ಗಿರಿ ಪ್ರದೇಶಕ್ಕೆ ಮಿನಿ ಬಸ್ ಸೌಲಭ್ಯಕ್ಕೆ ಜಿಲ್ಲಾಡಳಿತ ಸಿದ್ಧತೆ : ಕಾರಲ್ಲಿ ಬಂದ್ರು ಇಲ್ಲಿ ಬಸ್ಸಲ್ಲೇ ಹೋಗ್ಬೇಕು

ಶನಿವಾರ-ಭಾನುವಾರ ಕಾಫಿನಾಡಿಗೆ ಟೂರ್ ಹೋಗೋಣ ಕಣ್ರೋ, ಗಾಡಿ ಬುಕ್ ಮಾಡ್ಬಿಡ್ಲಾ. ಯಾವ್ದ್ ಮಾಡ್ಲಿ, ಸುಮೋ, ಇಂಡಿಕಾ, ಇಟಿಯಸ್, ಶಿಫ್ಟ್ ಡಿಸೈರ್ ಯಾವ್ದ್ ಬೇಕ್ರೋ. ಅಯ್ಯೋ…. ಯಾವ್ದೋ ಒಂದ್ ಮಾಡಪ್ಪಾ ಎರಡ್ ದಿನ ನೆಮ್ದಿಯಾಗ್ ಹೋಗ್ ಬರೋಣ ಅನ್ನೋ ಆಸೆ ಇದ್ರೆ ಇನ್ಮೇಲೆ ಒಮ್ಮೆ ಯೋಚನೆ ಮಾಡಬೇಕಾತ್ತೆ, ಕಾಫಿನಾಡಿಗೆ ಟೂರ್ ಬರೋದಾದ್ರೆ ಕೆ.ಎಸ್.ಆರ್ಟಿಸಿ ಬಸ್ಸಲ್ಲಿ ಸೀಟ್ ಬುಕ್ ಮಾಡಬೇಕಾಗುತ್ತೆ, ನೀವ್ ಕಾರಲ್ಲಿ ಬಂದ್ರು ಇಲ್ಲಿ ಬಸ್ಸಲ್ಲೇ ಹೋಗ್ಬೇಕು. ಯಾಕೆ ಅಂತೀರಾ…ಈ ಸ್ಟೋರಿ ನೋಡಿ….

ಹೌದು… ಖಾಸಗಿ ವಾಹನಗಳಲ್ಲಿ ನೀವು ಕಾಫಿನಾಡಿಗೆ ಟೂರ್, ಪಿಕ್ನಿಕ್ ಅಂತೆಲ್ಲಾ ಬಂದ್ರೆ ನಿಮ್ಮ ವಾಹನವನ್ನ ನಗರದಲ್ಲೇ ಪಾರ್ಕ್ ಮಾಡಿ ಸರ್ಕಾರಿ ಬಸ್ಸಲ್ಲಿ ಓಡಾಡ್ಬೇಕು. ಬೇಕೆಂದಾಗ-ಬೇಕಾದಂತೆ ಗಾಡಿ ನಿಲ್ಸಿ ಫೋಟೋ ಸೆಷನ್ ನಡ್ಸೋದಕ್ಕೂ ಆಗಲ್ಲ. ಯಾಕಂದ್ರೆ, ಜಿಲ್ಲಾಡಳಿತ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶದ ಪ್ರವಾಸಿ ತಾಣಗಳಿಗೆ ಮಿನಿ ಬಸ್ ಬಿಡೋದಕ್ಕೆ ಚಿಂತಿಸಿದೆ. ಈಗಾಗ್ಲೇ ಪ್ರವಾಸೋಧ್ಯಮ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಜೊತೆ ಜಿಲ್ಲಾಡಳಿತ ಮಾತುಕಥೆ ಕೂಡ ನಡ್ಸಿದೆ. ಇದಕ್ಕೆ ಟೂರಿಸಂ ಡಿಪಾರ್ಟ್ಮೆಂಟ್ ಹಾಗೂ ಕೆ.ಎಸ್.ಆರ್.ಟಿ.ಸಿ ಕೂಡ ಗ್ರೀನ್ ಸಿಗ್ನಿಲ್ ನೀಡಿದೆ. ಫ್ರೈಡೆ, ಸಟರ್ಡೆ ಹಾಗೂ ಸಂಡೇ ಸಾಕಷ್ಟು ಟೂರಿಸ್ಟ್ಗಳು ಬರ್ತಿದ್ದು ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗ್ತಿರೋದ್ರಿಂದ ಸರ್ಕಾರ ಗಿರಿ ಭಾಗಕ್ಕೆ ಮಿನಿ ಬಸ್ ಬಿಡಲು ಮುಂದಾಗಿದೆ. ಗಿರಿ ಭಾಗ ಹಾವು ಬಳುಕಿನ ಮೈಕಟ್ಟಿನ ರಸ್ತೆಯಾಗಿರೋದ್ರಿಂದ ಪ್ರವಾಸಿಗರ ಸುರಕ್ಷತೆಗಾಗಿ ಗಿರಿಗೆ ಮಿನಿ ಬಸ್ ಬಿಡೋದಕ್ಕೆ ಸರ್ಕಾರ ಚಿಂತನೆ ನಡೆಸಿದೆ.

