ರಾಜ್ಯದಲ್ಲಿ ಉಪಚುನಾವಣೆ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದ ಸಿಎಂ

ಶಿಕಾರಿಪುರದಲ್ಲಿಂದು ರಾಜ್ಯದಲ್ಲಿ ಉಪಚುನಾವಣೆ ಬಗ್ಗೆ ಇದ್ದ ಅನೇಕ ಗೊಂದಲಗಳಿಗೆ ಸಿಎಂ  ಬಿ.ಎಸ್. ಯಡಿಯೂರಪ್ಪ ತೆರೆ ಎಳೆದಿದ್ದಾರೆ.

ಈ ಬಗ್ಗೆ ಮಾದ್ಯಮದ ಮುಂದೆ ಮಾತನಾಡಿದ ಅವರು, ರಾಜ್ಯದಲ್ಲಿ ಉಪಚುನಾವಣೆಗೆ ದಿನಾಂಕ ನಿಶ್ಚಯವಾಗಿದೆ. ಈ ಹಿಂದೆ 15 ಶಾಸಕರು ರಾಜೀನಾಮೆ ನೀಡಿ, ಹೊರಬಂದಿದ್ದರು. ಬಿಜೆಪಿ ಯಿಂದ ಯಾರು ಸ್ಪರ್ಧಿಸಲು ಅಪೇಕ್ಷೆ ಪಡುತ್ತಾರೋ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ. ಅವರಿಗೆ ಪಕ್ಷದ ಟಿಕೆಟ್ ನೀಡಲು ರಾಷ್ಟ್ರೀಯ ಅಧ್ಯಕ್ಷರು ನಿರ್ಧಾರ ಮಾಡಿದ್ದಾರೆ. ರಾಣೆಬೆನ್ನೂರು ಸೇರಿದಂತೆ, ಯಾವುದೇ ಊಹಾಪೋಹಕ್ಕೆ ಅವಕಾಶವಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಹಾಗೂ ನಾನು ಚರ್ಚಿಸಿ ಈಗಾಗಲೇ ನಿರ್ಧಾರ ಮಾಡಿದ್ದೇವೆ. ಎಲ್ಲರಿಗೂ ಪಕ್ಷದಿಂದಲೇ ಟಿಕೆಟ್ ನೀಡಲಾಗುತ್ತದೆ. ನಿಮ್ಮನ್ನ ನಿಲ್ಲಿಸಿ, ಗೆಲ್ಲುವ ಜವಾಬ್ದಾರಿಯು ನಮ್ಮ ಕಾರ್ಯಕರ್ತರು ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ಮ ಸರ್ಕಾರ ಬರಲು ಕಾರಣರಾದವರ ಗೆಲುವಿಗೆ ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ. ಯಾರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಯಾರ ಹೇಳಿಕೆ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಡಿ. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗುವುದು. ಉಮೇಶ್ ಕತ್ತಿ ಬಳಿ ಮಾತನಾಡಿದ್ದೇನೆ. ಯಾರೂ ಕೂಡ ಯಾವುದೇ ಅನಗತ್ಯ ಹೇಳಿಕೆ ನೀಡುವುದು ಬೇಡ. ಈ ಬಗ್ಗೆ ಮುಂದಿನ ಅ. 3 ರಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಕೇವಲ ಶಿಕಾರಿಪುರವಲ್ಲದೇ, ರಾಜ್ಯದ ಎಲ್ಲೆಡೆ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಮುಂದಿನ ಬಜೆಟ್ ನಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದ ಯೋಜನೆ ಪೂರ್ಣಗೊಳಿಸಲಾಗುವುದು. ಭಗವಂತನ ದಯೆಯಿಂದ ಎಲ್ಲಾ ಜಲಾಶಯಗಳು ತುಂಬಿವೆ. ಇದು ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಅನುಕೂಲ ಆಗಿದೆ. ಹಿಂದಿನ ಸರ್ಕಾರದ ಬಜೆಟ್ ನ್ನೇ ಕಾರ್ಯರೂಪಕ್ಕೆ ತರುತ್ತೇನೆ ಎಂದರು.

 

Leave a Reply