ಮೈಸೂರು ಡೀಸಿ ನಿಂದಿಸಿದ್ದ ಸಿ.ಎಂ ಆಪ್ತರನ್ನ ಬಂಧಿಸ್ಬೇಕಂತೆ-ಶೋಭಾ !

shikha2ಬೆಂಗಳೂರು: ಅಕ್ರಮ ಬಡಾವಣೆಯನ್ನ ಸುಪರ್ಧಿಗೆ ತೆಗೆದುಕೊಂಡಿದ್ದಕ್ಕೆ ಪ್ರತಿಯಾಗಿ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರನ್ನು ಸಿಎಂ ಆಪ್ತ ಮರಿಗೌಡ ಮತ್ತು ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಕೂಡಲೇ, ಅವರನ್ನು ಬಂಧಿಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಆಪ್ತ ಮರಿಗೌಡರು ಡೀಸಿ ಶಿಖಾ ಅವರನ್ನು ಕೆಟ್ಟ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾರಿನಿಂದ ಹೊರಗೆಳೆಯುವ ಪ್ರಯತ್ನ ನಡೆಸಿದ್ದಾರೆ. ಐಎಎಸ್ ಅಧಿಕಾರಿಗಳಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲದಿದ್ದರೆ ಜನಸಾಮಾನ್ಯರ ಗತಿ ಏನು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮರಿಗೌಡ ಅಕ್ರಮ ಬಡಾವಣೆ ನಿರ್ಮಿಸಿದ್ದಾರೆ. ಸರ್ಕಾರು ಜಮೀನಿನಲ್ಲಿ ನಿರ್ಮಿಸಿರುವ ಬಡಾವಣೆ ಜಾಗವನ್ನು ಡೀಸಿ ಆದೇಶದ ಮೇರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಲ್ಲಿನ ನಿವೇಶನಗಳ ಜಾಗವನ್ನು ಡಿ ನೋಟಿಫಿಕೇಷನ್ ಮಾಡಲು ಒತ್ತಡ ತಂದರು. ಇದಾಗದಿದ್ದಾಗ ಡೀಸಿ ಜೊತೆ ಜಟಾಪಟಿ ನಡೆಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

ಶಿಖಾ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಘಟನೆ ನಡೆಯುತ್ತಿದ್ದಂತೆ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ದೂರು ಪಡೆಯಲು ಎರಡು ಗಂಟೆ ಕಾಯಿಸಿದ್ದಾರೆ.ಸಿಎಂ ಜೊತೆ ಮಾತನಾಡಿ ದೂರು ನೀಡದಂತೆ ಒತ್ತಡ ಹೇರಿದರೂ ಅವರು ಜಗ್ಗಿಲ್ಲ, ನಂತರವಷ್ಟೇ ದೂರು ದಾಖಲಿಸಿಕೊಂಡಿದ್ದಾರೆ.ಹೀಗಾಗಿ ಕೂಡಲೇ ಮರಿಗೌಡ ಹಾಗೂ ಅವರ ಬೆಂಬಲಿಗರನ್ನು ಬಂಧಿಸಬೇಕು. ಜಿಲ್ಲಾಧಿಕಾರಿ ಶಿಖಾ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಮಹಿಳಾ ದೌರ್ಜನ್ಯದಡಿ ಪ್ರಕರಣ ದಾಖಲು ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು.

shikha Shobha

 

 

 

 

 

 

ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಿಎಂ ಹಾಗೂ ಅವರ ಪುಡಾರಿಗಳು ಈ ವಾತಾವರಣ ಸೃಷ್ಠಿಸಿದ್ದಾರೆ. ಇದನ್ನು ನಿಯಂತ್ರಿಸಲು ಮುಂದಾದ ಅಧಿಕಾರಗಳ ವಿರುದ್ಧ ರಾಜಕೀಯ ಒತ್ತಡ ತರುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

“ರಾಜ್ಯದಿಂದ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಣಿಕೆಯಾಗುತ್ತಿದೆ. ದಿನ ರಾತ್ರಿ ಸಾವಿರಾರು ಲಾರಿಗಳು ಕೇರಳಕ್ಕೆ ಮರಳು ಹೊತ್ತು ಸಾಗುತ್ತಿದೆ, ನೀವು ಒಂದು ದಿನ ಕೇರಳ ಗಡಿಯಲ್ಲಿ ನಿಂತು ನೋಡಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ನಿಮ್ಮ ಮೂಗಿನ ಕೆಳಗೇ ಇದು ನಡೆಯಿತಿದೆ. ಮಂತ್ರಿಗಳು ಸಂಬಂಧಿಕರ ನೆರಳಿನಲ್ಲೇ ಇದು ನಡೆಯುತ್ತಿದ್ದು ಈ ಮಾಫಿಯಾಗೆ ಶ್ರೀರಕ್ಷೆಯಾಗಿದ್ದಾರೆ. ಇದನ್ನ ತಡೆಯಲು ಬಂದ ಅಧಿಕಾರಿಗಳಿಗೆ ಉಳಿಗಾಲವಿಲ್ಲದಂತಾಗಿದೆ” ಎಂದು ಆರೋಪಿಸಿದರು.

ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ಕೆಲಸ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮಲ್ಲಿಕಾರ್ಜುನ ಬಂಡೆ ಸಾವಿನ ರೌಡಿ ಏನಾದ..? ಡಿಕೆ ರವಿ ಸಾವಿನ ಕಥೆ ಏನು..? ಎನ್ನುವುದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ. ಕೂಡಲೇ ರಶ್ನಿ ಮಹೇಶ್ ಕೇಸು ಮರಳಿ ತೆರೆದು ಹಲ್ಲೆ ನಡೆದ ಘಟನೆ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಿಎಂ ಸುತ್ತಮತ್ತಲಿರೋರಿಂದ ಹಫ್ತಾ ವಸೂಲಿ

“ಸಿಎಂ ಸುತ್ತಾಮುತ್ತಾ ಇರೋರಿಂದ ಹಫ್ತಾ ವಸೂಲಿಯಾಗುತ್ತಿದೆ ರಂದು ಅಧಿಕಾರಿಗಳೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಭಯದಿಂದಾಗಿ ಅವರಿಗೆ ಬಹಿರಂಗವಾಗಿ ಹೇಳಲಾಗುತ್ತಿಲ್ಲ. ಆಫ್ ದಿ ರೆಕಾರ್ಡ್ ಮಾಹಿತಿ ನೀಡಿದ್ದಾರೆ. ಸಿಎಂ ಒಎಸ್ ಡಿ ಗಳಿಂದಲೇ ಹಫ್ತಾ ವಸೂಲಿಯಾಗುತ್ತಿದೆ. ಸಿಎಂ ಪಿಎ ಅಂತಾ ಹೇಳಿಕೊಂಡು ಓಡಾಡುವವರು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ” ಎಂದು ಶೋಭಾ ಕರಂದ್ಲಾಜೆ ಆರೋಪ ಮಾಡಿದರು.

Comments are closed.