ಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳು ಆರಂಭಗೊಳ್ಳುವ ಭರವಸೆ ನೀಡಿದ ಸಿಎಂ

ಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳು ಆರಂಭಗೊಳ್ಳುವ ಭರವಸೆಯನ್ನು ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.

ಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳು ಆರಂಭವಾಗಲಿವೆ. ಈ ಬಗ್ಗೆ ಈಗಾಗಲೇ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿಮ್ಮ ಮನವಿಗಳಿಗೆ ಮುಂದಿನ ಫೆಬ್ರವರಿ ಬಜೆಟ್ ನಲ್ಲಿ ಹಣ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ನೆರೆ ಬಂದು ಸಾಕಷ್ಟು ಹಾನಿಯಾಗಿದ್ದು, ಹಲವರು ಮನೆ, ಬೆಳೆ ಕಳೆದುಕೊಂಡಿದ್ದಾರೆ. ಅಕ್ಟೋಬರ್ 3 ರ ಕ್ಯಾಬಿನೆಟ್ ಸಭೆ ಮುಗಿಸಿ, ಮತ್ತೇ ಪ್ರವಾಸ ಮಾಡುತ್ತೇನೆ. ನೆರೆಪೀಡಿತ ಭಾಗದಲ್ಲಿ ನಾಲ್ಕು ದಿನ ಮತ್ತೇ ಪ್ರವಾಸ ಮಾಡಲಿದ್ದೇನೆ. ಅಲ್ಲಿನ ಜನರು ಹಾಗೂ ಅಧಿಕಾರಿಗಳೋಂದಿಗೆ ಮತ್ತೇ ಸ್ಥಳಗಳ ಪರಿಶೀಲನೆ ಮಾಡುತ್ತೇನೆ. ನಾನು ಎಲ್ಲಾ ಜಿಲ್ಲೆ- ತಾಲೂಕುಗಳ ಅಭಿವೃದ್ಧಿಗೆ ಕೆಲಸ ಮಾಡಬೇಕಿದೆ.

ನಾನು ಕೇವಲ ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆಗೆ ಮಾತ್ರ ಮುಖ್ಯಮಂತ್ರಿಯಾಗಿಲ್ಲ ಎಂಬುದು ನಿಮಗೆ ಗೊತ್ತಿದೆ. ನೀರಾವರಿ ಇಲಾಖೆ ನನ್ನ ಕೈಯಲ್ಲೇ ಇದೆ. ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಾಗುವುದು. ಶಿಕಾರಿಪುರ ಹಾಗೂ ಸೊರಬ ತಾಲೂಕಿಗೆ ನೀರಾವರಿ ಕಲ್ಪಿಸಲು ಕಲ್ಲೊಡ್ಡು ಹಾಗೂ ಮೂಡಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ.

ಜನತಾ ದರ್ಶನದಲ್ಲಿ ನೀಡುವ ಅರ್ಜಿಗಳಿಗೆ ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು. ಅತಿವೃಷ್ಟಿಯಿಂದ ಹಾನಿಯಾಗಿದೆ ಹೀಗಾಗಿ ಅಭಿವೃದ್ಧಿ ಕಾಮಗಾರಿಗಳಿಗೆ 36 ಸಾವಿರ ಕೋಟಿ ರೂಪಾಯಿ ಹೊಂದಿಸಬೇಕಾಗಿದೆ. ಹೀಗಾಗಿ ಇಂದು ಅರ್ಜಿ ಸಲ್ಲಿಸಿದವರಿಗೆ ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಿ ಕೆಲಸ ಮಾಡಿಕೊಡಲಾಗುವುದು. ಶಿವಮೊಗ್ಗ ವಿಮಾನ ನಿಲ್ದಾಣ ಹತ್ತು ತಿಂಗಳ ಒಳಗಾಗಿ ಮುಗಿಸಲು ಸೂಚಿಸಿ 45 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ. ವಿಮಾನ ನಿಲ್ದಾಣ ಪೂರ್ಣಗೊಂಡರೆ ಇನ್ನಷ್ಟು ಕೈಗಾರಿಕೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭಗೊಳ್ಳಲಿವೆ.

ಇನ್ನು ರೈಲ್ವೇ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ಸಂಪರ್ಕ ಕಲ್ಪಿಸುವ ರೈಲ್ವೇ ಯೋಜನೆಗೆ ಈಗಾಗಲೇ ಭೂಸ್ವಾದೀನ ಕಚೇರಿ ಆರಂಭಿಸಲಾಗಿದೆ. ಜೊತೆಗೆ ರೈಲ್ವೇ ಯೋಜನೆಗೆ ರಾಜ್ಯ ಸರ್ಕಾರದ ಪಾಲು 750 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

Leave a Reply