   

ಸರ್ಕಾರ ಸ್ಥಳಿಯರು ಅನುಕೂಲಕ್ಕಾಗೂ ಮಿನಿ ಬಸ್ ಬಿಡೋದಕ್ಕೆ ಯೋಚಿಸಿದೆ. ಈ ಭಾಗದ ಅತ್ತಿಗುಂಡಿ, ಮಹಲ್, ನೆತ್ತಿಚೌಕ ಸೇರಿದಂತೆ ಕೆಲ ಗ್ರಾಮದ ಜನ ನಗರಕ್ಕೆ ಬರಲು ಹರಸಾಹಸ ಪಡ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಿ ಬರೋದಕ್ಕೂ ತೊಂದರೆಯಾಗ್ತಿದ್ದು ಅವರ ಅನುಕೂಲ ಹಾಗೂ ಬೇಡಿಕೆಗೂ ಸರ್ಕಾರ ಮನ್ನಣೆ ನೀಡಿದೆ. ಆದ್ರೆ, ವೀಕ್ ಎಂಡ್ನಲ್ಲಿ ಭಾರೀ ವಾಹನಗಳು ಬರ್ತಿದ್ದು ಪ್ರವಾಸಿಗರ ಅನುಕೂಲಕ್ಕಾಗೇ ಸರ್ಕಾರ ಈ ನಡೆಗೆ ಮುಂದಾಗಿದೆ. ಆದ್ರೆ, ಜಿಲ್ಲಾಡಳಿತದ ನಿರ್ಧಾರದಿಂದ ಪ್ರವಾಸಿ ವಾಹನದ ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗಾಗಿ ಸರ್ಕಾರ ಏನೂ ಮಾಡಿಲ್ಲ. ಈಗ ನಮ್ಮ ಹೊಟ್ಟೆ ಮೇಲೆ ಹೊಡೆಯೋದಕ್ಕೆ ಮುಂದಾಗಿದೆ. ನಾವು ಬೀದಿಗೆ ಬೀಳೋದು ಗ್ಯಾರಂಟಿ. ವಾರದಲ್ಲಿ ಎರಡು ದಿನ ದುಡಿಯುತ್ತೀವಿ ಅದಕ್ಕೂ ಸರ್ಕಾರ ಕಲ್ಲು ಹಾಕ್ತಿದೆ. ಸಾಲ ಮಾಡಿ, ಲೋನ್ ಕಟ್ಕೊಂಡ್ ಬದುಕ್ತೀದ್ದೇವೆ. ಮಿನಿ ಬಸ್ ಬಿಟ್ರೆ ನಮಗಾಗಿ ಬೇರೇನ್ ಮಾಡ್ತಾರೆಂದು ಜಿಲ್ಲಾಡಳಿತವನ್ನ ಪ್ರಶ್ನಿಸಿದ್ದಾರೆ.

ಒಟ್ಟಾರೆ, ಇನ್ಮುಂದೆ ಗಿರಿಭಾಗದಲ್ಲಿ ಸಣ್ಣ-ಪುಟ್ಟ ಅಪಘಾತಗಳಾಗಿ ಪ್ರವಾಸಿಗಳು ಜಗಳವಾಡೋದು ತಪ್ಪುತ್ತೆ. ಹಳ್ಳಿಗರು ಬಸ್ಸಿಲ್ದೆ ಕಿಲೋ ಮೀಟರ್ಗಟ್ಟಲೇ ನಡೆಯೋದು ತಪ್ಪುತ್ತೆ. ಮಕ್ಕಳು ಟೈಂಗೆ ಸರಿಯಾಗಿ ಶಾಲೆಗೆ-ಮನೆಗೆ ಬರೋಕಾಗುತ್ತೆ. ಸರ್ಕಾರದ ನಡೆ ಪ್ರವಾಸಿಗರಿಗೆ-ಟ್ಯಾಕ್ಸಿ ಚಾಲಕರಿಗೆ ಬೇಜಾರು ತರಿಸಿದ್ರೆ ಪ್ರವಾಸಿಗರ ಭದ್ರತೆ ಹಾಗೂ ಹಾಗೂ ಸ್ಥಳಿಯರಿಗಂತು ಅನುಕೂಲವಾಗಲಿದೆ. ಆದ್ರೆ, ಗಿರಿಭಾಗಕ್ಕೆ ಮಿನಿ ಬಸ್ ಯಾವಾಗ ಬರ್ತಾವೆ, ಪ್ರವಾಸಿಗರು ಹೊಂದ್ಕೊಳ್ತಾರಾ, ಟ್ಯಾಕ್ಸಿ ಚಾಲಕರು ಸುಮ್ಮನಾಗ್ತಾರಾ ಅನ್ನೋದನ್ನ ಕಾದುನೋಡ್ಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights