ಇನ್ನೂ 4 ದಿನ ಡಿಕೆಶಿ ಇಡಿ ವಶಕ್ಕೆ : 200 ಕೋಟಿ ರೂ. ಕಪ್ಪು ಹಣ, 800 ಕೋಟಿ ಬೇನಾಮಿ ಆಸ್ತಿ ಪತ್ತೆ

ಮನಿ ಲಾಂಡರಿಂಗ್ ಪ್ರಕರದಲ್ಲಿ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಗೆ ಇಡಿ ಕಸ್ಟಡಿ  ಮುಂದುವರಿಕೆ. ಇಂದು (ಶುಕ್ರವಾರ)  ವಿಚಾರಣೆ ನಡೆಸಿದ ರೋಸ್ ಅವೆನ್ಯೂ ಕೋರ್ಟ್, ಡಿಕೆ ಶಿವಕುಮಾರ್ ಅವರನ್ನು ಮತ್ತೆ ಸೆಪ್ಟೆಂಬರ್ 17ರ ವರೆಗೆ ಅಂದ್ರೆ 4 ದಿನ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಇಡಿ ಹೊಸ ಆರೋಪ ಮಾಡಿದ್ದು, 20 ದೇಶಗಳಲ್ಲಿ ವಿವಿಧ ಅಕೌಂಟ್ ಗಳ ಮೂಲಕ ಡಿಕೆಶಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಹೇಳಿದೆ.

ಇಂದು ಇಡಿ ಕಸ್ಟಡಿಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಈ ವೇಳೆ ಅಧಿಕಾರಿಗಳು ವಿಚಾರಣೆಗಾಗಿ ಕಸ್ಟಡಿಯ ಅವಧಿಯನ್ನು ವಿಸ್ತರಣೆ ಮಾಡಲು ಮನವಿ ಮಾಡಿದ್ದರು. ನ್ಯಾಯಾಲಯ ಸೆ.17ರ ವರೆಗೂ ಕಸ್ಟಡಿಗೆ ನೀಡಿತು.

ಡಿಕೆಶಿ ಪರ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಂಘ್ವಿ ಹಾಗೂ ದಯಾನ್ ಕೃಷ್ಣನ್  ಅವರು ಸುದೀರ್ಘವಾಗಿ ವಾದ ಮಂಡಿಸಿದರು. ಡಿಕೆ ಶಿವಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ಜಡ್ಜ್  ಅಜಯ್ ಕುಮಾರ್ ಕುಹಾರ್ ಮುಂದೆ ಹೇಳಿದರು.

ಇದಕ್ಕೂ ಮುನ್ನ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಇಡಿ ಪರ ವಕೀಲರು ಡಿಕೆಶಿ ಅವರ ವಿರುದ್ಧ ಆರೋಪಗಳ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದರು. 20 ದೇಶಗಳಲ್ಲಿ ಡಿಕೆ ಶಿವಕುಮಾರ್ ಅವರು 317 ಅಕೌಂಟ್ ಹೊಂದಿದ್ದು, 200 ಕೋಟಿ ರೂ. ಕಪ್ಪು ಹಣ ಚಲಾವಣೆಯಾಗಿದೆ. 800 ಕೋಟಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

ನ್ಯಾಯಾಲಯದ ಆದೇಶದ ಬಳಿಕ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು, ಇದುವರೆಗೂ ಡಿಕೆ ಶಿವಕುಮಾರ್ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಈಗಾಗಲೇ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿರುವ ಆಸ್ತಿ ವಿವರಗಳನ್ನೇ ಮುಂದಿಟ್ಟು ಆರೋಪ ಮಾಡಿದ್ದಾರೆ. ಆ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸ ಮಾಡಲಾಗುತಿದೆ. ಆದ್ದರಿಂದಲೇ ಅವರ ಮೇಲೆ ಯಾವುದೇ ಪ್ರಕರಣ ಇಲ್ಲದಿದ್ದರೂ ಕೂಡ ಒತ್ತಡಕ್ಕೆ ಒಳಗಾಗಿ ಈ ರೀತಿ ಮಾಡಲಾಗುತ್ತಿದೆ. ಯಾರದ್ದೋ ಆಸ್ತಿ ಹೊಂದಿದ್ದರೆ ಅದನ್ನು ನಮ್ಮದೇ ಎಂದು ಆರೋಪ ಮಾಡುತ್ತಿದ್ದಾರೆ ಅಷ್ಟೇ. ಕಾನೂನಿನ ಮೇಲೆ ಗೌರವ ಇದ್ದು, ಕಾನೂನು ಹೋರಾಟ ಮುಂದುವರಿಸುವ ಮೂಲಕ ಜಯ ಪಡೆಯುತ್ತೇವೆ. ಡಿಕೆ ಶಿವಕುಮಾರ್ ಕೂಡ ತಮ್ಮ ಬೆಂಬಲಿಗರಿಗೆ ಸಂದೇಶ ನೀಡಿದ್ದು, ಈ ಹೋರಾಟದಲ್ಲಿ ಗೆದ್ದು ಬರುವುದಾಗಿ ಹೇಳಿದ್ದಾರೆ. ಆದ್ದರಿಂದ ಯಾರು ದೆಹಲಿಗೆ ಬರುವ ಪ್ರಯತ್ನವನ್ನು ಮಾಡಬೇಡಿ ಎಂದು ಮನವಿ ಮಾಡಿದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights