‘ಸಂತ್ರಸ್ತರಿಗೆ ನೆರವಾಗಲು ಬಿಎಸ್ ವೈ ಕೊಟ್ಟ ಮಾತು ಉಳಿಸಿಕೊಳ್ಳಲಿ’ ಡಿಕೆಶಿ ಆಗ್ರಹ

‘ನೆರೆಯಿಂದ ರಸ್ತೆಗೆ ಬಿದ್ದಿರುವ ಸಂತ್ರಸ್ತರಿಗೆ ನೆರವಾಗಲು ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಅವರು ಈಗಾಗಲೇ ಹೇಳಿರುವಂತೆ ಮನೆ ಬಾಡಿಗೆಗೆ 5 ಸಾವಿರ, ಮನೆ ಕಟ್ಟಲು 5 ಲಕ್ಷ ನೀಡಲಿ. ಆದಷ್ಟು ಬೇಗ ಆ ಜನರ ನೋವಿಗೆ ಸ್ಪಂದಿಸಲಿ’ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ನಾವು ನಮ್ಮ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

‘ನಾನು ಶಿವಳ್ಳಿ ಕ್ಷೇತ್ರ ಕುಂದಗೋಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಪ್ರವಾಹ ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ನೀಡುವ ಕಾರ್ಯ ಆಗಿತ್ತು. ಆದರೆ ಬೆಳಗಾವಿಗೆ ಹೋದರೆ ಒಂದೇ ಒಂದು ರುಪಾಯಿ ಕೂಡ ಇವತ್ತಿಗೂ ಕೊಟ್ಟಿಲ್ಲ. ಕುಮಾರಸ್ವಾಮಿ ಅವರು ಬಹುಮತ ಸಾಬೀತು ಪಡಿಸುವ ಮುನ್ನವೇ ರೈತರ ಸಾಲಮನ್ನಾ ಅಂತಾ ಅರ್ಜೆಂಟ್ ಮಾಡಿದ್ದರಲ್ಲ ಯಡಿಯೂರಪ್ಪನವರು, ಸಾಲಮನ್ನಾ ಆಮೇಲೆ ಇರಲಿ, ಸದ್ಯಕ್ಕೆ ಬೀದಿಗೆ ಬಿದ್ದಿರುವ ಪ್ರವಾಹ ಸಂತ್ರಸ್ತರಿಗೆ ತಾವು ಕೊಟ್ಟ ಮಾತಿನಂತೆ ಪರಿಹಾರ ನೀಡಲಿ. ಈ ವಿಚಾರವಾಗಿ ನಿನ್ನೆ ನಮ್ಮ ಅಧ್ಯಕ್ಷರು ಘೋಷಣೆ ಮಾಡಿರುವಂತೆ ನಾವು ಹೋರಾಟ ಮಾಡುತ್ತೇವೆ’ ಎಂದರು.

ನನ್ನ ಹಣೆಯಲ್ಲಿ ಬರೆದಿದ್ದರೆ ಹುದ್ದೆ ಸಿಗುತ್ತೆ ಪಕ್ಷದಲ್ಲಿ ಪ್ರಮುಖ ಹುದ್ದೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ‘ಹಣೆ ಬರಹದಲ್ಲಿ ಬರೆದಿದ್ದರೆ ಎಲ್ಲವೂ ಹುಡಿಕಿಕೊಂಡು ಬರುತ್ತದೆ. ಅದರ ಮೇಲೆ ನನಗೆ ನಂಬಿಕೆ ದೆ. ಈಗ ಸವದಿ ಅವರನ್ನೇ ತಗೊಳ್ಳಿ. ನಾನು ಅವರಿಗೆ ಅಭಿನಂದಿಸುತ್ತೇನೆ. ಅವರು ಚುನಾವಣೆ ಗೆಲ್ಲದಿದ್ದರೂ ಅವರ ಹಣೆಯಲ್ಲಿ ಬರಿದಿತ್ತು ಸಚಿವರೂ ಆದ್ರೂ ಉಪಮುಖ್ಯಮಂತ್ರಿನೂ ಆಗಿದ್ದಾರೆ. ಹಾಗೇ ನಮ್ಮ ಹಣೆಯಲ್ಲಿ ಬರೆದಿದ್ದರೆ ನಾವು ಉನ್ನತ ಹುದ್ದೆ ಅಲಂಕರಿಸುತ್ತೇವೆ’ ಎಂದರು.

ಬೇರೆಯವರು ನೀಡಿದ ಹೇಳಿಕೆಗಳಿಗೆ ನಾನು ಉತ್ತರ ಕೊಡಕ್ಕೆ ಆಗಲ್ಲ. ನಾನು ಯಾವ ಸ್ಥಾನಕ್ಕೂ ಆಕಾಂಕ್ಷಿ ಅಲ್ಲ. ನೀವು ಹೇಳುವಂತೆ ನಾನು ಎಲ್ಲಿಗೂ ಲಾಭಿ ಮಾಡಲು ಹೋಗಿಲ್ಲ. ಅದೆಲ್ಲ ಕಾಡಿಬೇಡಿ ಪಡೆಯುವಂತದ್ದೂ ಅಲ್ಲ. ನಾನೇಕೆ ಲಾಭಿ ಮಾಡಲಿ? ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಾನೇನು ಅಂತಾ ಜನಕ್ಕೆ ಪರಿಚಯ ಇದೆ. ನನಗೆ ಲಾಭಿ ಮಾಡುವ, ಬಯೋಡೆಟಾ ಕೊಡುವ ಅಗತ್ಯವಿಲ್ಲ. ನನ್ನ ಪಕ್ಷ ಹಾಗೂ ಗಾಂಧಿ ಕುಟುಂಬದ ಮೇಲೆ ನನಗೆ ನಂಬಿಕೆ ಇದೆ. ಅವರ ನಾಯಕತ್ವದ ಮೇಲೆ ನಂಬಿಕೆ ಇದೆ. ಅವರು ಏನೇ ಕೊಟ್ಟರು ಅದನ್ನು ಪ್ರಸಾದ ಅಂತಾ ಸ್ವೀಕರಿಸುತ್ತೇವೆ ಎಂದು ತಿಳಿಸಿದರು.

