಿ ಮಾತನಾಡುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೇಳಿದರೆ ಅದಕ್ಕೆ ಆಳುವವರು ಉತ್ತರ ಕೊಡುವುದಿಲ್ಲ, ಅದರ ಬದಲು ದಕ್ಷಿಣವನ್ನು ಬೆದರಿಸಲು ನೋಡುತ್ತಾರೆ. ದಕ್ಷಿಣ ಬೆದರಲು ಒಪ್ಪದೆ ಪ್ರತಿಭಟಿಸಿದರೆ, ಆಗ ಸಮಜಾಯಿಸಿ ಕೊಡುತ್ತಾರೆ.

ದಕ್ಷಿಣ ಹಾಗೂ ಪೂರ್ವವನ್ನು ಬೆದರಿಸುವ ಬದಲು ಹಿಂದಿ ಪ್ರದೇಶಕ್ಕಾಗಿ ಏನು ಮಾಡಿದ್ದೀರಿ ಹೇಳಿ ಎಂದರೆ ಉತ್ತರ ಸಿಗುವುದಿಲ್ಲ. ಆದ್ದರಿಂದ ನಾವು ಮೊದಲು ಸರ್ಕಾರದ ಭಾಷೆ ಬದಲಿಸಬೇಕು. ನಂತರ ಬೇಕಾದರೆ ನಮ್ಮ ನಮ್ಮ ನಡುವೆ ಭಾಷೆಯ ಜಗಳ ಮಾಡಬೇಕು. ಭಾಷೆಯ ಪ್ರಭಾವದ ಬದಲು ಆ ಭಾಷೆಯನ್ನು ಆಡುವ ಜನರ ಅಭಾವದ ಸ್ಥಿತಿಯ ಬಗ್ಗೆ ಮಾತನಾಡಬೇಕು. ಇಂದು ಪ್ರಧಾನಮಂತ್ರಿಗಳನ್ನ ಬೆಂಬಲಿಸುವ ಅನೇಕ ಜನರು ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದಾರೆ, ಆದರೆ ಹಿಂದಿ ರಾಷ್ಟ್ರಭಾಷೆ ಆಗಬೇಕು ಎನ್ನುತ್ತಾರೆ! ಪ್ರಭುತ್ವದಲ್ಲಿರುವವರ ಹಿಂದಿ ಬಾಯಿಯಿಂದ ಇಳಿದ ತಕ್ಷಣ ಲಾಠಿ ಆಗುತ್ತದೆ.

ಹಿಂದಿಯಲ್ಲಿ ಜನಪರ ಕಾವ್ಯವನ್ನು ರಚಿಸಿದ ಕೇದಾರನಾಥ್ ಸಿಂಗ್ ಅವರ ಕವಿತೆ

“ನಾಲ್ಕು ರಸ್ತೆ ಸೇರುವಲ್ಲಿ ನಿಂತು ಕೈ ಮುಗಿದು ಕೇಳುತ್ತೇನೆ………………..

ನಾನು ಮಾತನಾಡುವಾಗ ಅರಬಿ, ಉರ್ದು, ತೆಲುಗು ಎಲ್ಲವೂ ನನಗೆ ಕೇಳುತ್ತದೆ, ಎಲ್ಲಿಯವರೆಗೆಂದರೆ ಒಂದು ಒಣಗಿನ ಎಲೆ ಅಲ್ಲಾಡುವ ಸದ್ದೂ ಕೂಡಾ”.

ಹಿಂದಿ ಹುಟ್ಟುವ ಮೊದಲಿನಿಂದಲೂ ಭಾರತವಿದೆ. ಪಾಳಿ ಮೊದಲಾದ ಅನೇಕ ಭಾಷೆಗಳಿದ್ದವು. ಸಾವಿರಾರು ವರ್ಷ ಯಾವುದಾದರೂ ಒಂದೇ ಭಾಷೆ ಇಡೀ ದೇಶಕ್ಕೆ ಸಮಾನವಾಗಿ ಬೇಕು ಎಂಬ ಮಾತೇ ಇಲ್ಲದೆ, ಎಲ್ಲ ಭಾಷೆಗಳೂ ಸೇರಿ ಈ ಭಾರತವನ್ನು ಭಾರತವಾಗಿಸಿವೆ. ಯಾಕೆ ಇಂದು ಒಂದು ಭಾಷೆಯೊಳಗೆ ಎಲ್ಲವೂ ಸೇರಬೇಕು? ಭಾರತದ ಸತ್ವ ಹಿಂದಿ ಭಾಷೆಗಿಂತ ಮೊದಲಿನದ್ದು….ಭೋಜಪುರಿ, ಮೈಥಿಲಿ, ಗಾಂಧಾರಿ ಎಲ್ಲ ಭಾಷೆಗಳನ್ನೂ ನುಂಗಿ ಹಿಂದಿ ಬೆಳೆಯುತ್ತಿದೆ. ನಿಜವಾದ ಪ್ರಜಾತಂತ್ರದೊಳಗೆ ಮಾತೃಭಾಷೆಗಳನ್ನು ಬದುಕಿಸಬೇಕಾಗುತ್ತದೆ. ಅದರೊಳಗೆ ಜೀವವನ್ನು ಗ್ರಹಿಸಬೇಕಾಗುತ್ತದೆ.

ಚಾನಲ್‍ಗಳು ಯಾವ ಹಿಂದಿ ಮಾತನಾಡುತ್ತಿದ್ದಾರೋ, ಅದು ಬಹಳ ಫ್ಯೂಡಲ್ ಆಗಿದೆ. ಅದನ್ನು ಪುರುಷ ಆಂಕರ್ ಮಾತನಾಡಿದರೂ ಅಥವಾ ಮಹಿಳೆ ಮಾತನಾಡಿದರೂ ಅಷ್ಟೇ, ಅದು ಬೆದರಿಸುವ ದಬ್ಬಾಳಿಕೆಯ ಹಿಂದಿ.

ಹಿಂದಿ ಮಾತನಾಡುವ ಜನರು ಬೇರೆ ಸ್ಥಳಗಳ ಭಾಷೆ ಕಲಿಯುವುದಿಲ್ಲ, ಆದ್ದರಿಂದ ಹಿಂದಿ ಬೆಳೆಯುತ್ತಿಲ್ಲ ಎಂಬ ಅಭಿಪ್ರಾಯವನ್ನು ಕೇಳುತ್ತೇವೆ. ಅದು ಸರಿಯಿದೆ. ಹಲವು ಭಾಷೆಗಳನ್ನು ಪೋಣಿಸಿದ ಸರದಂತೆ ಎಲ್ಲ ಭಾಷೆಗಳಲ್ಲೂ ಇನ್ನುಳಿದವೆಲ್ಲ ಇರಬೇಕು. ಇಂದಿನ ಪತ್ರಿಕೆಯಲ್ಲಿ ಓದಿದೆ, ಇಲ್ಲಿನ ಸಾಮಾನ್ಯ ಟ್ಯಾಕ್ಸಿ ಚಾಲಕರೂ ಕೂಡಾ ಸರ್ವೇ ಸಾಧಾರಣವಾಗಿ 5 ಭಾಷೆಗಳಲ್ಲಿ ಮಾತನಾಡಬಲ್ಲರು ಎಂದು. ನಾವು ಈ ರೀತಿ ಭಾಷೆಗಳನ್ನು ಕಲಿಯುವುದೇ ಇಲ್ಲ; ಅದರ ಬಗ್ಗೆ ನನಗೆ ಖೇದವಿದೆ. ಅದರಿಂದಾಗಿ ನಾನು ಇಲ್ಲಿನ ಒಬ್ಬ ಟ್ಯಾಕ್ಸಿ ಚಾಲಕನೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಾರೆ. ಈ ಬಾರಿಯೂ ನಿಮಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡುತ್ತಿರುವುದಕ್ಕೆ ಕ್ಷಮಿಸಿ. ನಾನೂ ಕೂಡಾ ಮುಂದಿನ ಸಲ ಆದಷ್ಟು ಮಟ್ಟಿಗೆ ನಿಮಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ.

