ಹಿಂದಿ ಬ್ಯಾನರ್ ಹಾಕಿದ್ದನ್ನ ಪ್ರಶ್ನಿಸಿದ್ದಕ್ಕೆ ಕನ್ನಡ ಪರ ಹೋರಾಟಗಾರು ಅಂದರ್…!

ಆಗಸ್ಟ್16ರಂದು ಜೈನ ದೇವಾಲಯವೊಂದರಲ್ಲಿ ಹಿಂದಿ ಬ್ಯಾನರ್ ಹಾಕಿದ್ದರಿಂದ ಕೋಪಗೊಂಡು, ಕನ್ನಡದ ಬ್ಯಾನರ್ ಏಕೆ ಹಾಕಿಲ್ಲ ಎಂದು ಪ್ರಶ್ನಿಸಿ ಬ್ಯಾನರ್ ಹರಿದ ಆರೋಪದ ಮೇಲೆ ಆರು ಜನ ಕನ್ನಡ ಹೋರಾಟಗಾರರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಇಂದು  ಬಂಧಿಸಿದ್ದಾರೆ.

ಕರ್ನಾಟಕ ರಣಧೀರ ಪಡೆಯ ರಾಜ್ಯಧ್ಯಕ್ಷರಾದ ಬಿ ಹರೀಶ್ ಕುಮಾರ್, ಪದಾಧಿಕಾರಿಗಳಾದ ಮಂಜು, ಚಂದ್ರಶೇಖರ್, ಕರವೇ ಆಂಜನಪ್ಪ, ರಕ್ಷಣಾ ಸೇನೆಯ ರಮೇಶ್ ಗೌಡ, ಕರುನಾಡ ಸೇವಕರು ವೇದಿಕೆಯ ಮಾದೇಶ್ ಗೌಡ ಇಷ್ಟು ಜನರನ್ನು ಬಂಧಿಸಲಾಗಿದ್ದು ಇಂದು ರಾತ್ರಿ 8 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ಬಂಧಿತರ ಮೇಲೆ ಐಪಿಸಿ ಸೆಕ್ಷನ್ 153ಎ, 427, 504, 506, 141, 147, 149, 143 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇವುಗಳಲ್ಲಿ 153ಎ (ಸಮುದಾಯಗಳ ನಡುವೆ ದ್ವೇಷ), 149 (ಗುಂಪಾಗಿ ಸೇರಿ ಸಮಾನ ಉದ್ದೇಶದಿಂದ ಬೆದರಿಕೆ) ಈ ಎರಡು ಸಹ ಜಾಮೀನು ರಹಿತ ಸೆಕ್ಷನ್ ಗಳಾಗಿವೆ.

ಬಂಧಿತ ಕನ್ನಡ ಹೋರಾಟಗಾರರ ಪರವಾಗಿ ಸೂರ್ಯ ಮುಕುಂದರಾಜ್ ರವರು ವಕಾಲತ್ತು ವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಬಂಧಿತ ಕನ್ನಡ ಹೋರಾಟಗಾರರು ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ ಎಂಬ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಉದ್ದೇಶಕ್ಕಾಗಿ ಆಗಸ್ಟ್ 14-15 ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ಸಹ ನಡೆಸಿದ್ದರು.

ಈ ಬಂಧನವನ್ನು ವಿರೋಧಿಸಿ ಬಹಳಷ್ಟು ಜನ ಕನ್ನಡಿಗರು ವಿರೋಧಿಸಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ಬಂಧನವನ್ನು ವಿರೋಧಿಸಿ ಪೋಸ್ಟ್ ಗಳನ್ನು  ಹಾಕಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು ಜೈನರ ಮೇಲಿನ ಹಲ್ಲೆ ಸರಿಯಿಲ್ಲ ಎಂದಿದ್ದಲ್ಲದೇ ಕನ್ನಡ ಹೋರಾಟಗಾರರನ್ನು ರೌಡಿಗಳು ಎಂದು ಕರೆದಿದ್ದಾರೆ.

Leave a Reply

Your email address will not be published.