ಸಿದ್ಧರಾಮಯ್ಯರಿಗೆ ನಾನೇ ನಾಯಕ, ನಾನೇ ಪಕ್ಷ ಅಧಿಕಾರಕ್ಕೆ ತಂದಿದ್ದು ಎಂಬ ಸೊಕ್ಕು – ಈಶ್ವರಪ್ಪ

ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯರ ರಾಜಕೀಯ ಜೀವನ ಎಲ್ಲರಿಗೂ ಪಾಠ ಎಂದು ಕುಟುಕಿದ್ದಾರೆ.

ಬಳ್ಳಾರಿ ವಿಭಜನೆ ವಿಚಾರ ಪ್ರಸ್ತಾಪಿಸಿದ ಈಶ್ವರಪ್ಪ,  ಆನಂದ್ ಸಿಂಗ್ ನೇತೃತ್ವದಲ್ಲಿ ವಿಜಯನಗರ ಜಿಲ್ಲೆ ಬೇರೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ವಿಚಾರ ಸಿ.ಎಂ. ಮುಂದೆ ಬಂದಾಗ, ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಯಾರಿಗೂ ಕೂಡ, ಅಧಿಕಾರ ಶಾಶ್ವತವಲ್ಲ.

ಅಧಿಕಾರದಲ್ಲಿದ್ದಾಗ ಅವರು ಮಾಡಿರುವ ಕೆಲಸ, ಜನರೊಂದಿಗಿನ ಸಂಪರ್ಕ ಅತಿ ಮುಖ್ಯವಾಗುತ್ತೆ. ನಾನೆ ಮುಖ್ಯಮಂತ್ರಿ ಎಂದು ಸರ್ವಾಧಿಕಾರಿ ಧೋರಣೆ ಮಾಡಿಕೊಂಡು ನಾನು ಏನು ಬೇಕಾದರೂ ಮಾಡಬಹುದು ಎಂಬುದು ಸರಿಯಲ್ಲ. ಸಿದ್ಧರಾಮಯ್ಯನವರ ಕುತಂತ್ರದಿಂದಾಗಿಯೇ, ಇಂದು ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಕಾಂಗ್ರೆಸ್ ನಿರ್ನಾಮವಾಯ್ತು, ಅವರು ಸೋತ್ರು, ಸರ್ಕಾರನೂ ಬಿದ್ದೊಯ್ತು. ಇದು ಎಲ್ಲರಿಗೂ ಪಾಠ.

ಸಿದ್ಧರಾಮಯ್ಯನವರು, ಕೆಟ್ಟ ಕೆಟ್ಟ ಪದಗಳನ್ನು ಬಳಸಿದ್ದಾರೆ. ಸಂಘಟನೆ ಮೀರಿ ಯಾರೇ ಹೊರ ಹೋದರು, ದೇಶದಲ್ಲಿ ಅವರು ಉದ್ಧಾರವಾಗಿರುವ ಉದಾಹರಣೆಗಳೇ ಇಲ್ಲ. ಸಿದ್ಧರಾಮಯ್ಯರಿಗೆ ನಾನೆ ನಾಯಕ, ನಾನೆ ಪಕ್ಷ ಅಧಿಕಾರಕ್ಕೆ ತಂದಿದ್ದು ಎಂಬ ಸೊಕ್ಕು ಇದೆ.

ಪಕ್ಷ ದ್ರೋಹಿಗಳಿಗೆ ಯಾವುದೇ ಪಕ್ಷದಲ್ಲಿ ಸ್ಥಾನ ಸಿಗಬಾರದು. ಪಕ್ಷದ ನಿಷ್ಠಾವಂತರಿಗೆ, ಎಂದಿಗೂ ಪಕ್ಷದಲ್ಲಿ ಬೆಲೆ ಇದೆ.ಯು.ಟಿ. ಖಾದರ್ ಆರ್.ಎಸ್.ಎಸ್. ಮಾದರಿಯಲ್ಲಿ ಸಂಘಟನೆ ಮಾಡಲು ಹೊರಟಿರುವ ವಿಚಾರ ಮಾತನಾಡಿದರು, ಅವರು ಆರ್.ಎಸ್.ಎಸ್. ತರಾನಾದರೂ ಮಾಡಲೀ, ಏಳ್.ಎಸ್.ಎಸ್. ತರನಾದರೂ ಮಾಡಲೀ. ಆದರೆ, ಆ ಸಂಘಟನೆ ರಾಷ್ಟ್ರಭಕ್ತಿಗೆ ಆದ್ಯತೆ ನೀಡುವಂತಾಗಬೇಕು ಎಂದರು.