ನಿಜ ಹೇಳಬೇಕೆಂದರೆ, ಹಿಂದಿ ರಾಷ್ಟ್ರಭಾಷೆ ಎಂದು ಆದೇಶಿಸುತ್ತಿರುವವರೂ ಕೂಡಾ ಹಿಂದಿಗಾಗಿ ಏನನ್ನೂ ಮಾಡುತ್ತಿಲ್ಲ. ಯುಪಿಯ 10 ಲಕ್ಷ ಮಕ್ಕಳು ಹಿಂದಿ ಭಾಷೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲಾದರು. ಹಾಗಾದರೆ ಅವರಿಗೆ ಆ ಭಾಷೆ ಎಷ್ಟ ಭಯ ಹುಟ್ಟಿಸಿರಬಹುದು? ಆದ್ದರಿಂದ ನಮ್ಮ ಆಳುವವರು ಜನರನ್ನು ಹೆದರಿಸಲಷ್ಟೇ ಹಿಂದಿಯನ್ನು ಹಿಡಿದುಕೊಂಡಿದ್ದಾರೆ. ಈ ಹಿಂದೆ ಇವರ ಸರ್ಕಾರ ಬಂದಾಗ ಸಂಸ್ಕøತದ ಜೊತೆ ಇಂತಹದ್ದೇ ನಾಟಕ ಆರಂಭವಾಗಿತ್ತು. ಬನಾರಸ್‍ನಲ್ಲಿ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ತುಂಬ ಚಮಕ್ ಇರುವ ಕಟ್ಟಡ ಇದೆ, ಆದರೆ ಉಪನ್ಯಾಸಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ವಿವಿಯ ಯಾವ ಕೆಲಸವೂ ಈ ಸರ್ಕಾರದಿಂದ ಆಗಿಲ್ಲ.

ಆದ್ದರಿಂದ ಸರ್ಕಾರದ ಭಾಷೆಯಲ್ಲಿ ಎಷ್ಟರ ಮಟ್ಟಿಗೆ ಜನರ ದನಿ ಇದೆ ಎಂಬುದನ್ನು ನೋಡಬೇಕು. ಯಾವುದೇ ಪ್ರದೇಶದ ಒಂದಷ್ಟು ಸಂಸದರನ್ನು ಮುಂದಿಟ್ಟುಕೊಂಡು ಜನರನ್ನು ಹೆದರಿಸಬಾರದು.

ಗೌರಿ ಲಂಕೇಶರ ಬದುಕು ಇದನ್ನೇ ತೋರುತ್ತದೆ. ಗೌರಿ ಬಹಳ ಕಾಲ ಇಂಗ್ಲೀಷ್ ಪತ್ರಕರ್ತೆಯಾಗಿದ್ದರು. ಆದರೆ, ಅವರಿಗೆ ಮುಕ್ತಿ ಸಿಕ್ಕಿದ್ದು ಕನ್ನಡದಲ್ಲಿ ಬರೆಯಲು ಆರಂಭಿಸಿದಾಗ. ಆಗ ಅವರು ಜನಪತ್ರಕರ್ತೆಯಾದರು, ನಿಜವಾದ ಪತ್ರಕರ್ತೆಯಾದರು.

ಚಂದನ್ ಗೌಡ ಅವರು ಇಂಗ್ಲೀಷಿಗೆ ಅನುವಾದಿಸಿದ ಗೌರಿಯವರ ಒಂದು ಪುಸ್ತಕ ನನಗೆ ಸಿಕ್ಕಿತು. ಗೌರಿಯವರು ಹೇಳುತ್ತಾರೆ-“ನನ್ನ ತಂದೆ ನಂಬಿದ್ದರು, ಇಂಗ್ಲೀಷ್ ಭಾರತದ ಕುಲೀನ ಜನರ ತೋರಿಕೆಯ ಭಾಷೆ, ಯಾವ ಭಾಷೆಯಲ್ಲಿ ಭಾರತೀಯತನ, ನಮ್ಮತನ ಇರುವುದಿಲ್ಲವೋ, ಅಂತಹ ಭಾಷೆಯಲ್ಲಿ ಸರಿಯಾದ ಅಭಿವ್ಯಕ್ತಿ ಸಾಧ್ಯವಿಲ್ಲ”. ಹೀಗೆಂದು ಲಂಕೇಶರು ಭಾವಿಸಿದ್ದರೆಂದು ಗೌರಿ ಹೇಳಿದ್ದಾರೆ. ಯು ಆರ್ ಅನಂತಮೂರ್ತಿಯವರು ‘ಭಾಷೆಗಳು ಸ್ಥಳೀಯೀಕರಣಗೊಳ್ಳಬೇಕು’ ಎಂದು ಬರೆದಿದ್ದಾರೆ.