ಈಗಾಗಲೇ ನಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಹೈಕಮಾಂಡ್ ನಾಯಕರು ಬರ್ತಾರೆ. ಅವರು ಏನು ತೀರ್ಮಾನ ಮಾಡಬೇಕೋ ಅದನ್ನು ಮಾಡುತ್ತಾರೆ. ನಾನಂತೂ ಯಾವುದೇ ಆತುರದಲ್ಲಿ ಇಲ್ಲ. ನನಗೆ ಅದರ ಅಗತ್ಯವೂ ಇಲ್ಲ. ನಾವು ಕಾರ್ಯಕ್ರತರು ಹೀಗಾಗಿ ನಮ್ಮ ಪಕ್ಷದ ಅದ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಏನು ಮರ್ಯಾದೆ ಕೊಡಬೇಕೋ ಕೊಡುತ್ತೇವೆ. ಪಕ್ಷದ ಸಂಘಟನೆ ವಿಚಾರವನ್ನು ದಿನೇಶ್ ಗುಂಡುರಾಯರು ಹಾಗೂ ಹೈಕಮಾಂಡ್ ಅವರನ್ನು ಕೇಳಿ.

ನಮ್ಮ ಕಾರ್ಯಕ್ರಮ ನಿಲ್ಲಿಸಲು ಬಿಡಲ್ಲ
ನಮ್ಮ ಸರ್ಕಾರ ಈ ಹಿಂದೆ ಯಾವ ಕಾರ್ಯಕ್ರಮಗಳನ್ನು ಮಂಜೂರು ಮಾಡಿತ್ತೋ ಅದನ್ನು ರದ್ದುಗೊಳಿಸಲು ನಾವು ಬಿಡುವುದಿಲ್ಲ. ಕುಮಾರಸ್ವಾಮಿ ಸರ್ಕಾರ ಇರಲಿ ಅಥವಾ ಸಿದ್ದರಾಮಯ್ಯ ಅವರ ಸರ್ಕಾರ ಇರಲಿ ನಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಲು ಹೋದರೆ, ಕೇವಲ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ನ 34 ಶಾಸಕರೂ ಸೇರಿದಂತೆ ಒಟ್ಟು ನೂರು ಶಾಸಕರ ಪರವಾಗಿ ಹೋರಾಟ ಮಾಡುತ್ತೇನೆ. ನಮ್ಮ ಮೈತ್ರಿ ಮುಂದುವರಿಯುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಆದರೆ ಒಟ್ಟಾಗಿ ಸರ್ಕಾರ ಮಾಡಿದಾಗ ಮಾಡಿದ ಕಾರ್ಯಕ್ರಮವನ್ನು ನಿಲ್ಲಿಸಲು ಈ ಸರ್ಕಾರ ಮುಂದಾದರೆ ಅದರ ವಿರೋಧ ಹೋರಾಟ ಮಾಡುತ್ತೇವೆ ಎಂದರು.

ನಮ್ಮ ಸ್ನೇಹಿತರು ಯಾವಾಗ ಮಂತ್ರಿ ಆಗ್ತಾರೆ ಅಂತಾ ಕಾಯ್ತಿದ್ದೀನಿ
ನಮ್ಮ ಬಾಂಬೆ ಸ್ನೇಹಿತರು ಯಾವಾಗ ಮಂತ್ರಿ ಆಗ್ತಾರೆ ಅಂತಾ ಕಾಯ್ತಿದ್ದೀನಿ. 17 ಖಾತೆಗಳು ಅವರಿಗಾಗಿ ಕಾಯ್ದುಕೊಂಡಿವೆ. ಹೀಗಾಗಿ ಅವರು ಮಂತ್ರಿಯಾಗುವುದನ್ನು ಟಿವಿಯಲ್ಲಿ ನೋಡಲು ಕಾಯುತ್ತಿದ್ದೇನೆ. ಅವರು ಯಾಕೆ ಕಣ್ಣೀರಿಡಬೇಕು? ಪಾಪ ಅವರೂ ಕೂಡ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಪಕ್ಷದಿಂದ ಗೆದ್ದಿದ್ದಾರೆ. ಅವರು ಅದನ್ನು ಎತ್ತಿಕೊಂಡು ಹೋಗಿ ಬಿಜೆಪಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಹೋರಾಟ ಮಾಡಿ ಯಡಿಯೂರಪ್ಪನವರಿಗೆ ಕಂಕಣ ಕಟ್ಟಿ ಸಿಎಂ ಮಾಡಿದ್ದಾರೆ. ಹೀಗಾಗಿ ಅದರ ಫಲ ನುಭವಿಸುತ್ತಿದ್ದಾರೆ. ಮೊದಲು ಒಂದು ಕಾಲ ಇತ್ತು. ಅಲ್ಲಿ ತಂದೆ ತಾಯಿ ಮಾಡಿದ ಫಲವನ್ನು ಮಕ್ಕಳು ಮೊಮ್ಮಕ್ಕಳು ಅನುಭವಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ನಾವು ಮಾಡಿದನ್ನು ನಾವೇ ಅನುಭವಿಸಬೇಕು. ದೇವರು ಅವರಿಗೆ ಒಳ್ಳೆಯದು ಮಾಡಲಿ.

Leave a Reply

Your email address will not be published.