ಇದೇ ವೇಳೆ ಮುಖ್ಯಮಂತ್ರಿಗಳ ಬಳಿ ಇದ್ದ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಸ್ಥಾನ, ನಿನ್ನೆ ನನಗೆ ನೀಡಿದ್ದರು. ಆದರೆ, ಇದನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ, ತೆಗೆದುಕೊಳ್ಳಬೇಕೋ –ಬೇಡವೋ ಎಂಬದನ್ನು ನಿರ್ಧರಿಸುತ್ತೇನೆ.

ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಅನರ್ಹ ಶಾಸಕರ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ, ಕೋರ್ಟ್ ತೀರ್ಮಾನ ಏನು ಆಗುತ್ತೆ ಎಂಬುದು ನಾನಲ್ಲ ದೇವರು ಕೂಡ ಹೇಳಲು ಸಾಧ್ಯವಿಲ್ಲ. ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು, ಸಿದ್ಧರಾಮಯ್ಯನವರ ಮಾತು ಕೇಳಿ ಶಾಸಕರನ್ನು ಅನರ್ಹರನ್ನಾಗಿಸಿದ್ದಾರೆ.

ಸುಪ್ರೀಂ ಕೋರ್ಟ್ ಹೇಳಿದ್ದು, ರಾಜೀನಾಮೆ ಅಂಗಿಕರಿಸುತ್ತಿರೋ ಅಥವಾ ಬಿಡುತ್ತಿರೋ ಎಂದು ಹೇಳಿತ್ತು. ಆದರೆ, ರಮೇಶ್ ಕುಮಾರ್ ಎರಡನ್ನೂ ಬಿಟ್ಟು, ಶಾಸಕರನ್ನು ಅನರ್ಹಗೊಳಿಸಿದ್ದರು. ಅ. 22 ರಂದು ತೀರ್ಪು ಇದ್ದು, ಅಂದು ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಗುಲ್ಬರ್ಗದಿಂದ ಸ್ಪರ್ಧೆ ಮಾಡಿದ್ದ ಶಾಸಕರ ರಾಜೀನಾಮೆ ಅಂಗಿಕರಿಸುತ್ತಾರೆ. ಆದರೆ, ಈ 17 ಜನ ಶಾಸಕರ ರಾಜೀನಾಮೆ ಅಂಗಿಕರಿಸಿಲ್ಲ. ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯಾನಾ ಎಂದು ಪ್ರಶ್ನೆ ಮಾಡಿದರು.

ಶರಾವತಿ ಕಣಿವೆಯಲ್ಲಿ ಭೂಗರ್ಭ ವಿದ್ಯುತ್ ಯೋಜನೆ ಡಿಪಿಆರ್ ಸಿದ್ಧತೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ ಅವರು, ಕಾಡು ನಾಶವಾಗುತ್ತೆ ಅಂತಾ ವಿದ್ಯುತ್ ಉತ್ಪಾದನೆ ನಿಲ್ಲಿಸಲು ಆಗಲ್ಲ. ಹಾಗಂತಾ, ಕಾಡು ನಾಶ ಮಾಡಿ, ವಿದ್ಯುತ್ ಉತ್ಪಾದನೆ ಮಾಡುವುದು ಸರಿಯಲ್ಲ. ಕಾಡು ಉಳಿಯಬೇಕು, ವಿದ್ಯುತ್ ಕೂಡ ಉತ್ಪಾದನೆಯಾಗಬೇಕು. ಈ ಕುರಿತಂತೆ, ತಜ್ಞರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅಂತಿಮವಾಗಿ ಕ್ಯಾಬಿನೆಟ್ ಮುಂದೆ ಬಂದಾಗ ತೀರ್ಮಾನ ಮಾಡುತ್ತೇವೆ. ವಿದ್ಯುತ್ ಇಲ್ಲದ ಕುಗ್ರಾಮಗಳು ರಾಜ್ಯದಲ್ಲಿ, ದೇಶದಲ್ಲಿ, ಸಾಕಷ್ಟಿವೆ. ಅಲ್ಲಿಗೆ ವಿದ್ಯುತ್ ನೀಡುವ ನಿಟ್ಟಿನಲ್ಲಿ, ಯೋಜನೆ ರೂಪಿಸಬೇಕಿದೆ.

 

 

 

Leave a Reply