ದುಃಖದ ಸಂಗತಿಯೆಂದರೆ ಇಂತಹ ಪತ್ರಕರ್ತೆಯನ್ನು ಗುಂಡು ಹೊಡೆದು ಕೊಲ್ಲಲಾಯಿತು. ಯಾವ ಯುವಜನರು ಇಲ್ಲಿನ ಸಾಫ್ಟ್‍ವೇರ್‍ನ ಚಮಕ್‍ನಲ್ಲಿ, ಹಾಫ್ ಪ್ಯಾಂಟ್ ಹಾಫ್ ಶರ್ಟ್ ಹಾಕಿ ತಿರುಗುತ್ತಿದ್ದಾರೋ ಅವರು ಇದರ ಗಿಲ್ಟ್‍ನ್ನು ಹೇಗೆ ಎದುರಿಸಬಲ್ಲರೋ ಗೊತ್ತಿಲ್ಲ, ನನಗೆ ಗೊತ್ತಿಲ್ಲ. ಈಗಾದರೂ ನಾವೆಲ್ಲ ಮೌನ ಮುರಿಯಲೇಬೇಕು, ಮಾತಾಡಲೇಬೇಕು.

“ಗೋಡ್ಸೆಯವರ ಪಿಸ್ತೂಲನ್ನು ಹರಾಜಿನಲ್ಲಿ ಪಡೆದುಕೊಂಡು ನೋಡಿ, ಅವರು ದೇಶಭಕ್ತರೋ ಉಗ್ರವಾದಿಯೋ ಎಂದು” ಅಂತ ಯಾರೋ ನನಗೆ ಹೇಳಿದರು. ಗೋಡ್ಸೆ ಕೊಲೆ ಮಾಡಿಯೂ ಆತ ‘ಗೋಡ್ಸೆಯವರು’, ಗಾಂಧೀಜಿ ಮಾತ್ರ ನಮಗೆ ಏನೂ ಅಲ್ಲವೇ! ಇದು ಯಾವ ಶಿಕ್ಷೆ ನಮಗೆ? ಒಂದು ಮಾತು ನೆನಪಿರಲಿ, ನೀವು ಕೊಲೆಗಾರರ ಪಕ್ಕ ನಿಂತರೂ ನಾಳೆ ಗಾಂಧಿಯೇ ನಿಮಗೆ ಬಹಳ ತೂಕದವರಾಗಿ ಕಾಡುತ್ತಾರೆ, ಸಾವಿಗೀಡಾದ ನಂತರವೂ!

ಇವತ್ತು ಎಲ್ಲ ಟಿವಿ ಚಾನಲ್‍ಗಳು ಇಂಡಿಯಾ ಇಂಡಿಯಾ ಅನ್ನುತ್ತಿವೆ, ಅವರಿಗೆ ಮಾತ್ರವೇ ದೇಶಪ್ರೇಮ ಇರುವವರಂತೆ; ಆದರೆ ನಾವುಗಳು ದೇಶವನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುತ್ತೇವೆ. ದೇಶದ ಬಗ್ಗೆ ತುಂಬ ಮಾತನಾಡುವವರು ಕಲಿಯಬೇಕು, ದೇಶದ ಮಣ್ಣನ್ನು ಮಾತ್ರವಲ್ಲ, ದೇಶದೊಳಗಿನ ಜನರನ್ನು ಪ್ರೀತಿಸಬೇಕು.

