ರಾಜ್ಯ ಬಿಜೆಪಿ ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ ಮತ್ತೆ ವಾಗ್ದಾಳಿ

ಕೇಂದ್ರ ಸಚಿವರು ಕೇವಲ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗದೆ ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಲಿ ಎಂದು ರಾಜ್ಯ ಬಿಜೆಪಿ ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಿಜಯಪುರದಲ್ಲಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಮತ್ತೆ ವಾಗ್ದಾಳಿ ಮಾಡಿದ್ದಾರೆ.

ಪ್ರಹ್ಲಾದ ಜೋಶಿ, ಸದಾನಂದಗೌಡ ತಮ್ಮ ಸಾಮರ್ಥ್ಯ ತೋರಿಸಿ ಪ್ರಧಾನಿಯವರ ಭೇಟಿಗೆ ಅವಕಾಶ ನೀಡಲಿ. ಇಂದಿನ ಪರಿಸ್ಥಿತಿಯಲ್ಲಿ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಹೇಳಿರುವುದರಲ್ಲಿ ತಪ್ಪೇನಿಲ್ಲ. ನಮ್ಮ 25 ಜನ ಸಂಸದರು ಮೊದಲು ಮತದಾರರಿಗೆ ನಿಷ್ಠರಾಗಿರಲಿ. ಇದು ಪ್ರಜಾತಂತ್ರ ದೇಶ. ಇಲ್ಲಿ ಯಾರೂ ಯಾರಿಗೂ ಭಯ ಪಡಬಾರದು. ಪ್ರಧಾನಿ ನರೇಂದ್ರ ಮೋದಿ ಯಾರನ್ನೂ ಹೆದರಿಸುವವರಲ್ಲ. ಅವರೂ ಗುಜರಾತ ಸಿಎಂ ಆಗಿ, ಈಗ ಪ್ರಧಾನಿಯಾಗಿದ್ದಾರೆ. ಮಂತ್ರಿಯಾಗಲು, ಮುಂದಿನ ಬಾರಿ ಟಿಕೆಟ್ ಗಾಗಿ ಸಂಸದರು ಮೌನ ವಹಿಸುವುದು ಸರಿಯಲ್ಲ.

ಒಬ್ಬರು ಹುಬ್ಬಳ್ಳಿಯಲ್ಲಿ ಮತ್ತೋಬ್ಬರು ಬೆಂಗಳೂರಿನಲ್ಲಿ ಕುಳಿತಿದ್ದೀರಿ. ದೆಹಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ. ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ. ಕೇಂದ್ರದಿಂದ ರೂ. 10000 ಕೋ. ಪರಿಹಾರ ತರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದಗೌಡ ವಿರುದ್ಧ ಯತ್ನಾಳ ವಾಗ್ದಾಳಿ ಮಾಡಿದ್ದಾರೆ. ಯತ್ನಾಳ ಬೇರೆ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಸಿಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ನನಗೇನೂ ಸಚಿವನಾಗಬೇಕಿಲ್ಲ. ಸಚಿವ ಸ್ಥಾನಕ್ಕಾಗಿ ನಾನೇನು ಯಾರ ಕಾಲನ್ನು ಹಿಡಿದಿಲ್ಲ. ಬಿಜೆಪಿಯನ್ನು ಹಳ್ಳಿ ಹಳ್ಳಿಗೆ ತಿರುಗಿ ಕಟ್ಟುದವರು ನಾವು. ಇವರಂಥೆ ಸುಸಜ್ಜಿತ ಮನೆಯಲ್ಲಿ ಬಂದು ಕೂತಿಲ್ಲ.

ಕೇರಳ, ಆಂಧ್ರ ಪ್ರದೇಶದಲ್ಲಿ ಉಸ್ತುವಾರಿ ವಹಿಸಿಕೊಂಡು ಇವರು ಎಷ್ಟು ಬಿಜೆಪಿ ಸ್ಥಾನಗಳಿಸಿದ್ದಾರೆ? ಬಿಜೆಪಿ ರಾಜ್ಯಾಧ್ಯಜ್ಷ ನಳೀನಕುಮಾರ ಕಟೀಲ ಹೆಸರು ಹೇಳದೆ ವಾಗ್ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಅನಂತಕುಮಾರ, ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅನಂತಕುಮಾರ ಬದುಕಿದ್ದರೆ ಇಂದು ರಾಜ್ಯದಲ್ಲಿ ಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅನಂತಕುಮಾರ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸೇತುವೆಯಾಗಿದ್ದರು. ಆದರೆ, ಹಾಲಿ ಬಿಜೆಪಿ ಸಂಸದರು ತಗ್ಗುಗಳಾಗಿದ್ದಾರೆ. ರಾಜ್ಯ ಬಿಜೆಪಿ ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ. ಇನ್ನು ನಮ್ಮನ್ನೇನು ಕರೆದುಕೊಂಡು ಹೋಗಿ ಪ್ರಧಾನಿ ಭೇಟಿ ಮಾಡಿಸುತ್ತಾರೆ? ಯತ್ನಾಳ ಆಕ್ರೋಶ ಹೊರಹಾಕಿದ್ದಾರೆ.

ಶಿವರಾಜ ತಂಗಡಗಿ ಹೇಳಿಕೆ ಸರಿಯಲ್ಲ. ಕೇಂದ್ರದ ವಿರುದ್ಧ ರಾಜ್ಯದ ಜನರ ಆಕ್ರೋಶದ ಬಗ್ಗೆ ಕೇಂದ್ರ ಇಂಟಲಿಜೆನ್ಸ್ ಪ್ರಧಾನಿಗೆ ಮಾಹಿತಿ ನೀಡಬೇಕು. ಹುಬ್ಬಳ್ಳಿ ನಾಯಕರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿ. ಅವರು ರೈಲು ಎಂಜಿನಗಳಾಗಿ ಮುಂದೆ ಹೋಗಲಿ ನಾವು ಡಬ್ಬಿಗಳಾಗಿ ರೈಲನ್ನು ಹಿಂಬಾಲಿಸುತ್ತೇವೆ. ಪ್ರಧಾನಿ ಭೇಟಿಗೆ ಅನುಮತಿ ಕೋರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಪ್ರಧಾನಿ ಸಮಯ ನೀಡಿದರೆ ಭೇಟಿ ಮಾಡುತ್ತೇನೆ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ನನ್ನ ಜೊತೆ ಬರುವುದಾದರೆ ಬರಬಹುದು ಎಂದು ಯತ್ನಾಳ್ ಹೇಳಿದ್ದಾರೆ.

 

Leave a Reply