ಈ ದಿನ ನನ್ನ ಪಾಲಿಗೆ ಅವಿಸ್ಮರಣೀಯ. 102 ವರ್ಷಗಳ ಹಿರೀಕರಾದ ಎಚ್.ಎಸ್ ದೊರೆಸ್ವಾಮಿಯವರು ನಮ್ಮ ನಡುವೆ, ಈ ತಾತ ನಿಮ್ಮಲ್ಲಿ ಭರವಸೆ ಮೂಡಿಸಲು ಸ್ಫೂರ್ತಿ ತುಂಬಲು ಇಲ್ಲಿ ಇದ್ದಾರೆ; ಗಾಂಧೀಜಿಯನ್ನು ನೋಡಿದ ಇವರು ಇಲ್ಲಿದ್ದಾರೆ. ಕರ್ನಾಟಕದ ನಿಮ್ಮ ಬಳಿ ಏನಿದೆ ಎಂಬುದು ನಿಮಗೆ ನಿಜಕ್ಕೂ ಗೊತ್ತಿಲ್ಲ. ಇಂತಹ ಅಮೂಲ್ಯವಾದ ಖಜಾನೆ ನಿಮ್ಮಲ್ಲಿದೆ! ಇಂದಿನ ಸಂಜೆ ಎಷ್ಟು ಚೆನ್ನಾಗಿದೆ; 2 ವರ್ಷ ವಯಸ್ಸಿನ ಗೌರಿ ಸ್ಮಾರಕ ಟ್ರಸ್ಟ್‍ಗೆ 102 ವರ್ಷ ವಯಸ್ಸಿನ ಅಧ್ಯಕ್ಷರು!!

ಇಂದಿನ ನಿಮ್ಮ ಪ್ರೀತಿಗಾಗಿ ನಾನು ನಿಮಗೆ ಸದಾ ಋಣಿಯಾಗಿರುತ್ತೇನೆ. ನೀವು ಹೂಸ್ಟನ್ನಿನ ಕರೆದುತಂದು ಸೇರಿಸಲಾದ ಜನರ ಹಾಗಿರುವವರಲ್ಲ; ನಿಜವಾಗಿಯೂ ಬಹಳ ಒಳ್ಳೆಯ ಜನರೆಲ್ಲ ಇಲ್ಲಿ ಸೇರಿದ್ದೀರಿ. ಗೌರಿಯ ಹೆಸರಿನ ಈ ಪ್ರಶಸ್ತಿಯನ್ನು ನೀವು ನನಗೆ ಕೊಟ್ಟು ಗೌರವಿಸುತ್ತಿರುವುದಕ್ಕೆ, ಕವಿತಾ ಲಂಕೇಶ್ ಮತ್ತು ಇಂದಿರಾ ಲಂಕೇಶ್ ಅವರಿಗೆ, ತೀಸ್ತಾ, ದೊರೆಸ್ವಾಮಿಯವರು ಮತ್ತು ಗಣೇಶ್ ದೇವಿಯವರಿಗೆ ಆಭಾರಿ. ನೀವೆಲ್ಲ ಬಹಳ ಒಳ್ಳೆಯ ಮಾತುಗಳನ್ನು ಆಡಿದ್ದೀರಿ. ಇಲ್ಲಿರುವ ಎಲ್ಲರೂ ಬಹಳ ಪ್ರೀತಿ ತೋರಿಸಿದ್ದೀರಿ. ಇದರ ನೆನಪು ಸದಾ ಚಿರಸ್ಥಾಯಿ. ವಂದನೆಗಳು!•     ರವೀಶ್ ಕುಮಾರ್

ನಾವು ಯಾವುದನ್ನು ಸತ್ಯ ಎಂದು ಭಾವಿಸುತ್ತೇವೊ ಆ ಸತ್ಯ ಹೇಳುವ ಧೈರ್ಯ ಹೊಂದಿ ಅಂತಹ ಮಾಧ್ಯಮಕ್ಕಾಗಿ ಹೋರಾಡದಿದ್ದರೆ ಇಲ್ಲಿ ಎಲ್ಲ ವ್ಯರ್ಥ ವಾಗಲಿದೆ…ಸತ್ಯ ಹೇಳುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಗೌರಿಯಾಗಬೇಕು…ಪ್ರತಿಯೊಬ್ಬರೂ ರವೀಶ್ ಕುಮಾರ್ ಆಗಬೇಕು ಎಂದು ಗೌರಿ ಸ್ಮಾರಕ ಟ್ರಸ್ಟ್ ನ ಪ್ರೊ. ಜಿ.ಎನ್ ದೇವಿ ಯವರು ಅಭಿಪ್ರಾಯಪಟ್ಟರು.

Leave a Reply